ಬೆಂಗಳೂರು : ಭಾರತವನ್ನು ಸಶಕ್ತವಾಗಿ ಕಟ್ಟಿ ಜಾಗತಿಕ ಮಟ್ಟದಲ್ಲಿ ಪ್ರತಿಷ್ಠಾಪಿಸುವುದು ಮತ್ತು ಯುವಜನರಿಗೆ ಉಜ್ವಲ ಅವಕಾಶಗಳನ್ನು ಒದಗಿಸಬೇಕೆನ್ನುವುದೇ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಸಂಕಲ್ಪವಾಗಿದೆ. ಈ ಕ್ರಾಂತಿಕಾರಕ ಬದಲಾವಣೆಗಳನ್ನು ತರಲೆಂದೇ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗಿದ್ದು, ಭಾರತವನ್ನು ಜ್ಞಾನಾಧಾರಿತ `ಸೂಪರ್ ಪವರ್’ ಮಾಡಲಾಗುವುದು ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಹೇಳಿದರು. 


COMMERCIAL BREAK
SCROLL TO CONTINUE READING

ಕೇಂದ್ರ ಸರ್ಕಾರದ ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನದಡಿ ಇಲ್ಲಿ ಸ್ಥಾಪಿಸಲಾಗಿರುವ ನೃಪತುಂಗ ಏಕೀಕೃತ ವಿಶ್ವವಿದ್ಯಾಲಯವನ್ನು ಮಂಗಳವಾರ ಅಧಿಕೃತವಾಗಿ ಉದ್ಘಾಟಿಸಿ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಅವರು ನೂತನ ವಿ.ವಿ. ಶೈಕ್ಷಣಿಕ ಸಮುಚ್ಚಯ ನಿರ್ಮಾಣಕ್ಕೆ ಶಂಕುಸ್ಥಾಪನೆ, ಲಾಂಛನ ಅನಾವರಣ ಮತ್ತು ಬಳ್ಳಾರಿಯಲ್ಲಿ ಸ್ಥಾಪಿಸಲಾಗಿರುವ ವಿಧಿವಿಜ್ಞಾನ ಪ್ರಯೋಗಾಲಯದ ವರ್ಚುಯಲ್ ಉದ್ಘಾಟನೆಯನ್ನೂ ಅಮಿತ್ ಶಾ  ನೆರವೇರಿಸಿದರು. 


ಇದನ್ನೂ ಓದಿ : ಬೆಂಗಳೂರಿನ ಕೇಂದ್ರ ಭಾಗದಲ್ಲೇ ಕೇಂದ್ರ ಗೃಹ ಸಚಿವರ ಕಾರ್ಯಕ್ರಮ: ತಟ್ಟಲಿದೆ ಟ್ರಾಫಿಕ್ ಬಿಸಿ


ದೇಶದಲ್ಲಿ ಸಂಭವಿಸುತ್ತಿರುವ ಶೈಕ್ಷಣಿಕ ಕ್ರಾಂತಿಯಲ್ಲಿ ಭಾರತೀಯ ಪ್ರಾದೇಶಿಕ ಭಾಷೆಗಳಿಗೆ ಮಹತ್ವದ ಸ್ಥಾನವಿದೆ. ಎನ್ಇಪಿಯನ್ನು ಕರ್ನಾಟಕವು ದೇಶದ ಮೊದಲ ರಾಜ್ಯವಾಗಿ ಜಾರಿಗೆ ತರುವ ಹೊಣೆಯನ್ನು ಸ್ವೀಕರಿಸಿರುವುದು ಶ್ಲಾಘನೀಯ ನಡೆಯಾಗಿದೆ. ವಿದ್ಯಾರ್ಥಿಗಳೇ ದೇಶದ ಭವಿಷ್ಯವಾಗಿದ್ದು, ಅವರಲ್ಲಿ ದೇಶಭಕ್ತಿಯ ಸಂಸ್ಕಾರವನ್ನು ಬೆಳೆಸಬೇಕಾಗಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಇದು ಕೇಂದ್ರ ಸರಕಾರದ ಪ್ರತಿಜ್ಞೆಯಾಗಿದೆ ಎಂದು ಅವರು ಹೇಳಿದರು. 


ಒಂದು ದೇಶ ದೊಡ್ಡದೊಡ್ಡ ಸಾಧನೆಗಳನ್ನು ಮಾಡಲು ವ್ಯಕ್ತಿಗಳ ಚಿಕ್ಕಚಿಕ್ಕ ಸಂಕಲ್ಪಗಳು ನಿರ್ಣಾಯಕ ಕೊಡುಗೆ ಕೊಡುತ್ತವೆ. ಈ ನಿಟ್ಟಿನಲ್ಲಿ, ದೇಶವನ್ನು ಪ್ರೀತಿಸುವಂತಹ ಶಿಕ್ಷಣವನ್ನು ಎನ್ಇಪಿ ಅಡಿಯಲ್ಲಿ ಒದಗಿಸಲಾಗುವುದು. ಇದು ಸಂಪೂರ್ಣ ಭಾರತೀಯ ದೃಷ್ಟಿಕೋನವನ್ನು ಹೊಂದಿದೆ. ದೇಶದ ಪ್ರಗತಿಯ ದೃಷ್ಟಿಯಿಂದ ಮುಂದಿನ 25 ವರ್ಷಗಳಿಗೆ ಅತಿಶಯ ಮಹತ್ವವಿದ್ದು, ಭಾರತವು ವಿಶ್ವಗುರು ಎನಿಸಿಕೊಳ್ಳುವುದು ನಿಶ್ಚಿತ ಎಂದು ಅವರು ಪ್ರತಿಪಾದಿಸಿದರು. 


ಕಳೆದ ಎಂಟು ವರ್ಷಗಳಿಂದ ಈಚೆಗೆ ದೇಶದ ಗ್ರಾಮೀಣ ಭಾಗದಲ್ಲಿ 410 ಉನ್ನತ ಶಿಕ್ಷಣ ಸಂಸ್ಥೆಗಳನ್ನು ಅಸ್ತಿತ್ವಕ್ಕೆ ತರಲಾಗಿದೆ. ಜತೆಗೆ ಜಮ್ಮು-ಕಾಶ್ಮೀರದ ಲಡಾಖ್ ಮತ್ತು ಈಶಾನ್ಯ ಭಾರತ ಸೇರಿದಂತೆ ಉದ್ದಗಲಕ್ಕೂ ಕೇಂದ್ರೀಯ ವಿವಿ, ಏಮ್ಸ್, ಐಐಟಿಗಳು, ವೈದ್ಯಕೀಯ ಕಾಲೇಜುಗಳು ಮತ್ತು ಹೊಸ ಜ್ಞಾನಶಾಖೆಗಳ ವಿ.ವಿ.ಗಳನ್ನು ಆರಂಭಿಸಲಾಗಿದೆ. ಈ ಮೂಲಕ ದೇಶದ ಎಲ್ಲಾ ಭಾಗಗಳನ್ನೂ ಸಮಾನವಾಗಿ ಕಾಣಲಾಗುತ್ತಿದೆ ಎಂದು ಅಮಿತ್ ಶಾ ವಿವರಿಸಿದರು. 


ಇದನ್ನೂ ಓದಿ : Vegetable price: ಗ್ರಾಹಕರೇ ಗಮನಿಸಿ: ಇಂದಿನ ತರಕಾರಿಗಳ ಬೆಲೆ ಹೀಗಿದೆ


ಪ್ರಧಾನಿ ಮೋದಿ ತಮ್ಮ ದಕ್ಷ ನೀತಿಗಳ ಮೂಲಕ ದೇಶವನ್ನು ಉತ್ಪಾದನಾ ಹಬ್ ಆಗಿ ಬೆಳೆಸುತ್ತಿದ್ದಾರೆ. ಇನ್ನೊಂದೆಡೆಯಲ್ಲಿ, ಭಯೋತ್ಪಾದನೆ ಮತ್ತಿತರ ಪಿಡುಗುಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುತ್ತಿದೆ. ಇನ್ನು ಕೆಲವೇ ವರ್ಷಗಳಲ್ಲಿ ಭಾರತವು ಅಮೆರಿಕ ಮತ್ತು ಇಸ್ರೇಲ್ ದೇಶಗಳ ಮಟ್ಟಕ್ಕೆ ಬೆಳೆದು, ಬೆಳಗಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು. 


ಇದೇ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, `ಇದು ಪರಿವರ್ತನೆಯ ಪರ್ವಕಾಲವಾಗಿದೆ. ಜನಸಂಖ್ಯೆಯಲ್ಲಿ ಶೇ.46ರಷ್ಟಿರುವ ಯುವಜನರನ್ನು ದೇಶದ ಆಸ್ತಿಯೆಂದು ಭಾವಿಸಲಾಗಿದೆ. ಯುವಜನರಿಗೆ ಶಿಕ್ಷಣ, ಉದ್ಯೋಗ ಮತ್ತು ಸಬಲೀಕರಣ ಇವೇ ಸರಕಾರದ ಮೂಲಮಂತ್ರಗಳಾಗಿವೆ. ಕ್ಯಾಂಪಸ್ ಸಂದರ್ಶನ, ಸ್ವ-ಉದ್ಯೋಗಕ್ಕೆ ಒತ್ತು ಕೊಡುವುದರ ಜತೆಗೆ ಪ್ರತೈಕ ಉದ್ಯೋಗ ನೀತಿಯನ್ನೇ ರಾಜ್ಯದಲ್ಲಿ ರೂಪಿಸಲಾಗಿದೆ’ ಎಂದರು. 


ನೃಪತುಂಗ ವಿ.ವಿ.ಕ್ಕೆ ಕೇಂದ್ರ ಸರಕಾರವು 55 ಕೋಟಿ ರೂ. ಅನುದಾನ ಮಂಜೂರು ಮಾಡಿದೆ. ಇದಕ್ಕೆ ಅಗತ್ಯವಿರುವ ಬಾಕಿ ಹಣವನ್ನು ರಾಜ್ಯ ಸರಕಾರ ಒದಗಿಸಲಿದೆ. ಕಾಲದ ಜತೆಯಲ್ಲಿ ಬದಲಾವಣೆಗೆ ತೆರೆದು ಕೊಳ್ಳದೆ ಹೋದರೆ ಅವಕಾಶಗಳು ಕೈತಪ್ಪಿ ಹೋಗಲಿವೆ. ಹೀಗಾಗಿ, ರಾಜ್ಯದಲ್ಲಿ ಎನ್ಇಪಿ ಜಾರಿಗೊಳಿಸುತ್ತಿದ್ದು, ಪೂರ್ವ ಪ್ರಾಥಮಿಕ ಹಂತದಿಂದ ಹಿಡಿದು ಸ್ನಾತಕೋತ್ತರ ಮಟ್ಟದವರೆಗೂ ಇನ್ನುಮುಂದೆ ಸಮಗ್ರ ಪರಿವರ್ತನೆ ಕಾಣಿಸಿಕೊಳ್ಳಲಿದೆ. ನೃಪತುಂಗ ವಿ.ವಿ.ವು ಎನ್ಇಪಿ ನೀತಿಯನ್ನು ಸಂಪೂರ್ಣವಾಗಿ ಅಳವಡಿಸಿಕೊಂಡಿದೆ ಎಂದು ಅವರು ನುಡಿದರು. 


ಇದನ್ನೂ ಓದಿ : PSI Scam: ‘ಸರ್ಕಾರಕ್ಕೆ ನೈತಿಕತೆ ಇದ್ದರೆ ಗೃಹಸಚಿವರ ರಾಜೀನಾಮೆ ಪಡೆದು, ತನಿಖೆಗೆ ಒಳಪಡಿಸಬೇಕು’


ಪ್ರಾಸ್ತಾವಿಕವಾಗಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ, `ನವಭಾರತ ನಿರ್ಮಾಣಕ್ಕಾಗಿ ನವಕರ್ನಾಟಕವು ತನ್ನ ಮೌಲಿಕ ಕೊಡುಗೆ ನೀಡಲಿದೆ. ಕಳೆದ ಎರಡು ವರ್ಷಗಳಲ್ಲಿ 6 ವಿ.ವಿ.ಗಳನ್ನು ಸ್ಥಾಪಿಸಲಾಗಿದ್ದು, ಸದ್ಯದಲ್ಲೇ ಇನ್ನೂ 7 ವಿ.ವಿ.ಗಳು ಅಸ್ತಿತ್ವಕ್ಕೆ ಬರಲಿವೆ. ಒಟ್ಟಿನಲ್ಲಿ ಒಂದು ಜಿಲ್ಲೆಗೆ ಒಂದು ವಿ.ವಿ.ಯಾದರೂ ಇರುವಂತೆ ಮುಂದಡಿ ಇಡಲಾಗುವುದು’ ಎಂದರು. 


ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಗೃಹ ಸಚಿವ ಆರಗ ಜ್ಞಾನೇಂದ್ರ, ಸಂಸದ ಪಿ.ಸಿ.ಮೋಹನ್, ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ಕುಲಪತಿ ಶ್ರೀನಿವಾಸ ಎಸ್ ಬಳ್ಳಿ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್ ಉಪಸ್ಥಿತರಿದ್ದರು. 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.