ಬೆಂಗಳೂರು: ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಸಾಹಿತಿ, ಪ್ರಸಿದ್ದ ರಂಗಭೂಮಿ ತಜ್ಞ, ನಟ, ನಿರ್ದೇಶಕ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್(81) ಇಂದು  ಬೆಳಿಗ್ಗೆ ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ವಿಧಿವಶರಾಗಿದ್ದಾರೆ.


COMMERCIAL BREAK
SCROLL TO CONTINUE READING

1938, ಮೇ 19ರಂದು ಮಹಾರಾಷ್ಟ್ರದ ಮಾಥೆರಾನದಲ್ಲಿ ಡಾ| ರಘುನಾಥ್ ಕಾರ್ನಾಡ್ ಮತ್ತು ಕೃಷ್ಣಾಬಾಯಿ ದಂಪತಿಗಳ ಪುತ್ರನಾಗಿ ಜನಿಸಿದ ಗಿರೀಶ್ ಕಾರ್ನಾಡ್, ಉತ್ತರ ಕನ್ನಡದ ಶಿರಸಿಯಲ್ಲಿ ಪ್ರಾಥಮಿಕ ಶಿಕ್ಷಣವನ್ನು, ಧಾರವಾಡದ ಬಾಸೆಲ್ ಮಿಷನ್ ಹೈಸ್ಕೂಲಿನಲ್ಲಿ ಪ್ರೌಢ ಶಿಕ್ಷಣವನ್ನು ಪಡೆದರು. ಬಳಿಕ ಕರ್ನಾಟಕದಲ್ಲೇ ತಮ್ಮ ಪದವಿ ಶಿಕ್ಷಣ ಪೂರೈಸಿದ ಅವರು, ರ್ಹೊಡ್ಸ್ ಸ್ಕಾಲರ್ಶಿಪ್ ಪಡೆದುಕೊಂಡು ಆಕ್ಸ್‌ಫರ್ಡ್‌ನಲ್ಲಿ ಹೆಚ್ಚಿನ ವ್ಯಾಸಂಗಕ್ಕೆ ತೆರಳಿದರು. ಗಿರೀಶ ಕಾರ್ನಾಡರು ಆಕ್ಸ್‌ಫರ್ಡ್‌ ಡಿಬೇಟ ಕ್ಲಬ್ ಗೆ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಥಮ ಏಷಿಯನ್ ಆಗಿದ್ದಾರೆ.


ಆಕ್ಸ್‌ಫರ್ಡ್‌ನಿಂದ ಬಂದ ನಂತರದಲ್ಲಿ ಮದ್ರಾಸ್‌ನಲ್ಲಿ ಆಕ್ಸ್ ಫ಼ರ್ಡ್ ಯೂನಿವರ್ಸಿಟಿ ಪ್ರೆಸ್ ನಲ್ಲಿ ಸಂಪಾದಕರಾಗಿ ತಮ್ಮ ವೃತ್ತಿ ಆರಂಭಿಸಿದ ಕಾರ್ನಾಡ್, ಕೆಲದಿನಗಳ ನಂತರ ತಮ್ಮ ವೃತ್ತಿಯನ್ನು ತೊರೆದು ಧಾರವಾಡಕ್ಕೆ ವಾಪಾಸಾಗಿ ನಾಟಕ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.


ತಮ್ಮ 42ನೇ ವಯಸ್ಸಿನಲ್ಲಿ ಕೊಡಗಿನ ವೀರಯೋಧ ಕೋದಂಡೇರ ಗಣಪತಿಯವರ ಪುತ್ರಿ, ಡಾ. ಸರಸ್ವತಿ ಗಣಪತಿಯವರನ್ನು ವಿವಾಹವಾದ ಇವರಿಗೆ ಶಾಲ್ಮಲಿ ರಾಧಾ ಮತ್ತು ರಘು ಅಮಯ್ ಎಂಬ ಇಬ್ಬರು ಮಕ್ಕಳಿದ್ದಾರೆ.