ಬೆಂಗಳೂರು: ರೈತರ ಸಾಲಮನ್ನಾ ಯೋಜನೆಗೆ ಸಂಬಂಧಿಸಿದಂತೆ ಸಿದ್ಧತೆಗಳು ಪೂರ್ಣವಾಗಿದ್ದು, ನವೆಂಬರ್ ಅಂತ್ಯದೊಳಗೆ ರೈತರ ಸಾಲಮನ್ನಾ ಯೋಜನೆ ಜಾರಿಗೆ ಬರಲಿದೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಸಾಲಮನ್ನಾ ಯೋಜನೆಯ ಸ್ಥಿತಿ-ಗತಿ ಬಗ್ಗೆ ಮುಖ್ಯಮಂತ್ರಿಗಳ ಕಚೇರಿಯಿಂದಲೇ ಮಾಧ್ಯಮ ಪ್ರಕಟಣೆ ಹೊರಬಿದ್ದ್ದಿದ್ದು, ಮುಖ್ಯಮಂತ್ರಿಯವರು ಸಾಲ ಮನ್ನಾ ಯೋಜನೆ ಪ್ರಗತಿಯನ್ನು ಸತತವಾಗಿ ಪರಿಶೀಲನೆ ನಡೆಸುತ್ತಿದ್ದು, ಕಾಲ ಕಾಲಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ. ಸಿದ್ಧತೆಗಳು ಪೂರ್ಣಗೊಳ್ಳುತ್ತಿದ್ದು, ನವೆಂಬರ್ ಅಂತ್ಯದ ವೇಳೆಗೆ ಪೂರ್ಣಪ್ರಮಾಣದಲ್ಲಿ ಜಾರಿಗೊಳಿಸಲು ಉದ್ದೇಶಿಸಿದೆ ಎನ್ನಲಾಗಿದೆ.


ಈ ಯೋಜನೆಯನ್ನು ನವೆಂಬರ್ ತಿಂಗಳಿನಲ್ಲಿ ಅನುಷ್ಠಾನಗೊಳಿಸುವ ಕುರಿತು ಮುಖ್ಯ ಕಾರ್ಯದರ್ಶಿ, ಅಭಿವೃದ್ಧಿ ಆಯುಕ್ತರು, ಆರ್ಥಿಕ ಇಲಾಖೆ, ಸಹಕಾರ ಇಲಾಖೆ ಮತ್ತು ಕಂದಾಯ ಇಲಾಖೆಗಳೊಂದಿಗೆ ಸಮನ್ವಯ ಸಭೆ ನಡೆಸಿದ್ದಾರೆ. ಯೋಜನೆಯ ಸಂಚಾಲನಾ ಸಮಿತಿ ಹಾಗೂ ತಾಂತ್ರಿಕ ಸಮಿತಿಗಳು ನಿಯಮಿತವಾಗಿ ಸಭೆ ನಡೆಸುತ್ತಿವೆ.


ವಾಣಿಜ್ಯ ಬ್ಯಾಂಕುಗಳು ಸುಮಾರು 21 ಲಕ್ಷ ಸಾಲ ಖಾತೆಗಳ ಮಾಹಿತಿಯನ್ನು ಒದಗಿಸಿವೆ. ಇವುಗಳನ್ನು ಪ್ರತಿ ಶಾಖೆಗೆ ಕಳುಹಿಸಲಾಗುತ್ತಿದೆ. ಸೇಡಂ ಮತ್ತು ದೊಡ್ಡಬಳ್ಳಾಪುರ ತಾಲ್ಲೂಕುಗಳಲ್ಲಿ ವಾಣಿಜ್ಯ ಬ್ಯಾಂಕುಗಳ ಸುಮಾರು 50 ಶಾಖೆಗಳಲ್ಲಿ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.


ಈ ಎರಡು ತಾಲ್ಲೂಕುಗಳ ಬ್ಯಾಂಕ್‍ಗಳ ಶಾಖೆಗಳಿಗೆ ರೈತರು ಭೇಟಿ ನೀಡಿ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡಿನ ಪ್ರತಿಯನ್ನು ಒದಗಿಸುತ್ತಿದ್ದಾರೆ. ಪ್ರಾಯೋಗಿಕವಾಗಿ ಈ ಯೋಜನೆ ಸುಗಮವಾಗಿ ಜಾರಿಗೊಳ್ಳುತ್ತಿದೆ. ಇದು ಯಶಸ್ವಿಯಾದ ನಂತರ, ನವೆಂಬರ್ ತಿಂಗಳ ಅಂತ್ಯದಲ್ಲಿ ರಾಜ್ಯಾದ್ಯಂತ ಜಾರಿಗೊಳಿಸಲು ಉದ್ದೇಶಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.


ಸಹಕಾರಿ ಬ್ಯಾಂಕುಗಳು ಮತ್ತು ಪ್ರಾಥಮಿಕ ಕೃಷಿ ಸಹಕಾರಿ ಸಂಘಗಳು ದತ್ತಾಂಶ ಸಂಗ್ರಹ ಪ್ರಕ್ರಿಯೆಯನ್ನು ಈಗಾಗಲೇ ಪ್ರಾರಂಭಿಸಿವೆ. ಸಹಕಾರಿ ಬ್ಯಾಂಕುಗಳು ಮತ್ತು ಪ್ರಾಥಮಿಕ ಕೃಷಿ ಸಹಕಾರಿ ಸಂಘಗಳು 20 ಲಕ್ಷ ರೈತರಲ್ಲಿ ಸುಮಾರು 3 ಲಕ್ಷಕ್ಕೂ ಹೆಚ್ಚು ರೈತರ ಮಾಹಿತಿಯನ್ನು ಕ್ರೋಢೀಕರಿಸಿವೆ. ಈ ಪ್ರಕ್ರಿಯೆ ನವೆಂಬರ್ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ. ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳನ್ನು ಸಾಲಮನ್ನಾ ಯೋಜನೆಯ ಅನುಷ್ಠಾನಕ್ಕೆ ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದ್ದು, ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ಶ್ರಮಿಸುತ್ತಿದ್ದಾರೆ.


ರೈತರಿಗಾಗಿ ಶೀಘ್ರವೇ ಸಹಾಯವಾಣಿ ಪ್ರಾರಂಭಿಸಲಾಗುವುದು. ಸಹಾಯವಾಣಿ ಮಾಹಿತಿಯನ್ನು ಶೀಘ್ರವೇ ಒದಗಿಸಲಾಗುವುದು. ಈ ಯೋಜನೆಯ ತಂತ್ರಾಂಶವನ್ನು ಸಂಪೂರ್ಣವಾಗಿ ಭೂಮಾಪನಾ ಇಲಾಖೆಯ ಆಯುಕ್ತರ ನೇತೃತ್ವದಲ್ಲಿ ಕಂದಾಯ ಇಲಾಖೆಯೇ ಅಭಿವೃದ್ಧಿ ಪಡಿಸಿದೆ.


ಸರ್ಕಾರವು ಈ ಯೋಜನೆಯ ಯಶಸ್ವಿ ಅನುಷ್ಠಾನಕ್ಕಾಗಿ ಸರ್ಕಾರ ಸಮರೋಪಾದಿಯಲ್ಲಿ ಸಿದ್ಧತೆ ನಡೆಸುತ್ತಿದೆ. ಈ ಯೋಜನೆಯಡಿ ಎಲ್ಲ ಅರ್ಹ ರೈತರಿಗೆ ಅನುಕೂಲವಾಗಲಿದೆ. ಆದ್ದರಿಂದ ಯಾವ ರೈತರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.