ಬೆಂಗಳೂರು: ಲಾಕ್‌ಡೌನ್‌ನಿಂದ  ತಾವು ಬೆಳೆದ ಬೆಳೆಗಳಿಗೆ ಬೆಲೆ ಇಲ್ಲದೆ ಪರಿತಪಿಸುತ್ತಿರುವ ರೈತರ ಬಗ್ಗೆ ಸರ್ಕಾರ ಕೂಡಲೇ ಗಮನಹರಿಸಬೇಕೆಂದು ಪ್ರತಿಪಕ್ಷಗಳ ನಾಯಕರಾದ ಸಿದ್ದರಾಮಯ್ಯ (Siddaramaiah) ಮತ್ತು ಎಚ್‌.ಡಿ. ಕುಮಾರಸ್ವಾಮಿ (HD Kumaraswamy) ತರಾಟೆಗೆ ತೆಗೆದುಕೊಂಡ ಬಳಿಕ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಇಂದು ಸಭೆ ಕರೆದು ಸಮಸ್ಯೆ ಬಗ್ಗೆ ಸಮಾಲೋಚನೆ ನಡೆಸಿದೆ.


COMMERCIAL BREAK
SCROLL TO CONTINUE READING

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yeddyurappa) ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವರಾದ ಆರ್. ಅಶೋಕ್, ಬಿ.ಸಿ. ಪಾಟೀಲ್, ಎಸ್.ಟಿ. ಸೋಮಶೇಖರ್, ನಾರಾಯಣಗೌಡ, ಕೆ. ಗೋಪಾಲಯ್ಯ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಕೃಷಿ, ಮಾರುಕಟ್ಟೆ ಮತ್ತು ಸಹಕಾರ ಇಲಾಖೆ ಸೇರಿದಂತೆ ಸರ್ಕಾರದ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.


ಸಭೆಯಲ್ಲಿ ರೈತರ ಹಿತ ಕಾಪಾಡಲು ಹಾಗೂ ಗ್ರಾಹಕರ ಹಿತ ಕಾಪಾಡುವ ನಿಟ್ಟಿನಲ್ಲಿ ಕೆಲವು ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳಲಾಯಿತು. ಕರ್ನಾಟಕದಿಂದ ಟೊಮ್ಯಾಟೋ, ಕಲ್ಲಂಗಡಿ, ಕರಬೂಜ, ದ್ರಾಕ್ಷಿ, ನಿಂಬೆ ಮೊದಲಾದ ಹಣ್ಣು ತರಕಾರಿಗಳು ದೊಡ್ಡ ಪ್ರಮಾಣದಲ್ಲಿ ಹೊರ ರಾಜ್ಯಗಳಿಗೆ ರಫ್ತಾಗುತ್ತಿತ್ತು. ಈಗ ಬೇಡಿಕೆ ಕುಸಿದಿದೆ. ಈ ನಿಟ್ಟಿನಲ್ಲಿ ಈ ಅವಶ್ಯಕ ವಸ್ತುಗಳ ಸಾಗಾಣಿಕೆಗೆ ಯಾವುದೇ ರೀತಿಯ ಅಡಚಣೆಯಾಗದಂತೆ ಕ್ರಮ ವಹಿಸಲು ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಯಿತು.


ಟೊಮ್ಯಾಟೋ ಸಂಸ್ಕರಣಾ ಘಟಕಗಳ ಮೂಲಕ ಕೆಚಪ್ ತಯಾರಿಕೆ ಮಾಡಲು ಸೂಚಿಸಲಾಗಿದೆ. ಹಾಪ್‍ಕಾಮ್ಸ್ ಮೂಲಕವೂ ತರಕಾರಿ ಪೂರೈಕೆಗೆ ಅವಕಾಶ ಕಲ್ಪಿಸಲಾಗಿದೆ. ವಾಹನಗಳ ಮೂಲಕ ಪೂರೈಕೆಗೆ ಕೂಡ ಕ್ರಮ ವಹಿಸಲಾಗಿದೆ. ಇದರಿಂದ ಗ್ರಾಹಕರಿಗೂ ಸೂಕ್ತ ದರದಲ್ಲಿ ಹಣ್ಣು ತರಕಾರಿ ಲಭ್ಯವಾಗುವಂತೆ ಮಾಡಲಾಗಿದೆ.


ಹಾಪ್‍ಕಾಮ್ಸ್‍ನಲ್ಲಿ ಮೊಟ್ಟೆ ಮಾರಾಟಕ್ಕೆ ಸಹ ವ್ಯವಸ್ಥೆ ಮಾಡಲಾಗಿದೆ. ಹಣ್ಣು ತರಕಾರಿ ದಿನಸಿ ಮತ್ತಿತರ ಅಗತ್ಯ ವಸ್ತುಗಳ ಅಂಗಡಿಗಳು ದಿನವಿಡೀ ತೆರೆದಿಡಲು ಸೂಚಿಸಲಾಗಿದೆ. ಆದರೆ ಖರೀದಿದಾರರು ಸಾಮಾಜಿಕ ಅಂತರ ಕಾಯ್ದುಕೊಂಡು ಸೂಕ್ತ ಮುನ್ನೆಚ್ಚರಿಕೆಯೊಂದಿಗೆ ಅಗತ್ಯ ವಸ್ತು ಖರೀದಿಸುವಂತೆ ಸೂಚಿಸಲಾಗಿದೆ. ರೈಲುಗಳ ಮೂಲಕ ಹೊರ ರಾಜ್ಯಗಳಿಗೆ ಹಣ್ಣು-ತರಕಾರಿ ಮೊದಲಾದ ವಸ್ತುಗಳ ಮಾರಾಟಕ್ಕೆ ಅನುವು ಮಾಡಿಕೊಡುವಂತೆ ಸೂಚಿಸಲಾಯಿತು. ವೈನರಿಗಳಲ್ಲಿ ಉತ್ಪಾದನೆ ಮುಂದುವರಿಸಲು ಕ್ರಮ ವಹಿಸಲು ಸೂಚಿಸಲಾಯಿತು. 


ಮಾರುಕಟ್ಟೆಗಳಲ್ಲಿ ದಾಸ್ತಾನು ಕೊರತೆ ಇಲ್ಲ. ಆದ್ದರಿಂದ ಜನರು ವದಂತಿಗಳಿಗೆ ಕಿವಿಗೊಡಬಾರದು. ಲಾಕ್‍ಡೌನ್ ಹಿನ್ನೆಲೆಯಲ್ಲಿ ದಿನಸಿ ಮತ್ತು ತರಕಾರಿಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡುವವರ ಪರವಾನಿಗೆ ರದ್ದು ಮಾಡಲಾಗುವುದು. ಅಡುಗೆ ಎಣ್ಣೆ ದಾಸ್ತಾನು ಲಭ್ಯವಿದ್ದು, ಪ್ಯಾಕೇಜಿಂಗ್ ವ್ಯವಸ್ಥೆ ಮಾಡಿ ಪೂರೈಕೆಗೆ ಕ್ರಮ ವಹಿಸಲು ಸೂಚಿಸಲಾಗಿದೆ. ಬೆಳೆ ಕಟಾವಿಗೆ ನೆರೆಯ ರಾಜ್ಯಗಳಿಂದ ಕಟಾವು ಯಂತ್ರಗಳನ್ನು ತರಿಸಿ, ಕಟಾವಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ಮುಂದಿನ ತಿಂಗಳಲ್ಲಿ ನಾಲ್ಕು ಜಿಲ್ಲೆಗಳಲ್ಲಿ ಬಿತ್ತನೆಯಾಗಲಿದ್ದು, ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಲಭ್ಯವಿದೆ.


27 ರೇಷ್ಮೆ ಮಾರುಕಟ್ಟೆ ತೆರೆಯಲು ಕ್ರಮ ವಹಿಸಲಾಗಿದೆ. ಇನ್ನು 14 ಮಾರುಕಟ್ಟೆಗಳಲ್ಲಿ ತಂಡಗಳನ್ನು ರಚಿಸಿ, ರೀಲರು ರೈತರನ್ನು ನೇರವಾಗಿ ಸಂಪರ್ಕ ಕಲ್ಪಿಸುವಂತೆ ಸೂಚಿಸಲಾಗಿದೆ. ಆದರೆ ಏಜೆಂಟರನ್ನು ಮನೆಗೆ ಕಳುಹಿಸಿ ಕಡಿಮೆ ದರಕ್ಕೆ ಖರೀದಿ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಇಂತಹ ಅಧಿಕಾರಿ, ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಸೂಕ್ತ ಮುನ್ನೆಚ್ಚರಿಕೆಯೊಂದಿಗೆ ರೇಷ್ಮೆ ಮಾರುಕಟ್ಟೆಯನ್ನು ತೆರೆಯಲು ಸೂಚನೆ ನೀಡಲಾಯಿತು.


ಅಕ್ಕಿ ಮಿಲ್‍ಗಳನ್ನು ಪ್ರಾರಂಭಿಸಲು ಸೂಚನೆ ನೀಡಲಾಗಿದೆ. ಕೆಎಂಎಫ್ ಮೂಲಕ 69 ಲಕ್ಷ ಲೀಟರ್ ಹಾಲು ಖರೀದಿಯಾಗುತ್ತಿದ್ದು, 42 ಲಕ್ಷ ಲೀಟರ್ ಹಾಲು ಮಾರಾಟ ಮಾಡಲಾಗುತ್ತಿದೆ. 7.5 ಲಕ್ಷ ಲೀಟರ್ ಹಾಲು ಉಳಿತಾಯವಾಗುತ್ತಿದೆ. ಇದನ್ನು ಲಾಕ್‍ಡೌನ್ ಮುಗಿಯುವ ವರೆಗೆ ಸರ್ಕಾರವೇ ಖರೀದಿಸಿ ಅಧಿಸೂಚಿಸಿದ ಕೊಳೆಗೇರಿಗಳು ಮತ್ತು ಕಾರ್ಮಿಕರ ಬಡಾವಣೆಗಳಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಮೂಲಕ ಉಚಿತವಾಗಿ ವಿತರಿಸಲು ಕ್ರಮ ವಹಿಸಲಾಯಿತು.


ಅಗತ್ಯ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ವ್ಯಾಪಾರಿಗಳು ಸಂಕಷ್ಟದ ಅವಧಿಯನ್ನು ದುರುಪಯೋಗ ಪಡಿಸಿಕೊಳ್ಳುವುದು ಸರಿಯಲ್ಲ. ಇಂತಹ ಅಕ್ರಮಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ.


ಲಾಕ್‍ಡೌನ್‍(Lockdown)ನಿಂದ ನಗರದಲ್ಲಿ ಸಿಲುಕಿಕೊಂಡಿರುವ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಬಿಲ್ಡರುಗಳೇ ಊಟ, ವಸತಿ ವ್ಯವಸ್ಥೆ ಒದಗಿಸುವಂತೆ ಸೂಚಿಸಲಾಯಿತು.