ಪ್ರತಿ ಮಗುವಿನ ಕನಸಿನ ಮೇಷ್ಟ್ರು!
ಡಾ. ಎಪಿಜೆ ಅಬ್ದುಲ್ ಕಲಾಂ. ಈ ಹೆಸರು ಕಿವಿಗೆ ಬಿದ್ದ ತಕ್ಷಣ ಮಹಾಗುರು, ಸರಳ ಸಜ್ಜನಿಕೆಯ ಸಾಕಾರಮೂರ್ತಿ, ಆದರ್ಶನೀಯ ವ್ಯಕ್ತಿತ್ವವೊಂದು ಕಣ್ಣ ಮುಂದೆ ಬರುತ್ತದೆ. ಖಂಡಿತಾ ನಿಜ. ಅಬ್ದುಲ್ ಕಲಾಂ ಎಂದರೇನೆ ಹಾಗೆ ಬದುಕಿಗೆ ಸ್ಫೂರ್ತಿಯಾದ, ಆದರ್ಶವಾದ ಗುರು ಅವರು, ಭಾರತದ ಹೆಮ್ಮೆಯ ಪುತ್ರ, ಅಪೂರ್ವ ವಿಜ್ಞಾನಿ ಇಂದಿಗೂ ಜನಮಾನಸದಲ್ಲಿ `ಮಿಸೈಲ್ ಮ್ಯಾನ್` ಎಂದೇ ರಾರಾಜಿಸುತ್ತಿದ್ದಾರೆ. ರಾಷ್ಟ್ರಪತಿಯಾಗಿಯೂ ಅಬ್ದುಲ್ ಕಲಾಂ ಅವರು ಜನರಿಗೆ ಬಲು ಹತ್ತಿರವಾಗಿದ್ದರು.
APJ Abdul Kalam : ಕಲಾಂ ಅವರ ಜೀವನಾದರ್ಶ ಮತ್ತು ಬೋಧನೆಗಳು ಸದಾ ಬದುಕಿಗೆ ದಾರಿ ದೀಪ, ತಮಿಳುನಾಡಿನ ರಾಮೇಶ್ವರಂನಲ್ಲಿ ಜನಿಸಿದ ಅಬ್ದುಲ್ ಕಲಾಂ ಮುಂದೊಂದು ದಿನ ವಿಶ್ವವೇ ಗೌರವಿಸುವ ಮಹಾನ್ ವಿಜ್ಞಾನಿಯಾದರು. ಸತತ ಪ್ರಯತ್ನ, ಪ್ರಾಮಾಣಿಕತೆಯಿಂದ ತನ್ನ ಕನಸ ಬೆನ್ನೇರಿ ಹೊರಟ ಅಬ್ದುಲ್ ಕಲಾಂ ಬಳಿಕ ಎಲ್ಲರಿಗೂ ಸ್ಫೂರ್ತಿಯಾಗುವ ರೀತಿ ಸರಳ ಸಜ್ಜನಿಕೆಯಿಂದ ಬದುಕಿ ಮಾದರಿಯಾದರು.
ಭಾರತದ ದಕ್ಷಿಣ ತುದಿಯಲ್ಲಿನ ಸಣ್ಣ ಊರಾದ ರಾಮೇಶ್ವರಂನಲ್ಲಿ ಬಡ ಮುಸ್ಲಿಂ ಕುಟುಂಬವೊಂದರಲ್ಲಿ ಜನಿಸಿದ ಕಲಾಂ, ತಮ್ಮ ಸ್ವಂತ ಪ್ರತಿಭೆ ಹಾಗೂ ಪರಿಶ್ರಮದಿಂದ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ಸಂವಿಧಾನ ರಕ್ಷಕ ಸ್ಥಾನಕ್ಕೇರಿ ಇತಿಹಾಸ ನಿರ್ಮಿಸಿದರು. ಅಂದು ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕಾರಕ್ಕೆ ಸಾಕ್ಷಿಗಳಾಗಿ ಬಂದಿದ್ದವರು ನೂರು ಜನ ನಿಯಂತ್ರಿತ ಶಾಲಾ ಮಕ್ಕಳು! *2020ರ ವೇಳೆಗೆ ನಮ್ಮ ದೇಶ ಸ್ವಾವಲಂಬಿ, ಸಮೃದ್ಧಿ ಹಾಗೂ ಅಭಿವೃದ್ಧಿ ಹೊಂದಿದ ದೇಶವಾಗುತ್ತದೆ." ಎಂದು ಆತ್ಮವಿಶ್ವಾಸದಿಂದ ನುಡಿದ ಕಲಾಂ, ಈ ದೇಶದ ಭವಿಷ್ಯವನ್ನು ಶಾಲಾಮಕ್ಕಳ ಬೊಗಸೆ ಕಣ್ಣಲ್ಲಿ ಕಂಡವರು.
ಆರು ವರ್ಷದ ಆ ಪುಟ್ಟ ಬಾಲಕ ರಾಮೇಶ್ವರದ ಮರಳು ದಿಬ್ಬದ ಮೇಲೆ ಅಂಗಾತ ಮಲಗಿ ಕನಸು ಕಾಣುತ್ತಿದ್ದಾನೆ. ಆಗಸದಲ್ಲಿ ರೆಕ್ಕೆ ಬಿಚ್ಚಿ ಹೀಗಲ್ ಹಕ್ಕಿ ನಿಧಾನವಾಗಿ ಹಾರುತ್ತಿದ್ದರೆ, ದೂರದ ದೇಗುಲದಲ್ಲಿ ಗಂಟೆ ಬಾರಿಸುತ್ತಿದ್ದ ಸದ್ದು ತಂದೆ ಜೈನುಲಾಬೀನ್ ಕಡಲಂಚಿನಲ್ಲಿ ದೋಣಿ ತಯಾರಿಸುತ್ತಿದ್ದರೆ, ತಾಯಿ. ಆಶೀಯಮ್ಮ ಬಾಳೆಲೆಗೆ ಬಿಸಿ-ಬಿಸಿ ಅನ್ನ ಹಾಕಿ 'ಬೇಟಾ ಕಲಾಂ" ಎಂದು ಪ್ರೀತಿಯಿಂದ ಕೂಗುತ್ತಿದ್ದರು. ಮುಂಜಾನೆ ಎದ್ದು ದಿನ ಪತ್ರಿಕೆ ಹಿಡಿದು ಮನೆ-ಮನೆ ತಲುಪಿಸಿ ಜ್ಞಾನ ಪಡೆಯುವ ಮೂಲಕ ಚಿಕ್ಕಂದಿನಿಂದಲೇ ಕುಟುಂಬಕ್ಕೆ ನೆರವಾಗಿದ್ದವರು. ಹೀಗೆ ಚಿಕ್ಕಂದಿನಿಂದಲೂ ಪ್ರೀತಿ ವಾತ್ಸಲ್ಯದ ನಡುವೆ ಬೆಳೆದ ಕಲಾಂ ಮುಂದೊಂದು ದಿನ ಇಡೀ ದೇಶವೇ ಪ್ರೀತಿಸುವ ಕಲಾಂ ಚಾಚನಾದರು.
ಕಲಾಂ ಅವರಿಗೆ ವಿಜ್ಞಾನದಲ್ಲಿ ಆಸಕ್ತಿ ಮೂಡಿಸಿದ್ದು ಶ್ರೀ ಶಿವಸುಬ್ರಹ್ಮಣ್ಯ ಅಯ್ಯರ್ ಅವರ ಪಾಠ, ಓದಿನಲ್ಲಿ ಕಲಾಂರಿಗಿದ್ದ ಪ್ರತಿಭೆ ಮತ್ತು ಶ್ರದ್ಧೆಯನ್ನು ಗುರುತಿಸಿದ್ದ ಅವರು, ಕಲಾಂ, ನೀನು ನಗರದಲ್ಲಿರುವ ವಿದ್ಯಾವಂತರಿಗೆ ಸರಿಸಾಟಿಯಾಗಿ ನಿಲ್ಲಬಲ್ಲ ಎತ್ತರಕ್ಕೆ ಬೆಳೆಯಬೇಕು." ಎಂದು ಹುರಿದುಂಬಿಸುತ್ತಿದ್ದರು. ಉನ್ನತ ವ್ಯಾಸಂಗ ಪಡೆದು ದೇಶ ಕಟ್ಟುವ ಕೆಲಸದಲ್ಲಿ ಭಾಗವಹಿಸಬೇಕೆಂಬ
ಸಂಕಲ್ಪ ಮಾಡಿದ 15ನೇ ವಯಸ್ಸಿನ ತರುಣ ಕಲಾಂ ರಾಮೇಶ್ವರಂ ಬಿಟ್ಟು ಜಿಲ್ಲಾ ಕೇಂದ್ರವಾದ ರಾಮನಾಥಪುರಂಗೆ ಹೊರಟು ನಿಂತರು... ರಾಮನಾಥಪುರಂನ ಶ್ವಟ್ಸ್ ಪ್ರೌಢಶಾಲೆಯಲ್ಲಿ ಅಬ್ದುಲ್ ಕಲಾಂ ಅವರಿಗೆ ದೊರೆತ ಶಿಕ್ಷಣ ಮತ್ತು ಮಾರ್ಗದರ್ಶನ ಅವರ ಸಂಕಲ್ಪ ಹಾಗು ಸಾಧನೆಗಳಿಗೆ ಅಧಮ್ಯವಾದ ಪ್ರೇರಣೆ ನೀಡಿತು. ಹೈಸ್ಕೂಲಿನ ಮೊದಲ ವರ್ಷ ಸಂಭವಿಸಿದ ಒಂದು ಸಣ್ಣ ಪ್ರಸಂಗವನ್ನು ಕಲಾಂ, ಮಕ್ಕಳನ್ನ ಭೇಟಿಯಾದಾಗಲೆಲ್ಲ ನೆನಪಿಸಿಕೊಳ್ಳುತ್ತಿದ್ದರು.
ಒಮ್ಮೆ ಕಲಾಂ ಅಜಾಗರೂಕತೆಯಿಂದ ಬೇರೆ ತರಗತಿ ಪ್ರವೇಶಿಸಿ ಬಿಟ್ಟರಂತೆ! ಆಗ ಗಣಿತದ ಪಾಠ ಮಾಡುತ್ತಿದ್ದ ರಾಮಕೃಷ್ಣ ಅಯ್ಯರ್ ಕೋಪದಿಂದ ಕಲಾಂ ಅವರನ್ನು ಚೆನ್ನಾಗಿ ಥಳಿಸಿದ್ದರಂತೆ, ಈ ಅವಮಾನದಿಂದ ಕುಗ್ಗಿಹೋಗಿದ್ದ ಕಲಾಂ ಕೆಲ ತಿಂಗಳ ತರುವಾಯ ಗಣಿತದಲ್ಲಿ 100/100 ಅಂಕ ಪಡೆದಾಗ ಅದೇ ಅಯ್ಯರ್, "ನಾನು ಈ ಹಿಂದೆ ಥಳಿಸಿದವರೆಲ್ಲರೂ ದೊಡ್ಡ ವ್ಯಕ್ತಿಗಳಾಗಿದ್ದಾರೆ. ಪ್ರಮಾಣ ಮಾಡಿ ಹೇಳುತ್ತೇನೆ. ಈ ಹುಡುಗ ಓದಿದ ಶಾಲೆಗೆ ಹಾಗೂ ಕಲಿಸಿದ ಅಧ್ಯಾಪಕರಿಗೆ ಕೀರ್ತಿ ತರುತ್ತಾನೆ" ಎಂದರಂತೆ..! ಅವರ ಭವಿಷ್ಯವಾಣಿ ನಿಜವಾಗಿದ್ದಷ್ಟೇ ಅಲ್ಲ; ಕಲಾಂ ಇಡೀ ರಾಷ್ಟ್ರಕ್ಕೆ ಶ್ರೇಯಸ್ಸು ತಂದುಕೊಟ್ಟ ಮಹಾನ್ ವಿಜ್ಞಾನಿಯಾದರು.
ಅಂಕಣಕಾರರು
ಡಾ. ಡಿ.ಸಿ. ರಾಮಚಂದ್ರ
ಶ್ರೀ ಕ್ಷೇತ್ರ ಆದಿಚುಂಚನಗಿರಿ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.