ನಾಲ್ಕು ದಿನಗಳಿಂದ ಇಂದಿರಾ ಕ್ಯಾಂಟೀನ್ ಗಳು ಬಂದ್, ಜನರ ಪರದಾಟ.!
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ, ಕೊಳ್ಳೇಗಾಲ ಹಾಗೂ ಯಳಂದೂರಿನ ಇಂದಿರಾ ಕ್ಯಾಂಟೀನ್ ಗಳು ಕಳೆದ 4 ದಿನಗಳಿಂದ ಬಾಗಿಲು ಮುಚ್ಚಿವೆ.
ಚಾಮರಾಜನಗರ : ಸರ್ಕಾರ ಬಿಲ್ ಪಾವತಿ ಮಾಡದ ಹಿನ್ನೆಲೆಯಲ್ಲಿ ಚಾಮರಾಜನಗರದ 3 ಇಂದಿರಾ ಕ್ಯಾಂಟೀನ್ ಗಳಿಗೆ ಬೀಗ ಬಿದ್ದಿದೆ. ಇದರಿಂದಾಗಿ ಬಡಜನರು, ವಿದ್ಯಾರ್ಥಿಗಳು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ, ಕೊಳ್ಳೇಗಾಲ ಹಾಗೂ ಯಳಂದೂರಿನ ಇಂದಿರಾ ಕ್ಯಾಂಟೀನ್ ಗಳು ಕಳೆದ 4 ದಿನಗಳಿಂದ ಬಾಗಿಲು ಮುಚ್ಚಿವೆ. ಇಂದಿರಾ ಕ್ಯಾಂಟೀನ್ ಬಾಗಿಲು ಮುಚ್ಚಿರುವ ಕಾರಣ ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು ದುಬಾರಿ ಹಣ ಕೊಟ್ಟು ಹೋಟೆಲ್ ನತ್ತ ಮುಖ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ : ರಮೇಶ್ ಕುಮಾರ್ ವಿರುದ್ಧ ಅಸಭ್ಯ ಪದಬಳಕೆ; ಕ್ಷಮೆಯಾಚಿಸಿದ ಎಚ್‌ಡಿಕೆ
ಕೊಳ್ಳೇಗಾಲದಲ್ಲಿ ಪ್ರತಿದಿನ 1,500 ಮಂದಿ, ಗುಂಡ್ಲುಪೇಟೆಯಲ್ಲಿ 900 ಹಾಗೂ ಯಳಂದೂರಿನಲ್ಲಿ 400 ಮಂದಿ ಇಂದಿರಾ ಕ್ಯಾಂಟೀನ್ ಪ್ರಯೋಜನ ಪಡೆಯುತ್ತಿದ್ದರು. ಆದರೆ, ಕಳೆದ 4 ದಿನಗಳಿಂದ ಬಾಗಿಲು ಮುಚ್ಚಿರುವುದರಿಂದ ಈ ಜನ ಹಿಡಿಶಾಪ ಹಾಕಿಕೊಂಡು ವಾಪಾಸ್ ಆಗುತ್ತಿದ್ದಾರೆ.
ಇಂದಿರಾ ಕ್ಯಾಂಟೀನ್ ನ ಜವಾಬ್ದಾರಿ ವಹಿಸಿಕೊಂಡಿದ್ದ ಚೆಪ್ ಟಾಕ್ ಎಂಬ ಏಜೆನ್ಸಿಗೆ ಸರ್ಕಾರ ಹಣ ಬಿಡುಗಡೆ ಮಾಡದ ಕಾರಣ ಬಾಗಿಲು ಮುಚ್ಚಲಾಗಿದೆ ಎಂದು ತಿಳಿದುಬಂದಿದೆ. 5 ರೂ.ಗೆ ತಿಂಡಿ, 10 ರೂ.ಗೆ ಊಟದಂತೆ ಕಡಿಮೆ ಬೆಲೆಯಲ್ಲಿ ಆಹಾರ ಸಿಗುತ್ತಿದೆ ಎಂಬ ಕಾರಣದಿಂದ ವಿವಿಧ ಗ್ರಾಮದ ಕೂಲಿ ಕಾರ್ಮಿಕರು ಪ್ರತಿದಿನ ಬೆಳಗ್ಗೆ ಮತ್ತು ಮಧ್ಯಾಹ್ನದ ವೇಳೆ ಇಂದಿರಾ ಕ್ಯಾಂಟೀನ್‍ಗೆ ಬಂದು ಹೋಗುತ್ತಿದ್ದರು. ಆದರೆ ಕಳೆದ 4 ದಿನದಿಂದ ಬಾಗಿಲು ಮುಚ್ಚಿರುವ ಹಿನ್ನೆಲೆ ಜನರು ಕ್ಯಾಂಟೀನ್ ಬಳಿ ಬಂದು ಬಾಗಿಲು ಹಾಕಿರುವುದನ್ನು ಕಂಡು ಸರ್ಕಾರ ಹಾಗೂ ಏಜೆನ್ಸಿಗೆ ಹಿಡಿಶಾಪ ಹಾಕಿ ವಾಪಸ್ ತೆರಳುತ್ತಿದ್ದಾರೆ.
ಇದನ್ನೂ ಓದಿ : Basavaraj Bommai Clarification: “ಬಿಜೆಪಿಯಲ್ಲಿ ಭಿನ್ನಮತವಿಲ್ಲ”.. ಸ್ಪಷ್ಟನೆ ನೀಡಿದ ಸಿಎಂ ಬೊಮ್ಮಾಯಿ
ಹಳ್ಳ ಹಿಡಿಯಿತೇ ಕಾಂಗ್ರೆಸ್ ಮಹಾತ್ವಕಾಂಕ್ಷೆ ಯೋಜನೆ:
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಬಡ ಜನರು, ನಿರ್ಗತಿಕರು, ಕೂಲಿ ಕಾರ್ಮಿಕರಿಗೆ ಉಪಯೋಗವಾಗಲಿ ಎಂಬ ಉದ್ದೇಶದಿಂದ ಇಂದಿರಾ ಕ್ಯಾಂಟೀನ್ ಆರಂಭಿಸಲಾಗಿತ್ತು. ಆದರೆ ಇದೀಗ ಸರ್ಕಾರ ಸಿಬ್ಬಂದಿಗೆ ಹಣ ಬಿಡುಗಡೆ ಮಾಡದ ಕಾರಣ ಬಾಗಿಲು ಮುಚ್ಚಲಾಗಿದೆ. ಇದರಿಂದ ಕಾಂಗ್ರೆಸ್ ಮಹಾತ್ವಕಾಂಕ್ಷೆ ಯೋಜನೆ ಬಿಜೆಪಿ ಅವಧಿಯಲ್ಲಿ ಹಳ್ಳ ಹಿಡಿಯಿತೇ ಎಂಬ ಅನುಮಾನ ಕಾಡತೊಡಗಿದೆ.
2022ರ ಜನವರಿಯಿಂದ ಇಲ್ಲಿಯ ತನಕ 11 ತಿಂಗಳು ಕಳೆಯುತ್ತಿದ್ದರೂ ಸಹ ಸರ್ಕಾರ ಇಂದಿರಾ ಕ್ಯಾಂಟೀನ್‍ಗೆ ಹಣ ಬಿಡುಗಡೆ ಮಾಡಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ. ಈ ಮಧ್ಯೆ ‘ಚೆಫ್ ಟಾಕ್’ ಎಂಬ ಏಜೆನ್ಸಿಯವರು ಹೇಗೋ ಸರಿದೂಗಿಸಿಕೊಂಡು ಸಿಬ್ಬಂದಿಗೆ 6 ತಿಂಗಳ ಹಣ ನೀಡಿ ಕ್ಯಾಂಟೀನ್ ನಡೆಸಿದ್ದಾರೆ. ಆದರೆ ಇನ್ನೂ 5 ತಿಂಗಳ ಸಂಬಳ ಸಿಬ್ಬಂದಿಗೆ ಬಾಕಿ ಇರುವ ಕಾರಣ ಸಿಬ್ಬಂದಿ ಕೆಲಸಕ್ಕೆ ಬಂದಿಲ್ಲ. ಈ ಕಾರಣದಿಂದ ಬಾಗಿಲು ಮುಚ್ಚಲಾಗಿದೆ ಎಂದು ತಿಳಿದುಬಂದಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.