ಬೆಂಗಳೂರು: ತನ್ನ 10 ತಿಂಗಳ ಮಗು ಕಳೆದುಕೊಂಡ ತಂದೆಯೊಬ್ಬ ಸಿಎಂ ಮನೆ ಎದುರು ಪ್ರತಿಭಟನೆಗೆ ಮುಂದಾದ ಘಟನೆ ನಿಜಕ್ಕೂ ಭಯಾನಕ. ಸರಿಯಾದ ಮಾಹಿತಿ ದೊರೆಯದೆ ಸುಮಾರು 11 ಆಸ್ಪತ್ರೆಗಳನ್ನು ಸುತ್ತಿದರೂ ತನ್ನ ಮಗು ಉಳಿಸಿಕೊಳ್ಳಲಾಗದ ತಂದೆಯ ಪರಿಸ್ಥಿತಿ ಹಾಗೂ ಸರಿಯಾದ ಚಿಕಿತ್ಸೆ ಜತೆಗೆ ಸಲಹೆ ಸಿಗದೆ ಪ್ರಾಣ ಬಿಟ್ಟ ನೂರಾರು ಜನ ಸಾಮಾನ್ಯರ ನೋವೇ ಈಗ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಿಗೆ ಆಪ್ ಕೇರ್ ಅಭಿಯಾನ ಕೈಗೊಳ್ಳಲು ಸ್ಪೂರ್ತಿ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಯಶಸ್ವಿ 25 ದಿನಗಳನ್ನು ಸದ್ದಿಲ್ಲದೇ ಪೂರೈಸಿರುವ ಆಪ್ ಕೇರ್ ಅಭಿಯಾನದ ಮೂಲಕ ಇದುವರೆಗೂ ಸುಮಾರು 30 ಸಾವಿರಕ್ಕೂ ಹೆಚ್ಚು ಜನರನ್ನು ತಪಾಸಣೆಗೆ ಒಳಪಡಿಸಲಾಗಿದೆ, ಸೋಂಕು ತಗುಲುವ ಆತಂಕದಲ್ಲಿದ್ದ ಜನರನ್ನು ಆಪ್ತ ಸಮಾಲೋಚನೆ ಮಾಡಿ ಭಯದಿಂದ ಹೊರತರಲಾಗಿದೆ.


ಸರ್ಕಾರ ಜನರ ಕೈಬಿಡುವುದಿಲ್ಲ ಎಂದು ನಂಬಿದ್ದ ಜನ ಭಯಭೀತರಾಗಿ ಊರು ತೊರೆಯಲು ಪ್ರಾರಂಭಿಸಿದರು,ಈ ಸಂದರ್ಭದಲ್ಲಿ ಸರ್ಕಾರದ ವಿಫಲತೆಯನ್ನು ಎತ್ತಿ ತೋರಿಸಲು ಆಮ್ ಆದ್ಮಿ ಪಕ್ಷ ಇಂತಹ ಕಾರ್ಯಕ್ರಮದ ಮೂಲಕ ಪ್ರತಿಭಟನೆಯನ್ನು ವ್ಯಕ್ತಪಡಿಸಿದೆ.


ಇಡೀ ದೇಶದಲ್ಲೆ ಕೊರೋನಾ ಸೋಂಕಿನಿಂದ ವ್ಯಕ್ತಿಯೊಬ್ಬ ಮೃತಪಟ್ಟಿದ್ದು ಕರ್ನಾಟಕದ ಕಲ್ಬುರ್ಗಿ ಜಿಲ್ಲೆಯಲ್ಲಿ. ಇಡೀ ದೇಶವೇ ಕರ್ನಾಟಕದ ಕಡೆ ತಿರುಗಿ ನೋಡುವಂತಾಯಿತು, ಆಗ ಕೊರೋನಾ ಸೋಂಕಿತರ ಪಟ್ಟಿಯಲ್ಲಿ ರಾಜ್ಯ ಇದ್ದದ್ದು 11ನೇ ಸ್ಥಾನದಲ್ಲಿ. ಈ ವಿಷಯವನ್ನು ಮೊದ‌ ಮೊದಲು ಗಂಭೀರವಾಗಿ ಪರಿಗಣಿಸಿದ ಸರ್ಕಾರ ದಿನ ಕಳೆದಂತೆ ತನ್ನ ಜವಾಬ್ದಾರಿಯನ್ನೇ ಮರೆತು ಕುಳಿತಿತು, ಇದರ ಪರಿಣಾಮ 4ನೇ ಸ್ಥಾನಕ್ಕೇರಿದ ಕರ್ನಾಟಕದಲ್ಲಿ ಪರಿಸ್ಥಿತಿ ಕೈಗೆ ಸಿಗದ ಪರಿಣಾಮ ಜನ ಬೀದಿ, ಬೀದಿಯಲ್ಲಿ ಸಾಯಲು ಪ್ರಾರಂಭಿಸಿದರು.‌ ಹಾಸಿಗೆ, ಔಷಧಿ, ಊಟ, ವೈದ್ಯರು, ವೆಂಟಿಲೇಟರ್ ಗಳು ಏನೇನೂ ಸರಿಯಾಗಿ ದೊರೆಯದ ಜಂಗಲ್ ರಾಜ್ಯ ಎನ್ನುವಷ್ಟರ ಮಟ್ಟಿಗೆ ಕರ್ನಾಟಕದ ಪರಿಸ್ಥಿತಿ ಹದಗೆಟ್ಟು ಹೋಯಿತು ಎಂದು ಆಮ್ ಆದ್ಮಿ ಪಕ್ಷ ಟೀಕಿಸಿದೆ.


ದಿನಕ್ಕೊಂದು ಕಾನೂನು ಬದಲಾಯಿಸುತ್ತಿದ್ದ ಸರ್ಕಾರ ಮನೆಯಲ್ಲೇ ಇದ್ದ ಸೋಂಕಿತರಿಗೆ ಸರಿಯಾದ ಚಿಕಿತ್ಸೆ ಹಾಗೂ ಸೋಂಕಿನ ಬಗ್ಗೆ ನಿಖರ ಮಾಹಿತಿ ನೀಡದೇ ಸರ್ಕಾರಿ ಪ್ರಾಯೋಜಿತ ಕೊಲೆ ಮಾಡಿದೆ ಎಂದು ರಾಜ್ಯ ಸರ್ಕಾರವನ್ನು ಆಪ್ ಆದ್ಮಿ ಪಕ್ಷ ತರಾಟೆಗೆ ತೆಗೆದುಕೊಂಡಿದೆ.


ಆಪ್ ಕೇರ್ ಅಭಿಯಾನದ ಮೂಲಕ ಸರ್ಕಾರದ ವಿರುದ್ದ ವಿನೂತನ ಪ್ರತಿಭಟನೆ:


ಬೆಂಗಳೂರು ನಗರದಲ್ಲಿ ಸೋಂಕಿತರು ಹೆಚ್ಚು ಕಂಡು ಬಂದ ಪ್ರದೇಶಕ್ಕೆ ತೆರಳಿ ಅಲ್ಲಿನ ನಿವಾಸಿಗಳ ದೇಹದ ಉಷ್ಣತೆ, ಪಲ್ಸ್  ಆಕ್ಸಿ ಮೀಟರ್ ಮೂಲಕ ದೇಹದ ಆಮ್ಲಜನಕ ಮಟ್ಟ ಪರೀಕ್ಷಿಸುವುದು, ಇಡೀ ಪ್ರದೇಶವನ್ನೇ ಸ್ಯಾನಿಟೈಜೇಷನ್ ಮಾಡುವ ಹಾಗೂ ಸೋಂಕಿತರು ಕಂಡು ಬಂದಲ್ಲಿ ಅವರಿಗೆ ನಿಖರ ಮಾಹಿತಿ ಹಾಗೂ ಗುಣಮುಖರಾಗುವ ತನಕ ಪ್ರತಿ ಹಂತದಲ್ಲೂ ನಿಗಾ ವಹಿಸಲಾಗುವುದು. 10 ಸಾವಿರ ಮಾಸ್ಕ್ ವಿತರಿಸುವುದರ ಜತೆಗೆ ಪ್ರತಿ ಮನೆಗೆ ಭೇಟಿ ನೀಡಿ ಸ್ಥಳೀಯ ಫೀವರ್ ಕ್ಲಿನಿಕ್ ಹಾಗೂ ಕೋವಿಡ್ ಹಾರೈಕೆ ಕೇಂದ್ರಗಳ ಮಾಹಿತಿ ಇರುವ ಕರಪತ್ರ ನೀಡುವುದನ್ನು ಆಮ್ ಆದ್ಮಿ ಪಕ್ಷ ಮಾಡಿದೆ.


ಆಪ್ ಕೇರ್ ಅಭಿಯಾನ ಮೊದಲ ಹಂತವಾಗಿ ಬೆಂಗಳೂರಿನ 50 ವಾರ್ಡ್‌ಗಳಲ್ಲಿ ನಡೆಯುತ್ತಿದೆ.ಮೊದಲ ಹಂತ ಮುಗಿದ ನಂತರ ಎಲ್ಲಾ ವಾರ್ಡ್ ಹಾಗೂ ಎಲ್ಲಾ ಗ್ರಾಮಾಂತರ ಪ್ರದೇಶಗಳಿಗೂ ಈ ಅಭಿಯಾನ ವಿಸ್ತರಿಸಲಾಗುವುದು. ಆಗಸ್ಟ್‌ ತಿಂಗಳ ಒಳಗೆ ಈ ಅಭಿಯಾನದ ಪ್ರಯೋಜನ ಎಲ್ಲರಿಗೂ ತಲುಪಿಸುವ ಉದ್ದೇಶವನ್ನು ಹೊಂದಿದೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.


ಇದೇ ವೇಳೆ ರಾಜ್ಯದಲ್ಲಿನ ಸರ್ಕಾರ 4 ಸಾವಿರ ಕೋಟಿಗಳಷ್ಟು ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಗೋಲ್ ಮಾಲ್ ಮಾಡಿದೆ ಎಂದು ಸಹ ಆಪ್ ಆರೋಪಿಸಿದೆ.