ಸಂಕಷ್ಟ ಹಂಚಿಕೆ ಸೂತ್ರ ರೂಪಿಸಿದ ಹೊರತು ತಮಿಳುನಾಡಿಗೆ ನೀರು ಹರಿಸಬೇಡಿ
ಕಾವೇರಿ ಕೊಳ್ಳ ಮತ್ತು ಬೆಂಗಳೂರು ನಗರದ ಜನರ ಕತ್ತು ಹಿಚುಕುವುದಕ್ಕೆಂದೇ ರಾಜ್ಯ ಕಾಂಗ್ರೆಸ್ ಸರಕಾರ ಬಂದಿದೆಯೇನೋ ಎಂದು ಬಹಳ ನೋವಿನಿಂದ ಹೇಳಲೇಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ (CWMA) ಮತ್ತು ಕಾವೇರಿ ಜಲ ನಿಯಂತ್ರಣ ಸಮಿತಿ (CWRC) ಸಂಕಷ್ಟ ಹಂಚಿಕೆ ಸೂತ್ರ ರೂಪಿಸಿದ ಹೊರತು ತಮಿಳುನಾಡಿಗೆ ನೀರು ಹರಿಸಬಾರದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ಸರಕಾರವನ್ನು ಒತ್ತಾಯ ಮಾಡಿದ್ದಾರೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು; ರಾಜ್ಯ ಸರಕಾರದ ವೈಫಲ್ಯಗಳನ್ನು ತಮಿಳುನಾಡು ಅತ್ಯಂತ ಜಾಣತನದಿಂದ ಲಾಭ ಮಾಡಿಕೊಳ್ಳುತ್ತಿದೆ ಎಂದು ಟೀಕಾಪ್ರಹಾರ ನಡೆಸಿದ್ದಾರೆ. ಅಲ್ಲದೆ, ಡಿಎಂಕೆ ಯೋಗಕ್ಷೇಮವನ್ನಷ್ಟೇ ಆಲೋಚನೆ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಪೆಟ್ಟಿನ ಮೇಲೆ ಪೆಟ್ಟು ತಿನ್ನುತ್ತಿರುವ ಕರ್ನಾಟಕಕ್ಕೆ ಈಗ ಮತ್ತೆ ದೊಡ್ಡ ಹಿನ್ನಡೆ ಆಗಿದೆ. ಹಿನ್ನಡೆ ಎನ್ನುವುದು ನಿರಂತರವಾಗಿದ್ದು, ಕಾವೇರಿ ಜಲ ನಿಯಂತ್ರಣ ಸಮಿತಿ (CWRC) ತಮಿಳುನಾಡಿಗೆ ಇನ್ನೂ 18 ದಿನಗಳ ಕಾಲ ನಿತ್ಯವೂ 3,000 ಕ್ಯೂಸೆಕ್ ಹರಿಸಲು ಕರ್ನಾಟಕಕ್ಕೆ ಇಂದು ಆದೇಶ ನೀಡಿದೆ. ಇದು ನಿಜಕ್ಕೂ ಆಘಾತಕಾರಿ, ಕಾವೇರಿ ಮತ್ತು ಕನ್ನಡಿಗರ ಪಾಲಿಗೆ ಮರಣಶಾಸನ ಎಂದು ಅವರು ಹೇಳಿದ್ದಾರೆ.
ಕಾವೇರಿ ಕೊಳ್ಳ ಮತ್ತು ಬೆಂಗಳೂರು ನಗರದ ಜನರ ಕತ್ತು ಹಿಚುಕುವುದಕ್ಕೆಂದೇ ರಾಜ್ಯ ಕಾಂಗ್ರೆಸ್ ಸರಕಾರ ಬಂದಿದೆಯೇನೋ ಎಂದು ಬಹಳ ನೋವಿನಿಂದ ಹೇಳಲೇಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ :Cauvery Water Dispute: ಅ.15ರವರೆಗೆ 3000 ಕ್ಯೂಸೆಕ್ಸ್ ನೀರು ಬಿಡಲು ಶಿಫಾರಸು
ಕೆಆರ್ ಎಸ್ ಜಲಾಶಯಕ್ಕೆ ನಿತ್ಯವೂ 10,000 ಕ್ಯೂಸೆಕ್ ಒಳಹರಿವು ಇದೆ ಎನ್ನುತ್ತಾರೆ ಜಲ ಸಂಪನ್ಮೂಲ ಸಚಿವರು. ಇದಕ್ಕೆ ತದ್ವಿರುದ್ಧವಾಗಿ ಸಮಿತಿಯ ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು "ನಮ್ಮಲ್ಲಿ ನೀರೇ ಇಲ್ಲ" ಎಂಬ ಮಾಹಿತಿ ನೀಡುತ್ತಾರೆ. ಇನ್ನೊಂದೆಡೆ ಹಿರಿಯ ಅಧಿಕಾರಿಯೊಬ್ಬರು "ಈ ಆದೇಶದಿಂದ ರಾಜ್ಯಕ್ಕೆ 2.5 ಟಿಎಂಸಿ ನೀರು ಉಳಿತಾಯವಾಗಿದೆ" ಎನ್ನುತ್ತಾರೆ. 'ಎತ್ತು ಏರಿಗೆ, ಕೋಣ ನೀರಿಗೆ' ಎನ್ನುವಂತಿದೆ ಜಲ ಸಂಪನ್ಮೂಲ ಇಲಾಖೆ ಮತ್ತು ಸರಕಾರದ ಪರಿಸ್ಥಿತಿ. ಹೆಜ್ಜೆಹೆಜ್ಜೆಗೂ ಅನರ್ಥಗಳನ್ನೇ ಮಾಡುತ್ತಿರುವ ಈ ಸರಕಾರದ ವೈಫಲ್ಯದ ಲಾಭವನ್ನು ತಮಿಳುನಾಡು ಅತ್ಯಂತ ಜಾಣತನದಿಂದ ಪಡೆದುಕೊಳ್ಳುತ್ತಿದೆ ಎಂದು ಸರಕಾರಕ್ಕೆ ತರಾಟೆಗೆ ತೆಗೆದುಕೊಂಡಿದ್ದಾರೆ.ನಾವು ಕುಡಿಯಲು ನೀರು ಕೇಳುತ್ತಿದ್ದೇವೆ, ತಮಿಳುನಾಡು ಅಕ್ರಮವಾಗಿ ಮಿತಿಮೀರಿದ ವಿಸ್ತೀರ್ಣದಲ್ಲಿ ಬೆಳೆದ ಕುರುವೈ ಬೆಳೆಗೆ ನೀರು ಕೇಳುತ್ತಿದೆ. ಅಲ್ಲಿ ಸ್ವಾರ್ಥ ಇದೆ, ಇಲ್ಲಿ ಜನರ ಬದುಕಿದೆ. ಮಾನವೀಯ ನ್ಯಾಯಕ್ಕೆ ವಿರುದ್ಧವಾದ ತಮಿಳುನಾಡು ನಡೆಯನ್ನು ಒಪ್ಪಲು ಸಾಧ್ಯವೇ ಇಲ್ಲ. ಆ ರಾಜ್ಯದ ಇಂಥ ಮನಃಸ್ಥಿತಿಯ ವಿರುದ್ಧ ಪ್ರಬಲ ಹೋರಾಟ ಮಾಡುವ ಇಚ್ಛಾಶಕ್ತಿ ಈ ಸರಕಾರಕ್ಕೆ ಇಲ್ಲದಾಗಿದೆ. ಕೇವಲ ಪಾಲುದಾರ ಪಕ್ಷ ಡಿಎಂಕೆಯ ಯೋಗಕ್ಷೇಮವನ್ನೇ ಕೈ ಸರಕಾರ ನೋಡುತ್ತಾ, ಕರ್ನಾಟಕದ ಹಿತವನ್ನು ಸಂಪೂರ್ಣ ಬಲಿ ಕೊಟ್ಟಿದೆ. ಕನ್ನಡಿಗರ ಮೇಲೆ 'ಬಂಡೆ' ಎಳೆದಿದೆ ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದ್ದಾರೆ.
ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲರೂ ಸಮಾನರು. ಈಗಾಗಲೇ ಕಾವೇರಿ ನೀರು ಹಂಚಿಕೆಯನ್ನು ನ್ಯಾಯಾಧಿಕರಣ ಅಖೈರುಗೊಳಿಸಿದ್ದು, ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಆದರೆ, ಸಂಕಷ್ಟ ಕಾಲದಲ್ಲಿ ಪರಿಹಾರವೇನು? ಮಾತೆತ್ತಿದರೆ ನೀರು ಬಿಡಿ ಎಂದು ಆದೇಶಿಸುವ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ (CWMA) & ಕಾವೇರಿ ಜಲ ನಿಯಂತ್ರಣ ಸಮಿತಿ (CWRC) ಈ ಕೂಡಲೇ 'ಸಂಕಷ್ಟ ಹಂಚಿಕೆ ಸೂತ್ರ'ವನ್ನು ರೂಪಿಸಲೇಬೇಕು. ಆ ನಿಟ್ಟಿನಲ್ಲಿ ಸರಕಾರ ಒತ್ತಡ ಹೇರಿ, ಆ ಸೂತ್ರ ರೂಪಿಸದ ಹೊರತು ತಮಿಳುನಾಡಿಗೆ ನೀರು ಹರಿಸುವ ಪ್ರಶ್ನೆಯೇ ಇಲ್ಲವೆಂದು ಕಡ್ಡಿ ತುಂಡು ಮಾಡಿದಂತೆ ಸ್ಪಷ್ಟವಾಗಿ ಹೇಳಲೇಬೇಕು. ಯಾವುದೇ ಕಾರಣಕ್ಕೂ ಈಗ ನೀರು ಹರಿಸಬಾರದು ಎಂದು ಅವರು ಒತ್ತಾಯ ಮಾಡಿದ್ದಾರೆ.
ಇದನ್ನೂ ಓದಿ : ಬೆಂಗಳೂರಿನಾದ್ಯಂತ 'ಕಾವೇರಿ' ಹೋರಾಟದ ಕಿಚ್ಚು: ಪ್ರತಿಭಟನಾಕಾರರ ಬಂಧನಕ್ಕೆ ಮುಖ್ಯಮಂತ್ರಿ ಚಂದ್ರು ಕಿಡಿ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.