ಬೆಂಗಳೂರು: ನಿಖಿಲ್ ಅವರಿಗೆ ಚನ್ನಪಟ್ಟಣ ಟಿಕೆಟ್ ಸಿಗುವಂತೆ ಮಾಡಲು ಕುಮಾರಸ್ವಾಮಿ ಅವರು ಚದುರಂಗದಾಟ ಸೃಷ್ಟಿಸಿದರು ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ತಿಳಿಸಿದರು. ಸದಾಶಿವ ನಗರದ ನಿವಾಸದಲ್ಲಿ ಶುಕ್ರವಾರ ನಡೆದ ಮಾಧ್ಯಮಗೋಷ್ಟಿಯನ್ನು ಉದ್ದೇಶಿಸಿ ಸುರೇಶ್ ಅವರು ಮಾತನಾಡಿದರು. 


COMMERCIAL BREAK
SCROLL TO CONTINUE READING

ನಿಖಿಲ್ ಗೆ ಟಿಕೆಟ್ ನೀಡಬೇಕಾದ ಅನಿವಾರ್ಯತೆಯನ್ನು ಕಾಂಗ್ರೆಸ್ ಸೃಷ್ಟಿ ಮಾಡಿತು ಎನ್ನುವ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಹಿರಿಯ ರಾಜಕಾರಣಿಯಾದ ಕುಮಾರಸ್ವಾಮಿ ಅವರು ಕಳೆದ 40 ವರ್ಷಗಳಿಂದ ಅವರ ದೃಷ್ಟಿಕೋನದಲ್ಲಿ ತಂತ್ರಗಾರಿಕೆ ಮಾಡಿಕೊಂಡು ಬಂದಿದ್ದಾರೆ. ಇದರ ಮುಂದುವರೆದ ಭಾಗವಿದು. ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿಯಾಗುತ್ತಾರೆ ಎನ್ನುವುದು ಚನ್ನಪಟ್ಟಣದ ಎಲ್ಲರಿಗೂ ತಿಳಿದಿದ್ದ ಸತ್ಯ” ಎಂದರು.


“ನಿಖಿಲ್ ಕುಮಾರಸ್ವಾಮಿ ಅವರೇ ಚನ್ನಪಟ್ಟಣ ಉಪಚುನಾವಣೆಯಲ್ಲಿ ಅಭ್ಯರ್ಥಿಯಾಗುತ್ತಾರೆ ಎನ್ನುವ ಸತ್ಯ ಎಲ್ಲರಿಗೂ ತಿಳಿದಿತ್ತು. ಜೆಡಿಎಸ್ ಪಕ್ಷಕ್ಕೆ ಕುಮಾರಸ್ವಾಮಿ ಅವರೇ ಅಧಿನಾಯಕರು. ಎಲ್ಲವೂ ಅವರೇ ತೀರ್ಮಾನ ತೆಗೆದುಕೊಳ್ಳುತ್ತಾರೆ. ಬಲವಂತವಾಗಿ ಚುನಾವಣೆಗೆ ನಿಖಿಲ್ ಅವರನ್ನು ನಿಲ್ಲಿಸಲಾಗುತ್ತಿದೆ ಎನ್ನುವುದೆಲ್ಲಾ ಸುಳ್ಳು, ಅವರ ಉದ್ದೇಶ ಈ ಮೂಲಕ ಫಲ ನೀಡಿದೆ” ಎಂದರು.


ನಾಟಕ ಮಾಡಿ ನಿಖಿಲ್ ಗೆ ಟಿಕೆಟ್ ಗಳಿಸಿಕೊಂಡರೇ ಎಂದು ಕೇಳಿದಾಗ, “ಅದನ್ನು ಮಾಧ್ಯಮದವರು ಹೇಳಬೇಕು. ನಾಮಪತ್ರ ಸಲ್ಲಿಸಿದ ನಂತರ ನಾಟಕ ಪ್ರಾರಂಭವಾಗುತ್ತದೆ" ಎಂದರು. ಕಣ್ಣೀರು ಬರುತ್ತದೆಯೇ ಎಂದು ಮರುಪ್ರಶ್ನಿಸಿದಾಗ “ಬರಬಹುದೇನೋ, ಮಾಧ್ಯಮದವರು ಕಣ್ಣೀರು ಹಾಕಿ ಎಂದರೆ ಹಾಕುತ್ತಾರೆ” ಎಂದು ವ್ಯಂಗ್ಯವಾಗಿ ಉತ್ತರಿಸಿದರು.


ಇದನ್ನೂ ಓದಿ: ಬ್ರ್ಯಾಂಡ್‌ ಬೆಂಗಳೂರು ಬೇಡ, ಸುರಕ್ಷಿತವಾದ ರೆಗ್ಯುಲರ್‌ ಬೆಂಗಳೂರು ನೀಡಿದರೆ ಸಾಕು: ಪ್ರತಿಪಕ್ಷ ನಾಯಕ ಆರ್‌ ಅಶೋಕ್‌ ಹೇಳಿಕೆ 


ನಿಖಿಲ್ ಪ್ರಬಲ ಅಭ್ಯರ್ಥಿಯಾಗಬಲ್ಲರೇ ಎಂದು ಪ್ರಶ್ನಿಸಿದಾಗ, “ಚುನಾವಣೆಗಳು ನಡೆಯುತ್ತಲೇ ಇರುತ್ತವೆ. ಇದರಿಂದ ಕುಮಾರಸ್ವಾಮಿ ಅವರಿಗೆ ಕಾರ್ಯಕರ್ತರ ಮೇಲಿನ ಪ್ರೀತಿ ಎಷ್ಟಿದೆ ಎಂಬುದು ತಿಳಿಯುತ್ತದೆ. ಚುನಾವಣೆಯಲ್ಲಿ ಒಂದೊಂದು ಮತವೂ ಮುಖ್ಯ ಎಂದು ಕಾಂಗ್ರೆಸ್ ಕೆಲಸ ಮಾಡುತ್ತಿದೆ. ಯಾರು ಪ್ರಭಾವಿಗಳು ಎನ್ನುವುದಕ್ಕಿಂತ, ನಾವು ಪಕ್ಷವನ್ನು ಗೆಲ್ಲಿಸಲು ಹೋರಾಟ ಮಾಡುತ್ತೇವೆ” ಎಂದರು.


ಒಂದು ವಾರಗಳ ಕಾಲ ದೇವೇಗೌಡರು ಚನ್ನಪಟ್ಟಣದಲ್ಲಿ ಪ್ರಚಾರ ಮಾಡುವುದುರಿಂದ ಕಾಂಗ್ರೆಸ್ ಗೆಲುವಿಗೆ ತೊಡಕಾಗುವುದಿಲ್ಲವೇ ಎಂದಾಗ “ದೇವೇಗೌಡರು ಇರುವುದೇ ಪ್ರಚಾರ ಮಾಡುವುದಕ್ಕೆ. ಅವರ ಮೊಮ್ಮಗನ ಪರವಾಗಿ ಪ್ರಚಾರ ಮಾಡಬೇಡಿ ಎಂದು ಹೇಳಲು ಆಗುತ್ತದೆಯೇ?. ನಾವು ನಮ್ಮ ಸರ್ಕಾರದ ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋಗುತ್ತೇವೆ” ಎಂದು ಹೇಳಿದರು.


ನೀವು ಅಭ್ಯರ್ಥಿಯಾಗಿಲ್ಲ ಎನ್ನುವ ಬೇಸರ ಹಾಗೂ ಪಕ್ಷದೊಳಗಿನ ಅಸಮಾಧಾನ ಸರಿಹೋಯಿತೇ ಎಂದು ಕೇಳಿದಾಗ “ಪಕ್ಷದಲ್ಲಿ ಸಣ್ಣ ಬೇಸರವಿದೆ ಹೊರತು ಯಾವುದೇ ಅಸಮಾಧಾನವಿಲ್ಲ. ನಾನು ಮೊದಲಿನಿಂದಲೂ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದೇ, ಮಾಧ್ಯಮದವರೇ ನನ್ನ ಹೀರೋ ಮಾಡುತ್ತಿದ್ದಾರೆ” ಎಂದರು.


ಯೋಗೇಶ್ವರ್ ಅವರು ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಸೇರಿದಂತೆ ಬೇರೆ ಪಕ್ಷದವರ ಆಪರೇಷನ್ ಆಗುತ್ತದೆಯೇ ಎಂದು ಕೇಳಿದಾಗ, “ನಮ್ಮ ಸರ್ಕಾರಕ್ಕೆ ಸಂಖ್ಯೆಯ ಅವಶ್ಯಕತೆಯಿಲ್ಲ. ಯಾರೇ ಪಕ್ಷಕ್ಕೂ ಬಂದರೂ ಸ್ವಾಗತಿಸುತ್ತೇವೆ” ಎಂದರು.


ಚನ್ನಪಟ್ಟಣದ ಬಿಜೆಪಿ, ಜೆಡಿಎಸ್ ನ ಎರಡನೇ ಸಾಲಿನ ನಾಯಕರು ಕಾಂಗ್ರೆಸ್ ಸಂಪರ್ಕದಲ್ಲಿ ಇದ್ದಾರೆಯೇ ಎಂದು ಕೇಳಿದಾಗ “ಇದು ಚುನಾವಣಾ ತಂತ್ರದ ಒಂದು ಭಾಗ. ಇದನ್ನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಈಗಾಗಲೇ ಅನೇಕರು ಪಕ್ಷ ಸೇರಿದ್ದಾರೆ. ನಮ್ಮ ಪಕ್ಷದ ಸಿದ್ದಾಂತ ಒಪ್ಪಿ ಬಂದವರನ್ನು ಸೇರಿಸಿಕೊಳ್ಳಲಾಗುವುದು” ಎಂದು ತಿಳಿಸಿದರು.


ಚನ್ನಪಟ್ಟಣ ಕ್ಷೇತ್ರದಲ್ಲಿ ಗೆಲುವು ಕಷ್ಟವಾಗಲಿದೆಯೇ ಎಂದು ಕೇಳಿದಾಗ, “ಮಾಧ್ಯಮದವರು ನಮ್ಮ ಪರವಾಗಿ ಇರಬೇಕು. ನೀವು ನಿಷ್ಪಕ್ಷಪಾತವಾಗಿ ನಮ್ಮ ಜೊತೆ ಇರಬೇಕು. ಗೆಲ್ಲುವುದು ಖಚಿತ ಎಂದಿನಿಸುತ್ತಿದೆ” ಎಂದರು.


ಇದನ್ನೂ ಓದಿ: ರಾಜ್ಯದಲ್ಲಿ ಶೀಘ್ರದಲ್ಲೇ ನೂತನ ಹೋಂಸ್ಟೇ ನೀತಿ ಜಾರಿ


ಶಿಗ್ಗಾವಿಯಲ್ಲಿ ಕಾಂಗ್ರೆಸ್ ಬಂಡಾಯ ಏಳುವ ಸನ್ನಿವೇಶ ಉಂಟಾಗಿದೆ ಹಾಗೂ ಪಂಚಮಸಾಲಿ ಸಮುದಾಯಕ್ಕೆ ಟಿಕೆಟ್ ನೀಡಬೇಕು, ಈ ಹಿಂದೆ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಿದರು ಗೆಲ್ಲಲು ಸಾಧ್ಯವಾಗಿಲ್ಲ ಎನ್ನುವ ಕೂಗಿನ ಬಗ್ಗೆ ಕೇಳಿದಾಗ, “ಆಯಾ ಕ್ಷೇತ್ರದಲ್ಲಿ ಉಂಟಾಗಿರುವ ಅಸಮಾಧಾನವನ್ನು ನಮ್ಮ ನಾಯಕರು ಸರಿಪಡಿಸಲಿದ್ದಾರೆ. ಒಬ್ಬೊಬ್ಬರದು ಒಂದೊಂದು ಅಭಿಪ್ರಾಯವಿರುತ್ತದೆ. ಬಸವರಾಜ ಬೊಮ್ಮಾಯಿ, ಕುಮಾರಸ್ವಾಮಿ ಅವರ ಮಗನಿಗೆ ಏಕೆ ಟಿಕೆಟ್ ನೀಡಿದ್ದಾರೆ? ಇಲ್ಲೆಲ್ಲಾ ಕಾರ್ಯಕರ್ತರಿಗೆ ಏಕೆ ಟಿಕೆಟ್ ನೀಡಿಲ್ಲ. ಯಾರೇ ಸ್ಪರ್ಧಿಸಿದರು ಚುನಾವಣೆಯಲ್ಲಿ ಗೆಲುವು ಮುಖ್ಯ. ಪಕ್ಷದ ನೆಲೆಗಟ್ಟಿನ ದೃಷ್ಟಿಯಲ್ಲಿ ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಗಳು ಹಾಗೂ ಜಾತ್ಯಾತೀತ ತತ್ವ ಹಾಗೂ ಪಕ್ಷದ ಸಿದ್ದಾಂತಗಳನ್ನು ಉಳಿಸಿಕೊಂಡು ಕೆಲಸ ಮಾಡಬೇಕಾಗುತ್ತದೆ” ಎಂದರು.


ಶಿಗ್ಗಾವಿಯಲ್ಲಿ ಸೋತ ಅಭ್ಯರ್ಥಿಗೆ ಟಿಕೆಟ್ ನೀಡಿದ್ದು ಹೊಂದಾಣಿಕೆ ರಾಜಕಾರಣವೇ ಎಂದಾಗ, “ಈ ಪ್ರಶ್ನೆಯನ್ನು ಪಕ್ಷದ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳನ್ನು ಕೇಳಬೇಕು. ನಮ್ಮಲ್ಲಿ ಯಾವುದೇ ಹೊಂದಾಣಿಕೆಯಿಲ್ಲ. ಸೋತ ಅಭ್ಯರ್ಥಿಗೆ ಟಿಕೆಟ್ ನೀಡಬಾರದು ಎನ್ನುವುದೇನಿಲ್ಲವಲ್ಲ. ನಾಲ್ಕೈದು ಬಾರಿ ಸೋತವರೇ ಮುಖ್ಯಮಂತ್ರಿಗಳಾದ ಉದಾಹರಣೆ ನಮ್ಮ ಮುಂದಿದೆ” ಎಂದರು.


ಚುನಾವಣಾ ಪ್ರಚಾರಕ್ಕೆ ಕೇಂದ್ರ ನಾಯಕರು ಬರಲಿದ್ದಾರೆಯೇ ಎಂದಾಗ “ಸಿದ್ದರಾಮಯ್ಯ ಅವರು ಹಾಗೂ ಡಿ.ಕೆ.ಶಿವಕುಮಾರ್ ಅವರು ಹಾಗೂ ನಮ್ಮ ರಾಜ್ಯದ ನಾಯಕರು ಪ್ರಚಾರ ಮಾಡಲಿದ್ದಾರೆ” ಎಂದರು. ಯೋಗೇಶ್ವರ್ ಅವರಿಗೆ ನೀವೇ ಸಾಥ್ ಕೊಡುತ್ತಿದ್ದೀರಿ ಎಂದಾಗ “ಯಾರಾದರೊಬ್ಬರು ಸಾಥ್ ನೀಡಲೇ ಬೇಕಲ್ಲವೇ? ಚುನಾವಣಾ ಹೊಣೆಯನ್ನು ನಾನೇ ಹೊತ್ತಿದ್ದೇನೆ” ಎಂದರು.


ಬೆಂಗಳೂರು ಗ್ರಾಮಾಂತರ ಬಿಟ್ಟ ಕ್ಷಣದಿಂದ ಸಂತೋಷವಾಗಿದ್ದೇನೆ. ಬೇರೆಯವರು ಅವರ ಆಸ್ತಿ ಎಂದು ತಿಳಿದುಕೊಂಡಿರುವಂತೆ, ಕ್ಷೇತ್ರ ನಮ್ಮ ಅಪ್ಪನ ಆಸ್ತಿಯಲ್ಲ. ಕೆಲಸ ಮಾಡಲು ಸಾರ್ವಜನಿಕರು ಕೊಟ್ಟಿರುವ ಕೊಡುಗೆ. ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಈಗ ಬೇಡ ಎಂದು ಹೇಳಿದ್ದಾರೆ, ಅದನ್ನು ಮುಕ್ತ ಕಂಠದಿಂದ ಸ್ವಾಗತ ಮಾಡಿದ್ದೇನೆ” ಎಂದರು.


ಬೆಂಗಳೂರು ಗ್ರಾಮಾಂತರದ ಸೋಲನ್ನು ಅರಗಿಸಿಕೊಳ್ಳಲು ಆಗಿಲ್ಲ ಎನ್ನುವ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಯ ಬಗ್ಗೆ ಕೇಳಿದಾಗ “ಅವರು ಪಕ್ಷದ ಅಧ್ಯಕ್ಷರಾದ ಕಾರಣ ಅವರಿಗೆ ಜವಾಬ್ದಾರಿ ಇರುತ್ತದೆ. ಅದರಂತೆ ಮಾತನಾಡಿದ್ದಾರೆ. ನಾನು ರಿಲ್ಯಾಕ್ಸ್ ಮೂಡ್ ನಲ್ಲಿ ಇದ್ದೇನೆ” ಎಂದರು.


ಸಂಸದ ಸ್ಥಾನ ಸೋತರೂ ಖುಷಿಯಲ್ಲಿದ್ದೀರಿ ಎಂದು ಕೇಳಿದಾಗ “ನಾನು ಮೊದಲು ಸಿಟ್ಟಿನಲ್ಲಿ ಇರುತ್ತಿದ್ದೆ ಎಂದು ಕಾರ್ಯಕರ್ತರು ಹೇಳುತ್ತಿದ್ದರು. ಈಗ ಸೋತ ನಂತರ ಖುಷಿಯಲ್ಲಿದ್ದೇನೆ. ಮೊದಲು ನಿಮ್ಮನ್ನು ಮಾತನಾಡಿಸಲು ಭಯವಾಗುತ್ತಿತ್ತು ಎಂದು ಇದರ ಬಗ್ಗೆ ನಮ್ಮ ಮುಖಂಡರೇ ಹೇಳಿದ್ದಾರೆ” ಎಂದರು.


ಎಂಟು ಮಂದಿ ಬಿಜೆಪಿ ಶಾಸಕರು ಕಾಂಗ್ರೆಸ್ ಸೇರಿಲಿದ್ದಾರೆ ಎನ್ನುವ ಎಸ್.ಟಿ.ಸೋಮಶೇಖರ್ ಅವರ ಹೇಳಿಕೆಯ ಬಗ್ಗೆ ಕೇಳಿದಾಗ “ಈ ತರಹದ ನಡವಳಿಕೆ ಇರಬಹುದೇನೋ, ಸೋಮಶೇಖರ್ ಅವರ ಬಳಿ ಮಾತನಾಡಿರಬಹುದು ಎನಿಸುತ್ತದೆ” ಎಂದು ಹೇಳಿದರು.


ಶಾಸಕ ಸತೀಶ್ ಸೈಲ್ ಅವರ ಬಂಧನದ ಬಗ್ಗೆ ಕೇಳಿದಾಗ “ಹಳೆಯ ಪ್ರಕರಣದಲ್ಲಿ ನ್ಯಾಯಲಯದ ತೀರ್ಪು ಬಂದ ಕಾರಣಕ್ಕೆ ಬಂಧಿಸಲಾಗಿದೆ. ಅವರು ನ್ಯಾಯಲಯಕ್ಕೆ ಮೇಲ್ಮನವಿ ಸಲ್ಲಿಸಬಹುದು ಎಂದು ಭಾವಿಸಿದ್ದೇನೆ” ಎಂದು ಹೇಳಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.