ಬೆಂಗಳೂರು: ಕಾಸಿಗಾಗಿ ಹುದ್ದೆ ದಂಧೆಯಲ್ಲಿ ತೊಡಗಿರುವ ಸಿಎಂ ಸಿದ್ದರಾಮಯ್ಯನವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ. ಸಿಎಂ ಕಚೇರಿಯಲ್ಲಿ ನಡೆಯುತ್ತಿರುವ ವರ್ಗಾವಣೆ ದಂಧೆಯ ಬಗ್ಗೆ ಹೊರಬಂದಿರುವ ಸಿದ್ದರಾಮಯ್ಯರ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಕುರಿತ ವಿಡಿಯೋ ಬಹಿರಂಗವಾದ ಬೆನ್ನಲ್ಲಿಯೇ ಅವರು ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.


COMMERCIAL BREAK
SCROLL TO CONTINUE READING

ಸಿಎಂ ಮತ್ತು ಅವರ ಪುತ್ರ, ಅವರ ಕಚೇರಿ, ಇಡೀ ಅವರ ಪಟಾಲಂ ವರ್ಗಾವಣೆ ದಂಧೆಯಲ್ಲಿ ಆರಂಭದಿಂದಲೂ ಎಡೆಬಿಡದೆ ತೊಡಗಿದೆ ಎಂದು ನಾನು ಅನೇಕ ಸಲ ಆರೋಪ ಮಾಡಿದ್ದೆ. ಈಗ ಆ ಆರೋಪ ಸತ್ಯವಾಗಿದೆ. ಹಿಂದೆ ಇದೇ ಸಿದ್ದರಾಮಯ್ಯನವರು ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದಾಗ ವಿಜಯೇಂದ್ರ ಅವರು ಸೂಪರ್ ಸಿಎಂ ಎಂದು ಆರೋಪ ಮಾಡಿದ್ದರು. VST TAX ಎಂದು ದೂರಿದ್ದರು ಎಂದ ಎಚ್‍ಡಿಕೆ, ಸಿದ್ದರಾಮಯ್ಯನವರು ನೀಡಿದ್ದ ಹೇಳಿಕೆಯ ವಿಡಿಯೋ ತುಣುಕನ್ನು ಟಿವಿಯಲ್ಲಿ ಹಾಕಿ ಮಾಧ್ಯಮದವರಿಗೆ ತೋರಿಸಿದರು. ಅಲ್ಲದೆ ಈಗ ಸಿದ್ದರಾಮಯ್ಯ ನಡೆಸುತ್ತಿರುವ YST ದಂಧೆಯ ಕತೆ ಏನು? ಆಗೊಂದು ಮಾತು, ಹೀಗೊಂದು ಮಾತೇ? ಎಂದ ಕುಮಾರಸ್ವಾಮಿಯವರು ಸಿಎಂ ಸಿದ್ದರಾಮಯ್ಯರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.


ಇದನ್ನೂ ಓದಿ: ಕರ್ನಾಟಕದ ಕಲೆಕ್ಷನ್ ಕಿಂಗ್ ಅಪ್ಪ, ಕಲೆಕ್ಷನ್ ಪ್ರಿನ್ಸ್ ಮಗ..!


ಯತೀಂದ್ರಗೆ ಕರೆ ಮಾಡಿದ್ದು ಯಾರು?: ಯತೀಂದ್ರರಿಗೆ ಕರೆ ಮಾಡಿದ್ದು ಯಾರು? ಹೇಳಿ ಅಪ್ಪ ಎಂದಿದ್ದು ಯಾರಿಗೆ? ವಿವೇಕಾನಂದ ಯಾರು? ಮಹದೇವನಿಗೆ ಫೋನ್ ಕೊಡಿ ಅಂತಾ ಹೇಳಿದ್ದು ಯಾಕೆ? ನಾಲ್ಕೈದು ಲಿಸ್ಟ್ ಯಾವುದು ಎಂದು ಪ್ರಶ್ನಿಸಿದ ಎಚ್‍ಡಿಕೆ, ಇದ್ಯಾವ ಚೀಫ್ ಮಿನಿಸ್ಟರ್, ಸೂಪರ್ ಚೀಫ್ ಮಿನಿಸ್ಟರ್ ಎಂದು ಖಾರವಾಗಿ ಪ್ರಶ್ನಿಸಿದರು. ಯತೀಂದ್ರ ಅವರು ನಾನು ಹೇಳಿದ ನಾಲ್ಕೈದು ಬಿಟ್ಟು ಬೇರೆ ಮಾಡಬೇಡ ಅಂದಿದ್ದು ಯಾಕೆ? ಇದು ವರ್ಗಾವಣೆ ದಂಧೆ ಹೊರತುಪಡಿಸಿ ಬೇರೆ ಯಾವ ವಿಷಯಕ್ಕೆ ಸಂಬಂಧಿಸಿದ್ದು? ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕು. ಅಪ್ಪ-ಮಗನ ನಡುವೆ ನಡೆದ ಫೋನ್ ಚರ್ಚೆ ವ್ಯವಹಾರ ಜನರಿಗೆ ಗೊತ್ತಾಗಬೇಕು. ಇವರು ಅಭಿವೃದ್ಧಿ ಬಗ್ಗೆ ಅಭಿರುಚಿ ಇರುವವರು. ಪಾಪ.. ಸೂಪರ್ ಸಿಎಂ ಸಾಹೇಬರು ಟಿಕ್ ಮಾಡಿದ ಲಿಸ್ಟ್ ಜನರ ಮುಂದೆ ಇಡಿ ಎಂದು ಸಿದ್ದರಾಮಯ್ಯರಿಗೆ ಕುಮಾರಸ್ವಾಮಿ ನೇರ ಸವಾಲು ಹಾಕಿದರು.


ಆ ಮಹದೇವು ಯಾರು?: ಇಷ್ಟಕ್ಕೂ ಆ ಮಹದೇವು ಯಾರು? ಆತನಿಗೂ  ಮುಖ್ಯಮಂತ್ರಿ ಕುಟುಂಬಕ್ಕೂ ಏನು ಸಂಬಂಧ? ಕಲೆಕ್ಷನ್ ಮಾಡುವುದಕ್ಕೆ ಆ ಗಿರಾಕಿಯನ್ನು ಸಿಎಂ ಕಚೇರಿಯಲ್ಲಿಟ್ಟುಕೊಂಡಿದ್ದಾರೆಯೇ? ಒಬ್ಬ ಶಾಸಕ ಪತ್ರ ತೆಗೆದುಕೊಂಡು ಹೋದಾಗ, ‘ಬರೀ ಕಾಗದ ತಗೊಂಡು ಬಂದರೆ ಆಯಿತಾ? 30 ಲಕ್ಷ ರೂ. ಹಣ ಕೊಡಬೇಕು ಎಂದು ಬಹಿರಂಗವಾಗಿ ಡಿಮಾಂಡ್ ಮಾಡಿದ್ದ ವ್ಯಕ್ತಿ ಈತ. ಈ ವ್ಯಕ್ತಿಯ ಬಗ್ಗೆ ಹಿಂದೆಯೇ ನಾನು ಹೇಳಿದ್ದೇನೆ. ಸಿಎಂ ಕಚೇರಿಯಲ್ಲಿ YST ಕಲೆಕ್ಷನ್ ಆಗುತ್ತಿದೆ ಎಂದು ಹೇಳಿದಾಗ ನನ್ನ ಬಗ್ಗೆ ಲಘುವಾಗಿ ಮಾತಾನಾಡಿದ್ದರು ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.


ವಿಜಯೇಂದ್ರ ಬಗ್ಗೆ ಆರೋಪ: ಅಂದು ಬಿ.ಎಸ್.ಯಡಿಯೂರಪ್ಪ ಮತ್ತು ವಿಜಯೇಂದ್ರ ಬಗ್ಗೆ ಆರೋಪ ಮಾಡಿದ್ದ ಸಿದ್ದರಾಮಯ್ಯ, ತಮ್ಮ ಮಗನನ್ನು ಇಟ್ಟುಕೊಂಡು ಮಾಡುತ್ತಿರುವುದೇನು? ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ತಂದೆ ಎನ್ನುವ ಸಂಬಂಧ ಮನೆಯಲ್ಲಿ, ಹೊರಗೆ ಅಲ್ಲ. ಮೊದಲು ಅಪ್ಪಾ ಎನ್ನುತ್ತಾ, ಫೋನ್ ಕೊಡಿ ಆ ಮಹದೇವುಗೆ ಎಂದು ರಾಜ್ಯದ ಸಿಎಂಗೇ ತಾಕೀತು ಮಾಡುವ ಅಹಂಕಾರಕ್ಕೆ ಏನು ಹೇಳುವುದು? ಎಂದು ಕಿಡಿಕಾರಿದರು.


ಇದನ್ನೂ ಓದಿ: ಬಿ. ವೈ. ವಿಜಯೇಂದ್ರ ಅವರ ಕುರಿತಾಗಿ ಮಾತನಾಡಿದ ಸತೀಶ್‌ ಜಾರಕಿಹೊಳಿ


ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್‍ನವರು ‘ಪೇ ಸಿಎಂ’ ಅಂತಾ ಪೋಸ್ಟರ್ ಹಾಕಿದ್ದರು. ಈಗ ಪಂಚರಾಜ್ಯಗಳ ಚುನಾವಣೆಗೆ ಗಂಟುಮೂಟೆ ಸಮೇತ ಹೋಗುತ್ತಿದ್ದಾರೆ. ಇದಕ್ಕೆ ಯಾವ ಪೋಸ್ಟರ್ ಹಾಕಬೇಕು? ವರ್ಗಾವಣೆ ದಂಧೆ ಬಗ್ಗೆ ನಾನು ಹೇಳಿದಾಗ ಎಲ್ಲರೂ ನನ್ನ ಮೇಲೆ ಮುಗಿಬಿದ್ದರು. ಈಗ ಏನು ಹೇಳುತ್ತಾರೆ ಅವರೆಲ್ಲ. ಸಿಎಂ ರಾಜೀನಾಮೆ ನೀಡಬೇಕಾಗುತ್ತದೆ ಎಂದು ಕುಟುಕಿದರು. ಮಾತೆತ್ತಿದರೆ ಕುಮಾರಸ್ವಾಮಿ ಹೇಳೋದೆಲ್ಲ ಸುಳ್ಳು, ಅವನಿಗ್ಯಾಕೆ ಉತ್ತರ ಕೊಡಬೇಕು. ಆದರೂ ನಾವು ಎಚ್ಚರಿಕೆಯಿಂದ ಇರಬೇಕು ಅಂತಲೂ ಸಿದ್ದರಾಮಯ್ಯ ಹೇಳಿದ್ದರು. ಎಚ್ಚರವಾಗಿದ್ದರೂ ಈ ವಿಡಿಯೋ ಯಾಕೆ ಲೀಕ್ ಆಯಿತು? ವಸೂಲಿ ದಂಧೆಯ ಮಾಹಿತಿ ಹೇಗೆ ಹೊರಗೆ ಬರುತ್ತಿದೆ? ಸಿಎಂ ಅವರು ಈ ಮಾತನ್ನು ಯಾಕೆ ಹೇಳಿದರು? ನಾವು ತಿನ್ನುತ್ತಿದ್ದೇವೆ, ಸಾಕ್ಷಿ ಸಿಕ್ಕಿ ಬಿಡುತ್ತದೆ ಎಂದು ಹೀಗೆ ಹೇಳಿದ್ದರಾ? ಎಂದು ಪ್ರಶ್ನಿಸಿದರು.


ಆರೋಪ ಮಾಡಿದರೆ ಕುಮಾರಸ್ವಾಮಿ ಹಿಟ್ ಅಂಡ್ ರನ್ ಎನ್ನುತ್ತಿದ್ದವರಿಗೆ ಈ ವಿಡಿಯೋಗಿಂತ ಸಾಕ್ಷಿ ಬೇಕಾ? ಯಡಿಯೂರಪ್ಪ ಮಗನ ಬಗ್ಗೆ ಮಾತಾಡಿದ್ದರಲ್ಲ, ಇವರು ಅಂದು ಯಾವ ದಾಖಲೆ ಕೊಟ್ಟಿದ್ದರು? ‘ಪೇ ಸಿಎಂ’ ಅಂತಾ ಬೀದಿ ಬೀದಿಲಿ ಪೋಸ್ಟರ್ ಹಾಕಿದ್ದರು. ಅದನ್ನು ಸಾಬೀತು ಮಾಡೋದಕ್ಕೆ ಯಾವ ಸಾಕ್ಷ್ಯ ಇಟ್ಟಿದ್ದರು? ನಾಚಿಕೆ ಆಗಬೇಕು ಇವರಿಗೆ. ನನಗೆ ಬುದ್ದಿಭ್ರಮಣೆ ಎಂದಿದ್ದರು ಕಾಂಗ್ರೆಸ್‍ನವರು. ನನ್ನದು ಏಕಾಂಗಿ ಕೂಗು ಅಂತಾ ಅಣಕ ಮಾಡುತ್ತಿದ್ದರು. ಸಣ್ಣ-ಪುಟ್ಟ ಪುಡಿ ಲೀಡರುಗಳು ನನ್ನ ಬಗ್ಗೆ ದೊಡ್ಡ ದನಿಯಲ್ಲಿ ಮಾತನಾಡುತ್ತಿದ್ದರು. ಈಗ ಅವರೆಲ್ಲಾ ಏನು ಹೇಳುತ್ತಾರೆ? ವಿಡಿಯೋದಲ್ಲಿ ಏನು ಇಲ್ಲ, ನಮ್ಮ ಸಿಎಂ ಸತ್ಯ ಹರಿಶ್ಚಂದ್ರ ಎಂದು ಹೇಳುತ್ತಾರಾ? ಎಂದು ಕಿಡಿಕಾರಿದರು.


ಈ ಹಿಂದೆ ಯಡಿಯೂರಪ್ಪರ ಸರಕಾರದಲ್ಲಿ ಎಲ್ಲಾ ವ್ಯವಹಾರವನ್ನು ವಿಜಯೇಂದ್ರ ಮಾಡುತ್ತಾರೆ ಎಂದು ಹೇಳಿಕೆ ಕೊಟ್ಟಿದ್ದರು ಹಾಲಿ ಸಿಎಂ. ಆ ಹೇಳಿಕೆಯನ್ನು ಸಿದ್ದರಾಮಯ್ಯ ಏನಾದರೂ ಮರೆತಿದ್ದರೆ ನೆನಪು ಮಾಡಿಕೊಳ್ಳಲಿ. ನನ್ನ ಬಗ್ಗೆ ಪೋಸ್ಟರ್ ಹಾಕುವ ಮೂಲಕ ಕೀಳುಮಟ್ಟದ ಕೆಲಸ ಮಾಡಿದ್ದಾರೆ. 2-3 ಸಾವಿರಕ್ಕೆ ಕರೆಂಟ್ ಕದಿಯುವ ದಾರಿದ್ರ್ಯ ನನಗೆ ಬಂದಿಲ್ಲ. ಆದರೆ ಸಿದ್ದರಾಮಯ್ಯರಿಗೆ ಏನು ದಾರಿದ್ರ್ಯ ಬಂದಿದೆ ಎಂಬುದನ್ನು ಹೇಳಬೇಕು ಎಂದು ಕುಮಾರಸ್ವಾಮಿ ತಿರುಗೇಟು ನೀಡಿದರು. ಕೆಲವರು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದಾಗ ಕೋಮವಾದಿ ಜನತಾದಳದಿಂದ ಬಿಟ್ಟು ಬಂದರು ಎಂದು ಸಿದ್ದರಾಮಯ್ಯ ಹೇಳಿದ್ದರು. ಸಚಿವ ರಾಜಣ್ಣ ಅವರು, ‘ನಮ್ಮದು ಮಹಾ ಸಮುದ್ರ. ಚರಂಡಿ ನೀರು ಕೂಡ ಬರುತ್ತಿದೆ. ತುಂಬಿಸಿಕೊಳ್ತೀವಿ" ಎಂದಿದ್ದಾರೆ. ಕಾಂಗ್ರೆಸ್ ಯಾವತ್ತೂ ಒಳ್ಳೆಯ ನೀರು ತುಂಬಿಸಿಕೊಳ್ಳಲ್ಲ, ಚರಂಡಿ ನೀರೇ ತುಂಬಿಸಿಕೊಳ್ಳೋದು ಎಂದು ಎಚ್‍ಡಿಕೆ ಕಟುವಾಗಿ ಟೀಕಿಸಿದರು‌.


ಇದನ್ನೂ ಓದಿ: ಸರ್ಕಾರದ ನಿಯಮಗಳನ್ನು ಉಲ್ಲಂಘನೆ ಮಾಡಿದ ಪಟಾಕಿ ಅಂಗಡಿಗಳು


ರಾಜ್ಯದಲ್ಲಿ ದೀಪಾವಳಿ ಬಳಿಕ ದಿನಕ್ಕೆ ಒಂದೊಂದು ರೀತಿಯ ಸುದ್ದಿಗಳು ಬರುತ್ತಿದೆ. ಹಬ್ಬದ ಸಂದರ್ಭದಲ್ಲಿ ಕುಮಾರಸ್ವಾಮಿ ಮನೆಗೆ ವಿದ್ಯುತ್ ಅಲಂಕಾರಕ್ಕೆ ಕರೆಂಟ್ ಕಳ್ಳತನ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪ ಮಾಡಿದ್ದರು. ಕರೆಂಟ್ ಕದಿಯುವಷ್ಟು ದಾರಿದ್ರ್ಯ ನನಗೆ ಬಂದಿದೆಯಾ? ಯಾರೋ ಮಾಡಿದ ಅಚಾತುರ್ಯಕ್ಕೆ ನಾನು ತಲೆ ಮೇಲೆ ಹೊತ್ತುಕೊಂಡೆ ಎಂದು ಕೂಡ ಹೇಳಿದ್ದೇನೆ. ನಂತರ ಜೆಪಿ ಭವನದಲ್ಲಿ ಪೋಸ್ಟರ್ ಅಂಟಿಸಿದ್ದಾರೆ‌. ಕಾಂಗ್ರೆಸ್‌ಗೆ ಇದೊಂದು ಚಾಳಿ ಶುರುವಾಗಿದೆ. ಅದೇ ಅವರಿಗೆ ತಿರುಗುಬಾಣ ಆಗಲಿದೆ ಎಂದು ಟೀಕಿಸಿದರು.. ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಚ್.ಎಂ.ರಮೇಶ್ ಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಚೌಡರೆಡ್ಡಿ ತೂಪಲ್ಲಿ ಮುಂತಾದವರು ಉಪಸ್ಥಿತರಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.