ಬೆಂಗಳೂರು: ಕೆಪಿಎಂಇ ಮಸೂದೆ ಕುರಿತಂತೆ ಕಳೆದ ನಾಲ್ಕು ದಿನಗಳಿಂದ ತಲೆದೋರಿರುವ ಸಮಸ್ಯೆ ಬಗೆಹರಿಸುವ ಕುರಿತು ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾನೂನು ಸಚಿವ ಟಿ. ಬಿ. ಜಯಚಂದ್ರ ಜೊತೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದಾರೆ.


COMMERCIAL BREAK
SCROLL TO CONTINUE READING

ಸಿಎಂ ಮತ್ತು ಕಾನೂನು ಸಚಿವರೊಂದಿಗೆ ಮಾತುಕತೆ ನಡೆಸಿರುವ ಎಚ್ಡಿಕೆ ವೈದ್ಯರ ಮುಷ್ಕರದಿಂದಾಗಿ ರಾಜ್ಯಾದ್ಯಂತ ಜನಸಾಮಾನ್ಯರು ಪರದಾಡುವಂತಾಗಿದೆ. ಇಂತಹ ಸಂದರ್ಭದಲ್ಲಿ ಆದಷ್ಟೂ ಬೇಗ ಮುಷ್ಕರ ನಿರತ ವೈದ್ಯರೊಂದಿಗೆ ಮಾತುಕತೆ ನಡೆಸಿ ವೈದ್ಯರ ಸಮಸ್ಯೆಯನ್ನು ನಾಜೂಕಾಗಿ ಪರಿಹರಿಸುವಂತೆ ಸಲಹೆ ನೀಡಿದ್ದಾರೆ. 


ಏತನ್ಮಧ್ಯೆ ವಿಧೇಯಕದಲ್ಲಿ ಒಂದಿಷ್ಟು ಬದಲಾವಣೆ ಮಾಡುವಂತೆಯೂ ಸಲಹೆ ನೀಡಿರುವ ಹೆಚ್ಡಿಕೆ ವೈದ್ಯರು ಸ್ಥಳೀಯ ಪ್ರಾಧಿಕಾರದ ಮುಂದೆ ಹೋಗಿ ಕೈ ಕಟ್ಟಿ ನಿಲ್ಲುವಂತಾಗುವುದು ಸರಿಯಲ್ಲ. ಜನ ಸಾಮಾನ್ಯರಿಗೆ ಅನುಕೂಲವಾಗುವ ಅಂಶಗಳನ್ನು ಉಳಿಸಿ, ಆದರೆ ವೈದ್ಯರಿಗೆ ಮುಜುಗರ ಆಗುವಂತಹ ಅಂಶಗಳನ್ನು ಕೈ ಬಿಡುವುದು ಉತ್ತಮ ಎಂದು ಸಮಾಲೋಚನೆ ಸಮಯದಲ್ಲಿ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.


ಇಷ್ಟೇ ಅಲ್ಲದೆ, ಆರೋಗ್ಯ ಸಚಿವರೊಂದಿಗೆ ಮಾತನಾಡಿ ಇಂದೇ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಿ, ವೈದ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ ಎಲ್ಲವೂ ಸರಿಯಾಗುತ್ತೆ ಎಂಬ ಹೆಚ್ಡಿಕೆ ಸಲಹೆಗೆ ಸಿಎಂ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.