ಮೈಸೂರು: ನಾನು ಇಲ್ಲಿಗೆ ಬಂದಿರುವುದು ಅಭಿವೃದ್ಧಿಗಾಗಿ ಮಾತ್ರ. ರಾಜಕಾರಣ ಮಾಡಲು ಇದು ನನ್ನ ಕ್ಷೇತ್ರವಲ್ಲ. ಯಾರಿಗೋ ಒಬ್ಬರಿಗೆ ಅನುಕೂಲವಾಗಿ ಕೆಲಸ ಮಾಡುವವ ನಾನಲ್ಲ. ಜಿಲ್ಲಾ ಉಸ್ತುವಾರಿ ಹೊಣೆಯನ್ನು ನನಗೆ ವಹಿಸಿದ್ದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಕೆಲಸವನ್ನು ನಾನು ಮಾಡುತ್ತಿದ್ದೇನೆ ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ (ST Somashekhar)  ಹೇಳಿದರು. 


COMMERCIAL BREAK
SCROLL TO CONTINUE READING

ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪ ಮೇಯರ್ ನಿಯೋಗವು ಸಚಿವರ ಜೊತೆ ಸಭೆ ನಡೆಸಿ ಸಮಸ್ಯೆಗಳನ್ನು ಗಮನಕ್ಕೆ ತಂದರು. ಎಲ್ಲಾ ಸಮಸ್ಯೆಗಳಿಗೂ ಶೀಘ್ರವಾಗಿ ಪರಿಹಾರ ಕಲ್ಪಿಸುವುದಾಗಿ ಸಚಿವರು ಭರವಸೆ ನೀಡಿದರು.


ಕೊರೋನಾ ಮುಕ್ತ ಮೈಸೂರು ಜಿಲ್ಲೆ ನಮ್ಮ ಗುರಿ; ಸಚಿವ ಎಸ್.ಟಿ. ಸೋಮಶೇಖರ್


ನಗರಾಭಿವೃದ್ಧಿ ಸಚಿವರಾದ ಭೈರತಿ ಬಸವರಾಜ್ ಅವರು ಮೇ 7ರಂದು ಜಿಲ್ಲೆಗೆ ಭೇಟಿ ನೀಡಲಿದ್ದು, ಅವರ ಜೊತೆ ಸಭೆ ನಡೆಸಿ ತೀರ್ಮಾನವನ್ನು ತೆಗೆದುಕೊಳ್ಳಲಿದ್ದೇವೆ. ಸಚಿವ ಬಸವರಾಜ್ ಅವರ ಚಿಂತನೆಯನ್ನೂ ನೋಡಿಕೊಂಡು ಪ್ರತಿ ವಾರ್ಡ್ ಗಳಿಗೆ ಕಾರ್ಪೋರೇಟರ್ ಗಳ ನಿಧಿಯಿಂದ ಅನುದಾನ ನೀಡುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಸಚಿವರು ತಿಳಿಸಿದರು.


 ಪಡಿತರ ಚೀಟಿ (Ration Card) ಸಮಸ್ಯೆ ಇದ್ದರೆ ಗಮನಕ್ಕೆ ತನ್ನಿ, ಎಪಿಎಲ್ ಹಾಗೂ  ಬಿಪಿಎಲ್ ಕಾರ್ಡು (BPL Card) ದಾರರಿಗೆ 2 ತಿಂಗಳಿಗೆ ಆಹಾರ ಪದಾರ್ಥ ಕೊಡಬೇಕು. ಇನ್ನು ಬಿಪಿಎಲ್ ಕಾರ್ಡ್ ಗೆ ಅರ್ಜಿ ಹಾಕಿದವರಿಗೂ ತಲುಪಿಸಬೇಕೆಂಬ ನಿಯಮ ಸರ್ಕಾರದಿಂದ ಜಾರಿಗೆ ಬಂದಿದೆ. ಹೀಗಾಗಿ ಅಂತವರಿಗೂ ಪಡಿತರವನ್ನು ಇನ್ನೆರೆಡು ತಿಂಗಳು ವಿತರಣೆ ಮಾಡಲೇಬೇಕು. ಸಮಸ್ಯೆಯಾಗಿದ್ದರೆ ಗಮನಕ್ಕೆ ತನ್ನಿ, ಪರಿಹರಿಸುತ್ತೇವೆ ಎಂದು ಸಚಿವರು ತಿಳಿಸಿದರು.


ಇನ್ನು ಬಜೆಟ್ ಮಂಡನೆ ವಿಚಾರವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮಂಡಿಸಬೇಕು. ಇಲ್ಲವೇ ಬೆಂಗಳೂರಿನಲ್ಲಿ ಬಿಬಿಎಂಪಿ ಮಂಡಿಸಿದ ಬಜೆಟ್ ಮಾದರಿ ಅನುಸರಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕವೂ ಮಂಡಿಸಬಹುದು ಎಂದು ಸಚಿವರು ತಿಳಿಸಿದರು.


ಸಮನ್ವಯತೆ ಕೊರತೆ ಇಲ್ಲ:
ಮೇಸೂರು ಮೇಯರ್ ಹಾಗೂ ಕಮೀಷನರ್ ನಡುವೆ ಯಾವುದೇ ಸಮಸ್ಯೆ ಇಲ್ಲ. ಹೀಗಾಗಿ ಸಮನ್ವಯತೆಯಿಂದ ಕೆಲಸ ಮಾಡುವಂತೆ ನಾನೂ ಸಹ ಅಧಿಕಾರಿಗಳಲ್ಲಿ ಮನವಿ ಮಾಡಿದ್ದೇನೆ. ಹೀಗಾಗಿ ಮೇಯರ್- ಉಪಮೇಯರ್ ಹಾಗೂ ಪಕ್ಷಗಳ ಜಿಲ್ಲಾಧ್ಯಕ್ಷರಿಗೆ ಅವರವರ ವ್ಯಾಪ್ತಿಗೆ ಸಂಬಂಧಪಟ್ಟ ಸರ್ಕಾರಿ ಕಾರ್ಯಕ್ರಮಗಳ ಮಾಹಿತಿಯನ್ನು ನೀಡಬೇಕೆಂದು ಕಮೀಷನರ್ ಸೇರಿ ಅಧಿಕಾರಿಗಳಿಗೆ ಮನವಿ ಮಾಡಿದ್ದೇನೆ ಎಂದು ಸಚಿವರು ತಿಳಿಸಿದರು.