ಮೈಸೂರು: ನಂಜನಗೂಡು ಸೇರಿದಂತೆ ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಹತೋಟಿಗೆ ಬರುತ್ತಿದೆ. ಕೊರೋನಾ ಮುಕ್ತ ಮೈಸೂರು ಹಾಗೂ ನಂಜನಗೂಡನ್ನು ಮಾಡುವುದು ನಮ್ಮ ಗುರಿ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ (ST Somashekhar) ಅವರು ತಿಳಿಸಿದರು.
ನಂಜನಗೂಡು ಮಿನಿವಿಧಾನಸೌಧದಲ್ಲಿ ಟಾಸ್ಕ್ ಫೋರ್ಸ್ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಸಚಿವರು, ಸ್ಥಳೀಯ ಶಾಸಕ ಹರ್ಷವರ್ಧನ್, ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್, ಜಿಲ್ಲಾ ವರಿಷ್ಠಾದಿಕಾರಿ ರಿಷ್ಯಂತ್, ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಕರೋನಾವೈರಸ್ (Coronavirus) ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅಗತ್ಯವಿದೆ. ಇನ್ನು ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ವರಿಷ್ಠಾಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಸಚಿವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಮೈಸೂರು ZOOಗೆ 73.16 ಲಕ್ಷ ರೂ.ಗಳ ಚೆಕ್ ನೀಡಿದ ಸಚಿವ ಎಸ್.ಟಿ. ಸೋಮಶೇಖರ್
ಇದರ ಜೊತೆಗೆ ನಮ್ಮ ವೈದ್ಯರು, ನರ್ಸ್ ಗಳು ಸೇರಿದಂತೆ ವೈದ್ಯಕೀಯ ಸಿಬ್ಬಂದಿ ಅತ್ಯುತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಜೊತೆಗೆ ಅಧಿಕಾರಿ ವರ್ಗದವರ ಸೇವೆಯೂ ಗಣನೀಯ ಎಂದು ಸಚಿವರು ಪ್ರಶಂಸೆ ವ್ಯಕ್ತಪಡಿಸಿದರು.
ಜ್ಯೂಬ್ಲೆಂಟ್ ಪ್ರಕರಣದ ಮೂಲ ಪತ್ತೆಯಾಗಬೇಕೆಂದು ಇಲ್ಲಿನ ಶಾಸಕರಾದ ಹರ್ಷವರ್ಧನ್ ನನಗೆ ಒತ್ತಾಯ ಮಾಡುತ್ತಿದ್ದರು. ಹೀಗಾಗಿ ಹರ್ಷಗುಪ್ತ ಅವರನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ನೇಮಿಸಲಾಗಿದೆ ಎಂದು ತಿಳಿಸಿದರು.
ಮೇ 3ರವರೆಗೆ ಲಾಕ್ ಡೌನ್ಗೆ ಸೂಚನೆ:
ಮೇ 3ರವರೆಗೆ ಲಾಕ್ಡೌನ್ (Lockdown) ಪರಿಸ್ಥಿತಿಯೇ ಮುಂದುವರಿಯಲಿ. ಅಲ್ಲಿಯವರೆಗೆ ಈಗ ನೀಡಲಾಗಿರುವ ಅನುಮತಿ ಬಿಟ್ಟು ಉಳಿದ ಯಾವುದಕ್ಕೂ ಸಡಿಲಿಕೆ ನೀಡುವುದು ಬೇಡ ಎಂದು ಉನ್ನತಾಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ಸೂಚನೆ ನೀಡಿದರು.
ಜಿಲ್ಲಾಡಾಳಿತ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ಉನ್ನತಾಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಎಲ್ಲ ಜಿಲ್ಲೆಗಳ ಸ್ಥಿತಿಗಳನ್ನು ಗಮನಿಸಿ ತೀರ್ಮಾನ ಕೈಗೊಳ್ಳುವುದು, ಸಾರ್ವಜನಿಕ ಸಾರಿಗೆ, ಅಂಗಡಿ-ಮುಂಗಟ್ಟುಗಳಿಗೆ ವ್ಯಾಪಾರ ಅವಕಾಶ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಿ ಮಾಹಿತಿ ಪಡೆದುಕೊಂಡರು.
ಮೊಬೈಲ್ ಕ್ಲಿನಿಕ್ ಗೆ ಸಚಿವರ ಚಾಲನೆ:
ಮನೆ ಮನೆಗೆ ವೈದ್ಯಕೀಯ ಸೇವೆ ತಲುಪಿಸಲು ನೂತನ ಕೋವಿಡ್-19 (Covid-19) ಮೊಬೈಲ್ ಕ್ಲಿನಿಕ್ ವ್ಯವಸ್ಥೆಯನ್ನು ಹೊಂದಿರುವ ಮೊಬೈಲ್ ವ್ಯಾನ್ ಗಳ ಸೇವೆಗೆ ಚಾಲನೆ ನೀಡಲಾಗಿದೆ. ನಂಜನಗೂಡಿಗೂ ಸಹ ಈ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.
ಮೈಸೂರು ಜಿಲ್ಲೆಯನ್ನು ಕೊರೋನಾ ಮುಕ್ತ ಮಾಡಲು ಜಿಲ್ಲಾಡಳಿತ ಹಾಗೂ ವೈದ್ಯಕೀಯ ಸಿಬ್ಬಂದಿ ಉತ್ತಮ ಕಾರ್ಯವನ್ನು ಮಾಡುತ್ತಿದ್ದಾರೆ. ಅವರಿಗೆ ನನ್ನ ಹಾಗೂ ಸರ್ಕಾರದ ಪರವಾಗಿ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಲಾಗುವುದು ಎಂದು ಸಚಿವರು ತಿಳಿಸಿದರು.
ಆಶಾ ಕಾರ್ಯತರ್ತೆಯರ ಸಹಾಯಧನ ವಿತರಣೆ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿರುವ ಹಾಲು ಉತ್ಪಾದಕ ಸಹಕಾರ ಸಂಘಗಳು ಮತ್ತು ವ್ಯವಸಾಯ ಸೇವಾ ಸಹಕಾರ ಸಂಘಗಳಿಂದ 2,000 ರೂಪಾಯಿಯಿಂದ 5,000 ರೂಪಾಯಿವರೆಗೆ ದೇಣಿಗೆ ಸಂಗ್ರಹಿಸಿದ್ದು, ಮೈಸೂರು ನಗರ ಪಾಲಿಕೆ ಆವರಣದಲ್ಲಿ ಸಾಂಕೇತಿಕವಾಗಿ 94 ಮಂದಿ ಆಶಾಕಾರ್ಯಕರ್ತೆಯರಿಗೆ ತಲಾ 2,000 ರೂಪಾಯಿಯಂತೆ ಸಚಿವ ಎಸ್.ಟಿ. ಸೋಮಶೇಖರ್ ವಿತರಿಸಿದರು.