ಬೆಂಗಳೂರು, ಏ.30: ನಾನು ಚುನಾವಣೆಯನ್ನು ನೇರವಾಗಿ ಎದುರಿಸುತ್ತೇನೆ. ಜೇಬಲ್ಲಿ ಪೆನ್ ಡ್ರೈವ್ ಇದೆ, ಸಿ.ಡಿ ಇದೆ ಎಂದು ಹೆದರಿಸುವವನು ನಾನಲ್ಲ. ಸದನದಲ್ಲಿ ಚರ್ಚೆಗೆ ಬರುವಂತೆ ನೇರ ಸವಾಲು ಹಾಕುವುದು ಬೆಂಗಳೂರಿನ ಕೆಂಪೇಗೌಡರ ರಕ್ತದ ಗುಣ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾಜಿ ಸಿಎಂ ಕುಮಾರಸ್ವಾಮಿ ಮೇಲೆ ವಾಗ್ದಾಳಿ ನಡೆಸಿದರು.


COMMERCIAL BREAK
SCROLL TO CONTINUE READING

ಸದಾಶಿವನಗರ ನಿವಾಸದಲ್ಲಿ ಶಿವಕುಮಾರ್ ಅವರು ಮಾಧ್ಯಮಗಳನ್ನು ಉದ್ದೇಶಿಸಿ ಮಂಗಳವಾರ ಮಾತನಾಡಿದರು.


ಪೆನ್ ಡ್ರೈವ್ ಪ್ರಕರಣದ ಹಿಂದೆ ಮಹಾನಾಯಕ ಡಿ.ಕೆ. ಶಿವಕುಮಾರ್ ಇದ್ದಾರೆ ಎಂಬ ಕುಮಾರಸ್ವಾಮಿ ಅವರ ಆರೋಪಕ್ಕೆ ಶಿವಕುಮಾರ್ ಅವರು ತಿರುಗೇಟು ನೀಡಿದ್ದು ಹೀಗೆ;


“ಇದೆಲ್ಲವೂ ಹಳೇ ವಿಡಿಯೋ ಎಂದು ಸ್ವತಃ ರೇವಣ್ಣ ಅವರೇ ಒಪ್ಪಿಕೊಂಡಿದ್ದಾರೆ.ಉಪ್ಪು ತಿಂದವನು ನೀರು ಕುಡಿಯುತ್ತಾನೆ, ಈ ವಿಚಾರವಾಗಿ ದೇವೇಗೌಡರು ತೀರ್ಮಾನ ಮಾಡುತ್ತಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಬಿಜೆಪಿ ನಾಯಕ ದೇವರಾಜೇಗೌಡ ಅವರು ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ರಾಷ್ಟ್ರೀಯ ನಾಯಕರಿಗೆ ಪತ್ರ ಬರೆದಿದ್ದರು.ಈ ಬಗ್ಗೆ ಮಾಧ್ಯಮಗಳಿಗೂ ತಿಳಿಸಿದ್ದಾರೆ. ಹೀಗಿರುವಾಗ ನನಗೂ ಈ ಪ್ರಕರಣಕ್ಕೂ ಏನು ಸಂಬಂಧ?


ಇದನ್ನೂ ಓದಿ: Anupama Gowda: "ನಿರ್ದೇಶಕರೊಬ್ಬರು ಕಥೆ ಹೇಳಬೇಕು ಎಂದಾಗ..": ಕಾಸ್ಟಿಂಗ್‌ ಕೌಚ್‌ನ ಸತ್ಯ ಬಿಚ್ಚಿಟ್ಟ ಕಿರುತೆರೆ ನಟಿ!


ಕುಮಾರಸ್ವಾಮಿ ಅವರಿಗೆ ನನ್ನನ್ನು ನೆನೆಸಿಕೊಳ್ಳದೆ ಇರಲು ಸಾಧ್ಯವಿಲ್ಲ. ಈಗ ಮಾತ್ರವಲ್ಲ, ಬಹಳ ವರ್ಷಗಳಿಂದ ಅವರು ಹಾಗೂ ಅವರ ಕುಟುಂಬದವರಿಗೆ ನನ್ನನ್ನು ನೆನೆಸಿಕೊಳ್ಳಲಿದ್ದರೆ ಊಟ ಸೇರಲ್ಲ, ನಿದ್ದೆ ಬರಲ್ಲ, ಸ್ಫೂರ್ತಿಯೂ ಇರಲ್ಲ. ಹಾಸನದ ಪ್ರಚಾರದ ವೇಳೆ ಕುಮಾರಸ್ವಾಮಿ ಅವರು ನನಗೆ ನಿಖಿಲ್ ಬೇರೆ ಅಲ್ಲ, ಪ್ರಜ್ವಲ್ ಬೇರೆ ಅಲ್ಲ ಎಂದು ಬೆನ್ನುತಟ್ಟಿ ಹೇಳಿದ್ದನ್ನು ನೋಡಿದ್ದೇವೆ. ಅದರಲ್ಲಿ ತಪ್ಪೇನಿಲ್ಲ. ಅವರ ಕುಟುಂಬ ಹಾಗೂ ಅವರ ಕುಡಿ. ಈಗ ನನಗೂ ಪ್ರಜ್ವಲ್ ಕುಟುಂಬಕ್ಕೂ ಸಂಬಂಧ ಇಲ್ಲ ಎಂದು ಮಾತು ಬದಲಿಸಿದ್ದಾರೆ. ನೂಲಿನಂತೆ ಸೀರೆ ಎಂದು ಹೇಳುತ್ತಿದ್ದುದ್ದನ್ನು ಮಾಧ್ಯಮಗಳಲ್ಲಿ ನೋಡಿದೆ. ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಸ್ವತಃ ಕುಮಾರಸ್ವಾಮಿ ಅವರೇ, “ಹಾಸನದಲ್ಲಿ ಪ್ಲಾಬ್ಲಮ್ ಇದೆ ಎಂದು ಬಿಜೆಪಿ ನಾಯಕರು ಹೇಳಿದ್ದರೂ ಬ್ರದರ್, ಆದರೆ ದೊಡ್ಡವರು ಎಲ್ಲವನ್ನು ನೋಡಿಕೊಳ್ಳುತ್ತೇನೆ ಅಂದರು ಬ್ರದರ್” ಎಂದು ತಿಳಿಸಿದ್ದರು.


ಪೆನ್ ಡ್ರೈವ್ ವಿಚಾರ ಡಿ.ಕೆ. ಶಿವಕುಮಾರ್ ಹಾಗೂ ಡಿ.ಕೆ ಸುರೇಶ್ ಅವರಿಗೆ ಗೊತ್ತಿತ್ತು ಎಂಬ ದೇವರಾಜೇಗೌಡ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ನಮಗೆ ಈ ವಿಚಾರ ಗೊತ್ತಿದ್ದರೆ ನಾವು ಮುಂಚಿತವಾಗಿ ರಿಲೀಸ್ ಮಾಡಬಹುದಾಗಿತ್ತು. ಇಂದು ಬೆಳಗ್ಗೆ ಅವರ ಚಾಲಕರೇ ಈ ಪೆನ್ ಡ್ರೈವ್ ವಿಚಾರ ಬಹಿರಂಗಗೊಳಿಸಿರುವುದಾಗಿ ಹೇಳಿದ್ದಾರೆ. ನಾನಂತೂ ಇಂತಹ ಚಿಲ್ಲರೆ ಕೆಲಸಕ್ಕೆ ಕೈ ಹಾಕುವುದಿಲ್ಲ. 


ಇಲ್ಲಿ ಮಹಿಳೆಯರ ಗೌರವದ ವಿಚಾರ ಪ್ರಮುಖ. ನನಗೆ ಬಂದ ಮಾಹಿತಿ ಪ್ರಕಾರ 200-300 ಮಹಿಳೆಯರು ಹಾಗೂ ಅವರ ಕುಟುಂಬದ ವಿಚಾರ. ಇದರಲ್ಲಿ ಅವರ ಪಕ್ಷದ ಕಾರ್ಯಕರ್ತರು, ಕೆಲಸಗಾರರ ಹೆಸರೂ ಕೇಳಿಬರುತ್ತಿದೆ. ಪಕ್ಷದ ಅಧ್ಯಕ್ಷನಾಗಿ ನನಗೆ ಮಾಹಿತಿ ತಿಳಿಸುತ್ತಾರೆ. ಈ ವಿಚಾರವಾಗಿ ಮೊದಲಿನಿಂದಲೇ ಗುಸುಗುಸು ನಡೆದೆದೆ.


ಈ ಮಧ್ಯೆ ಅಮಿತ್ ಶಾ ಅವರು ಕರ್ನಾಟಕದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ. ಹುಬ್ಬಳ್ಳಿ ಕೊಲೆ ಪ್ರಕರಣದಲ್ಲಿ ನಮ್ಮ ಸರ್ಕಾರ ಆರೋಪಿಯನ್ನು ಬಂಧಿಸಿ, ತನಿಖೆಯನ್ನು ಸಿಐಡಿಗೆ ವಹಿಸಿದ್ದರೂ ಪ್ರಧಾನಮಂತ್ರಿಗಳಿಂದ ಹಿಡಿದು ಎಲ್ಲಾ ಬಿಜೆಪಿ ನಾಯಕರು ಆ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ. ಬೇರೆ ಬೇರೆ ರಾಜ್ಯಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ನೋಡಿಕೊಂಡರೆ ನಮ್ಮ ರಾಜ್ಯದಲ್ಲಿ ಕಡಿಮೆ ಇದೆ. ನಮಗೆ ಈ ವಿಚಾರವಾಗಿ ಮುಂಚಿತವಾಗಿ ಗೊತ್ತಾಗಿದ್ದರೆ, ಅಥವಾ ಯಾರಾದರೂ ದೂರು ನೀಡಿದ್ದರೆ ನಾವು ತಕ್ಷಣವೇ ದೂರು ದಾಖಲೆ ಮಾಡುತ್ತಿದ್ದೆವು. ಆದರೆ ಪೆನ್ ಡ್ರೈವ್ ವಿಚಾರದ ಬಗ್ಗೆ ಬಿಜೆಪಿಯ ಯಾವುದೇ ನಾಯಕರು ಮಾತನಾಡುತ್ತಿಲ್ಲ. ಇದು ಅವರ ಮನಸ್ಥಿತಿ ತೋರಿಸುತ್ತದೆ.


ಇದನ್ನೂ ಓದಿ: ರಾಕೇಶ್‌ ಸಿದ್ದರಾಮಯ್ಯ ಸಾವಿನ ರಹಸ್ಯವೂ ಬಯಲಾಗಲಿದೆ: ಕುಮಾರಸ್ವಾಮಿ ಹೊಸ ಬಾಂಬ್!


ಕುಮಾರಸ್ವಾಮಿ ಪ್ರಜ್ವಲ್ ರೇವಣ್ಣ ನಮ್ಮ ಕುಟುಂಬವಲ್ಲ ಎಂದಿದ್ದಾರೆ. ಪ್ರಜ್ವಲ್ ಅವರ ಕುಟುಂಬದವರಲ್ಲವೇ ಎಂದು ಮಾಧ್ಯಮಗಳೇ ಚರ್ಚೆ ಮಾಡಬೇಕು. ರೇವಣ್ಣ ದೇವೇಗೌಡರ ಮಗನೋ ಅಲ್ಲವೋ? ತಪ್ಪು ಮಾಡಿದ್ದರೆ ತಪ್ಪು ಎಂದು ಹೇಳಲಿ, ತಪ್ಪು ಮಾಡಿಲ್ಲವೆಂದರೆ ತಪ್ಪಲ್ಲ ಎಂದು ಹೇಳಲಿ. ಆದರೆ ನಮ್ಮ ಕುಟುಂಬವೇ ಅಲ್ಲ ಎಂದರೆ ಹೇಗೆ? ಹೆಚ್.ಡಿ ಕುಮಾರಸ್ವಾಮಿ ಹಾಗೂ ಹೆಚ್.ಡಿ ರೇವಣ್ಣ ಅವರ ಹೆಸರಿನಲ್ಲಿರುವ ಹೆಚ್.ಡಿ ಅಂದರೆ ಏನು? ಹೊಳೆನರಸಿಪುರದ ದೇವೇಗೌಡರ ಮಗ ಅಂತಲ್ಲವೇ? ಪ್ರಜ್ವಲ್ ರೇವಣ್ಣ ಅಂದರೆ ಏನು? ರೇವಣ್ಣನ ಮಗ ಎಂದಲ್ಲವೇ?


ಕುಮಾರಸ್ವಾಮಿ ಈಗ ಬೇರೆಯವರ ಮೇಲೆ ದೂರಬೇಕು. ಹೀಗಾಗಿ ನನ್ನ ಹೆಸರು ಹೇಳುತ್ತಿದ್ದಾರೆ. ನನ್ನ ಹೆಸರು ಹೇಳಿದರೆ ಅವರಿಗೆ ನೆಮ್ಮದಿ. ಅಮಿತ್ ಶಾ ಅವರು ಕರ್ನಾಟಕ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ ಎಂದಿದ್ದಾರೆ. ನಮಗೆ ಮಾಹಿತಿ ಬಂದ ತಕ್ಷಣವೇ ನಾವು ತನಿಖೆಗೆ ಆದೇಶ ಮಾಡಿದ್ದೇವೆ. ಆತ ವಿದೇಶಕ್ಕೆ ಪರಾರಿಯಾಗಲು ನಾವು ಸಹಕಾರ ಕೊಟ್ಟಿದ್ದೇವಾ? ಅಮಿತ್ ಶಾ ಅವರು ಮೈಸೂರಿಗೆ ಬಂದಾಗ ಪ್ರಜ್ವಲ್ ಗೆ ಟಿಕೆಟ್ ನೀಡಬೇಡಿ ಎಂದು ಸ್ವತಃ ಬಿಜೆಪಿ ನಾಯಕರೇ ಹೇಳಿದ್ದರಲ್ಲವೇ? ಆತ ವಿದೇಶಕ್ಕೆ ಪರಾರಿಯಾಗುವ ಮುನ್ನ ಯಾರು ಯಾರು ಎಲ್ಲಿದ್ದರು? ಯಾರ ಜತೆ ಮಾತನಾಡಿದ್ದರು ಎಂದು ಆತನ ದೂರವಾಣಿ ಕರೆಗಳನ್ನು ತೆಗೆಸಿ ನೋಡಿ, ಗೊತ್ತಾಗುತ್ತದೆ” ಎಂದರು.


ಪೆನ್ ಡ್ರೈವ್ ನಲ್ಲಿ ಸಂತ್ರಸ್ತ ಮಹಿಳೆಯರ ಗುರುತು ಬಹಿರಂಗವಾಗಿದ್ದು, ಇದರ ವಿರುದ್ಧ ಕ್ರಮ ಕೈಗೊಳ್ಳುತ್ತೀರಾ ಎಂದು ಕೇಳಿದಾಗ, “ಕೆಲವು ಸಂತ್ರಸ್ತರ ಗುರುತು ಬಹಿರಂಗವಾಗಿದ್ದು, ಅವರ ಖಾಸಗಿ ಜೀವನಕ್ಕೆ ಧಕ್ಕೆಯಾಗಿದೆ. ನಾವು ಮಹಿಳೆಯರ ಸಂರಕ್ಷಣೆ ಮಾಡಬೇಕಿದೆ. ಆರೋಪಿ ಸಾಮಾನ್ಯನಲ್ಲ. ಆತ ಸಂಸದ, ಮಾಜಿ ಪ್ರಧಾನಮಂತ್ರಿಗಳ ಕುಟುಂಬದ ಸದಸ್ಯ. ಈ ವಿಚಾರದಲ್ಲಿ ಗುಪ್ತಚರ ಇಲಾಖೆ ಏನು ಮಾಡುತ್ತಿತ್ತು ಗೊತ್ತಿಲ್ಲ. ಈ ಅಮಾಯಕ ಮಹಿಳೆಯರ ಮೇಲಿನ ದೌರ್ಜನ್ಯ ಖಂಡನೀಯ. ಮನೆಗೆಲಸದವರ ಮೇಲೂ ದೌರ್ಜನ್ಯ ನಡೆಸಲಾಗಿದೆ ಎಂಬ ಮಾಹಿತಿ ಕೇಳಿದೆ. ಇದರಿಂದ ಬಹಳ ನೋವಾಗಿದೆ. ಹೀಗಾಗಿ ಸಂತ್ರಸ್ತ ಮಹಿಳೆಯರ ಗುರುತನ್ನು ರಹಸ್ಯವಾಗಿಡಲಾಗುವುದು. ಈ ಮಧ್ಯೆ ಸತ್ಯಾಂಶ ಬಯಲಿಗೆಳೆಯಬೇಕು. ತಂತ್ರಜ್ಞಾನ ಯುಗದಲ್ಲಿ ನಡೆದಿರುವ ಅತ್ಯಂತ ದೊಡ್ಡ ದೌರ್ಜನ್ಯ ಪ್ರಕರಣ ಇದಾಗಿದೆ” ಎಂದರು.


ಇದನ್ನೂ ಓದಿ: Avneet Kaur: "ಬಂಟಿ ನಿಮ್ಮ ಸೋಪು ಸ್ಲೋನಾ" ಅಂತ ಡೈಲಾಗ್‌ ಹೊಡೆದ ಲೈಫ್‌ಬಾಯ್‌ ಬೆಡಗಿ ಈಗ ಹೇಗಿದ್ದಾರೆ ಗೊತ್ತೇ??


ಪಕ್ಷದಿಂದ ವಜಾ ಕಣ್ಣೊರೆಸುವ ತಂತ್ರ:


ಪಕ್ಷದಿಂದ ಪ್ರಜ್ವಲ್ ರೇವಣ್ಣ ಅವರನ್ನು ವಜಾ ಮಾಡಿದ್ದಾರೆ ಎಂದು ಗಮನ ಸೆಳೆದಾಗ, “ಅವರು ಪಕ್ಷದಿಂದ ವಜಾ ಮಾಡಿದರೂ, ಪಕ್ಷದಲ್ಲಿ ಇಟ್ಟುಕೊಂಡರೂ ಎರಡೂ ಒಂದೇ. ಎಲ್ಲವೂ ಕಣ್ಣೊರೆಸುವ ತಂತ್ರ. ನಮಗೆ ಈ ರಾಜಕಾರಣ ಗೊತ್ತಿದೆ. ಗೃಹ ಸಚಿವ ಅಮಿತ್ ಶಾ ಅವರು ನಮ್ಮನ್ನು ಪ್ರಶ್ನೆ ಮಾಡಿರುವ ಕಾರಣ ನಾನು ಅವರಿಗೆ ಪ್ರಶ್ನೆ ಕೇಳುತ್ತೇನೆ. ಇಂತಹ ಪಕ್ಷದ ಜತೆ ಅವರು ಮೈತ್ರಿ ಮುಂದುವರಿಸುತ್ತಾರೋ, ಇಲ್ಲವೋ ಎಂಬ ನಿಲುವು ಪ್ರಕಟಿಸಬೇಕು. ನೀವು ಮಹಿಳೆಯರನ್ನು ಗೌರವಿಸುವುದಾಗಿ ಹೇಳುತ್ತೀರಿ. ನೀವು ಮಹಿಳೆರನ್ನು ಗೌರವಿಸುವುದೇ ಆದರೆ ಈ ಬಗ್ಗೆ ನಿಮ್ಮ ನಿಲುವು ತಿಳಿಸಿ. ಅದನ್ನು ಬಿಟ್ಟು ಕುಮಾರಸ್ವಾಮಿ, ದೇವೇಗೌಡ, ರೇವಣ್ಣ ಅವರು ಮಾಡುತ್ತಿರುವ ತಂತ್ರಗಾರಿಕೆ ನನಗೂ ಗೊತ್ತಿದೆ. ನಾನು ಆ ಸಂತ್ರಸ್ತ ಮಹಿಳೆಯರ ಘನತೆ, ಗೌರವದ ಬಗ್ಗೆ ಯೋಚಿಸುತ್ತಿದ್ದೇನೆ. ಈ ಪ್ರಕರಣ ನಮ್ಮ ರಾಜ್ಯವಲ್ಲದೆ, ದೇಶಕ್ಕೆ ಅಪಮಾನ ತಂದಿದೆ. ನಮ್ಮ ಸಂಸ್ಕೃತಿಗೆ ಧಕ್ಕೆ ತಂದಿದೆ” ಎಂದರು.


ನನ್ನ ವಿರುದ್ಧ ಪ್ರತಿಭಟನೆ ಮಾಡಿಸಲಿ, ಬೇಡ ಎಂದವರಾರು?


ಮುಖ್ಯಮಂತ್ರಿಗಳು ಡಿಸಿಎಂ ವಜಾಗೊಳಿಸಬೇಕು, ಅವರ ಮನೆ ಮುಂದೆ ಹೋಗಿ ಪ್ರತಿಭಟನೆ ಮಾಡಬೇಕು ಎಂದು ಕುಮಾರಸ್ವಾಮಿ ಅವರ ಆಗ್ರಹದ ಬಗ್ಗೆ ಕೇಳಿದಾಗ, “ಅವರು ಪ್ರತಿಭಟನೆ ಮಾಡಿಸಲಿ. ಈಗಲೇ ಮಾಡಲಿ, ಬೇಡ ಎಂದವರು ಯಾರು? ಕುಮಾರಸ್ವಾಮಿ ನೀನು ಯಾಕೆ ತಡ ಮಾಡುತ್ತಿದ್ದೀಯಾ? ಯಾವ ಕರೆ ನೀಡಬೇಕೋ ನೀಡಪ್ಪ. ಕರೆ ನೀಡದಂತೆ ನಿನ್ನನ್ನು ತಡೆದಿರುವವರು ಯಾರು? ನೀನು ಕರೆ ನೀಡಬೇಕು ಎಂದೇ ನಾನು ಹೇಳುತ್ತಿದ್ದೇನೆ” ಎಂದರು.


ಪೆನ್ ಡ್ರೈವ್ ಬಿಡುಗಡೆಗೆ ತಯಾರಿ ಎಲ್ಲಿ ನಡೆದಿದೆ ಎಂದು ಎಲ್ಲರಿಗೂ ಗೊತ್ತಿದೆ ಎಂದು ಕೇಳಿದಾಗ, “ಅವರಿಗೆ ಏನೇನು ಗೊತ್ತಿದೆ ಎಲ್ಲವನ್ನು ಹೇಳಲಿ. ಉಪ್ಪು ತಿಂದವರು ನೀರು ಕುಡಿಯಬೇಕು ಎಂದು ಒಪ್ಪಿಕೊಂಡಿದ್ದು ಇದೇ ಕುಮಾರಸ್ವಾಮಿ ಅಲ್ಲವೇ? ನಮ್ಮ ಕುಟುಂಬ ಬೇರೆ, ಅವರ ಕುಟುಂಬ ಬೇರೆ ಎಂದು ಈಗ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಈಗ ಜಾರಿಕೊಳ್ಳುತ್ತಿರುವುದೇಕೆ? ಆತ ನಿನ್ನ ಕುಟುಂಬವಲ್ಲ ಎಂದು ನಂಬಲು ಹಳ್ಳಿ ಜನ, ನಾಗರೀಕರು ದಡ್ಡರಾ?” ಎಂದು ಕೇಳಿದರು.


ರೇವಣ್ಣ ಪ್ರಕರಣವೊಂದರಲ್ಲಿ ಎ1 ಆಗಿದ್ದು ಅವರನ್ನು ಬಂಧಿಸಿ ಯಾಕೆ ತನಿಖೆ ನಡೆಸುತ್ತಿಲ್ಲ ಎಂದು ಕೇಳಿದಾಗ, “ತನಿಖೆ ಮಾಡುತ್ತಿರುವ ಪೊಲೀಸರು ಅವರ ಕೆಲಸ ಮಾಡುತ್ತಿದ್ದಾರೆ. ನಾನು ಅವರ ಕೆಲಸ ಮಾಡಲು ಆಗುವುದಿಲ್ಲ. ಕುಮಾರಸ್ವಾಮಿ, ಅಮಿತ್ ಶಾ ನನ್ನ ಹೆಸರು ಪ್ರಸ್ತಾಪ ಮಾಡಿರುವುದರಿಂದ ಹಾಗೂ ನಾನು ಸರ್ಕಾರದ ಭಾಗವಾಗಿರುವುದರಿಂದ ಸರಳವಾಗಿ ಸ್ಪಷ್ಟನೆ ನೀಡುತ್ತಿದ್ದೇನೆ. ನನಗೆ ವೈಯಕ್ತಿಕವಾಗಿ ಈ ಪ್ರಕರಣಕ್ಕೆ ಸಂಬಂಧವಿಲ್ಲ. ರಾಜ್ಯದ ಮಹಿಳೆಯರ ಗೌರವ, ಬದುಕು ರಕ್ಷಣೆಗೆ ನನ್ನ ಆದ್ಯತೆ. ಅವರು ಯಾವ ಭಯ, ಆಮಿಷಕ್ಕೆ ಒಳಗಾದರೊ ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ನಮ್ಮ ಮಹಿಳೆಯರಿಗೆ ರಕ್ಷಣೆ ನೀಡಬೇಕು ಎಂಬ ಎಚ್ಚರಿಕೆ ನೀಡುವ ಕೆಲಸ ಮಾಡಬೇಕು” ಎಂದರು.


ದೂರು ನೀಡಲು ಸಂತ್ರಸ್ತರು ಜೀವ ಬೆದರಿಕೆಯಿಂದ ಹಿಂಜರಿಯುತ್ತಿದ್ದಾರೆ ಎಂದು ಕೇಳಿದಾಗ, “ಸಂತ್ರಸ್ತೆಯರು ಮರ್ಯಾದೆಗೆ ಅಂಜುತ್ತಿದ್ದಾರೆ. ಇವರ ಚಟಕ್ಕೆ ಖಾಸಗಿ ವಿಚಾರವನ್ನು ವಿಡಿಯೋ ಮಾಡಿಕೊಂಡು ದೌರ್ಜನ್ಯ ಮಾಡಿರುವುದನ್ನು ಸಮಾಜ ಹಾಗೂ ಭಗವಂತ ಕ್ಷಮಿಸಲು ಸಾಧ್ಯವಿಲ್ಲ. ಅವರ ಕುಟುಂಬದವರು ಅದನ್ನು ಸಮರ್ಥಿಸಿಕೊಳ್ಳಬಹುದು” ಎಂದರು.


ಆರ್.ಅಶೋಕ್ ಬೆನ್ನೆಲುಬಿಲ್ಲದ ನಾಯಕ:


ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಆಗಿದ್ದಾಗ ಪ್ರಜ್ವಲ್ ಸಂಸದನಾಗಿದ್ದು ಎಂಬ ಆರ್ ಅಸೋಕ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಅಶೋಕ್ ಬೆನ್ನೆಲುಬಿಲ್ಲದ ನಾಯಕ. ಅವರು ವಿರೋಧ ಪಕ್ಷದ ನಾಯಕರು. ಅವರು ಈ ವಿಚಾರದಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಈಗ ಅವರು ನಿಮ್ಮ ಮೈತ್ರಿ ಪಕ್ಷದವರು.ನಿಮ್ಮ ಸ್ನೇಹಿತರ ಬಗ್ಗೆ ನೀನು ಈಗ ಮಾತನಾಡಬೇಕು.ನಿಮ್ಮ ಸ್ನೇಹ ಮುಂದುವರಿಸುತ್ತೀರೋ ಇಲ್ಲವೋ, ನಿಮ್ಮ ನಿಲುವು ತಿಳಿಸಿ. ಹಳೇ ವಿಚಾರ ಬೇಡ. ಜೆಡಿಎಸ್ ಪಕ್ಷದ ಕಾರ್ಯಕರ್ತರು ನಾಯಕರು ಈ ಕೃತ್ಯವನ್ನು ಧೈರ್ಯವಾಗಿ ಖಂಡಿಸಿದ್ದಾರೆ. ಆದರೆ ಅಶೋಕ್ ಏನು ಮಾತನಾಡಿದ್ದಾರೆ? ಅವರ ಪಕ್ಷದ ವಿಚಾರ, ಅವರೇ ನೋಡಿಕೊಳ್ಳುತ್ತಾರೆ ಎಂದು ಹೇಳುವ ಅಶೋಕ್ ಒಬ್ಬ ನಾಯಕನಾ? ಇಷ್ಟು ದಿನ ದೊಡ್ಡ ದೊಡ್ಡ ಮಾತುಗಳನ್ನಾಡುತ್ತಿದ್ದ ಶೋಭಕ್ಕಾ, ಸಿ.ಟಿ ರವಿ, ಅಶ್ವತ್ಥ್ ನಾರಾಯಣ, ಸುನೀಲ್, ಯತ್ನಾಳ್, ಬೊಮ್ಮಾಯಿ, ಶೆಟ್ಟರ್, ಜೋಷಿ ಅವರು ಎಲ್ಲಿದ್ದಾರೆ? ಬಿಜೆಪಿ ನಾಯಕರು ತಮ್ಮ ನಿಲುವು ತಿಳಿಸಬೇಕು. ಅವರು ಮೈತ್ರಿ ಮುಂದುವರಿಸುವುದಾದರೆ ಮುಂದುವರಿಸಲಿ, ನಾವು ಬೇಡ ಎನ್ನುವುದಿಲ್ಲ. ಆದರೆ ನಿಲುವು ತಿಳಿಸಲಿ” ಎಂದರು.


ವಯಸ್ಸಿಗೆ ಬರುವವರೆಗೂ ಮಾತ್ರ ಮಕ್ಕಳು ನಂತರ ಸ್ವಾತಂತ್ರ್ಯರು ಎಂಬುದು ಶಿವಕುಮಾರ್ ಅವರಿಗೆ ಗೊತ್ತಿಲ್ಲವೇ ಎಂಬ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಕೇಳಿದಾಗ, “ಅವರ ಬೋಧನೆ ನಮಗೆ ಮುಖ್ಯ. ಅವರ ಪಾಠವನ್ನು ಕೇಳಿ ತಿಳಿದುಕೊಳ್ಳುತ್ತೇವೆ” ಎಂದರು.


ನಾನು, ಪತ್ನಿ, ಮಗ ಸೊಸೆ, ಮೊಮ್ಮಗ ಮಾತ್ರ ನನ್ನ ಕುಟುಂಬ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಅವರಷ್ಟೇ ಅವರ ಕುಟುಂಬವಾದರೆ, ದೇವೇಗೌಡರನ್ನು ಯಾಕೆ ಬಿಟ್ಟರು?” ಎಂದು ಪ್ರಶ್ನಿಸಿದರು.


ಇದನ್ನೂ ಓದಿ: Rainwater Harvesting: ಎಸ್​ಟಿಪಿಯಿಂದ ಪ್ರತಿದಿನ 50,000 ಲೀಟರ್​ ಶುದ್ಧ ನೀರು ಉತ್ಪಾದನೆ; ಬೋಸಾನ್ ವೈಟ್ ವಾಟರ್ ಚಮತ್ಕಾರ


ಈ ವಿಚಾರ ಮೊದಲೇ ಗೊತ್ತಿತ್ತು ಎಂದು ಸಿ.ಟಿ ರವಿ ಅವರು ಹೇಳಿದ್ದು, ಈ ವಿಚಾರ ಮುಚ್ಚಿಹಾಕಲು ಮೈತ್ರಿ ಮಾಡಿಕೊಂಡಿದ್ದಾರಾ ಎಂದು ಕೇಳಿದಾಗ, “ದೇವರಾಜೇಗೌಡ, ಸಿ.ಟಿ ರವಿ ಸೇರಿದಂತೆ ಬಿಜೆಪಿ ನಾಯಕರಿಗೆ ಈ ವಿಚಾರ ಮೊದಲೇ ಗೊತ್ತಿತ್ತು. ಬಿಜೆಪಿ ಹೈಕಮಾಂಡ್ ನಾಯಕರಿಗೂ ಈ ವಿಚಾರವನ್ನು ಪತ್ರದ ಮೂಲಕ ತಿಳಿಸಲಾಗಿದೆ. ವಿಜಯೇಂದ್ರಗೆ ಕಾಗದ ಬರೆದರಂತೆ ಅದನ್ನು ಅವರು ಓದಲಿಲ್ಲವಂತೆ, ಹೈಕಮಾಂಡ್ ನಾಯಕರಿಗೆ ಇ- ಮೇಲೆ ಮಾಡಿದರಂತೆ ಅದು ಅವರನ್ನು ತಲುಪಿಲ್ಲವಂತೆ. ಕುಮಾರಸ್ವಾಮಿ ಅವರು ಈ ಬಗ್ಗೆ ಮಾಧ್ಯಮದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಇದನ್ನು ನಾನು ನೋಡಿದ್ದೇನೆ” ಎಂದರು.


ಈ ವಿಚಾರ ರಾಜಕೀಯವಾಗಿ ಚರ್ಚೆಯಾಗುತ್ತಿದ್ದು, ರಾಜಕೀಯ ಮಧ್ಯೆ ಸಂತ್ರಸ್ತರಿಗೆ ನ್ಯಾಯ ಸಿಗುತ್ತಾ ಎಂದು ಕೇಳಿದಾಗ, “ನೀವು ಕುಮಾರಣ್ಣ ಅವರ ಉಪ್ಪು ತಿಂದವರು, ನೀರು ಕುಡಿಯಬೇಕು ಎಂಬ ಮಾತನ್ನು ಗಮನಿಸಿ. ಅವರಿದ್ದಾರೆ, ಜತೆಗೆ ನಾರಿ ಶಕ್ತಿಗೆ ರಕ್ಷಣೆ ನೀಡುತ್ತೇವೆ ಎನ್ನುವ ಅವರ ಮೈತ್ರಿ ಸ್ನೇಹಿತರಿದ್ದಾರೆ” ಎಂದರು.


ಚುನಾವಣೆ ಪ್ರಚಾರದ ಬಗ್ಗೆ ಕೇಳಿದಾಗ, “ಎರಡನೇ ಹಂತದ ಚುನಾವಣೆ ಪ್ರಚಾರಕ್ಕೆ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರು ರಾಜ್ಯಕ್ಕೆ ಆಗಮಿಸುತ್ತಿದ್ದು, ನಾನು ಹಾಗೂ ಮುಖ್ಯಮಂತ್ರಿಗಳ ಪ್ರವಾಸ ಸಿದ್ಧಪಡಿಸಲಾಗುತ್ತಿದೆ. ನಮ್ಮ ಸಚಿವರುಗಳನ್ನು ಜಿಲ್ಲೆಗಳಿಗೆ ಉಸ್ತುವಾರಿ ನೀಡಲಾಗಿದೆ. ಇನ್ನು ಇಂದು ಬಿಜೆಪಿಯವರು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಅನುದಾನ ವಿಚಾರವಾಗಿ ಸುಳ್ಳು ಜಾಹೀರಾತು ನೀಡಿದ್ದಾರೆ. ಬಿಜೆಪಿ ಸುಳ್ಳಲ್ಲೇ ಮುಳುಗಿದೆ ಎಂದು ಜನರ ಮುಂದೆ ಅಂಕಿ ಅಂಶಗಳ ಸಮೇತ ಇಡುತ್ತೇವೆ” ಎಂದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.