ವಿಶ್ವಾಸ ಮತದಲ್ಲಿ ಪಾಲ್ಗೊಳ್ಳುವುದಿಲ್ಲವೆಂದ ಬಿಎಸ್ಪಿ ಶಾಸಕ ಎನ್.ಮಹೇಶ್
ಸೋಮವಾರದಂದು ನಡೆಯುವ ವಿಶ್ವಾಸಮತಯಾಚನೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ರಾಜ್ಯದಲ್ಲಿನ ಏಕೈಕ ಬಿಎಸ್ಪಿ ಶಾಸಕ ಎನ್.ಮಹೇಶ್ ಹೇಳಿದ್ದಾರೆ. ಇದರಿಂದಾಗಿ ಸಮ್ಮಿಶ್ರ ಸರ್ಕಾರ ಈಗ ತೀವ್ರ ಸಂಕಷ್ಟಕ್ಕೆ ಸಿಲುಕಿದೆ.
ಬೆಂಗಳೂರು: ಸೋಮವಾರದಂದು ನಡೆಯುವ ವಿಶ್ವಾಸಮತಯಾಚನೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ರಾಜ್ಯದಲ್ಲಿನ ಏಕೈಕ ಬಿಎಸ್ಪಿ ಶಾಸಕ ಎನ್.ಮಹೇಶ್ ಹೇಳಿದ್ದಾರೆ. ಇದರಿಂದಾಗಿ ಸಮ್ಮಿಶ್ರ ಸರ್ಕಾರ ಈಗ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಬಿಎಸ್ಪಿ ನಾಯಕಿ ಮಾಯಾವತಿಯವರ ಸೂಚನೆ ಮೇರೆಗೆ ತಾವು ನಾಳೆ ನಡೆಯಲಿರುವ ವಿಶ್ವಾಸ ಮತಯಾಚನೆಯಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಅವರು ಹೇಳಿದ್ದಾರೆ.
ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ನೀಡುವ ಮೂಲಕ ಸಚಿವ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದ ಮಹೇಶ್ ಅವರು ಪ್ರಾಥಮಿಕ ಮತ್ತು ಫ್ರೌಡ ಶಿಕ್ಷಣ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದರು.ಆದರೆ ಕೆಲವು ತಿಂಗಳ ನಂತರ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈಗ ವಿಶ್ವಾಸ ಮತಯಾಚನೆ ವೇಳೆ ದೂರ ಸರಿಯುವ ಮೂಲಕ ದೋಸ್ತಿ ಸರ್ಕಾರಕ್ಕೆ ಶಾಕ್ ನೀಡಿದ್ದಾರೆ.
ಈಗಾಗಲೇ ಬಂಡಾಯ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈನಲ್ಲಿಯೇ ಟೀಕಾಣಿ ಹೂಡಿದ್ದಾರೆ.ಈ ಹಿನ್ನಲೆಯಲ್ಲಿ ಈಗ ಸರ್ಕಾರ ವಿಶ್ವಾಸ ಮತದ ಕೊರತೆಯನ್ನು ಎದುರಿಸುತ್ತಿದೆ ಈಗ ಮಹೇಶ್ ಅವರು ನಾಳೆ ವಿಶ್ವಾಸ ಮತದಲ್ಲಿ ಪಾಲ್ಗೊಳ್ಳದೆ ಇರಲು ನಿರ್ಧರಿಸಿರುವುದರಿಂದ ಸರ್ಕಾರವನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ ಎನ್ನಬಹುದು. ಶುಕ್ರವಾರದಂದು ರಾಜ್ಯಪಾಲರು ಸಿಎಂ ಕುಮಾರಸ್ವಾಮಿಯವರಿಗೆ ಎರಡು ಬಾರಿಗೆ ಪತ್ರವನ್ನು ಬರೆದು ವಿಶ್ವಾಸ ಮತ ಸಾಬೀತುಪಡಿಸಲು ಕೋರಿದ್ದರು. ಆದರೆ ಮುಖ್ಯಮಂತ್ರಿಗಳು ಮಾತ್ರ ಎರಡು ನಿರ್ದೇಶನಗಳನ್ನು ಕಡೆಗಣಿಸಿದ್ದರು.
ಈಗ ಸದನದ ಕಾರ್ಯಚಟುವಟಿಕೆಯಲ್ಲಿ ರಾಜ್ಯಪಾಲರ ಹಸ್ತಕ್ಷೇಪ ಮತ್ತು ವಿಪ್ ಅಧಿಕಾರದ ವಿಚಾರವಾಗಿ ಈಗ ಸುಪ್ರೀಂಕೋರ್ಟ್ ಗೆ ಮೊರೆ ಹೋಗಲಾಗಿದೆ. ಈ ಹಿನ್ನಲೆಯಲ್ಲಿ ಮುಂದಿನ ರಾಜ್ಯ ರಾಜಕೀಯ ಬೆಳವಣಿಗೆಗೆ ಸೋಮವಾರದಂದೇ ಸ್ಪಷ್ಟ ಚಿತ್ರಣ ದೊರೆಯಲಿದೆ ಎನ್ನಲಾಗಿದೆ.