ಬೆಂಗಳೂರು: ನೈಸ್ ಯೋಜನೆಯನ್ನು ರಾಜ್ಯ ಸರಕಾರ ವಶಕ್ಕೆ ಪಡೆಯಬೇಕು ಆಗ್ರಹಪಡಿಸಿರುವ ಮಾಜಿ ಪ್ರಧಾನಿಗಳು ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ.ದೇವೇಗೌಡರು; ಆ ಕಂಪನಿ ವಶದಲ್ಲಿರುವ 13404 ಎಕರೆಯಷ್ಟು ರೈತರ ಭೂಮಿಯನ್ನು ಸರಕಾರ ಮರು ವಶಪಡಿಸಿಕೊಳ್ಳಬೇಕು ಎಂದರು.


COMMERCIAL BREAK
SCROLL TO CONTINUE READING

ಅಲ್ಲದೆ; ಈ ಬಗ್ಗೆ ತಾವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರೂ ಅವರು ಈವರೆಗೆ ಯಾವುದೇ ಕ್ರಮ ವಹಿಸಿಲ್ಲ ಎಂದು ಮಾಜಿ ಪ್ರಧಾನಿಗಳು ಅತೀವ ಬೇಸರ ವ್ಯಕ್ತಪಡಿಸಿದರು.


ಸಿದ್ದರಾಮಯ್ಯ ಅವರಿಗೆ ಏನು ಕಷ್ಟ ಇದೆಯೋ ಗೊತ್ತಿಲ್ಲ. ಅವರು ಬಡವರ ಪರ ಮಾತನಾಡುತ್ತಾರೆ. ಆ ಯೋಜನೆಯಲ್ಲಿ ಇಷ್ಟೊಂದು ಅಕ್ರಮ ಆಗಿದ್ದರೂ, ಬಡವರ ಭೂಮಿ ಲೂಟಿ ಹೊಡೆಯಲಾಗಿದ್ದರೂ ಏನು ಕ್ರಮ ತೆಗೆದುಕೊಂಡಿಲ್ಲ. ಬಡವರ ಪರ ಮಾತಾಡುವ ಸಿಎಂ ಯಾಕೆ ಕ್ರಮ ತೆಗೆದುಕೊಂಡಿಲ್ಲ ಎಂದು ಮಾಜಿ ಪ್ರಧಾನಿಗಳು ಅತ್ಯಂತ ಖಾರವಾಗಿ ಪ್ರಶ್ನಿಸಿದರು.


ಇದನ್ನೂ ಓದಿ: ಲಕ್ಷದ್ವೀಪದಲ್ಲಿ ಪ್ರಧಾನಿ ಮೋದಿ ಇನ್‌ ಕೂಲ್‌ ಮೂಡ್‌..! ಫೋಟೋಸ್‌ ನೋಡಿ


ಸಿದ್ದರಾಮಯ್ಯ ಅವರು ಎಷ್ಟು ವರ್ಷ ಆಳಿದರೂ ಈ ಕಪ್ಪುಚುಕ್ಕೆಯಿಂದ ಹೊರೆಗೆ ಬರಲು ಸಾಧ್ಯವಿಲ್ಲ. ಇದರ ವಿರುದ್ದ ಅವರು ಕ್ರಮ ತೆಗೆದುಕೊಳ್ಳದೇ ಹೋದರೆ ಅವರ  ರಾಜಕೀಯ ಜೀವನಕ್ಕೆ ಇದೇ ಕಪ್ಪುಚುಕ್ಕೆಯಾಗಿ ಉಳಿದು ಹೋಗುತ್ತದೆ ಎಂದು ದೇವೇಗೌಡರು ಅಭಿಪ್ರಾಯಪಟ್ಟರು.


ಕೂಡಲೇ ಸರಕಾರ ನೈಸ್ ಯೋಜನೆಯನ್ನು ತನ್ನ ವಶಕ್ಕೆ ಪಡೆಯಬೇಕು ಎಂದು ಆಗ್ರಹಪಡಿಸಿದರು ಹಾಗೂ ಈ ವಿಷಯದಲ್ಲಿ ರೈತರ ಪರ ನಿಲ್ಲುವುದಕ್ಕೆ ಮೀನಾಮೇಷ ಎನಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.


ನೈಸ್ ರಸ್ತೆ ಯೋಜನೆ ವಿಷಯ ಎಲ್ಲರಿಗೂ ಗೊತ್ತಿದೆ. ಅದರಲ್ಲಿ ಏನೇನು ನಡೆದಿದೆ ಎನ್ನುವುದೂ ತಿಳಿದಿದೆ. ಬಡವರಿಗೆ ಇದರಿಂದ ಅನ್ಯಾಯ ಆಗಿದೆ. ನಮ್ಮ ಪಕ್ಷ ಇದರ ವಿರುದ್ದ ದನಿ ಎತ್ತಿದೆ. ವಿಧಾನಸಭೆಯಲ್ಲೂ ಈ ಬಗ್ಗೆ ಸುದೀರ್ಘ ಚರ್ಚೆ ಆಗಿದೆ. ವಿಧಾನಸಭೆಯಲ್ಲಿ ಟಿ.ಬಿ.ಜಯಚಂದ್ರ ನೇತೃತ್ವದಲ್ಲಿ ಸದನ ಸಮಿತಿ ನೇಮಕ ಮಾಡಲಾಗಿತ್ತು. ಆ ಸದನ ಸಮಿತಿ ವರದಿ ಕೊಟ್ಟಿದೆ. ಎಷ್ಟು ಅಕ್ರಮ ಮಾಡಿದೆ, ಈ ಯೋಜನೆಯನ್ನು ಸರ್ಕಾರ ವಶಪಡಿಸಿಕೊಳ್ಳಬೇಕು ಅಂತ ವರದಿ ಕೊಟ್ಟಿದೆ. ಆದರೆ ಸರ್ಕಾರ ಅಂತಿಮ ನಿರ್ಧಾರ ಮಾಡಿಲ್ಲ. ಇದಕ್ಕೆ ಕಾರಣ ಗೊತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.


ಸಿಎಂಗೆ ಬರೆದಿದ್ದ ಪತ್ರ ಬಿಡುಗಡೆ


2023 ಅಕ್ಟೋಬರ್ 19 ರಂದು ನಾನು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದೆ. ನೈಸ್ ವಿಚಾರವಾಗಿ ಕ್ರಮಕ್ಕೆ ಆಗ್ರಹ ಮಾಡಿದ್ದೆ. ಈ ಬಗ್ಗೆ ಖುದ್ದು ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದೇನೆ ಎಂದು ಮಾಹಿತಿ ನೀಡಿದ ಮಾಜಿ ಪ್ರಧಾನಿಗಳು, ತಾವು ಬರೆದಿದ್ದ ಪತ್ರವನ್ನು ಮಾಧ್ಯಮಗೋಷ್ಟಿಯಲ್ಲಿ ಬಿಡುಗಡೆ ಮಾಡಿದರು.


13404 ಎಕರೆಯಷ್ಟು ರೈತರ ಭೂಮಿಯನ್ನು ನೈಸ್ ವಶಪಡಿಸಿಕೊಂಡಿದೆ. ಅದನ್ನು ಸರಕಾರ ಮರು  ವಶಪಡಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಅವರಿಗೆ  ಪತ್ರ ಬರೆದಿದ್ದೆ. ಈ ಯೋಜನೆಯ ಮೌಲ್ಯ 7 ಸಾವಿರ ಕೋಟಿ ಅಂತ ಸದನ ಸಮಿತಿಯೇ ವರದಿ ಕೊಟ್ಟಿದೆ. ಅಧಿಕಾರಿಗಳೇ ಈ ವರದಿ ಕೊಟ್ಟಿದ್ದಾರೆ. 


ಹಿಂದೆ ಸೋನಿಯಾ ಗಾಂಧಿ ಅವರ ಬಳಿಯು ಈ ಯೋಜನೆಯ ಅಕ್ರಮಗಳ ಚರ್ಚೆ ಆಗಿದೆ. ಧರ್ಮಸಿಂಗ್ ಅವರ ಕಾಲದಲ್ಲಿಯೂ ಚರ್ಚೆ ಆಗಿತ್ತು. ಆಗ ಸೋನಿಯಾಗಾಂಧಿ ಅವರು ಧರ್ಮಸಿಂಗ್ ಅವರಿಗೆ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದ್ದರು ಎಂದು ಮಾಜಿ ಪ್ರಧಾನಿಗಳು ಹೇಳಿದರು.


ನಾನು ಜೀವನದಲ್ಲಿ ಮಾಡಿದ ಒಂದೇ ಒಂದು ತಪ್ಪು


ನಾನು ಜೀವನದಲ್ಲಿ ಒಂದೇ ಒಂದು ತಪ್ಪು ಮಾಡಿದೆ. ಒಳ್ಳೆಯ ರಸ್ತೆ ಆಗುತ್ತದೆ ಅಂತ ಮಹಾತ್ವಕಾಂಕ್ಷೆಯಿಂದ ಮಾಡಿದೆ. ಮೈಸೂರಿಗೆ ಒಂದು ಗಂಟೆಯಲ್ಲಿ ಹೋಗಬಹುದು ಅಂತ ಇದನ್ನು ಮಾಡಿದೆ. ಆದರೆ‌ ದೊಡ್ಡ ಪೆಟ್ಟು ಕೊಟ್ಟರು ಮಹಾನುಭಾವರು. ಸಿದ್ದರಾಮಯ್ಯನವರು ಇದನ್ನು ಸರಿ ಮಾಡಲಿ ಎಂದ ಮಾಜಿ ಪ್ರಧಾನಿಗಳು; ನಮ್ಮ ಪಕ್ಷ ನೈಸ್ ವಿಷಯದಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆ ಇಲ್ಲ. ನಾನು ನಮ್ಮ ಪಕ್ಷ, ರೈತರು, ಬಡವರ ಪರ ಹೋರಾಟ ಮಾಡುತ್ತೇವೆ ಎಂದು ಅವರು ನೋವು ವ್ಯಕ್ತಪಡಿಸಿದರು.


ಯಡಿಯೂರಪ್ಪ ಅವರ ಅವಧಿಯಲ್ಲಿ ಹೆಚ್ಚುವರಿ ಭೂಮಿ ಕೊಡಲು ಆಗುವುದಿಲ್ಲ ಎಂದು ಅಫಿಡವಿಟ್ ಸಲ್ಲಿಸಲಾಗಿತ್ತು. ನೈಸ್ ಯೋಜನೆಗೆ ಹೆಚ್ಚುವರಿ ಭೂಮಿ ಕೊಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಗೆ ಯಡಿಯೂರಪ್ಪ ಅವರ ಸರಕಾರ ಪ್ರಮಾಣ ಪತ್ರ (ಅಫಿಡವಿಟ್) ಸಲ್ಲಿಸಿದ್ದರು. ಈ ಯೋಜನೆ ದೊಡ್ಡ ವಂಚನೆ ಎಂದು ಯಡಿಯೂರಪ್ಪ ಅವರೇ ಅಫಿಡವಿಟ್ ಹಾಕಿದ್ದರು. ಕುಮಾರಸ್ವಾಮಿ ಈಗಾಗಲೇ ಬಿಜೆಪಿ ಜತೆ ಚರ್ಚೆ ಮಾಡಿದ್ದಾರೆ. ಮುಂದಿನ ಅಧಿವೇಶನದಲ್ಲಿ ಚರ್ಚೆ ಮಾಡುತ್ತಾರೆ ಎಂದು ದೇವೇಗೌಡರು ವಿವರಿಸಿದರು.


ಡಿಸಿಎಂ ವಿರುದ್ಧ ಕಿಡಿ


ಈ ಸರಕಾರ ಪಂಚರಾಜ್ಯ ಚುನಾವಣೆಯಲ್ಲಿ ಎಷ್ಟು ಹಣ ಎಲ್ಲಿಗೆ ತೆಗೆದುಕೊಂಡು ಹೋಗಿದೆ ಎನ್ನುವ ಮಾಹಿತಿ ಎಲ್ಲರಿಗೂ ಗೊತ್ತಿದೆ. ಇದು ಕರ್ನಾಟಕ ಜನರ ಸಂಪತ್ತು. ಡಿಸಿಎಂ ಅವರ ಉದ್ದಟತ, ಅವರು ಎಲೆಲ್ಲಿ ಹೋಗಿದ್ದಾರೆ. ಎಷ್ಟು ಹಣ ಸಾಗಿಸಿದ್ದಾರೆ. ಎಷ್ಟು ಹಣವನ್ನು ಚುನಾವಣೆ ಆಯೋಗ ಸೀಜ್ ಮಾಡಿದೆ. ಈ ಹಣ ಹೋಗಿರೋದು ಬೆಂಗಳೂರಿನಿಂದ ಎನ್ನುವುದು ಜನರಿಗೆ ಗೊತ್ತಿದೆ ಎಂದು ಮಾಜಿ ಪ್ರಧಾನಿಗಳು ಕಿಡಿಕಾರಿದರು.


ನೈಸ್ ಮಾತ್ರ ಅಲ್ಲ. ಬೆಂಗಳೂರಿನ ಎಲ್ಲಾ ಸಂಸ್ಥೆಗಳು ಹಾಗೂ ಜಲ ಸಂಪನ್ಮೂಲ ಇಲಾಖೆ ಅವರ ಬಳಿಯೇ ಇದೆ. ಏನೇನು ಆಗುತ್ತಿದೆ ಎಂದು ಹೇಳಿದರೆ ನಾಚಿಕೆ ಆಗುತ್ತದೆ. ದೇಶದ ಬಗ್ಗೆ, ಬಡವರ ಬಗ್ಗೆ ಉಪದೇಶ ಮಾಡುವ ಸಿಎಂ ಅವರು ಈ ಯೋಜನೆ ವಿರುದ್ಧ ಯಾಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ? ನಾನು ಬಡವರ ‌ಪರ ಅಂತಾರೆ. ಅಹಿಂದಾ ಅಂತಾರೆ. ಇದನ್ನು ಯಾಕೆ ಇವರು ಮಾಡುತ್ತಿಲ್ಲ ಎಂದು ಮಾಜಿ ಪ್ರಧಾನಿಗಳು ಆಕ್ರೋಶ ವ್ಯಕ್ತಪಡಿಸಿದರು.


ಇದನ್ನೂ ಓದಿ: ನಾಳೆಯೇ L-1 ಪಾಯಿಂಟ್‌ ತಲುಪಲಿದೆ ಆದಿತ್ಯ : ಸೂರ್ಯನ ಮೇಲೂ ರಾರಾಜಿಸುವುದು ಭಾರತ ಧ್ವಜ


ಸೇಡಿನ ರಾಜಕೀಯ ಬೇಡ


ತೆಲಂಗಾಣದಲ್ಲಿ ಮುಸ್ಲಿಂಮರಿಗೆ ಬಜೆಟ್ ಘೋಷಣೆ ಮಾಡಿದ್ದಾರೆ. ಕುಮಾರಸ್ವಾಮಿ ಜತೆ ಮಂತ್ರಿ ಅಗಿದ್ದೋರು ನಿತ್ಯ ಏನೋ ಮಾತಾಡ್ತಾರೆ‌. ಟಿಪ್ಪು ಬಿಟ್ಟು ಬೇರೆ ಏನು ಅಂತ ಮಾತಾಡ್ತಾರೆ ಅವರು; ನಾವು ರಾಮನನ್ನು ಪೂಜೆ ಮಾಡುತ್ತೇವೆ. ಅದರಲ್ಲಿ ನಮಗೇನು ಸಂಕೋಚ ಇಲ್ಲ. ನಮಗೆ ಭಕ್ತಿ ಇದೆ. ದೇವರಲ್ಲಿ ನಂಬಿಕೆ ಇದೆ. ರಾಮ ಬಗ್ಗೆ ಪೂಜೆ ಮಾಡಿದಾಕ್ಷಣ ಬೇರೆ ಸಮುದಾಯಕ್ಕೆ ಅಪಾಯ ಆದರೆ ನಾವು ಅಧಿಕಾರದಲ್ಲಿ ‌ಇದ್ದರೆ ಅದಕ್ಕೆ ರಕ್ಷಣೆ ಕೊಡೋದು ನಮ್ಮ ಜವಾಬ್ದಾರಿ ಎಂದರು.


ಈದ್ಗಾ ಗಲಾಟೆಯಲ್ಲಿ ನನ್ನ ಕೆಲಸ ನಾನು ಮಾಡಿದ್ದೇನೆ. ನಾನು ದರ್ಗಾಗೆ ಹೋಗಿದ್ದೇನೆ, ತಿರುಪತಿಗೆ ಹೋಗಿದ್ದೇನೆ. ಬಿಜೆಪಿ ಜತೆ ಹೋದಾಗ ಸೇಡಿನ ರಾಜಕೀಯದ ಸರಿಯಲ್ಲ ಎಂದು ಕಾಂಗ್ರೆಸ್ ಪಕ್ಷಕ್ಕೆ ನಾವು ಹೇಳಿದ್ದೇವೆ. ಎನ್ ಡಿಎ ಮಿತ್ರಪಕ್ಷವಾಗಿ ನಮ್ಮ ಕೆಲಸ ನಾವು ಮಾಡುತ್ತಿದ್ದೇವೆ. ನಮ್ಮ ಮಿತ್ರಪಕ್ಷದ ಬಗ್ಗೆ ಮಾತನಾಡುತ್ತಿದ್ದೇವೆ. ಮುಂದೆಯೂ ಹೇಳುತ್ತೇವೆ ಎಂದು ಮಾಜಿ ಪ್ರಧಾನಿಗಳು ಸ್ಪಷ್ಟ ಮಾತುಗಳಲ್ಲಿ ಹೇಳಿದರು.ಹಿಂದೂ ಕಾರ್ಯಕರ್ತ ಶ್ರೀಕಾಂತ್ ಪೂಜಾರಿ ಅವರ ಮೇಲೆ ಹಿಂದಿನ ಕೇಸ್ ರೀ ಓಪನ್ ಮಾಡಿ ಸೇಡು ತೀರಿಸಿಕೊಳ್ಳಲು ಹೊರಟಿದ್ದಾರೆ. ಕಾಂಗ್ರೆಸ್ ನವರು ಇದು ಸೇಡಿನ ರಾಜಕೀಯ ಮಾಡಿದ್ದಾರೆ. NDA ಜತೆ ಇರೋ ನಾವು ಈ ಸಮಯದಲ್ಲಿ ನಮ್ಮ ಅಭಿಪ್ರಾಯ ಹೇಳುವ ಸ್ವಾತಂತ್ರ್ಯ ಇದೆ. ಸೇಡಿನ ರಾಜಕೀಯ ಮೂಲಕ ಇವರು ತುಳಿಯುವ ಕೆಲಸ ಮಾಡುತ್ತಿದ್ದಾರೆ. ಇಂಥ ಸಮಯದಲ್ಲಿ ನಾವು ಮಾತನಾಡುವ ಅವಶ್ಯಕತೆ ಇದೆ ಎಂದು ಮಾಜಿ ಪ್ರಧಾನಿಗಳು ಹೇಳಿದರು.


60 ವರ್ಷ ರಾಜಕೀಯ ಮಾಡಿಕೊಂಡು ಬಂದಿದ್ದೇನೆ. ನನಗೆ ಇವರು ಹೇಳ್ತಾರೆ. ಇವತ್ತು ಹೇಳುತ್ತಿದ್ದೇನೆ, ಕರ್ನಾಟಕದಲ್ಲಿ ಇವರು ಅಂತ್ಯ ಕಾಣುತ್ತಿದ್ದಾರೆ. ನಾವು ಅವರನ್ನು ನಾವು ಸೋಲಿಸಿಯೇ ಸೋಲಿಸುತ್ತೇವೆ. ಈ ರಾಜ್ಯದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಅಂತ್ಯ ಕಾಣುತ್ತದೆ ಎಂದು ಮಾಜಿ ಪ್ರಧಾನಿಗಳು ಭವಿಷ್ಯ ನುಡಿದರು.


ಅಲ್ಲಿ ಮೋದಿ ಅವರು ಶ್ರೀರಾಮ ಅಂತಾರೆ. ಉಪವಾಸ, ನದಿಸ್ನಾನ, ತಣ್ಣೀರು ಸ್ನಾನ ಇವೆಲ್ಲ ಮಾಡುತ್ತಿದ್ದಾರೆ. ಇಲ್ಲಿ ಇವರಿಗೆ ಸಿದ್ದರಾಮ ಮಾತ್ರ. ಸಿದ್ದರಾಮ ಹೆಸರಿನಲ್ಲಿ NDA ಸೋಲಿಸಿ 20 ಸೀಟು ಗೆಲ್ಲುತ್ತೇವೆ ಅಹಂನಿಂದ  ಇವೆಲ್ಲ ಸೃಷ್ಟಿ ಮಾಡ್ತಿದ್ದಾರೆ. 20 ಸೀಟು ಗೆಲ್ಲೋದು ಎಂದರೆ ಕನಸು ಮಾತ್ರ. ಈ‌ ಬಾರಿ ಮೋದಿ ಅವರ ನೇತೃತ್ವದಲ್ಲಿ ಕರ್ನಾಟಕದಲ್ಲಿ ಎಲ್ಲರ ನಿರೀಕ್ಷೆ ಮೀರಿ‌ ಜನರು ಎನ್ ಡಿಎ  ಮೈತ್ರಿಗೆ ಅಭೂತಪೂರ್ವ ತೀರ್ಪು ಕೊಡುತ್ತಾರೆ ಎಂದು ಮಾಜಿ ಪ್ರಧಾನಿಗಳು ವಿಶ್ವಾಸ ವ್ಯಕ್ತಪಡಿಸಿದರು.


ಚಿನ್ನದ ಕತ್ತಿ ರಾಮನಿಗೆ ಅರ್ಪಣೆ


ಹಿಂದೆ ಪ್ರಧಾನಿ ಆಗಿದ್ದಾಗ ನನಗೆ ಒಮನ್ ದೇಶದಲ್ಲಿ ಚಿನ್ನದ ಕತ್ತಿಯನ್ನು ಉಡುಗೋರೆಯಾಗಿ ನೀಡಿದ್ದರು. ಅದನ್ನು ತೆರಿಗೆ ಕಟ್ಟಿ ಬೆಂಗಳೂರಿಗೆ ತರಿಸಿಕೊಂಡು ಶ್ರೀ ಕಾರಂಜಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿರುವ ಶ್ರೀರಾಮ ದೇವರಿಗೆ ಅರ್ಪಿಸಿದೆ. ಆ ಕತ್ತಿಯನ್ನು ನಾನೇ ಇಟ್ಟುಕೊಳ್ಳಬಹುದಿತ್ತು. ಆದರೆ, ದೈವಸೇವೆ ನಮ್ಮ ನಂಬಿಕೆ. ಅದನ್ನೇ ಮಾಡಿದೆ ಎಂದು ಮಾಜಿ ಪ್ರಧಾನಿಗಳು ಹೇಳಿದರು.


ಮಾಜಿ ಸಿಎಂ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾದ ಹೆಚ್.ಡಿ.ಕುಮಾರಸ್ವಾಮಿ, ಕೋರ್ ಕಮಿಟಿ ಅಧ್ಯಕ್ಷರಾದ ಜಿ.ಟಿ.ದೇವೇಗೌಡ, ಮಾಜಿ ಸಚಿವ ಬಂಡೆಪ್ಪ ಕಾಶಂಪೂರ್, ಮಾಜಿ ಸಂಸದ ಕುಪೆಂದ್ರ ರೆಡ್ಡಿ, ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್. ಎಂ.ರಮೇಶ್ ಗೌಡ, ಮಾಜಿ ಶಾಸಕರಾದ ಮಹದೇವು, ಅಶ್ವಿನ್ ಕುಮಾರ್, ಜೆಡಿಎಸ್ ರಾಜ್ಯ ಕಾನೂನು ಘಟಕದ ಅಧ್ಯಕ್ಷ ಎ.ಪಿ.ರಂಗನಾಥ್ ಮುಂತಾದವರು ಉಪಸ್ಥಿತರಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.