ನೀರಾವರಿ ಅಭಿವೃದ್ಧಿ, ಕೆರೆಗಳಿಗೆ ನೀರು ತುಂಬಿಸುವುದಕ್ಕೆ ಮೊದಲ ಆದ್ಯತೆ: ಡಿಸಿಎಂ ಡಿ.ಕೆ ಶಿವಕುಮಾರ್
ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಬೃಹತ್ ನೀರಾವರಿ ಹಾಗೂ ಬೆಂಗಳೂರು ಅಭಿವೃದ್ದಿ ವಿಚಾರವಾಗಿ ಕೇಳಿದ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಮಂಗಳವಾರ ಉತ್ತರಿಸಿದರು.
ಬೆಂಗಳೂರು: ನೀರಾವರಿ ಕ್ಷೇತ್ರದ ಅಭಿವೃದ್ಧಿ, ಕೆರೆ ಮತ್ತು ಕಾಲುವೆಗಳಿಗೆ ನೀರು ಹರಿಸುವುದಕ್ಕೆ ಮೊದಲ ಆದ್ಯತೆ. ನಂತರ ರಸ್ತೆ ಅಭಿವೃದ್ದಿಗೆ ಒತ್ತು ನೀಡಲಾಗುವುದು. ಈ ವಿಚಾರವಾಗಿ ಮುಖ್ಯಮಂತ್ರಿಗಳ ಜತೆ ಚರ್ಚೆ ನಡಿಸಿದ್ದೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.
ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಬೃಹತ್ ನೀರಾವರಿ ಹಾಗೂ ಬೆಂಗಳೂರು ಅಭಿವೃದ್ದಿ ವಿಚಾರವಾಗಿ ಕೇಳಿದ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಮಂಗಳವಾರ ಉತ್ತರಿಸಿದರು.
ಇದನ್ನೂ ಓದಿ: ಪ್ರೇಮ ಪಕ್ಷಿಗಳೇ ಎಚ್ಚರ !Valentine's Day ಗುಂಗಿನಲ್ಲಿ ಈ ಸ್ಕ್ಯಾಮ್ ಗೆ ಬಲಿಯಾಗದಿರಿ!
ಸಕಲೇಶಪುರ ಶಾಸಕ ಸಿಮೆಂಟ್ ಮಂಜು ಅವರು ಯಗಚಿ ನದಿ ಆಣೆಕಟ್ಟಿನ ಅಭಿವೃದ್ಧಿ ವಿಚಾರವಾಗಿ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದ್ದು ಹೀಗೆ;
ಯಗಚಿ ನದಿ ಅಣೆಕಟ್ಟಿನ ಕಾಲುವೆಗಳ ಅಭಿವೃದ್ದಿ ಬಗ್ಗೆ ಅಧಿಕಾರಿಗಳು ವರದಿ ನೀಡಿದ್ದು, ಈಗಾಗಲೇ 5.5 ಕಿ.ಮೀ.ನಷ್ಟು ಮಣ್ಣನ್ನು ತೆಗೆದಿದ್ದು, 1.5 ಕಿ.ಮೀ.ನಷ್ಟು ಕಾಮಗಾರಿ ಭೂಸ್ವಾಧೀನದ ವಿಚಾರವಾಗಿ ಸ್ಥಗಿತಗೊಂಡಿದೆ. ಎತ್ತಿನಹೊಳೆ ಯೋಜನೆಗೆ ಮಹತ್ವ ನೀಡಿದಂತೆ ಯಗಚಿ ಯೋಜನೆಗೂ ಮೊದಲ ಆದ್ಯತೆ ನೀಡುತ್ತೇವೆ ಎಂದರು.
ಚಿಕ್ಕನಾಯಕನಹಳ್ಳಿ ಶಾಸಕರಾದ ಸುರೇಶ್ ಬಾಬು ಅವರ “ಭದ್ರಾ ಮೇಲ್ದಂಡೆ ಯೋಜನೆಯ ಮಂದಗತಿ ಕಾಮಗಾರಿಯ ಬಗ್ಗೆ ಪ್ರಶ್ನೆ ಕೇಳಿದಾಗ, “ಭದ್ರಾ ಮೇಲ್ದಂಡೆ ಯೋಜನೆಯ ಅಡಿ ರೂ. 856 ಕೋಟಿ ಮೊತ್ತದ ಕಾಮಗಾರಿಗೆ ಮಂಜೂರಾತಿ ನೀಡಲಾಗಿದೆ. ಯೋಜನೆ ಹಾದು ಹೋಗುವ ಸಾಕಷ್ಟು ಕಡೆ ಭೂ ಸ್ವಾಧೀನದ ಸಮಸ್ಯೆಯಿದ್ದು, ಅದನ್ನು ಬಗೆಹರಿಸಲಾಗುತ್ತಿದೆ. ಕೋವಿಡ್ ಸಮಯದಲ್ಲಿ ಕಾಮಗಾರಿ ಕುಂಠಿತವಾಯಿತು. ಕೇಂದ್ರ ಸರ್ಕಾರ ರೂ.5,300 ಕೋಟಿ ಅನುದಾನ ನೀಡುವಲ್ಲಿ ವಿಳಂಬ ಮಾಡಿರುವ ಕಾರಣ ಹಿನ್ನಡೆಯಾಗಿದೆ” ಎಂದರು.
ಎತ್ತಿನಹೊಳೆ ಯೋಜನೆಯು ಮಂದಗತಿ ಕಾಮಗಾರಿ ಹಾಗೂ ರಣಘಟ್ಟ ಯೋಜನೆಯಲ್ಲಿ ಯಾವುದೇ ಪ್ರಗತಿ ಕಾಣುತ್ತಿಲ್ಲ ಎನ್ನುವ ಬೇಲೂರು ಶಾಸಕ ಎಚ್.ಕೆ.ಸುರೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, “ರಣಘಟ್ಟ ಯೋಜನೆಯ ಕಾಲುವೆಯು 5.24 ಕಿಮೀ ನಷ್ಟು ಉದ್ದ ಸುರಂಗ ಮಾರ್ಗದಲ್ಲಿ ಹೋಗಬೇಕು. ಇದರಲ್ಲಿ 2.4 ಕಿಮೀ ನಷ್ಟು ಕಾಮಗಾರಿ ಮುಗಿದಿದೆ. ಎತ್ತಿನಹೊಳೆ ಯೋಜನೆಗೆ 402 ಎಕರೆಯಷ್ಟು ಅರಣ್ಯ ಭೂಮಿಯನ್ನು ಹಾಸನ ಮತ್ತು ತುಮಕೂರು ಭಾಗದಲ್ಲಿ ಸ್ವಾಧೀನ ಪಡಿಸಿಕೊಳ್ಳಬೇಕು” ಎಂದರು.
ಮದಗ ಮಸೂರು ಕೆರೆಯ ಎಡದಂಡೆ ಮತ್ತು ಬಲದಂಡೆ ಕಾಲುವೆಯ ಅಭಿವೃದ್ದಿ ಕುರಿತು ಯು.ಬಿ.ಬಣಕಾರ್ ಅವರ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ ಅವರು “2019 ರಲ್ಲಿ 25 ಕೋಟಿ ವೆಚ್ಚದಲ್ಲಿ ಮದಗ ಮಸೂರು ಕೆರೆಯ ಸಮಗ್ರ ಅಭಿವೃದ್ದಿಗೆ ಯೋಜನೆ ಘೋಷಿಸಲಾಗಿತ್ತು. ರೂ.52 ಕೋಟಿ ವೆಚ್ಚದಲ್ಲಿ ಕೆರೆಯ ಎಡದಂಡೆ ಮತ್ತು ಬಲದಂಡೆ ಆಧುನೀಕರಣ ಯೋಜನೆಯ ಪ್ರಸ್ತಾವನೆ ಸರ್ಕಾರ ಮುಂದಿದ್ದು, ರೂ.60 ಕೋಟಿ ವೆಚ್ಚದಲ್ಲಿ ಕೆರೆ ಅಭಿವೃದ್ದಿ ಮಾಡಲಾಗುವುದು” ಎಂದು ಭರವಸೆ ನೀಡಿದರು.
ಕೃಷ್ಣ ಮೇಲ್ದಂಡೆ ಯೋಜನೆ ಪುನರ್ ವಸತಿ ಕಾರ್ಯ ನಿರಂತರ
ಕೃಷ್ಣ ಮೇಲ್ದಂಡೆ ಯೋಜನೆಯ ಸಂತ್ರಸ್ಥ ಕೇಂದ್ರಗಳಲ್ಲಿ ಮೂಲ ಸೌಕರ್ಯ ಕಲ್ಪಿಸುವ ವಿಚಾರವಾಗಿ ಬೀಳಗಿ ಕ್ಷೇತ್ರದ ಶಾಸಕರಾದ ಜಿ.ಟಿ.ಪಾಟೀಲ್ ಅವರ ಪ್ರಶ್ನೆಗೆ “ಕೃಷ್ಣ ಮೇಲ್ದಂಡೆ ಯೋಜನೆಯ ಪುನರ್ ವಸತಿ ಕಾರ್ಯ ಎಂದಿಗೂ ಮುಗಿಯದ ಕೆಲಸ. ಈ ಹಿಂದೆ ಮೂಲಸೌರ್ಕರ್ಯಗಳ ಅಭಿವೃದ್ದಿಗೆ ಎಂದು 2017 ರಲ್ಲಿ ರೂ.191 ಕೋಟಿ ರೂಪಾಯಿ ಮೀಸಲಿಟ್ಟು ಮುಕ್ತಾಯ ಮಾಡಲಾಗುವುದು ಎಂದು ಹೇಳಲಾಗಿತ್ತು. ಈಗ ಹೊಸದಾಗಿ 2,600 ಕೋಟಿ ಪ್ರಸ್ತಾವನೆ ಸಲ್ಲಿಸಿದ್ದೀರಿ. ಮೊದಲಿಗೆ ಜಮೀನು ಕಳೆದಕೊಂಡವರಿಗೆ ಪರಿಹಾರ ಹಣ ಮತ್ತು ಜಮೀನುಗಳಿಗೆ ನೀರು ಬಿಡುಗಡೆ ಮಾಡಬೇಕು. ಈ ಎಲ್ಲಾ ಕೆಲಸಗಳು ಆದ ನಂತರ ಮಿಕ್ಕ ವಿಚಾರಗಳ ಬಗ್ಗೆ ಗಮನ ಹರಿಸಲಾಗುವುದು” ಎಂದು ಉತ್ತರಿಸಿದರು.
ಡಿಸಿಎಂ ಹೊಗಳಿದ ಶಾಸಕ ಶಿವಲಿಂಗೇಗೌಡ
ಅರಸೀಕೆರೆ ಭಾಗದಲ್ಲಿ ಘಟಾನುಘಟಿಯೊಬ್ಬರು ಕೇವಲ 200 ಮೀಟರ್ ಜಾಗ ನೀಡದೆ ತೊಂದರೆ ನೀಡುತ್ತಿದ್ದರು. ಶಿವಕುಮಾರ್ ಅವರು ಈ ಸಮಸ್ಯೆ ಬಗೆಹರಿಸಿದರು. ಡಿಸಿಎಂ ಅವರು ಅಧಿಕಾರವಹಿಸಿಕೊಂಡ ನಂತರ ಮೋಟರ್ ಅಳವಡಿಸಿ ನೀರನ್ನು ಎತ್ತುವಂತಹ ಕೆಲಸ ಮಾಡಿದ್ದಾರೆ. ಈ ಯೋಜನೆ ಬೋಗಸ್ ಎನ್ನುವವರಿಗೆ ಉತ್ತರ ನೀಡಿದ್ದಾರೆ” ಎಂದು ಅರಸೀಕೆರೆ ಶಾಸಕ ಶಿವಲಿಂಗೇಗೌಡ ಅವರು ಡಿಸಿಎಂ ಅವರ ಕಾರ್ಯವೈಖರಿಯನ್ನು ಹೊಗಳಿದರು.
2017 ರಿಂದ ಕೊಳೆಗೇರಿ ನಿವಾಸಿಗಳಿಗೆ ಮಾಸಿಕ 10 ಸಾವಿರ ಲೀ. ಕಾವೇರಿ ನೀರು ಪೂರೈಕೆ
ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ 13 ಕೊಳೆಗೇರಿಗಳಿದ್ದು ಕಾವೇರಿ ನೀರು ಇಂದಿಗೂ ಅವರಿಗೆ ದೊರೆಯುತ್ತಿಲ್ಲ ಎಂದು ಬೆಂಗಳೂರು ಜಯನಗರ ಶಾಸಕರಾದ ಸಿ.ಕೆ. ರಾಮಮೂರ್ತಿ ಅವರ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ ಅವರು, “ಬೆಂಗಳೂರು ನೀರು ಸರಬರಾಜು ಮಂಡಳಿಯು 2017 ರಿಂದ ಇಲ್ಲಿಯ ತನಕ 10 ಸಾವಿರ ಲೀ. ನೀರನ್ನು ಕೊಳೆಗೇರಿ ನಿವಾಸಿಗಳಿಗೆ ನೀಡಲಾಗುತ್ತಿದೆ. 32,010 ಕುಟುಂಬಗಳು ಪರಿಶಿಷ್ಟ ಪಂಗಡ- ವರ್ಗಗಳ ಕಾಲೋನಿಯಲ್ಲಿ ವಾಸವಿದ್ದು, ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ 5,515 ಕುಟುಂಬಗಳು ಪ್ರತಿ ತಿಂಗಳು 10 ಸಾವಿರ ಲೀ. ಕಾವೇರಿ ನೀರಿನ ಸೌಲಭ್ಯ ಪಡೆಯುತ್ತಿವೆ. ಕೊಳೆಗೇರಿ ಅಭಿವೃದ್ದಿ ಮಂಡಳಿಯಿಂದ ರಾಗಿಗುಡ್ಡದಲ್ಲಿ 250 ಫ್ಲಾಟ್, 400 ಫ್ಲಾಟ್ಗಳನ್ನು ರಾಜೇಶ್ವರಿ, ಶಾಖಾಂಬರಿ ನಗರ ಕೊಳೆಗೇರಿಗಳಲ್ಲಿ ಒಟ್ಟು 2,900 ಫ್ಲಾಟ್ಗಳನ್ನು ಕಟ್ಟಿ ಹಂಚಿಕೆ ಮಾಡಲಾಗಿದೆ” ಎಂದರು.
“2013 ರಿಂದ ಇಲ್ಲಿಯ ತನಕ ಅಂದರೆ ಕಳೆದ 11 ವರ್ಷಗಳಿಂದ ನೀರಿನ ದರ ಏರಿಕೆ ಮಾಡಿಲ್ಲ. ವಿದ್ಯುತ್ ಬೆಲೆ ಏರಿಕೆ ಮತ್ತು ಇತರೇ ವೆಚ್ಚಗಳು ಹೆಚ್ಚಾದರೂ ಬೆಂಗಳೂರಿನಲ್ಲಿ ನೀರಿನ ದರ ಏರಿಕೆಯನ್ನು ವಿವಿಧ ಕಾರಣಗಳಿಂದ ಮಾಡಿಲ್ಲ. ಇಂತಿಷ್ಟು ಮೊತ್ತವನ್ನು ಕೊಳೆಗೇರಿ ಅಭಿವೃದ್ದಿ ಮಂಡಳಿ ಪಾವತಿ ಮಾಡಿದರೆ ಮುಂದಿನ ದಿನಗಳಲ್ಲಿ ಏನೂ ತೊಂದರೆಯಾಗದಂತೆ ನೀರಿನ ಸರಬರಾಜು ಮಾಡಬಹುದು”
ಬೆಂಗಳೂರಿನ ಜನತೆಗೆ ತೊಂದರೆಯಾಗದಂತೆ ಕುಡಿಯುವ ನೀರು ಪೂರೈಕೆ
“ಪ್ರತಿ ವರ್ಷ ಬೆಂಗಳೂರಿನ ಜನಸಂಖ್ಯೆ 10 ಲಕ್ಷದಷ್ಟು ಹೆಚ್ಚಾಗುತ್ತಿದೆ. ಹೆಚ್ಚುವರಿಯಾಗಿ 6.5 ಟಿಎಂಸಿ ಕಾವೇರಿ ನೀರು ಬೆಂಗಳೂರಿಗೆ ಮೀಸಲು ಇಡಬೇಕು ಎಂದು ಹೊಸದಾಗಿ ಲೆಕ್ಕಾಚಾರ ಮಾಡಲಾಗಿದೆ. ಇದರಲ್ಲಿ 1.5 ಟಿಎಂಸಿಯಷ್ಟು ನೀರು ಉಳಿಯುವ ನಿರೀಕ್ಷೆ ಇದೆ. ದಿನೇ, ದಿನೇ ನೀರಿನ ಸಮಸ್ಯೆ ಹೆಚ್ಚಾಗುತ್ತಿದ್ದು, ಬೆಂಗಳೂರಿನ ಜನತೆಗೆ ಯಾವುದೇ ತೊಂದರೆಯಾಗದಂತೆ ಕುಡಿಯುವ ನೀರು ಪೂರೈಸುವುದು ನಮ್ಮ ಕರ್ತವ್ಯ” ಎಂದು ಭರವಸೆ ನೀಡಿದರು.
ಒಂದು ಹನಿ ಕಾವೇರಿ ನೀರು ಯಾವ ಮನೆಯನ್ನೂ ತಲುಪಿಲ್ಲ. ನೀರು ಪೂರೈಕೆ ಮಾಡಲು ಕೊಳೆಗೇರಿ ಅಭಿವೃದ್ದಿ ಮಂಡಳಿಯವರು ಹಣ ಪಾವತಿ ಮಾಡಬೇಕು ಎಂದು ಶಾಸಕ ರಾಮಮೂರ್ತಿ ಅವರು ಹೇಳಿದಾಗ “ನಿಮ್ಮ ಕ್ಷೇತ್ರದ ಅಭಿವೃದ್ದಿಗೆ 5 ಕೋಟಿ ಹಣ ನೀಡಲಾಗುವುದು, ಈ ಹಣವನ್ನೇ ಬಳಸಿಕೊಂಡು ನೀರಿನ ಸಂಪರ್ಕ ವ್ಯವಸ್ಥೆ ಕಲ್ಪಿಸಲು ಪಾವತಿ ಮಾಡಿ” ಎಂದು ಡಿಸಿಎಂ ಹೇಳಿದರು.
ಮೇಕೆದಾಟು ಯೋಜನೆಗೆ ಸಹಕಾರ ನೀಡಿ
ಟ್ಯಾಂಕರ್ ನಲ್ಲಿ ನೀರನ್ನು ಪೂರೈಕೆ ಮಾಡುವವರಿಗೆ ನೀರು ದೊರಕುತ್ತದೆ, ಸರ್ಕಾರಕ್ಕೆ ಏಕೆ ದೊರೆಯುವುದಿಲ್ಲ ಎಂದು ಶಾಸಕ ಅರವಿಂದ ಬೆಲ್ಲದ ಪ್ರಶ್ನಿಸಿದಾಗ, “ಬೆಂಗಳೂರಿನ ನೀರಿನ ಸಮಸ್ಯೆ ಮತ್ತು ಟ್ಯಾಂಕರ್ ಗಳಿಗೆ ನೀರು ಎಲ್ಲಿಂದ ದೊರೆಯುತ್ತದೆ ಎಂದು ನಿಮ್ಮ ಅಕ್ಕ- ಪಕ್ಕದಲ್ಲೇ ಇರುವ ಆರ್.ಅಶೋಕ, ಸುರೇಶ್ ಕುಮಾರ್ ಅವರ ಬಳಿ ಕೇಳಿ. ಟ್ಯಾಂಕರ್ ನವರು ಕಾವೇರಿ ನೀರು ಪೂರೈಸುವುದಿಲ್ಲ, ಕೊಳವೆಬಾವಿ ನೀರನ್ನು ಪೂರೈಸುತ್ತಾರೆ. ಶೇ 25 ರಷ್ಟು ಬೆಂಗಳೂರಿಗೆ ಟ್ಯಾಂಕರ್ ಮೂಲಕವೇ ನೀರು ಪೂರೈಕೆಯಾಗುತ್ತಿದೆ. ಈ ಎಲ್ಲಾ ಸಮಸ್ಯೆಗಳಿಗೆ ಮೇಕೆದಾಟು ಯೋಜನೆಯೇ ಪರಿಹಾರ. ನಾವು ‘ಮೇಕೆದಾಟು’ ಯೋಜನೆಯ ಬಗ್ಗೆ ದೊಡ್ಡ ಹೋರಾಟ ನಡೆಸುತ್ತಿದ್ದೇವೆ. ನೀವೆಲ್ಲಾ ಸಹಕಾರ ನೀಡಿ” ಎಂದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.