ಬೆಂಗಳೂರು: ನಮ್ಮ ದೇಶದ ಹೆಮ್ಮೆಯ ಮಾನಸಿಕ ಆರೋಗ್ಯ ಮತ್ತು ನರರೋಗಗಳ ರಾಷ್ಟ್ರೀಯ ಸಂಸ್ಥೆ ನಿಮ್ಹಾನ್ಸ್ ಸುವರ್ಣ ಮಹೋತ್ಸವ ಆಚರಣೆಯಲ್ಲಿ ಪಾಲ್ಗೊಳ್ಳುವುದು ನನಗೆ ಅತ್ಯಂತ ಹೆಮ್ಮೆಯ ಸಂಗತಿ.ನಿಮ್ಹಾನ್ಸ್ ಕಳೆದ ಐದು ದಶಕಗಳ ಅವಧಿಯಲ್ಲಿ ದೇಶದ ಮಾನಸಿಕ ಆರೋಗ್ಯ ಹಾಗೂ ನರರೋಗಗಳ ಕ್ಷೇತ್ರದಲ್ಲಿ ಅಸಾಧಾರಣ ಕೊಡುಗೆ ನೀಡುತ್ತಾ ಬಂದಿದ್ದು, ದೇಶದ ಪ್ರಮುಖ ಸಂಸ್ಥೆಯಾಗಿ ತನ್ನ ಛಾಪು ಮೂಡಿಸಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.


COMMERCIAL BREAK
SCROLL TO CONTINUE READING

ಅವರು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ, ಬೆಂಗಳೂರಿನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ “ಸುವರ್ಣ ಮಹೋತ್ಸವ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.


ಮೈಸೂರು ಸರ್ಕಾರದ ಮಾನಸಿಕ ಆಸ್ಪತ್ರೆ ಮತ್ತು ಭಾರತೀಯ ಮಾನಸಿಕ ಆರೋಗ್ಯ ಸಂಸ್ಥೆಯನ್ನು ಒಗ್ಗೂಡಿಸುವ ಮೂಲಕ ಪ್ರಾರಂಭವಾದ ನಿಮ್ಹಾನ್ಸ್, ಮಾನಸಿಕ ಆರೋಗ್ಯ ಮತ್ತು ಶಿಕ್ಷಣಕ್ಕೆ ಮೀಸಲಾದ ಭಾರತದ ಪ್ರಪ್ರಥಮ ಸಂಸ್ಥೆ ಎಂಬ ಹೆಗ್ಗಳಿಕೆ ಹೊಂದಿದೆ.


ರಾಷ್ಟ್ರೀಯ ಮಹತ್ವವನ್ನು ಹೊಂದಿರುವ ಈ ಸಂಸ್ಥೆಯು ತನ್ನ ಐದು ದಶಕದ ಪಯಣದಲ್ಲಿ ಆರೈಕೆ, ಸಂಶೋಧನೆ ಮತ್ತು ಶಿಕ್ಷಣ ವಲಯದಲ್ಲಿ ವಿಶ್ವದ ಗಮನ ಸೆಳೆದಿದೆ. ಮಾನಸಿಕ ಆರೋಗ್ಯ ಕುರಿತಾದ ನೀತಿ ನಿರೂಪಣೆಯಲ್ಲಿ ನಿಮ್ಹಾನ್ಸ್ ಕೊಡುಗೆಯನ್ನು ಜಾಗತಿಕವಾಗಿ ಗುರುತಿಸಲಾಗಿರುವುದು ಹೆಮ್ಮೆಯ ಸಂಗತಿ.


ಮಾನಸಿಕ ಆರೋಗ್ಯದ ಆರೈಕೆ ಜೊತೆಗೆ ರೋಗದ ಕುರಿತಾಗಿ ಸಾಮಾನ್ಯವಾಗಿ ಅಂಟಿಕೊಳ್ಳುವ ಸಮಾಜದ ನಕರಾತ್ಮಕ ದೃಷ್ಟಿಕೋನವನ್ನು ಬಹುತೇಕ ನಿವಾರಿಸುವಲ್ಲಿ ನಿಮ್ಹಾನ್ಸ್ ಯಶಸ್ವಿಯಾಗಿದೆ. ಪಾರ್ಶ್ವವಾಯು, ತೀವ್ರತರ ಮೆದುಳು ಕಾಯಿಲೆಗಳು ಮತ್ತು ನರರೋಗ ಚಿಕಿತ್ಸೆಯಲ್ಲಿ ಅತ್ಯುತ್ತಮ ಗುಣಮಟ್ಟವನ್ನು ಸಾಧಿಸುವ ಮೂಲಕ ಮಾನಸಿಕ ಸ್ವಾಸ್ಥ್ಯ ಕಾಪಾಡುವಲ್ಲಿ ನಿಮ್ಹಾನ್ಸ್ ಕೊಡುಗೆ ಶ್ಲಾಘನೀಯವಾಗಿದೆ.


ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಶ್ರೇಷ್ಠತೆಯನ್ನು ಸಾಧಿಸಿರುವ ರಾಷ್ಟ್ರೀಯ ಮಹತ್ವದ ಈ ಸಂಸ್ಥೆ ಕರ್ನಾಟಕದಲ್ಲಿರುವುದು ನಮಗೆಲ್ಲರಿಗೂ ಅತ್ಯಂತ ಹೆಮ್ಮೆಯ ವಿಷಯ. ರಾಜ್ಯದಾದ್ಯಂತ ಮಾನಸಿಕ ಆರೋಗ್ಯ ಸೇವೆಯನ್ನು ಕಲ್ಪಿಸಲು ಸರ್ಕಾರ ನಿಮ್ಹಾನ್ಸ್ ನೊಂದಿಗೆ ಜೊತೆಗೂಡಿ ಕಾರ್ಯನಿರ್ವಹಿಸುತ್ತಿದೆ. ನಿಮ್ಹಾನ್ಸ್‌ನೊಂದಿಗಿನ ಜಂಟಿ ಸಹಭಾಗಿತ್ವದ ಮೂಲಕ ರಾಜ್ಯದ ಪ್ರತಿಯೊಬ್ಬರಿಗೂ ಮಾನಸಿಕ ಆರೋಗ್ಯ ಸೇವೆಯನ್ನು ಖಾತ್ರಿಪಡಿಸಲು ನಮಗೆ ಸಾಧ್ಯವಾಗಿದೆ.


ನಮ್ಮ ಸರ್ಕಾರ ಮಾನಸಿಕ ಆರೋಗ್ಯ ಸೇವೆಯನ್ನು ಒದಗಿಸಲು ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ. ಜಿಲ್ಲಾ ಮತ್ತು ತಾಲೂಕು ಮಟ್ಟಗಳಲ್ಲಿ ಆತ್ಮಹತ್ಯೆ ತಡೆ, ದುಶ್ಚಟ ಹೊಂದಿದವರ ಪುನರ್ವಸತಿ ಮತ್ತು ಸಮುದಾಯ ಮಾನಸಿಕ ಆರೋಗ್ಯ ಕಾರ್ಯಕ್ರಮಗಳಿಗೆ ಒತ್ತು ನೀಡಿದೆ.


ಇದನ್ನೂ ಓದಿ: ಸಚಿವ ಸತೀಶ್ ಜಾರಕಿಹೊಳಿ ಮನೆಯಲ್ಲಿ ಡಿನ್ನರ್ ಮೀಟಿಂಗ್


ಟೆಲಿ ಮಾನಸ್ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿದ್ದು, ರಾಜ್ಯದಲ್ಲಿ ಮಾನಸಿಕ ಆರೋಗ್ಯದ ಬೆಂಬಲ ಅಗತ್ಯವಿರುವ ಸುಮಾರು 17 ಲಕ್ಷ ಜನರು ಇದರ ಪ್ರಯೋಜನ ಪಡೆದಿದ್ದಾರೆ. ನಿಮ್ಹಾನ್ಸ್ ಮತ್ತು ಧಾರವಾಡದ ಡಿಮ್ಹಾನ್ಸ್‌ಗಳಲ್ಲಿ ಈ ಘಟಕಗಳು ಕಾರ್ಯ ನಿರ್ವಹಿಸುತ್ತಿದ್ದು, ಅಗತ್ಯ ಆರೋಗ್ಯ ಸೇವೆಯನ್ನು ಕಲ್ಪಿಸುತ್ತಿದೆ.


ರಾಜ್ಯ ಸರ್ಕಾರ ನೀತಿ ಆಯೋಗ, ನಿಮ್ಹಾನ್ಸ್ ಸಹಯೋಗದಲ್ಲಿ ಆರಂಭಿಸಿರುವ ಕರ್ನಾಟಕ ಬ್ರೈನ್ ಹೆಲ್ತ್ ಇನೀಷಿಯೇಟಿವ್, ನರರೋಗ ಆರೈಕೆಯಲ್ಲಿ ತಜ್ಞರ ಸೇವೆಯನ್ನು ಜಿಲ್ಲಾಮಟ್ಟದಲ್ಲಿಯೂ ಲಭ್ಯವಾಗಿಸಿದೆ. ತೀವ್ರತರ ಪಾರ್ಶ್ವವಾಯು ಮತ್ತು ನರರೋಗ ಆಘಾತ ಆರೈಕೆಯಲ್ಲಿ ತರಬೇತಿ ಮತ್ತು ನಾವೀನ್ಯತಾ ಮಾದರಿಗಳನ್ನು ಈ ಯೋಜನೆ ಸಾಧ್ಯವಾಗಿಸಿದೆ.


ನಗರ ಮತ್ತು ಗ್ರಾಮೀಣ ಜನಸಂಖ್ಯೆಗೆ ಸೇವಾ ಲಭ್ಯತೆಯಲ್ಲಿ ಏಕರೂಪತೆ ತರಲು ರಾಜ್ಯ ಸರ್ಕಾರವು ಮಾನಸಿಕ ಆರೋಗ್ಯವನ್ನು ಪ್ರಾಥಮಿಕ ಆರೋಗ್ಯ ಸೇವಾ ವ್ಯವಸ್ಥೆಯಲ್ಲಿ ಸಂಯೋಜಿಸಿದೆ. ನಿಮ್ಹಾನ್ಸ್ ಸಂಸ್ಥೆಯ ಕಾರ್ಯನಿರ್ವಹಣೆಗಾಗಿ ಪ್ರತಿವರ್ಷ 137 ಕೋಟಿ ರೂ.ಗಳನ್ನು ಒದಗಿಸುವ ಮೂಲಕ ರಾಜ್ಯ ಸರ್ಕಾರ ತನ್ನ ಬದ್ಧತೆಯನ್ನು ನಿರೂಪಿಸಿದೆ.


ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಈ ಸಾರ್ವಜನಿಕ – ಖಾಸಗಿ ಸಹಭಾಗಿತ್ವ ಮೈಲಿಗಲ್ಲು ಸಾಧನೆಗಳನ್ನು ಮಾಡಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಆಲದಮರ ಫೌಂಡೇಶನ್ ಸಹಯೋಗದೊಂದಿಗೆ ಬೆಂಗಳೂರಿನ ಸರ್ ಸಿ.ವಿ.ರಾಮನ್ ಆಸ್ಪತ್ರೆಯಲ್ಲಿ ಸ್ಥಾಪಿಸಲಾಗಿರುವ 25 ಹಾಸಿಗೆ ಸಾಮರ್ಥ್ಯದ ತುರ್ತು ಚಿಕಿತ್ಸೆ ಹಾಗೂ ರಿಕವರಿ ಕೇಂದ್ರವು ಮಾನಸಿಕ ಕಾಯಿಲೆಯಿಂದ ಬಳಲುವ ನಿರ್ಗತಿಕರಿಗೆ ಪುನವರ್ಸತಿಯನ್ನು ಕಲ್ಪಿಸಿದೆ.


ಜಿಲ್ಲಾ ಉಪಕೇಂದ್ರ ಆಸ್ಪತ್ರೆಗಳಲ್ಲಿ ಮನೋಚೈತನ್ಯ ಮಾನಸಿಕ ಆರೋಗ್ಯ ಚಿಕಿತ್ಸಾ ಕಾರ್ಯಕ್ರಮಗಳ ಮೂಲಕ 146 ತಾಲ್ಲೂಕುಗಳ ಐದು ಲಕ್ಷ ಜನರಿಗೆ ಉಪಯೋಗವಾಗಿದೆ. ಅಲ್ಲದೇ, ಆರ್.ಸಿ.ಎಚ್, ಆರ್‌ಬಿಎಸ್‌ಕೆ ಮತ್ತು ಆರ್‌ಕೆಎಸ್‌ಕೆ ಸಹಭಾಗಿತ್ವದೊಂದಿಗೆ ತಾಯಿ, ಮಗು ಮತ್ತು ಕಿಶೋರ ಮಾನಸಿಕ ಆರೋಗ್ಯ ಸೇವೆಗಳ ಪೂರೈಸಲು ಕ್ರಮವಹಿಸಲಾಗುತ್ತಿದೆ.


ಮಾನಸಿಕ ಆರೋಗ್ಯದೆಡೆಗೆ ಕರ್ನಾಟಕದ ನಡೆಯು ಆರೋಗ್ಯ ಸೇವೆಯ ಲಭ್ಯತೆ, ನಾವಿನ್ಯತೆ ಮತ್ತು ಸಹಾನುಭೂತಿಯನ್ನೊಳಗೊಂಡ ಸಮಗ್ರ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ. ಮಾನಸಿಕ ಆರೋಗ್ಯದ ಸವಾಲುಗಳನ್ನು ಸಮಗ್ರವಾಗಿ ಎದುರಿಸುವ ನಮ್ಮ ಪ್ರಯತ್ನದಲ್ಲಿ ನಮ್ಮನ್ನು ಮುಂಚೂಣಿಯಲ್ಲಿರಿಸಿದೆ. ಈ ಪ್ರಯತ್ನ ಒಳಗೊಳ್ಳುವ ಹಾಗೂ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಪೂರಕವಾಗಿದೆ.


ಇದನ್ನೂ ಓದಿ: ಪ್ರವಾಸಿಗರ ಬಳಿ ಹಣ ವಸೂಲಿ.. ಮೂರು ಪೊಲೀಸರ ಅಮಾನತು


ಈ ಮೈಲಿಗಲ್ಲು ಸಾಧನೆಗೆ ಕಾರಣರಾಗಿರುವ ನಿಮ್ಹಾನ್ಸ್‌ನ ಅಧಿಕಾರಿಗಳು, ಸಿಬ್ಬಂದಿ ವರ್ಗದವರಿಗೆ ನನ್ನ ಅಭಿನಂದನೆಗಳು.ನಿಮ್ಮ ಸಮರ್ಪಣೆಯ ಸೇವೆ ಮಾನಸಿಕ ಆರೋಗ್ಯ ವಿಶ್ವದೆಲ್ಲೆಡೆ ಲಭಿಸಲು ಹಾಗೂ ಪ್ರತಿಯೊಬ್ಬರಿಗೂ ಆರೋಗ್ಯಕರ ಜೀವನದ ಅವಕಾಶ ಕಲ್ಪಿಸುವ ಭವಿಷ್ಯ ನಿರ್ಮಾಣಕ್ಕೆ ಪ್ರೇರಣೆ ನೀಡಿದೆ.


ನಿಮ್ಹಾನ್ಸ್‌ನ ಮೂಲಸೌಕರ್ಯ ಅಭಿವೃದ್ಧಿ, ಸಂಶೋಧನೆ ಹಾಗೂ ತರಬೇತಿ ಕಾರ್ಯಕ್ರಮಗಳಿಗೆ ನೆರವು ನೀಡಲು ಸರ್ಕಾರ ಬದ್ಧವಾಗಿದೆ. ನಾವು ಒಟ್ಟಾಗಿ ಶ್ರಮಿಸಿ, ಮಾನಸಿಕ ಆರೋಗ್ಯಕ್ಕೆ ಪ್ರಾಮುಖ್ಯತೆ ನೀಡುವ ಆರೋಗ್ಯ ವ್ಯವಸ್ಥೆಯನ್ನು ಕಟ್ಟುವ ಮೂಲಕ ಸುಭದ್ರ ರಾಷ್ಟ್ರವನ್ನು ನಿರ್ಮಿಸೋಣ ಎಂದು ಹೇಳಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.