Gram Panchayat Election: ರಾಷ್ಟ್ರೀಯ ಪಕ್ಷಗಳ ನಡುವೆ ಜೆಡಿಎಸ್ ಸಾಧನೆ ಗಮನಾರ್ಹ- ಕುಮಾರಸ್ವಾಮಿ
ಈಗ ಪಂಚಾಯಿತಿಗೆ ಆಯ್ಕೆಯಾಗಿರುವ ಸದಸ್ಯರ ಸಹಾಯದಿಂದಲೇ ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಜೊತೆಗೂಡಿ 2023 ರ ಸಾರ್ವತ್ರಿಕ ಚುನಾವಣೆಯಲ್ಲಿ ಈ ಪ್ರಾದೇಶಿಕ ಪಕ್ಷವನ್ನು ನಮ್ಮ ರಾಜ್ಯದಲ್ಲಿ ಸ್ವತಂತ್ರವಾಗಿ ಅಧಿಕಾರಕ್ಕೆ ತರಲು ನಾನು ಹಗಲು ರಾತ್ರಿ ಶ್ರಮಿಸುತ್ತೇನೆ- ಹೆಚ್.ಡಿ. ದೇವೇಗೌಡ
ಬೆಂಗಳೂರು: ನಿನ್ನೆ ಪ್ರಕಟವಾದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ (Grama Panchayath Election) ಜೆಡಿಎಸ್ (JDS) ಬೆಂಬಲಿತ ಅಭ್ಯರ್ಥಿಗಳು ಸಾಧಿಸಿರುವ ಯಶಸ್ಸಿನ ಬಗ್ಗೆ ಸಮಾಧಾನ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಎರಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತಮ್ಮ ಪಕ್ಷದ ಸಾಧನೆ ಗಮನಾರ್ಹವಾದುದು ಎಂದಿದ್ದಾರೆ.
ಟ್ವೀಟ್ ಮಾಡಿರುವ ಹೆಚ್.ಡಿ. ಕುಮಾರಸ್ವಾಮಿ (HD Kumaraswamy), 'ರಾಷ್ಟ್ರೀಯ ಪಕ್ಷಗಳ ಹಣ, ಅಧಿಕಾರದ ಹೊರತಾಗಿಯೂ ಪ್ರಾದೇಶಿಕ ಪಕ್ಷ ಜೆಡಿಎಸ್ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗಮನಾರ್ಹ ಸಾಧನೆಯನ್ನೇ ಮಾಡಿದೆ. ಪಕ್ಷ ಬೆಂಬಲಿಸಿದ ಅಭ್ಯರ್ಥಿಗಳ ಮೇಲೆ ವಿಶ್ವಾಸವಿಟ್ಟ ಮತದಾರರಿಗೆ ಕೃತಜ್ಞತೆಗಳು. ಗೆದ್ದ ಅಭ್ಯರ್ಥಿಗಳಿಗೆ ಅಭಿನಂದನೆಗಳು. ಸೋತರೂ, ಹೋರಾಟ ನಡೆಸಿದ ಅಭ್ಯರ್ಥಿಗಳಿಗೆ ನನ್ನ ಬೆಂಬಲ ಸದಾ ಇರಲಿದೆ' ಎಂದು ಹೇಳಿದ್ದಾರೆ.
'ಗ್ರಾಮ ಪಂಚಾಯತಿ ಚುನಾವಣೆಯಲ್ಲಿ (Grama Panchayath Election) ಈ ಹಂತದ ಸಾಧನೆ ಮಾಡಲು ನೆರವಾದವರು ಪಕ್ಷದ ತಳಮಟ್ಟದ ಕಾರ್ಯಕರ್ತರು. ರಾಜಕೀಯದ ಪ್ರತಿಕೂಲ ಪರಿಸ್ಥಿತಿಯ ನಡುವೆಯೂ ಕಾರ್ಯಕರ್ತರು ಕೆಚ್ಚೆದೆಯ ಹೋರಾಟ ತೋರಿದ್ದರ ಫಲವಾಗಿಯೇ ನಮ್ಮ ಅಭ್ಯರ್ಥಿಗಳು ಚುನಾವಣೆಯಲ್ಲಿ ಜಯಿಸಿದ್ದಾರೆ. ಪಕ್ಷ ತಳ ಮಟ್ಟದಲ್ಲಿಯೂ ಸ್ಥಿರ, ದೃಢವಾಗಿದೆ ಎಂದು ತೋರಿಸಿದ ಕಾರ್ಯಕರ್ತ ಸೋದರರಿಗೆ ನಾನು ಸದಾ ಋಣಿ' ಎಂದಿದ್ದಾರೆ.
Congress: ಗ್ರಾ. ಪಂ. ಚುನಾವಣೆ ಫಲಿತಾಂಶ ಬೆನ್ನಲ್ಲೇ ಕಾಂಗ್ರೆಸ್ಗೆ ‘ಶುರುವಾಯ್ತು ಟೆನ್ಷನ್’..!
'ಚುನಾವಣೆಯಲ್ಲಿ ಗೆದ್ದಿರುವ ಜೆಡಿಎಸ್ (JDS) ಬೆಂಬಲಿತ ಅಭ್ಯರ್ಥಿಗಳು ಗ್ರಾಮಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಲಿ. ಸ್ವಾವಲಂಬಿ ಗ್ರಾಮೀಣ ಭಾರತದ ಪ್ರಗತಿಗೆ ಗಮನಾರ್ಹ ಕೊಡುಗೆ ನೀಡಲಿ ಎಂದು ಆಶಿಸುತ್ತೇನೆ. ಜೆಡಿಎಸ್ ಬೆಂಬಲಿತ ಮತ್ತು ಇತರ ಸದಸ್ಯರು ತಮ್ಮ ಗ್ರಾಮ ಪಂಚಾಯಿತಿಯನ್ನು ಮಾದರಿಯಾಗಿ ರೂಪಿಸಬೇಕು ಎಂದು ನಾನು ಹೇಳಲು ಇಚ್ಛಿಸುತ್ತೇನೆ' ಎಂದು ಕುಮಾರಸ್ವಾಮಿ ಕರೆ ಕೊಟ್ಟಿದ್ದಾರೆ.
ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ. ದೇವೇಗೌಡ ಅವರು (HD Devegowda) 'ನಮ್ಮ ರಾಜ್ಯದಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಎರಡು ರಾಷ್ಟೀಯ ಪಕ್ಷಗಳ ವಿರುದ್ಧ ಹೋರಾಟ ನಡೆಸಿ ಇಂದು ಜಯಶೀಲರಾಗಿರುವ ನಮ್ಮ ಪಕ್ಷದ ಎಲ್ಲ ನನ್ನ ಆತ್ಮೀಯ ಸದಸ್ಯರಿಗೆ ತುಂಬು ಹೃದಯದ ಅಭಿನಂದನೆಯನ್ನು ಸಲ್ಲಿಸುತ್ತೇನೆ' ಎಂದಿದ್ದಾರೆ.
ಚುನಾವಣೆ ಎಂದ ಮೇಲೆ ಸೋಲು ಗೆಲುವು ಸಹಜ , ಸೋತ ನನ್ನ ಸ್ನೇಹಿತರು ದೃತಿಗೆಡುವುದು ಬೇಡ , ನಿಮ್ಮಗಳ ಸಹಾಯ ಮತ್ತು ಈಗ ಪಂಚಾಯಿತಿಗೆ ಆಯ್ಕೆಯಾಗಿರುವ ಸದಸ್ಯರ ಸಹಾಯದಿಂದಲೇ ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಜೊತೆಗೂಡಿ 2023 ರ ಸಾರ್ವತ್ರಿಕ ಚುನಾವಣೆಯಲ್ಲಿ ಈ ಪ್ರಾದೇಶಿಕ ಪಕ್ಷವನ್ನು ನಮ್ಮ ರಾಜ್ಯದಲ್ಲಿ ಸ್ವತಂತ್ರವಾಗಿ ಅಧಿಕಾರಕ್ಕೆ ತರಲು ನಾನು ಹಗಲು ರಾತ್ರಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಜೊತೆಗೆ ಈ ರಾಜ್ಯದಲ್ಲಿ ನಮ್ಮ ಪ್ರಾದೇಶಿಕ ಪಕ್ಷವನ್ನು ಉಳಿಸಲು ಈ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳಿಗೆ ಮತ ನೀಡಿದ ರಾಜ್ಯದ ಜನತೆಗೆ ನಾನು ಸದಾ ಚಿರಋಣಿಯಾಗಿರುತ್ತೇನೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಹೆಚ್.ಡಿ. ದೇವೇಗೌಡ ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.