ಬೆಂಗಳೂರು: ರಾಜೀನಾಮೆ ಸಲ್ಲಿಸಿ ಕಾಂಗ್ರೆಸ್ ಶಾಸಕರೊಂದಿಗೆ ಮುಂಬೈಗೆ ತೆರಳಿದ್ದ ಮೂವರು ಜೆಡಿಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಜೆಡಿಎಸ್ ನಾಯಕರು ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ದೂರು ಸಲ್ಲಿಸಿದ್ದಾರೆ.


COMMERCIAL BREAK
SCROLL TO CONTINUE READING

ಜೆಡಿಎಸ್ ಪರ ವಕೀಲರಾದ ರಂಗನಾಥ್ ಅವರು ಸ್ಪೀಕರ್ ಕಚೇರಿಗೆ ಭೇಟಿ ನೀಡಿ ಹುಣಸೂರು ಶಾಸಕ ಹೆಚ್.ವಿಶ್ವನಾಥ್, ಮಹಾಲಕ್ಷ್ಮೀ ಲೇಔಟ್ ಶಾಸಕ ಗೋಪಾಲಯ್ಯ ಮತ್ತು ಕೆ.ಆರ್.ಪೇಟೆ ಶಾಸಕ ನಾರಾಯಣ ಗೌಡ ವಿರುದ್ಧ ದೂರು ಸಲ್ಲಿಸಿ, ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಮನವಿ ಮಾಡಿದ್ದಾರೆ.


ಇದೇ ಸಂದರ್ಭದಲ್ಲಿ ನಾಳೆಯಿಂದ ವಿಧಾನಮಂಡಲದ ಅಧಿವೇಶನ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಜೆಡಿಎಸ್​ ಪಕ್ಷದ ಶಾಸಕರೆಲ್ಲರಿಗೂ ಅಧಿವೇಶನದಲ್ಲಿ ಕಡ್ಡಾಯವಾಗಿ ಹಾಜರಿರುವಂತೆ ವಿಪ್​ ಜಾರಿ ಮಾಡಲಾಗಿದೆ.


ಮತ್ತೊಂದೆಡೆ ಮುಂಬೈನಲ್ಲಿ ತಂಗಿದ್ದ ಅತೃಪ್ತ ಶಾಸಕರು ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಇಂದು ಸಂಜೆ ಬೆಂಗಳೂರಿಗೆ ಆಗಮಿಸಿದ್ದು, ಮತ್ತೊಮ್ಮೆ ರಾಜಿನಾಮೆ ಸಲ್ಲಿಸಲು ಸ್ಪೀಕರ್ ಕಚೇರಿಗೆ ತೆರಳಿದ್ದಾರೆ. 


ಸದ್ಯ ಅತೃಪ್ತ ಶಾಸಕರ ಮತ್ತು ಮೈತ್ರಿ ಸರ್ಕಾರದ ಭವಿಷ್ಯ ಸ್ಪೀಕರ್ ರಮೇಶ್ ಕುಮಾರ್ ಅವರ ಕೈಲಿದ್ದು, ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಕಾದುನೋಡಬೇಕಿದೆ.