ಕೈ ಪಕ್ಷವನ್ನು ಕೊಳಕುಗ್ರೆಸ್ ಹಾಗೂ ಸ್ಕ್ಯಾಂಗ್ರೆಸ್ ಎಂದು ಜರೆದ ಜೆಡಿಎಸ್
ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಪಕ್ಷದ ನೂತನ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಕೀಳು ಅಭಿರುಚಿಯ ಟೀಕೆಗಳನ್ನು ಮಾಡಿದ್ದ ಕಾಂಗ್ರೆಸ್ ಪಕ್ಷಕ್ಕೆ ಜೆಡಿಎಸ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.ಈ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಉತ್ತರಿಸಿರುವ ಜೆಡಿಎಸ್; ಕಾಂಗ್ರೆಸ್ ಪಕ್ಷ ಹಾಗೂ ಆ ಪಕ್ಷದ ನಾಯಕರ ಜನ್ಮ ಜಾಲಾಡಿದೆ.
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಪಕ್ಷದ ನೂತನ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಕೀಳು ಅಭಿರುಚಿಯ ಟೀಕೆಗಳನ್ನು ಮಾಡಿದ್ದ ಕಾಂಗ್ರೆಸ್ ಪಕ್ಷಕ್ಕೆ ಜೆಡಿಎಸ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.ಈ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಉತ್ತರಿಸಿರುವ ಜೆಡಿಎಸ್; ಕಾಂಗ್ರೆಸ್ ಪಕ್ಷ ಹಾಗೂ ಆ ಪಕ್ಷದ ನಾಯಕರ ಜನ್ಮ ಜಾಲಾಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿರುವ ಜೆಡಿಎಸ್, ಕಾಂಗ್ರೆಸ್ ಅನ್ನು ಕೊಳಕುಗ್ರೆಸ್ ಹಾಗೂ ಸ್ಕ್ಯಾಂಗ್ರೆಸ್ ಎಂದು ಜರೆದಿದೆ.
ಆಡಳಿತ ಪಕ್ಷಕ್ಕೆ ಆಕ್ರೋಶ, ಹತಾಶೆ, ಆತಂಕ, ಅನುಕಂಪ ಇರಬೇಕು, ತಪ್ಪಲ್ಲ. ಆದರೆ, ಹೊಟ್ಟೆಯಲ್ಲಿರುವ ಅಸಹ್ಯವನ್ನೆಲ್ಲ ಬಾಯಲ್ಲಿ ಕಾರಿಕೊಳ್ಳುವ ವಿಕೃತಿ ಮಾತ್ರ ಇರಲೇಬಾರದು. ಹೀಗಂತ ಹೇಳಲು ನಾವು ಗಂಭೀರವಾಗಿ ವಿಷಾದಿಸುತ್ತೇವೆ ಎನ್ನುತ್ತಲೇ, ನಾಮ ಹಾಕುವುದರಲ್ಲಿ ಪರಮ ನಿಸ್ಸೀಮ; ಅದಕ್ಕೆ ಸಾವಿರದೆಂಟು ಉದಾಹರಣೆ ಕೊಡಬಹುದು. ಈಗ ಹೇಳಿ; ಕೊಳಕುಮಂಡಲ ಯಾವುದು? ಅದೇ ಕಾಂಗ್ರೆಸ್ ಅಲಿಯಾಸ್ ಕೊಳಕುಗ್ರೆಸ್!! ಎಂದು ಚಾಟಿ ಬೀಸಿದೆ.
ಇದನ್ನೂ ಓದಿ: ಬಿಳಿ ರಂಜಕದ ಬಳಕೆಯಿಂದ ಯುದ್ಧಾಪರಾಧಗಳ ತನಕ: ಇರಾನ್- ಹಮಾಸ್ ಯುದ್ಧದ ಸಂಕೀರ್ಣತೆಗಳ ಅನಾವರಣ
ಒಂದೆಡೆ ಆದಾಯ ತೆರಿಗೆಯವರಿಗೆ SST, YST ಬಾಬ್ತುಗಳ ಕಂತೆ ಕಂತೆ ಹಣ ಸಿಕ್ಕಿದೆ. ಸಿಎಂ, ಡಿಸಿಎಂ ಪಟಾಲಂ ಪರಿಶ್ರಮದಿಂದ ಬಾಚಿದ್ದ ಪಾಪದ ಹಣ ಕೈ ತಪ್ಪಿದೆ. ಐಟಿ, ಈಡಿ ಕುಣಿಕೆ ಯಾರಿಗೆಲ್ಲ ಬಿಗಿದುಕೊಳ್ಳಲಿದೆಯೋ ಗೊತ್ತಿಲ್ಲ. ಸಾಹುಕಾರ ಸಿವಕುಮಾರ ಸುಲ್ತಾನನಿಗೂ ಸಿಬಿಐ ಸಿಕ್ಕು ಬಿದ್ದಿದೆ. ಇದೆಲ್ಲಾ ಹೋಗಲಿ ಎಂದರೆ, ಕಾಂಗ್ರೆಸ್ ಸರ್ಕಾರಕ್ಕೆ ಸರಕಾರಕ್ಕೆ 5 ತಿಂಗಳು ತುಂಬುವ ಮೊದಲೇ ಬೆಳಗಾವಿ ಜ್ವಾಲೆ ಭುಗಿಲೆದ್ದಿದೆ. ಅಂತಃಪುರದ ಕಲಹ ಹಾದಿಬೀದಿಗಳಲ್ಲಿ ಮೂರು ಕಾಸಿಗೆ ಬಿಕರಿಯಾಗುತ್ತಿದೆ. ಇನ್ನು ಕಕ್ಕಿಕೊಳ್ಳುವುದು ಬಿಟ್ಟರೆ ಇನ್ನೇನಿದೆ? ಎಂದು ಜೆಡಿಎಸ್ ಲೇವಡಿ ಮಾಡಿದೆ.
ಕಾಂಗ್ರೆಸ್ ವಕ್ರರೇಖೆಗಳ ಹೊಲಸುಗುಚ್ಛ!! ಅಷ್ಟಾವಕ್ರನ ಅಪರಾವತಾರಿ. ನಾಮ, ಪಂಗನಾಮ, ಉಂಡೆನಾಮಗಳೆಲ್ಲ ಅದರ ಆಜನ್ಮ ಆಸ್ತಿ ಎಂದು ಟೀಕಿಸಿರುವ ಜೆಡಿಎಸ್; ಕೊಳಕು ಮಂಡಲ, ಬಚ್ಚಲು ಬಾಯಿ ಎಂದರೆ ಅದು ಕಾಂಗ್ರೆಸ್ಸೇ.. ಈಗ ನಾಲಿಗೆ.. ನಾಲಿಗೆ ಎನ್ನುತ್ತಿದೆ, ಛೀ.. ಹೇಸಿಗೆ. ಜಾತ್ಯತೀತತೆ ಎನ್ನುವುದು ಆ ಕೊಳಕು ಪಕ್ಷದ ಥಳುಕು ಬಳಕಷ್ಟೇ. ಗೆಲ್ಲುವ ತನಕ ಜಾತ್ಯತೀತ, ಗೆದ್ದ ಮೇಲೆ ಜಾತಿಗಣಿತ! ತನ್ನ ಮುಖವನ್ನು ಕನ್ನಡಿಯಲ್ಲೂ ನೋಡಿಕೊಳ್ಳಲಾಗದ ದೈನೇಸಿ ಡರ್ಟಿಪಾರ್ಟಿ, ಪರರ ಹಂಗಿನಲ್ಲಿಯೆ ಬದುಕುವ ಪರಾವಲಂಬಿ! ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಸರಕಾರಗಳನ್ನು ಕೊಲ್ಲುವ, ಹೆಗಲು ಕೊಟ್ಟವರನ್ನೇ ಮೇಲೆತ್ತಿದ ಪಕ್ಷಗಳನ್ನೇ ಕೊಳಕುಮಂಡಲದಂತೆ ಕಚ್ಚುವ ಕೈ ಪಕ್ಷ ರಾಮಾಯಣ, ಮಹಾಭಾರತದಿಂದ ಎರವಲು ಪಡೆದದ್ದೇ ಅದೇ ಮಂಥರೆ, ಶಕುನಿಯ ಕುತಂತ್ರವನ್ನೇ. ಆಶ್ರಯ, ಅನ್ನ ಕೊಟ್ಟ ಪಕ್ಷಕ್ಕೇ ಕನ್ನ ಕೊರೆಯುವ, ಉಂಡ ಮನೆಗೇ ಎರಡನ್ನು ಬಗೆಯುವ ಮೀರ್ʼಸಾದಿಕರ ಆಡಂಬೋಲವೇ ಕಾಂಗ್ರೆಸ್. 75 ವರ್ಷದ ಈ ಪರದೇಸಿ ಪಕ್ಷದ್ದು ಸಮಾಜವಾದ, ಸಮತಾವಾದ, ಪ್ರಜಾಪ್ರಭುತ್ವವಾದ ಅಲ್ಲ, ಅದರದ್ದೇನಿದ್ದರೂ 'ಮೀರುಸಾದಿಕವಾದ!'; ಆ ಹಸ್ತವಾಸಿ ಲೋಕವಿಖ್ಯಾತಿ ಎಂದು ಕಾಂಗ್ರೆಸ್ ಅನ್ನು ಜೆಡಿಎಸ್ ಮೂದಲಿಸಿದೆ.
ಕಾಂಗ್ರೆಸ್ ತನಗಿರುವ ಬಿರುದು ಬಾವಲಿಗಳನ್ನು ಇನ್ನೊಬ್ಬರ ಹಣೆಗೆ ಕಟ್ಟುವ ಕೀಳು ಕಸುಬಿಗೆ ಕೈ ಹಾಕಿದೆ. ಗೋಮುಖವ್ಯಾಘ್ರವೇ ಈಗ ಕುಮಾರಸ್ವಾಮಿ ಅವರನ್ನು ಗೋಸುಂಬೆ ಎಂದು ನಿಂದಿಸುತ್ತಿದೆ. ಅಕ್ರಮ, ಅವ್ಯವಹಾರ, ಅನಾಚಾರ.. ಅಷ್ಟೇ ಅಲ್ಲ, ವಾಮಾಚಾರದ ವೀರನೇ ರಾಜ್ಯ ಕಾಂಗ್ರೆಸ್ ಸಾರಥಿ ಎಂದು ಕಿಡಿಕಾರಿದೆ ಜೆಡಿಎಸ್.
ಟೂಲ್ ಕಿಟ್ ಕಾರ್ಯಗಾರ ಎಲ್ಲಿದೆ?:
ಜಾತ್ಯತೀತತೆ ತನ್ನದೇ ಗುತ್ತಿಗೆ ಎಂದು ಕರ್ಣಕಠೋರ ಸುಳ್ಳು ಹೇಳುತ್ತಾ ಅದನ್ನು ಬಿಹಾರದ ನಿತೀಶ್ ಕುಮಾರ್ ಅವರ ಮನೆ ಹಿತ್ತಲಲ್ಲಿ ಹೂತು ಸಮಾಧಿ ಮಾಡಿದೆ ಕಾಂಗ್ರೆಸ್. ಈಗ ಜಾತಿ-ಜಾತಿ ಎನ್ನುತ್ತಾ ಜಾತಿಗಣಿತ ಎಂಬ ಅಪಾಯಕಾರಿ ಆಟ ಆರಂಭಿಸಿ ಚುನಾವಣೆಗೆ ಮುನ್ನವೇ ಟೂಲ್ ಕಿಟ್ ರೆಡಿ ಮಾಡಿಟ್ಟಿದೆ. ಈ ದುಷ್ಟ ಟೂಲುಕಿಟ್ಟಿನ ಕಿರಾತಕ ಕಾರ್ಯಾಗಾರ ಇಟಲಿಯಲ್ಲಿದೆಯೋ ಅಥವಾ ಲುಲೂ ಮಾಲಿನ ಮೇಲಿದೆಯೋ? ಎಂದು ಜೆಡಿಎಸ್ ಪ್ರಶ್ನಿಸಿದೆ.
ಇದನ್ನೂ ಓದಿ: ಅರ್ಹ ನಾಗರಿಕರಿಗೆ ಡಿಬಿಟಿ ಮೂಲಕ ನೇರವಾಗಿ ಹಣ ವರ್ಗಾವಣೆ ಆಗಬೇಕು: ಸಚಿವ ಕೆ.ಎಚ್ ಮುನಿಯಪ್ಪ
ರಾಜ್ಯವನ್ನು ತುಷ್ಟೀಕರಣದ ಬಿಸಿತುಪ್ಪದಲ್ಲಿ ಬೇಯಿಸಲು ನಡೆಯುತ್ತಿರುವ ಟೂಲ್ ಕಿಟ್ ಕಾರ್ಯಾಗಾರದಲ್ಲಿ ಕೋಮು ಕುಂಡ ಸಿದ್ಧಪಡಿಸಿದೆ ಕೈ ಪಕ್ಷ. ಶಿವಮೊಗ್ಗದಲ್ಲಿ ನಡೆದಿದ್ದು ಅದರ ಸ್ಯಾಂಪಲ್ಲಾ? ಅದನ್ನು ರಾಜ್ಯವ್ಯಾಪಿ ವಿಸ್ತರಿಸಲು ಹುನ್ನಾರವಾ? ಎಂದು ಜೆಡಿಎಸ್ ಕೇಳಿದೆ.
ಪಕ್ಷಕ್ಕೆ ಚಟ್ಟ ಕಟ್ಟಿದವರೇ ಸಿಎಂ!!
ಕುಮಾರಸ್ವಾಮಿ ಅವರನ್ನು ವಚನ ಭ್ರಷ್ಟರು ಎನ್ನುತ್ತೀರಿ. ಮೈತ್ರಿ ಸರಕಾರ ತೆಗೆದು ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೇ ಒಳಏಟು ಕೊಟ್ಟ ಸಿದ್ದಪುರುಷರನ್ನೇ ಸಿಎಂ ಮಾಡಿಕೊಂಡಿದ್ದೀರಿ. ಸಿಗ್ಗು, ಲಜ್ಜೆ ಇಲ್ಲವೇ? ಪಕ್ಷ ವಿರೋಧಿಗೇ ಪಟ್ಟ ಕಟ್ಟಿ, ಪಕ್ಷದ ಚಟ್ಟ ಎತ್ತಿದ ಈ ರಾಜಕಾರಣಕ್ಕೆ ಏನೆಂದು ಹೇಳಬೇಕು? ಎಂದಿರುವ ಜೆಡಿಎಸ್; ಕಾಲಕ್ಕೆ ಕಾಂಗ್ರೆಸ್ ಎಂದು ಕೈ ಪಕ್ಷದ ಕಾಲೆಳೆದಿದೆ.
ಕಾಂಗ್ರೆಸ್ ಜಿನ್ನಾ ಜೀನ್ಸಿನ ಪಕ್ಷ:
ಜಿನ್ನಾ ಜೀನ್ಸಿನ ಕಾಂಗ್ರೆಸ್ ಪಕ್ಷಕ್ಕೆ ಜೆಡಿಎಸ್ ಬಿಜೆಪಿ ಫೋಬಿಯಾ ಶುರುವಾಗಿದೆ. ಅದಕ್ಕೆ ಹೊಸ ಟೂಲ್ ಕಿಟ್ ಗಳ ಆವಿಷ್ಕಾರದಲ್ಲಿ ತೊಡಗಿದೆ. ತುಷ್ಟೀಕರಣ ಮಾಡುತ್ತಲೇ ಕಾಶ್ಮೀರಕ್ಕೆ ಮರಣಶಾಸನ ಬರೆದಿದ್ದ ಹೇಯ ಪಕ್ಷವು ಈಗ ಆತ್ಮಗೌರವ ಎಂದು ಹಲುಬುತ್ತಿದೆ ಎಂದಿರುವ ಜೆಡಿಎಸ್; ಅಂಗಿ ಹರಿದುಕೊಂಡು, ರಾತ್ರಿ ವೇಳೆ ತೂರಾಡಿಕೊಂಡು ಯಾರು ಓಡಾಡುತ್ತಿದ್ದಾರೆ ಎನ್ನುವುದನ್ನು ಮಾಧ್ಯಮಗಳೇ ತೋರಿಸಿವೆ. ಕೆಲ ದಿನ ಕಾಯಿರಿ, ಅಂಗಿ ಹರಿದುಕೊಳ್ಳುವ ಸ್ಥಿತಿ ಯಾರಿಗೆ ಕಾದಿದೆಯೋ ನೋಡೋಣ. 135 ಶಾಸಕರಿದ್ದಾರೆ ಎಂದು ಬೀಗಿದ್ದೇ ಬಂತು. ಈಗ ಒಂದು ಪಾರ್ಟಿ, ಹತ್ತಾರು ಬಣ ಎನ್ನುವ ಕಾಂಗ್ರೆಸ್ ನ ಬುಡವೇ ಬಿದ್ದುಹೋಗುವ ಪರಿಸ್ಥಿತಿ ಸೃಷ್ಟಿ ಆಗುತ್ತಿದೆ. ಹತಾಶೆ, ಮತಿಭ್ರಮಣೆ ಯಾರಿಗೆ..? ಅರ್ಥವಾಗದಷ್ಟು ಅಜ್ಞಾನವೇ ನಿಮಗೆ? ಎಂದು ಪ್ರಶ್ನೆ ಮಾಡಿದೆ.
ಒಕ್ಕಲಿಗರ ವಿರುದ್ಧ ಕಾಂಗ್ರೆಸ್ ದುಷ್ಟ ಹುನ್ನಾರ:
ಜಾತ್ಯತೀತ ಎನ್ನುತ್ತ ಒಕ್ಕಲಿಗರನ್ನು ಎತ್ತಿಕಟ್ಟುವ ನೀಚ ಪ್ರಯತ್ನಕ್ಕೂ ಕೈ ಹಾಕಿದೆ ಕಾಂಗ್ರೆಸ್. ಒಕ್ಕಲಿಗರು ಹೀನ ಸಂಸ್ಕೃತಿಯುಳ್ಳವರು, ಸಂಸ್ಕೃತಿಹೀನರು ಎನ್ನುವ ಕೊಳಕು ಹೇಳಿಕೆ ಹಿಂದೆ ಇದೇ ಕಾಂಗ್ರೆಸ್ಸಿನ ಟೂಲ್ ಕಿಟ್ ಷಡ್ಯಂತ್ರ ಅಡಗಿದೆ. ಆ ಭಾಗವಾಗಿ ಒಕ್ಕಲಿಗರ ಕುಲದೈವ ಶ್ರೀ ಭೈರವೇಶ್ವರ ದೇವರನ್ನು, ಪರಮಪೂಜ್ಯ ಶ್ರೀಗಳನ್ನು ಎಳೆದು ತಂದಿರುವುದು ಅಕ್ಷಮ್ಯ ಹಾಗೂ ಒಕ್ಕಲಿಗರನ್ನು ಕೆಣಕುವ ದುಷ್ಟ ಹುನ್ನಾರವಲ್ಲದೆ ಬೇರೇನೂ ಅಲ್ಲ ಜೆಡಿಎಸ್ ಕಟುವಾಗಿ ಟೀಕಿಸಿದೆ.
ಮುಸ್ಲಿಮರ ಟೋಪಿಗೆ ಕಾಂಗ್ರೆಸ್ ಅಪಮಾನ:
ಕುಮಾರಸ್ವಾಮಿ ಅವರು ಟೋಪಿ ಧರಿಸಿದರು, ಮಸೀದಿಗೆ ಹೋದರು, ಬಿರಿಯಾನಿ ತಿಂದರು. ಇದೇನೋ ಸರಿ. ಆದರೆ, ತುರ್ತು ಪರಿಸ್ಥಿತಿ ವೇಳೆ ಸಂಜಯಗಾಂಧಿ ಮಾಡಿದ್ದನ್ನು ಕುಮಾರಸ್ವಾಮಿ ಅವರು ಮಾಡಿದ್ದಾರೆಯೇ? ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಸ್ಲಿಂ ಲೀಗ್ ಅನ್ನು ಎತ್ತಿಕಟ್ಟಿ ದೇಶ ಒಡೆದ ದೇಶದ್ರೋಹವನ್ನು ಅವರು ಎಸಗಿದ್ದಾರೆಯೇ? ಹಾಗಾದರೆ, ನಿಮ್ಮ ಅರ್ಥದಲ್ಲಿ ಶಿರದ ಮೇಲೆ ಮುಸ್ಲಿಮರು ಧರಿಸುವ ಟೋಪಿ ಮಕ್ಮಲ್ ಟೋಪಿಯೇ? ಮುಸ್ಲಿಮರ ಟೋಪಿಗೂ ಅಪಮಾನ ಮಾಡಿದೆ ಕಾಂಗ್ರೆಸ್!! ಎಂದು ಜೆಡಿಎಸ್ ಹೇಳಿದೆ.
ತಿಹಾರ್ ಜೈಲುಹಕ್ಕಿ ಕಾಂಗ್ರೆಸ್ ಅಧ್ಯಕ್ಷ:
ತಿಹಾರ್ ಜೈಲುಹಕ್ಕಿಯನ್ನೇ ಅಧ್ಯಕ್ಷ ಎಂದು ಒಪ್ಪಿಕೊಂಡಿರುವ ಗತಿಗೆಟ್ಟ, ನೀತಿಗೆಟ್ಟ ಕಾಂಗ್ರೆಸ್, ಮೈತ್ರಿ ಬಗ್ಗೆ ಭಸ್ಮಾಸುರ ಕಥೆ ಹೇಳುತ್ತಿದೆ. ಇವತ್ತು ಅಕ್ಕಪಕ್ಕ ಕೂರಿಸಿಕೊಂಡಿರುವ ಮೈತ್ರಿಪಕ್ಷಗಳ ನಾಯಕರಿಗೆ ಕೊಟ್ಟಿದ್ದ ಕಿರುಕುಳ ಜಗದ್ವಿಖ್ಯಾತಿ. ಕರುಣಾನಿಧಿ ಅವರ ಸರಕಾರವನ್ನೇ ವಜಾ ಮಾಡಿ, ಈಗ ಅವರ ಮಗ ಸ್ಟಾಲಿನ್ ಜತೆಯೂ ಲಜ್ಜೆ ಇಲ್ಲದೆ ಅಡ್ಜಸ್ಟ್ ಮಾಡಿಕೊಂಡು, ಅವರಿಗೆ ಕಾವೇರಿ ಹಿತವನ್ನು ಅಡವಿಟ್ಟ ಕಾಂಗ್ರೆಸ್ ಬಗ್ಗೆ ಬೀದಿ ಬೀದಿಯಲ್ಲಿ ಜನ ಮಾತನಾಡುತ್ತಿದ್ದಾರೆ ಎಂದು ಪಕ್ಷ ಟೀಕಿಸಿದೆ.
ನಿಯತ್ತಿನ ಬಗ್ಗೆ ಹೇಳುವುದಾದರೆ, ಕಾಂಗ್ರೆಸ್ ಪಕ್ಷಕ್ಕೆ ಇರುವ ವಿರುದ್ಧ ಪದಗಳಲ್ಲಿ ನಿಯತ್ತು ಕೂಡ ಒಂದು. ನೀತಿ, ನಿಯತ್ತು ಎಂದರೆ ಅದಕ್ಕೆ ಗಾವುದ ದೂರ. ಚರಿತ್ರೆ ಬಿಚ್ಚಿಟ್ಟರೆ ಕಾಂಗ್ರೆಸ್ ಮುಖವೇ ಕೊಳಕುಮಂಡಲದಂತೆ ಮುದುಡಿಕೊಳ್ಳುತ್ತಿದೆ. ಎಷ್ಟೋ ಪ್ರಾದೇಶಿಕ ಪಕ್ಷಗಳನ್ನು ಹಸ್ತಪಕ್ಷ ಆಪೋಶನ ತೆಗುಕೊಂಡಿದ್ದೇ ಒಂದು ಅಮರಚಿತ್ರ ಕಥೆ. ಪರಕೀಯ ವಿಚಾರಧಾರೆ ಮೂಲಕ ಈಗಲೂ ಬ್ರಿಟಿಷ್ ಗುಲಾಮಿ ಮನಃಸ್ಥಿತಿಯಲ್ಲಿದೆ ಕಾಂಗ್ರೆಸ್. ದುರಂತಕ್ಕೆ ಈಗ ಇನ್ನೊಬ್ಬರ ಆತ್ಮಸಾಕ್ಷಿ ಬಗ್ಗೆ ಅಲವತ್ತುಕೊಳ್ಳುತ್ತಿದೆ ಎಂದು ಜೆಡಿಎಸ್ ಲೇವಡಿ ಮಾಡಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.