ಬೆಂಗಳೂರು: ರಾಜ್ಯ ಸರ್ಕಾರದ ಗೃಹ ಇಲಾಖೆ ಸಲಹೆಗಾರ ಕೆಂಪಯ್ಯ ಕೊನೆಗೂ ಆ ಸ್ಥಾನದಿಂದ ಕೆಳಗಿಳಿಸಲಾಗಿದೆ. ಕೆಂಪಯ್ಯ ಹುದ್ದೆ ಅಸಂವಿಧಾನಿಕ ಎಂದು ಅಧಿಕೃತವಾಗಿ ಪ್ರಕಟಿಸಿರುವ ಚುನಾವಣಾ ಆಯೋಗ ಅವರನ್ನು ಆ ಸ್ಥಾನದಿಂದ ವಜಾಗೊಳಿಸಿದೆ. 


COMMERCIAL BREAK
SCROLL TO CONTINUE READING

ನೀತಿ ಸಂಹಿತೆ ಉಲ್ಲಂಘನೆಯಾದರೂ ಕೆಂಪಯ್ಯ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಕೆಂಪಯ್ಯ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದವು. 


ಚುನಾವಣಾ ಆಯೋಗದ ಮುಖ್ಯಸ್ಥರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಹೆಚ್ಡಿಡಿ


ಏಪ್ರಿಲ್ 5ರಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಚುನಾವಣಾ ಮುಖ್ಯಸ್ಥರನ್ನು ಸ್ವತಃ ಭೇಟಿ ಮಾಡಿ ಗೃಹ ಇಲಾಖೆಯಲ್ಲಿ ಕೆಂಪಯ್ಯ ಅವರ ಕೈ ಚಳಕದ ಬಗ್ಗೆ ಆಯೋಗಕ್ಕೆ ಮಾಹಿತಿ ನೀಡಿದ್ದರು. ಗೃಹ ಇಲಾಖೆಯಲ್ಲಿ ಕಾನೂನು ಸಡಿಲವಾಗಿದೆ. ಅಲ್ಲದೆ ನಿಷ್ಠಾವಂತ ಅಧಿಕಾರಿಗಳನ್ನು ಸರ್ಕಾರ ಬದಲಾವಣೆ ಮಾಡಿದೆ ಎಂಬ ಮಾಹಿತಿ ನೀಡಿರುವುದಾಗಿ ತಿಳಿಸಿದ್ದರು. 


ಪ್ರತಿಪಕ್ಷಗಳು ನೀಡಿದ್ದ ದೂರಿನ ಅನ್ವಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಕೆಂಪಯ್ಯ ಹುದ್ದೆ ಕುರಿತು ವಿವರ ಕೇಳಿದ್ದ ಚುನಾವಣಾ ಆಯೋಗ, ಕೆಂಪಯ್ಯ ನಿರ್ವಹಿಸುತ್ತಿರುವ ಹುದ್ದೆ ಅಸಂವಿಧಾನಿಕ, ಅವರು ಆ ಹುದ್ದೆಯಲ್ಲಿ ಮುಂದುವರೆಯಲು ಅವಕಾಶವಿಲ್ಲ ಎಂದು ಸರ್ಕಾರಕ್ಕೆ ಆದೇಶ ನೀಡಿದೆ.


ಪೊಲೀಸ್ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿ, ಚುನಾವಣೆಯಲ್ಲಿ ಅಕ್ರಮವೆಸಗಲು ಯತ್ನಿಸುತ್ತಿದ್ದ ರಾಜ್ಯ ಗೃಹ ಇಲಾಖೆಯ ಸಲಹೆಗಾರ ಕೆಂಪಯ್ಯರನ್ನು ವಜಾ ಮಾಡಿರುವ ಚುನಾವಣಾ ಆಯೋಗದ ನಿರ್ಧಾರ ಸ್ವಾಗತಾರ್ಹ. ಭ್ರಷ್ಟಾಚಾರ ಮಾಡಲು ಕಳಂಕಿತರನ್ನು ಸಲಹೆಗಾರರನ್ನಾಗಿ ನೇಮಿಸಿಕೊಳ್ಳುವ ಸಿದ್ದರಾಮಯ್ಯನವರಿಗೆ ಇದರಿಂದ ಮುಖಭಂಗವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.