ಬೆಂಗಳೂರು : ಡಿ.6 ನವಂಬರ್ ತಿಂಗಳಿನಲ್ಲಿ ನಡೆದ  ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಮಾಡಿಕೊಂಡಿರುವ ಒಪ್ಪಂದಗಳು ಮುಂದಿನ 5 ವರ್ಷಗಳಲ್ಲಿ ಶೇ.75 ರಷ್ಟು ಅನುಷ್ಠಾನಕ್ಕೆ ಬರಲಿದ್ದು, ಯಾವುದೇ ರೀತಿಯ ಅನುಮಾನ ಬೇಡ  ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್. ನಿರಾಣಿ ಅವರು ಭರವಸೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಮಂಗಳವಾರ ಬೆಂಗಳೂರು ಪ್ರೆಸ್ ಕ್ಲಬ್ ಏರ್ಪಡಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಸಚಿವ ಮುರುಗೇಶ್, ನಾವು ಕೇವಲ ವೈಭವೀಕರಣಮಾಡಿಕೊಳ್ಳಲು ಅಥವಾ ಬಂಡವಾಳ ಹೆಚ್ಚಿಸಿಕೊಳ್ಳಲು ಇಲ್ಲವೇ  ಅಂಕಿ-ಸಂಖಿಗಳನ್ನು ತೋರಿಸಿಕೊಳ್ಳಲು ಒಪ್ಪಂದ ಮಾಡಿಕೊಂಡಿಲ್ಲ. ಯೋಜನೆಗಳನ್ನು ರಾಜ್ಯದಲ್ಲಿ ಪ್ರಾರಂಭಿಸುವವರಿಗೆ ಮಾತ್ರ  ಅನುಮೋದನೆ ನೀಡಿದ್ದೇವೆ. ಇನ್ನು 5 ವರ್ಷದೊಳಗೆ ಶೇ. 75ರಷ್ಟು ಎಂಒಯು ಅನುಷ್ಠಾನಕ್ಕೆ ಬರಲಿವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.


ಇದನ್ನೂ ಓದಿ : Nagaraj Watal : ರಾಜ್ಯಕ್ಕೆ ಬರುವ ಮಹಾರಾಷ್ಟ್ರ ಸಚಿವರನ್ನು ಬಂಧಿಸಿ : ವಾಟಾಳ್ ಆಗ್ರಹ 


ನವೆಂಬರ್ ತಿಂಗಳಲ್ಲಿ ನಡೆದ ಹೂಡಿಕೆದಾರರ ಸಮಾವೇಶದಲ್ಲಿ ಸುಮಾರು 9.81 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಯಾಗಿವೆ. ಉದ್ದಿಮೆಗಳಿಗೆ ಬೇಕಾದ ನೀರು, ಭೂಮಿ, ವಿದ್ಯುತ್, ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಲು ಈಗಾಗಲೇ ಸಂಬಂಧಪಟ್ಟ ಇಲಾಖೆಗಳ ಜೊತೆ ಸಮನ್ವಯ ಸಮಿತಿಯನ್ನು ರಚಿಸಿದ್ದೇವೆ. ಇದು ನಮ್ಮ ನಿರೀಕ್ಷೆಗೂ ಮೀರಿ ಅನುಷ್ಠಾನವಾಗುತ್ತದೆ ಎಂದು ಸಂತಸವನ್ನು ವ್ಯಕ್ತಪಡಿಸಿದರು.


ರಾಜ್ಯದಲ್ಲಿ 2 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲು ಉದ್ಯಮಿಗಳು ಮುಂದೆ ಬಂದಿದ್ದರೂ ನಾವು ಅವರ ಜೊತೆ  ಎಂಒಯು ಮಾಡಿಕೊಂಡಿಲ್ಲ. ಈಗಾಗಲೇ ಮಾಡಿಕೊಂಡಿರುವ  ತಿಳುವಳಿಕೆ ಒಪ್ಪಂದ ಪತ್ರಕ್ಕೆ (ಎಂಒಯು) ಆದ್ಯತೆ ಕೊಡುತ್ತೇವೆ. ಕೇವಲ ಅಂಕಿ-ಸಂಖ್ಯೆಗಳನ್ನು ಹೆಚ್ಚಿಸಲು ಒಪ್ಪಂದ ಮಾಡಿಕೊಳ್ಳುವ ಪ್ರವೃತ್ತಿ ನಮ್ಮಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದರು .


ಪ್ರಮಾಣ ಪತ್ರ ಆಧಾರಿತ ತಿಳುವಳಿ ಮಾಡಿಕೊಂಡಿರುವವರ ಜೊತೆ ಒಪ್ಪಂದ ಮಾಡಿಕೊಂಡಿದ್ದೇವೆ.  ಅಂದರೆ ಯಾರು ನಮ್ಮ ರಾಜ್ಯದಲ್ಲಿ ಖಚಿತವಾಗಿ ಹೂಡಿಕೆ ಮಾಡಿ ಉದ್ಯಮಗಳನ್ನು ಆರಂಭಿಸುತ್ತಾರೋ ಅಂತಹವರಿಗೆ ಮಾತ್ರ ಆದ್ಯತೆ ಕೊಟ್ಟಿದ್ದೇವೆ.  ಹಿಂದಿನ ಸರ್ಕಾರಗಳ ಕೆಲವು ತಪ್ಪುಗಳಿಂದಾಗಿ ಯೋಜನೆಗಳು ಅನುಷ್ಠಾನವಾಗಲಿಲ್ಲ ಎಂದು ನಿರಾಣಿ ಬೇಸರ ವ್ಯಕ್ತಪಡಿಸಿದರು.


ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಶೇ. 90ರಷ್ಟು ಟಯರ್-2 ಮತ್ತು 3 ನಗರಗಳಲ್ಲಿ ಹೂಡಿಕೆಯಾಗಿವೆ. 2 ಮತ್ತು 3ನೇ ಹಂತದ ನಗರಗಳಲ್ಲಿ ಬಂಡವಾಳ ಹೂಡಿಕೆಗೆ ಗಮನಹರಿಸಿದ್ದೇವೆ ಎಂದರು.


 ಕೈಗಾರಿಕಾ ಉದ್ದೇಶಗಳಿಗೆ ನಾವು ಯಾವುದೇ ಒಬ್ಬೇ ಒಬ್ಬ ರೈತರಿಂದಲೂ ಬಲವಂತವಾಗಿ ಜಮೀನನ್ನು ಭೂಸ್ವಾೀನ ಮಾಡಿಕೊಳ್ಳುತ್ತಿಲ್ಲ. ಸ್ವಯಂಪ್ರೇರಿತರಾಗಿ ಯಾರು ಜಮೀನು ಕೊಡಲು ಬರುತ್ತಾರೋ ಅಂತಹವರಿಗೆ ಮಾತ್ರ ಸ್ವಾೀನಪಡಿಸಿಕೊಳ್ಳುತ್ತಿದ್ದೇವೆ. ಕೃಷಿಯೋಗ್ಯ ಜಮೀನನ್ನು ಸ್ವಾಧೀನಪಡಿಸಿಕೊಳ್ಳುವುದಿಲ್ಲ ಎಂದು  ಪ್ರಶ್ನೆಯೊಂದಕ್ಕೆ ಸ್ಪಷ್ಟಪಡಿಸಿದರು.


ಕೆಲವು ಕಡೆ ರೈತರು ಸ್ವಯಂಪ್ರೇರಿತರಾಗಿ ಬಂದು ತಮ್ಮ ಜಮೀನನ್ನು ಮಾರುಕಟ್ಟೆ ದರದಂತೆ ಖರೀದಿ ಮಾಡಬೇಕೆಂದು ಮನವಿ ಮಾಡಿದ್ದಾರೆ. ಕೆಲವು ಕಡೆ ಜಮೀನೇ ಇಲ್ಲದ ರೈತರು ಪ್ರತಿಭಟನೆ ನಡೆಸುತ್ತಾರೆ. ಇದರ ಹಿಂದೆ ರಾಜಕೀಯ ಉದ್ದೇಶವೂ ಇದೆ. ರಾಜ್ಯದಲ್ಲಿ ಇದುವರೆಗೂ ನಾವು ಕೈಗಾರಿಕೆಗಳಿಗೆ ಕೇವಲ ಶೇ. 0.61  ಭೂಮಿಯನ್ನು ಮಾತ್ರ ಬಳಸಿಕೊಂಡಿದ್ದೇವೆ ಎಂದು  ಅಂಕಿ ಸಂಖ್ಯೆಗಳನ್ನು ವಿವರಿಸಿದರು.


 ಉದ್ಯೋಗ ಸೃಷ್ಟಿ 


ಮಂಗಳವಾರ ಕರ್ನಾಟಕ ಉದ್ಯೋಗ ಮಿತ್ರದಲ್ಲಿ ನಡೆದ 136ನೇ ರಾಜ್ಯಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಯಲ್ಲಿ 59 ಯೋಜನೆಗಳಿಂದ 20627.88 ಕೋಟಿ ರೂ. ಬಂಡವಾಳ ಹೂಡಿಕೆಯಾಗಿದ್ದು, ಇದರಿಂದ 80764 ಜನರಿಗೆ ಉದ್ಯೋಗಾವಕಾಶ ಲಭಿಸಲಿವೆ ಎಂದು ನಿರಾಣಿ ತಿಳಿಸಿದರು.


50 ಕೋಟಿಗೂ ರೂ. ಹೆಚ್ಚು ಬಂಡವಾಳ ಹೂಡಿಕೆಯ 7 ಪ್ರಮುಖ ಬೃಹತ್ ಮತ್ತು ಮದ್ಯಮ ಯೋಜನೆಗಳಿಗೆ ಅನುಮೋದನೆ ನೀಡಿದ್ದು, 852.06 ಕೋಟಿ ರೂ. ಬಂಡವಾಳ ಹೂಡಿಕೆಯಾಗಿ 3560 ಜನರಿಗೆ ಉದ್ಯೋಗ ಅವಕಾಶ ಲಭಿಸಲಿದೆ. 


15 ಕೋಟಿ ರೂ. 50 ಕೋಟಿ ರೂ.  ಯೊಳಗಿನ 48 ಹೊಸ ಯೋಜನೆಗಳಿಗೆ ಸಮಿತಿಯು ಅನುಮೋದನೆ ನೀಡಿದ್ದು, ಒಟ್ಟು 923.9 ಕೋಟಿ ರೂ. ಬಂಡವಾಳ ಹೂಡಿಕೆಯಾಗಿ 4444 ಜನರಿಗೆ ಉದ್ಯೋಗಗಳು ಸಿಗಲಿವೆ. ಹೆಚ್ಚುವರಿ ಬಂಡವಾಳ ಹೂಡಿಕೆಯ ನಾಲ್ಕು ಯೋಜನೆಗಳಿಂದ 852.73 ಕೋಟಿ ರೂ. ಬಂಡವಾಳ ಹೂಡಿಕೆಯಾಗಿ ಅಂದಾಜು 1460 ಜನರಿಗೆ ಉದ್ಯೋಗ ಅವಕಾಶ ಸಿಗಲಿವೆ ಎಂದು ವಿವರಿಸಿದರು.


ಇದನ್ನೂ ಓದಿ : Karnataka Congress : ಕಾಂಗ್ರೆಸ್‌ಗೆ ತಲೆನೋವು ತಂದ ಅರ್ಜಿಗೆ ₹5000 ಆಫರ್! ಡಿಕೆ ಆಕಾಂಕ್ಷಿಗಳ ವಿರುದ್ಧ ಗರಂ


ಎಥನಾಲ್ ಬಳಕೆಗೆ  ಹೆಚ್ಚು ಒತ್ತು


ರಾಜ್ಯದಲ್ಲಿ  ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಹೊರೆಯನ್ನು ತಗ್ಗಿಸಿ ಎಥನಾಲ್ ಬಳಕೆಗೆ  ಹೆಚ್ಚು ಒತ್ತು ಕೊಟ್ಟಿದ್ದೇವೆ, ಇದರಿಂದ ಪರಿಸರ ಮತ್ತು ನಾಗರೀಕ ಸಮಾಜದ ಮೇಲೆ ಉಂಟಾಗುತ್ತಿದ್ದ ದುಷ್ಪರಿಣಾಮಗಳು ಕಡಿಮೆ ಆಗಲಿವೆ ಎಂದು ನಿರಾಣಿ ಅವರು ತಿಳಿಸಿದರು. 
ಈಗಾಗಲೇ ಡೀಸೆಲ್ ಇಂಜಿನ್ ವಾಹನಗಳ ಅಮದನ್ನು ಬಂದ್ ಮಾಡಲಾಗಿದೆ. ವಾಹನಗಳನ್ನು ಬಯೋ ಫ್ಯೂಲ್ ಅಂದರೆ ಸ್ಥಳೀಯವಾಗಿ ದೊರೆಯುವ ಎಥನಾಳ ತ್ಯಲದಿಂದ ವಾಹನಗಳನ್ನು ಚಾಲನೆ ಮಾಡಲು ಒತ್ತು ನೀಡಲಾಗುವುದು, ಎಂದರು.


ಅಮದನ್ನು ಕಡಿಮೆ ಮಾಡಿ ರಫ್ತು ಹೆಚ್ಚಿಸಲು ಒತ್ತು ನೀಡುತ್ತಿದ್ದು ಮೇಕ್ ಇನ್ ಇಂಡಿಯಾಗೆ ಅನುವು ಮಾಡಿ ಕೊಡುವುದರಿಂದ ರಾಜ್ಯ ಇಡೀ ಪ್ರಪಂಚದಲ್ಲಿ ಬಲಿಷ್ಠವಾಗಿ ಹೊರ ಹಿಮ್ಮಲಿದೆ ಎಂದು ಹೇಳಲು ಹರ್ಷಿಸುತ್ತೇನೆ.ಸರ್. ಎಂ. ವಿಶ್ವೇಶ್ವರಯ್ಯ ಅವರ ಕನಸನ್ನು ಸಾಕಾರ ಮಾಡುವತ್ತ ನಮ್ಮ ಸರ್ಕಾರ ಸಾಗಿದೆ, ಎಂದು ಹೇಳಿದರು ನಿರಾಣಿ. 


ಎಲ್ಲರಿಗೂ ಮೀಸಲಾತಿ ಸಿಗಲಿ 


ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವ ಸಂಬಂಧ ಸರ್ಕಾರ  ಸಕಾರಾತ್ಮಕವಾದ ನಿರ್ಧಾರಗಳನ್ನು ತೆಗೆದುಕೊಂಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈಗಾಗಲೇ ಹಿಂದುಳಿದ ವರ್ಗಗಳ ಆಯೋಗ ನೀಡುವ ವರದಿ ಮೇಲೆ  ಮುಂದಿನ ಕ್ರಮವನ್ನು ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.


ಪಂಚಮಸಾಲಿ ಸಮುದಾಯದ ಜೊತೆಗೆ  ವೀರಶೈವ, ಲಿಂಗಾಯತ ಸಮುದಾಯದಲ್ಲಿರುವ ಸಣ್ಣ ಸಣ್ಣ ಸಮುದಾಯಕ್ಕೂ ಮೀಸಲಾತಿ ಸಿಗಬೇಕೆಂಬುದು ನಮ್ಮ ಆಶಯ. ಈಗಲೂ  ನಮ್ಮ ಸಮುದಾಯದಲ್ಲಿ ಕೆಲವರಿಗೆ ಸೂಕ್ತವಾದ ಸಂವಿಧಾನ ಬದ್ಧ ಸ್ಥಾನಮಾನಗಳು ಸಿಕ್ಕಿಲ್ಲ. ನನ್ನ ಪ್ರಕಾರ ಸಮಸ್ತ ವೀರಶೈವ ಸಮುದಾಯಕ್ಕೆ ಮೀಸಲಾತಿ ಅಗತ್ಯ ಎಂದು ನಿರಾಣಿ ಅಭಿಪ್ರಾಯಪಟ್ಟರು. ಹಿಂದುಳಿದ ವರ್ಗಗಳ ಆಯೋಗವರದಿ ಕೊಟ್ಟ ತಕ್ಷಣ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.


ಕಮಿಷನ್ ಆರೋಪ ರಾಜಕೀಯ ಆರೋಪ ಕುರಿತಾಗಿ ಮಾತನಾಡಿದ ನಿರಾಣಿ ಅವರು ಇದೊಂದು ಆಧಾರರಹಿತ ಆರೋಪ. ಇದರಲ್ಲಿ ಸತ್ಯಾಂಶ ಇಲ್ಲ ಎಂದು ಪರೋಕ್ಷವಾಗಿ 
ಪ್ರತಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.