ತುಮಕೂರು: ನಡೆದಾಡುವ ದೇವರು, ದೈವೀ ಚೇತನ, ಮಾನವೀಯತೆ, ಕರುಣೆ, ತ್ರಿವಿಧ ದಾಸೋಹಗಳ ಸಾಕಾರ ಮೂರ್ತಿ ಶ್ರೀ ಶಿವಕುಮಾರ ಸ್ವಾಮೀಜಿ ನಿಧನಕ್ಕೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. ಇಂತಹ ಮಹಾನ್ ಸ್ವರೂಪಿ ಅಂತಿಮ ಘಳಿಗೆಯಲ್ಲೂ ಮಕ್ಕಳ ಬಗ್ಗೆ ಅಪಾರ ಪ್ರೀತಿ ಮೆರೆದಿದ್ದಾರೆ. 


COMMERCIAL BREAK
SCROLL TO CONTINUE READING

ಸಿದ್ಧಗಂಗಾ ಸ್ವಾಮಿಜಿಗಳಿಗೆ ಮಕ್ಕಳೆಂದರೆ ಬಲು ಪ್ರೀತಿ. ತಮ್ಮ ಮಠದಲ್ಲಿ ವಿಧ್ಯಾಭ್ಯಾಸ ಪಡೆಯುವ ಎಲ್ಲಾ ಮಕ್ಕಳನ್ನೂ ತಂದೆ, ತಾಯಿಯಂತೆ ಸಲಹುತ್ತಿದ್ದರು. ಹೀಗಾಗಿಯೇ ಅವರ ಕೊನೆಯ ಆಸೆ, ಮಾತು ಕೂಡ ಮಕ್ಕಳಿಗೆ ಸಂಬಂಧಿಸಿದ್ದೇ ಆಗಿತ್ತು. 


ಶಿವಕುಮಾರ ಸ್ವಾಮೀಜಿಗಳಿಗೆ ತಾವು ಕೆಲವೇ ಸಮಯ ಬದುಕುವುದು ಎಂದು ಮೊದಲೇ ತಿಳಿದಿತ್ತೋ, ಏನೋ... ಹಾಗಾಗಿ ಮಠದ ಕಿರಿಯ ಸ್ವಾಮೀಜಿಗಳನ್ನು ಕರೆದು ತಾವೇನಾದರೂ ನಿಧನರಾದರೆ, ಮಕ್ಕಳ ಭೋಜನದ ಬಳಿಕವಷ್ಟೇ ವಿಷಯ ತಿಳಿಸಬೇಕು ಎಂದು ಕಟ್ಟಪ್ಪಣೆ ಮಾಡಿದ್ದರಂತೆ. ಅದಕ್ಕಾಗಿಯೇ ಶ್ರೀಗಳು ಇಂದು ಬೆಳಗ್ಗೆ 11.44ಕ್ಕೆ ಶಿವೈಕ್ಯರಾದರೂ 2 ಗಂಟೆ ನಂತರವೇ ಅದನ್ನು ಬಹಿರಂಗಪಡಿಸಲಾಯಿತು ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿದೆ. 


ತಮ್ಮ ಅಂತ್ಯ ಸಮೀಪಿಸುತ್ತಿದ್ದರೂ ಮತ್ತೊಬ್ಬರ ಹಸಿವಿನ ಬಗ್ಗೆ ಸ್ವಾಮೀಜಿಗಳು ಯೋಚನೆ ಮಾಡಿದ್ದಾರೆ. ಹಾಗಾಗಿಯೇ ಅವರನ್ನು ನಡೆದಾಡುವ ದೇವರು ಎಂದು ಕರೆಯುತ್ತಾರೆ. ಬದುಕಿನುದ್ದಕ್ಕೂ ಮತ್ತೊಬ್ಬರ ಸಮಸ್ಯೆಗಳು, ಸುಖ, ಸಂತೋಷ, ಉಪಕಾರದ ಬಗ್ಗೆಯೇ ಆಲೋಚಿಸುತ್ತಿದ್ದ ತ್ರಿವಿಧ ದಾಸೋಹಿ ಇಂದು ಶಿವೈಕ್ಯರಾಗಿರುವುದು ಕೇಳಿ ಮಕ್ಕಳೂ ಸೇರಿದಂತೆ ಇಡೀ ಕರುನಾಡ ಜನತೆ ಅಂತಿಮ ದರ್ಶನ ಪಡೆಯಲು ಮಠಕ್ಕೆ ಆಗಮಿಸುತ್ತಿದ್ದಾರೆ. ಇವರ ಲಿಂಗ ಶರೀರದ ಅಂತ್ಯಕ್ರಿಯೆ ನಾಳೆ ಸಂಜೆ 5 ಗಂಟೆಗೆ ನೆರವೇರಲಿದೆ.