ಕಾನೂನು ಮುಖಾಂತರ ಏನುಬೇಕಾದರೂ ಮಾಡಲಿ, ನನಗೆ ಬಂಧನ ಭೀತಿ ಇಲ್ಲ: ಡಿ.ಕೆ. ಶಿವಕುಮಾರ್
90 ಜನ ನನ್ನಿಂದ ಕಾನೂನು ತೊಂದರೆ ಅನುಭವಿಸುತ್ತಿದ್ದಾರೆ.
ನವದೆಹಲಿ: ಆದಾಯ ತೆರಿಗೆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಡಿ.ಕೆ. ಶಿವಕುಮಾರ್ ಬಂಧನ ಸಾಧ್ಯತೆಗಳ ಕುರಿತು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿದೆ. ಅಕ್ರಮ ಹಣ ಪತ್ತೆಯ ವಿಚಾರವಾಗಿ ಈಗ ಜಾರಿ ನಿರ್ದೆಶನಾಲಯದಿಂದ ಬಂಧನದ ಭೀತಿ ಎದುರಿಸುತ್ತಿರುವ ಡಿ.ಕೆ. ಶಿವಕುಮಾರ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಯಾರು ಯಾರನ್ನೂ ತಡೆಯಲು ಸಾಧ್ಯವಾಗುವುದಿಲ್ಲ. ಕಾನೂನು ಮುಖಾಂತರ ಏನುಬೇಕಾದರೂ ಮಾಡಲಿ, ನನಗೆ ಬಂಧನ ಭೀತಿಯಿಲ್ಲ ಎಂದು ಹೇಳಿದ್ದಾರೆ.
ನಾನು ಯಾವುದೇ ತನಿಖೆ ಎದುರಿಸಲು ಸಿದ್ದ:
ದೆಹಲಿಯಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಡಿಕೆಶಿ, ದೆಹಲಿಯಲ್ಲಿ ನನಗೆ ಮೂರು ಮನೆ ಇವೆ. ನಾನು ಎಲ್ಲಿ ಬೇಕಾದರೂ ಉಳಿದುಕೊಳ್ಳುತ್ತೇನೆ. ನಾನು ಎಲ್ಲೂ ನಾಪತ್ತೆಯಾಗಿಲ್ಲ. ನಾನು 30 ವರ್ಷಕ್ಕೆ ಮಾಜಿ ಮಂತ್ರಿಯಾಗಿದ್ದೆ, ಎಷ್ಟೋ ವರ್ಷ ಮಾಜಿಯಾಗಿಯೇ ಇದ್ದೇ. ಯಾವ ಎಫ್ಐಆರ್ ಬೇಕಾದರೂ ಹಾಕಿಕೊಳ್ಳಲಿ, ಏನು ಬೇಕಾದರೂ ತನಿಖೆ ಮಾಡಿಕೊಳ್ಳಲಿ. ನಾನು ಯಾವುದೇ ತನಿಖೆ ಎದುರಿಸಲು ಸಿದ್ದ. ಇಡಿ-ಐಟಿ ಅಧಿಕಾರಿಗಳು ನನ್ನನ್ನಂತೂ ಗೌರವಯುತವಾಗಿ ನಡೆಸಿಕೊಂಡಿದ್ದಾರೆ ಎಂದು ಹೇಳಿದರು.
ನಾನ್ಯಾವ ಮನಿ ಲಾಂಡ್ರಿಂಗ್ ಮಾಡಿಲ್ಲ:
ಮನಿ ಲಾಂಡ್ರಿಂಗ್ ಕೇಸಿಗೆ ಸಂಬಂಧಿಸಿದಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ನಾನ್ಯಾವ ಮನಿ ಲಾಂಡ್ರಿಂಗ್ ಮಾಡಿಲ್ಲ, 90 ಜನ ನನ್ನಿಂದ ಕಾನೂನು ತೊಂದರೆ, ಮುಜುಗರ ಅನುಭವಿಸುತ್ತಿದ್ದಾರೆ. ಯಾರ್ಯಾರ ರಾಜಕಾರಣಿಗಳ ಕೇಸು ಏನಾಯ್ತು ಅಂತಾ ಗೊತ್ತಿದೆ. ದೆಹಲಿಯಲ್ಲಿ ನಾನು ಯಾವುದೇ ವಕೀಲರನ್ನು ಭೇಟಿಯಾಗಿಲ್ಲ. ನಾನು ಹೆದುರುವ ಪ್ರಮೇಯವೇ ಇಲ್ಲ ಎಂದು ತಿಳಿಸಿದರು.