ಹಲವು ವಿನಾಯಿತಿಗಳ ನಡುವೆ ಮೇ 17ರವರೆಗೆ ನಿಷೇಧಾಜ್ಞೆ ಮುಂದುವರಿಕೆ
ಸಾರ್ವಜನಿಕರು ಐದಕ್ಕಿಂತ ಹೆಚ್ಚು ಜನ ಗುಂಪಾಗಿ ಸೇರುವುದನ್ನು ನಿಷೇಧಿಸಿದೆ. ಅನುಮತಿ ಪಡೆದ ಬಸ್‍ಗಳನ್ನು ಹೊರತುಪಡಿಸಿ ಉಳಿದ ಯಾವುದೇ ಅಂತರಾಜ್ಯ ಯಾವುದೇ ಬಸ್‍ಗಳ ಓಡಾಟವನ್ನು ನಿಷೇಧಿಸಿದೆ.
ಹಾವೇರಿ: ಹಲವು ವಿನಾಯಿತಿಗಳ ನಡುವೆ ಕರೋನಾವೈರಸ್ (Coronavirus) ಕೋವಿಡ್ ನಿರ್ಭಂಧ ಜಿಲ್ಲೆಯಲ್ಲಿ ಮುಂದುವರೆದಿದೆ. ಜಿಲ್ಲೆಯಲ್ಲಿ ನಿಷೇಧಾಜ್ಞೆಯನ್ನು ಮೇ 17ರವರೆಗೆ ಮುಂದುವರಿಸಿ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಆದೇಶ ಹೊರಡಿಸಿದ್ದಾರೆ.
ಲಾಕ್‌ಡೌನ್ (Lockdown)ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪರಿಷ್ಕೃತ ಮಾರ್ಗಸೂಚಿಯನ್ನು ಹೊರಡಿಸಲಾಗಿದ್ದು, ಅದರಂತೆ ಈ ಕೆಳಕಂಡ ಚಟುವಟಿಕೆಗಳನ್ನು ನಿಯಂತ್ರಿಸಿ ಆದೇಶ ಹೊರಡಿಸಿದ್ದಾರೆ. ಸಾರ್ವಜನಿಕರು ಐದಕ್ಕಿಂತ ಹೆಚ್ಚು ಜನ ಗುಂಪಾಗಿ ಸೇರುವುದನ್ನು ನಿಷೇಧಿಸಿದೆ. ಅನುಮತಿ ಪಡೆದ ಬಸ್‍ಗಳನ್ನು ಹೊರತುಪಡಿಸಿ ಉಳಿದ ಯಾವುದೇ ಅಂತರಾಜ್ಯ ಯಾವುದೇ ಬಸ್‍ಗಳ ಓಡಾಟವನ್ನು ನಿಷೇಧಿಸಿದೆ.
ತುರ್ತು ವೈದ್ಯಕೀಯ ಕಾರಣ ಹಾಗೂ ಇತರೆ ಚಟುವಟಿಕೆಗೆ ಸಂಬಂಧಿಸಿದಂತೆ ಅಂತರಾಜ್ಯಕ್ಕೆ ಪ್ರಯಾಣಿಸಲು ಸಕ್ಷಮ ಪ್ರಾಧಿಕಾರದಿಂದ ಕಡ್ಡಾಯವಾಗಿ ಅನುಮತಿ ಪಡೆಯತಕ್ಕದ್ದು. ಜಿಲ್ಲೆಯಲ್ಲಿನ ಎಲ್ಲಾ ಶಾಲಾ-ಕಾಲೇಜುಗಳನ್ನು ಹಾಗೂ ಶೈಕ್ಷಣಿಕ ತರಬೇತಿ ಸಂಸ್ಥೆಗಳನ್ನು ತೆರೆಯುವುದನ್ನು ನಿರ್ಬಂಧಿಸಲಾಗಿದೆ.
ಆದಾಗ್ಯೂ ಆನ್‍ಲೈನ್ ಮೂಲಕ ತರಬೇತಿ ಶಿಕ್ಷಣ ನೀಡಬಹುದಾಗಿದೆ. ಹಾವೇರಿ ಜಿಲ್ಲೆಯಲ್ಲಿ ಕೋವಿಡ್-19 (Covid-19) ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿಗಳಿಗೆ ಹಾಗೂ ಪ್ರವಾಸಿಗರಿಗೆ ಹಾಗೂ ಕ್ವಾರಂಟೈನ್ (Quarantine) ನಲ್ಲಿರುವ ವ್ಯಕ್ತಿಗಳಿಗೆ ಮೀಸಲಿಸಿರುವ ಅತಿಥಿ ಗೃಹಳನ್ನು ಹೊರತುಪಡಿಸಿ ಉಳಿದ ಎಲ್ಲಾ ಅತಿಥಿ ಗೃಹಗಳು, ಲಾಡ್ಜ್‍ಗಳು, ರೆಸಾರ್ಟ್‍ಗಳು, ಹೋಮ್ ಸ್ಟೇಗಳನ್ನು ತೆರೆಯುವುದನ್ನು ನಿಷೇಧಿಸಿದೆ. ಚಿತ್ರಮಂದಿರ, ಎಲ್ಲಾ ರೀತಿಯ ಕ್ಲಬ್‍ಗಳು, ನಾಟಕ ಪ್ರದರ್ಶನ, ಶಾಪಿಂಗ್ ಮಾಲ್‍ಗಳನ್ನು, ಜಿಮ್ ಸೆಂಟರ್‍ಗಳು, ಬೇಸಿಗೆ ಶಿಬಿರ, ಕ್ರೀಡಾ ಸಮುಚ್ಛಯಗಳು, ಈಜುಕೊಳಗಳು, ಮಜರಂಜನಾ ಪಾರ್ಕ್‍ಗಳು, ಬಾರ್‍ಗಳು, ಆಡಿಟೋರಿಯಂಗಳು ತೆರೆಯುವುದನ್ನು ಹಾಗೂ ಸಮಾರಂಭಗಳಲ್ಲಿ ಜನ ದಟ್ಟಣೆ ಸೇರುವಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದನ್ನು ನಿಷೇಧಿಸಿದೆ.
ಎಲ್ಲಾ ಸಾಮಾಜಿಕ, ರಾಜಕೀಯ, ಕ್ರೀಡಾಕೂಟಗಳು, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ, ಕಾರ್ಯಕ್ರಮಗಳನ್ನು ಹಾಗೂ ಇತರೆ ಕಾರ್ಯಕ್ರಮಗಳನ್ನು ನಡೆಸುವುದುನ್ನು ನಿಷೇಧಿಸಿದೆ. ಜಿಲ್ಲೆಯಲ್ಲಿನ ಎಲ್ಲಾ ಧಾರ್ಮಿಕ ಸ್ಥಳಗಳಿಗೆ, ಪ್ರಾರ್ಥನಾ ಮಂದಿಗಳಿಗೆ ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಿದೆ ಹಾಗೂ ಧಾರ್ಮಿಕ ಸಭೆಗಳನ್ನು ನಡೆಸುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ. ತುರ್ತು ಸಂದರ್ಭಗಳಲ್ಲಿ ಹೊರತುಪಡಿಸಿ ಸಂಜೆ 7 ರಿಂದ ಬೆಳಿಗ್ಗೆ 7 ಗಂಟೆವರೆಗೆ ಎಲ್ಲಾ ಸಾರ್ವಜನಿಕರ ಓಡಾಟವನ್ನು ನಿಷೇಧಿಸಿದೆ. 65 ವರ್ಷ ಮೇಲಿನ ವಯೋಮಾನದ ವ್ಯಕ್ತಿಗಳು, ಅಸ್ವಸ್ಥ ವ್ಯಕ್ತಿಗಳು, ಗರ್ಭಿಣಿಯರು,10 ವರ್ಷದೊಳಗಿನ ಮಕ್ಕಳು ತುರ್ತು ಸಂದರ್ಭವನ್ನು ಹೊರತುಪಡಿಸಿ ಅನಾವಶ್ಯಕವಾಗಿ ಮನೆಯಿಂದ ಹೊರಬರುವುದನ್ನು ನಿರ್ಭಂಧಿಸಿದೆ.
ಕಡ್ಡಾಯ ಪಾಲನೆ:
ನಿಷೇಧಾಜ್ಞೆ ಅವಧಿಯಲ್ಲಿ ಎಲ್ಲಾ ಸಾರ್ವಜನಿಕ ಸ್ಥಳಗಳು ಕೆಲಸದ ಸ್ಥಳಗಳಲ್ಲಿ ಮುಖಗವಸು ಧರಿಸುವುದು ಕಡ್ಡಾಯವಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮೂಲಕ ಹೊರಡಿಸಲಾದ ಮಾರ್ಗಸೂಚಿಗಳ ಅನ್ವಯ ಸಾರ್ವಜನಿಕ ಸ್ಥಳಗಳಲ್ಲಿ, ಸಾರಿಗೆ ಸಂದರ್ಭದಲ್ಲಿ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕು.
ಸಂಸ್ಥೆಗಳು, ಸಾರ್ವಜನಿಕ ಸ್ಥಳಗಳ ವ್ಯವಸ್ಥಾಪಕರು ಐದು ಅಥವಾ ಹೆಚ್ಚಿನ ವ್ಯಕ್ತಿಗಳ ಸೇರುವಿಕೆಗೆ ಅವಕಾಶ ನೀಡಬಾರದು. ವಿವಾಹದ ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು ಹಾಗೂ 50 ಕ್ಕಿಂತ ಹೆಚ್ಚು ಜನರು ಸೇರುವುದನ್ನು ನಿಷೇಧಿಸಿದೆ. ಶವಸಂಸ್ಕಾರದ ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕು ಹಾಗೂ 20 ಕ್ಕಿಂತ ಹೆಚ್ಚು ಜನರು ಸೇರುವುದನ್ನು ನಿಷೇಧಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ನಿಷೇಧಿಸಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ, ಪಾನ್ ಬೀಡ, ಗುಟ್ಕ ಹಾಗೂ ತಂಬಾಕು ಸೇವೆಯನ್ನು ನಿಷೇಧಿಸಿದೆ, ಮದ್ಯ ಮಾರಾಟದ ಅಂಗಡಿ, ಪಾನ್, ಬೀಡ , ಗುಟ್ಕ, ತಂಬಾಕು ಮಾರಾಟದ ಅಂಗಡಿಗಳ ಬಳಿ ಕನಿಷ್ಠ ಆರು ಅಡಿ ಅಂತರ ಕಾಪಾಡುವುದು ಹಾಗೂ ಅಂಗಡಿಗಳ ಬಳಿ ಐದು ಜನಕ್ಕಿಂತ ಹೆಚ್ಚಿನ ಮಂದಿ ನಿಲ್ಲದಂತೆ ಅಂಗಡಿ ಮಾಲೀಕರು ಕ್ರಮವಹಿಸಬೇಕು ಎಂದು ಆದೇಶ ಹೊರಡಿಸಿದ್ದಾರೆ.