ತುಮಕೂರು: ಕೊರೋನಾದಿಂದ ದೇಶ ಸಂಕಷ್ಟದಲ್ಲಿದ್ದು, ರೈತರು (Farmers) ಬೆಳೆದರೆ ಮಾತ್ರ ದೇಶ ಉದ್ಧಾರ ಆಗಲು ಸಾಧ್ಯ ಎನ್ನುವುದನ್ನು ಅರಿತು ಕೃಷಿ ವಲಯಕ್ಕೆ ಲಾಕ್ ಡೌನ್ ನಡುವೆಯೂ ಸಡಿಲಿಕೆಯನ್ನು ನೀಡಲಾಗಿತ್ತು ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ‌ ಗೋಪಾಲಯ್ಯ ತಿಳಿಸಿದರು.


COMMERCIAL BREAK
SCROLL TO CONTINUE READING

ಜಿಲ್ಲೆಯಲ್ಲಿ ಲಾಕ್ ಡೌನ್  (Lockdown) ನಿಂದ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳಿಗೆ ಪಡಿತರ ವಿತರಿಸಿ ಮಾತನಾಡಿದ ಅವರು, ಆಹಾರವನ್ನು ಸರಿಯಾಗಿ ಪೂರೈಕೆ ಮಾಡದ 150 ಅಂಗಡಿಗಳನ್ನು ಅಮಾನತು ಮಾಡಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಪಡಿತರವನ್ನು ಉಚಿತವಾಗಿ ನೀಡಲಾಗುತ್ತಿದೆ, ರಾಜ್ಯ ಸಂಕಷ್ಟದಲ್ಲಿರುವ ಪರಿಸ್ಥಿತಿಯಲ್ಲಿ ಹಣ ಪಡೆಯದಂತೆ ಮನವಿ ಮಾಡಿದರೂ, ಅಂಗಡಿ ಮಾಲೀಕರು ಕೇಳದೇ ಮೋಸ ಮಾಡುತ್ತಿದ್ದ ಅಂಗಡಿಗಳು ಹಾಗೂ ಕಾರ್ಯ ನಿರ್ವಹಿಸದ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ಹೇಳಿದರು.


ರಾಜ್ಯದಲ್ಲಿ ಕೊರೋನಾ (Coronvirus) ಸಂಕಷ್ಟದಲ್ಲಿ ರಾಜ್ಯ ಸರ್ಕಾರ ನೀಡುವ ಪಡಿತರವನ್ನು 4.65 ಕೋಟಿ ಮಂದಿ ಪಡೆದಿದ್ದಾರೆ, ಕೇಂದ್ರ ಸರ್ಕಾರದಿಂದ ನೀಡುವ ಪಡಿತರ (Ration)ವನ್ನು ಮೇ.01ರಿಂದ ವಿತರಿಸಲು ಕ್ರಮವಹಿಸಲಾಗಿದ್ದು, ಯಾವುದೇ ಕಾರಣಕ್ಕೂ ಕಳಪೆ ಪಡಿತರವನ್ನು ವಿತರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ, ಪಡಿತರ ಚೀಟಿ ಹೊಂದಿರುವವರಿಗೆ ಉಚಿತವಾಗಿ ನೀಡುವಂತಾಗಬೇಕು ಎಂದರು.


ವಲಸೆ ಕಾರ್ಮಿಕರು ಎಲ್ಲಿಯೇ ಇದ್ದರು ಪೋರ್ಟಬಲಿಟಿ ಆಧಾರದ ಮೇಲೆ ಪಡಿತರವನ್ನು ವಿತರಿಸುವಂತಹ ಕೆಲಸವಾಗಬೇಕು, ಈ ನಿಟ್ಟಿನಲ್ಲಿ ಅಂಗಡಿ ಮಾಲೀಕರಿಗೆ ಜಾಗೃತಿ ಮೂಡಿಸಲಾಗಿದ್ದು, ಬಡವರ ಪಡಿತರ ಬಡವರಿಗೆ ಸಿಗುವಂತಾಗಬೇಕು ಎನ್ನುವುದು ನಮ್ಮ ಸರ್ಕಾರದ ಉದ್ದೇಶ ಎಂದು ತಿಳಿಸಿದರು.


ಮುಖ್ಯಮಂತ್ರಿ ಅನಿಲ ಭ್ಯಾಗ್ಯ ಹಾಗೂ ಉಜ್ವಲ್ ಯೋಜನೆಯಡಿ ಸಂಪರ್ಕ ಪಡೆದಿರುವವರಿಗೆ ಮೂರು ತಿಂಗಳ ಸಹಾಯಧನವನ್ನು ನೀಡಲಾಗುತ್ತಿದೆ, ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಿದವರಿಗೂ ಪಡಿತರವನ್ನು ವಿತರಿಸಲು ಸಿಎಂ ಯಡಿಯೂರಪ್ಪ ಅವರು ಕ್ರಮವಹಿಸಿದ್ದು, ಆದ್ಯತೆ ಮೇಲೆ ಎಪಿಎಲ್ ಕಾರ್ಡ್ ದಾರರಿಗೂ ಪಡಿತರವನ್ನು ನೀಡಲಾಗುತ್ತಿದೆ ಎಂದರು.


ತುಮಕೂರು ಜಿಲ್ಲೆಯಲ್ಲಿ ರಾಗಿಯನ್ನು ಬೆಳೆಯನ್ನು ಹೆಚ್ಚಾಗಿ ಬೆಳೆಯುವುದರಿಂದ 2ಲಕ್ಷ ಮೆಟ್ರಿಕ್ ಟನ್ ರಾಗಿಯನ್ನು ರೈತರಿಂದ ಖರೀದಿಸಲಾಗಿದ್ದು, 96 ಸಾವಿರ ರೈತರು ರಾಗಿ ಮಾರಲು ನೋಂದಣಿ ಮಾಡಿಕೊಂಡಿದ್ದು, ಹೆಚ್ಚುವರಿಯಾಗಿ ಒಂದು ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಸಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂದು ತಿಳಿಸಿದರು.


ಮಾಜಿ ಶಾಸಕ ಸುರೇಶ್ ಗೌಡ ಮಾತನಾಡಿ ಲಾಕ್ ಡೌನ್ ನಿಂದ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಪ್ರಾಮಾಣಿಕವಾಗಿ ತಲುಪಿಸುವಂತಹ ಕೆಲಸ ಮಾಡಬೇಕಿದೆ, ಬಡವರ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದಾಗ ಮಾತ್ರ ಸೇವೆಯಾಗುತ್ತದೆ, ಸರಳತೆಯಿಂದ ಸೇವೆ ಮಾಡಿದಾಗ ಮಾತ್ರ ಉತ್ತಮ ಸೇವೆ ಸಿಗುತ್ತದೆ ಎಂದರು.


ಯಾವುದೇ ಸಂದರ್ಭದಲ್ಲಿ ಆದರೂ ರೈತರಿಗೆ ಪಡಿತರ ಸಿಗಬೇಕು ಎನ್ನುವ ಉದ್ದೇಶದಿಂದ ಸ್ಥಾಪಿಸಿದ್ದ ಆಹಾರ ಭಂಡಾರವನ್ನು ರದ್ದುಗೊಳಿಸಿರುವುದರಿಂದ ಜನರಿಗೆ ಸಾಕಷ್ಟು ಕಷ್ಟವಾಗಿದ್ದು, ಆಹಾರ ಭಂಡಾರವನ್ನು ಮತ್ತೆ ಪ್ರಾರಂಭಿಸಬೇಕು ಎಂದು ಆಹಾರ ಸಚಿವ ಗೋಪಾಲಯ್ಯ ಅವರಿಗೆ ಮನವಿ ಮಾಡಿದರು.


ಯಾವುದೇ ರಾಜಕೀಯ ಉದ್ದೇಶವಿಲ್ಲದೇ, ಬಡವರ ಹಸಿವು ತೀರಿಸುವ ಕೆಲಸ ಮಾಡುವ ನಿಟ್ಟಿನಲ್ಲಿ ಯಾವುದೇ ಅಪೇಕ್ಷೇ ಇಲ್ಲದೇ ಗ್ರಾಮಾಂತರ ಕ್ಷೇತ್ರದಲ್ಲಿ ಪಡಿತರವನ್ನು ವಿತರವನ್ನು ವಿತರಿಸಲಾಗುತ್ತಿದೆ, ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಎಚ್ಚರಿಕೆ ಅಗತ್ಯವಾಗಿದ್ದು, ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಜರ್ ಕಡ್ಡಾಯವಾಗಿ ಬಳಸುವ ಮೂಲಕ ಜೀವನ, ಜೀವವನ್ನು ಉಳಿಸಿಕೊಳ್ಳಬೇಕು, ಸರ್ಕಾರದ ಆದೇಶವನ್ನು ಪಾಲಿಸಬೇಕು ಎಂದು ಕರೆ ನೀಡಿದರು.


ಕಾರ್ಯಕ್ರಮಕ್ಕೂ ಮುನ್ನ ವೈದ್ಯಕೀಯ ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ನರ್ಸ್, ಪೊಲೀಸರು, ಲೈನ್ ಮೆನ್ ಗಳಿಗೆ ಪುಷ್ಪವೃಷ್ಠಿಯನ್ನು ಮಾಡುವ ಮೂಲಕ ಗೌರವಿಸಲಾಯಿತು.