ಮೈಸೂರು: ಅರಮನೆ ನಗರಿ, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಶ್ವವಿಖ್ಯಾತ ಜಂಬೂಸವಾರಿ(Jamboo Savari)ಗೆ ಕ್ಷಣಗಣನೆ ಆರಂಭವಾಗಿದೆ. ಶುಭ ಶುಕ್ರವಾರ(ಅ.15) ಬೆಳ್ಳಂಬೆಳಗ್ಗೆ 4.40ಕ್ಕೆ ಅರಮನೆಯಲ್ಲಿ ವಿಜಯದಶಮಿ‌ ಪೂಜಾ ಕೈಂಕರ್ಯಗಳು ಆರಂಭವಾಯಿತು. ಕಳೆದೊಂದು ವಾರದಿಂದ ಆರಂಭವಾಗಿರುವ ನಾಡಹಬ್ಬ ದಸರಾ(Mysuru Dasara) ಉತ್ಸವದ ಸಂಭ್ರಮಕ್ಕೆ ಇಂದಿನ ಜಂಬೂಸವಾರಿ ಮೆರವಣಿಗೆಯ ಮೂಲಕ ತೆರೆ ಬೀಳಲಿದೆ. ಕೊರೊನಾ ಕಾರಣದಿಂದ ಈ ಬಾರಿಯೂ ಸರಳವಾಗಿ ದಸರಾ ಹಬ್ಬ  ಆಚರಣೆ ಮಾಡಲಾಗುತ್ತಿದ್ದು, ಪ್ರತಿಬಾರಿಯಂತೆ ಅರಮನೆ ನಗರಿ ಸುಂದರವಾಗಿ ಸಿಂಗಾರಗೊಂಡಿದೆ.


COMMERCIAL BREAK
SCROLL TO CONTINUE READING

ಅರಮನೆ ಆವರಣದಲ್ಲಿ ದಸರಾ ಸಂಭ್ರಮ


ಐತಿಹಾಸಿಕ ದಸರಾ ಮಹೋತ್ಸವ(Dasara Festival)ನ್ನು ಕಣ್ತುಂಬಿಕೊಳ್ಳಲು ಜನರು ಕಾತುರದಿಂದ ಕಾಯುತ್ತಿದ್ದಾರೆ. ಅರಮನೆ ನಗರಿಯ ಎಲ್ಲೆಲ್ಲೂ ದಸರಾ ಸಂಭ್ರಮ ಮನೆಮಾಡಿದ್ದು, ಅಂಬಾರಿ ಮೇಲೆ ತಾಯಿ ಚಾಮುಂಡೇಶ್ವರಿ ದೇವಿ ರಾರಾಜಿಸಲಿದ್ದಾಳೆ. ಇಂದು ಬೆಳಗ್ಗೆಯಿಂದಲೇ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ಬಣ್ಣ ಬಳಿಯುವ ಕೆಲಸ ನಡೆಯುತ್ತಿದೆ.


ಇದನ್ನೂ ಓದಿ: ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಮುಟ್ಟಿವೆ, ಬಡವರ ಮನೆ ಒಲೆಗಳು ಆರಿವೆ: ಕಾಂಗ್ರೆಸ್


ಬೆಳಗ್ಗೆ 5.45ಕ್ಕೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸುಗಳ ಆಗಮಿಸಿದ್ದು, 6.13 ರಿಂದ 6.32ರವರೆಗೂ ಪೂಜಾ ಕೈಂಕರ್ಯ ನೆರವೇರಿದೆ. ಆಯುಧಗಳಿಗೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್(Yaduveer Krishnadatta Chamaraja Wadiyar)ಉತ್ತರ ಪೂಜೆ ಮಾಡಿ ಬಳಿಕ ಶಮಿ ಪೂಜೆ ನೆರವೇರಿಸಿದರು.


ಬನ್ನಿ ಮರಕ್ಕೆ ಯಧುವೀರ್ ಪೂಜೆ


ಭುವನೇಶ್ವರಿ ಮಂಟಪದಲ್ಲಿ ಬನ್ನಿ ಮರಕ್ಕೆ ಯಧುವೀರ್ ಪೂಜೆ ನೆರವೇರಿಸಿದರು. ಬೆಳಗ್ಗೆ 8.30ಕ್ಕೆ ಚಾಮುಂಡಿ ಬೆಟ್ಟ(Chamundi Hill)ದಿಂದ ವಿಶೇಷವಾಗಿ ಅಲಂಕಾರಗೊಂಡ ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಕರೆ ತರಲಾಗುತ್ತದೆ. ಮಧ್ಯಾಹ್ನ 2 ಗಂಟೆ ಬಳಿಕ ಅಭಿಮನ್ಯು ಆನೆಗೆ ಅಂಬಾರಿ ಕಟ್ಟುವ ಕಾರ್ಯವು ಶುರುವಾಗಲಿದೆ. ಸಂಜೆ 4.36ರಿಂದ 4.46ರವರೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದಲ್ಲಿ ನಂದಿಧ್ವಜ ಪೂಜೆ ನೆರವೇರಲಿದೆ.  


ಸಿಎಂ ಬಸವರಾಜ ಬೊಮ್ಮಾಯಿ ಪುಷ್ಪಾರ್ಚನೆ


ಸಂಜೆ 5 ರಿಂದ 5.30ಕ್ಕೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಅಂಬಾರಿ ಮೇಲೆ ವಿರಾಜಮಾನಳಾಗುವ ತಾಯಿ ಚಾಮುಂಡೇಶ್ವರಿ(Sri Chamundeshwari Devi) ಉತ್ಸವ ಮೂರ್ತಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪುಷ್ಪಾರ್ಚನೆ ನೆರವೇರಿಸುವರು. ಬಳಿಕ ವಿಜಯದಶಮಿ ಮೆರವಣಿಗೆಗೆ ಚಾಲನೆ ದೊರೆಯಲಿದ್ದು, ಈ ವೇಳೆ ವರಹಾ ದ್ವಾರದ ಬಳಿ 21 ಸುತ್ತು ಕುಶಾಲತೋಪು ಸಿಡಿಸಲಾಗುತ್ತದೆ.


ಇದನ್ನೂ ಓದಿ: Karnataka Politics: ವಿಡಿಯೋವೊಂದರಿಂದ ಕರ್ನಾಟಕದ ಕಾಂಗ್ರೆಸ್ ಘಟಕದಲ್ಲಿ ಭುಗಿಲೆದ್ದ ಕೋಲಾಹಲ, ನಡೆದಿದ್ದೇನು?


ಜಂಬೂಸವಾರಿ ಮೆರವಣಿಗೆ ಅರಮನೆ ಆವರಣಕ್ಕೆ ಸೀಮಿತ


ಪ್ರತಿವರ್ಷ ಅರಮನೆ ಆವರಣ(Mysore Palace)ದಿಂದ ಬನ್ನಿಮಂಟಪದವರೆಗೆ 5 ಕಿಮೀ ಜಂಬೂಸವಾರಿ ಮೆರವಣಿಗೆ ನಡೆಯುತ್ತದೆ. ಆದರೆ ಕೊರೊನಾ ಹಿನ್ನೆಲೆ ಕಳೆದ ಬಾರಿಯಂತೆ ಈ ವರ್ಷವೂ ಜಂಬೂಸವಾರಿ ಮೆರವಣಿಗೆಯನ್ನು ಅರಮನೆ ಆವರಣಕ್ಕೆ ಸೀಮಿತಗೊಳಿಸಲಾಗಿದೆ. ನಂದಿಧ್ವಜಕ್ಕೆ ಪೂಜೆ ನೆರವೇರಿದ ಬಳಿಕ ಮೆರವಣಿಗೆ ಪ್ರಾರಂಭಗೊಳ್ಳಲಿದ್ದು, ನಿಶಾನೆ ಮತ್ತು ನೌಫತ್ ಆನೆಗಳು ಮೆರವಣಿಗೆಯನ್ನು ಮುನ್ನಡೆಸಲಿವೆ. ಈ ಆನೆಗಳ ಹಿಂದೆ ನಾದಸ್ವರ, ವೀರಗಾಸೆ, ಸ್ತಬ್ಧಚಿತ್ರಗಳು, ಸಂಗೀತ ಗಾಡಿ, ಅಶ್ವಾರೋಹಿದಳ ಸಾಗಲಿವೆ. ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆಯ ನಂತರ 750 ಕೆ.ಜಿ. ಚಿನ್ನದ ಅಂಬಾರಿ ಹೊತ್ತ ಅಭಿಮನ್ಯು ಸಾಗಲಿದ್ದಾನೆ.


ಮೆರವಣಿಗೆ 500 ಮೀಟರ್ ದಾಟುವುದಿಲ್ಲ


ಕೋವಿಡ್-19(COVID-19) ಹಿನ್ನೆಲೆ ಅತ್ಯಂತ ಸರಳವಾಗಿ ದಸರಾ ಆಚರಿಸಲಾಗುತ್ತಿದೆ. ಈ ಹಿನ್ನೆಲೆ ಮೆರವಣಿಗೆ ಸಾಗುವ ದಾರಿ 500 ಮೀಟರ್ ದಾಟುವುದಿಲ್ಲ. ಅರಮನೆ ಆವರಣದ ವರಹಸ್ವಾಮಿ ದೇವಾಲಯ ಸಮೀಪದಿಂದ ಆರಂಭವಾಗುವ ಮೆರವಣಿಗೆಯು ಭುವನೇಶ್ವರಿ ದೇವಾಲಯದವರೆಗೂ ಸಾಗಲಿದೆ. ಅಲ್ಲಿಂದ ಬಲರಾಮ ದ್ವಾರದ ಬಳಿ ಬಲಕ್ಕೆ ತಿರುಗಿ ಕೋಡಿ ಸೋಮೇಶ್ವರ ದೇವಾಲಯದ ರಸ್ತೆಗೆ ಮುಖ ಮಾಡಿ ಸಾಗಿದ ಬಳಿಕ ಮೆರವಣಿಗೆಯು ಸಮಾಪ್ತಿಗೊಳ್ಳಲಿದೆ. 30 ರಿಂದ 45 ನಿಮಿಷಗಳ ಅವದಿಯಲ್ಲಿ ಜಂಬೂಸವಾರಿ ಸಮಾಪ್ತಿಯಾಗಲಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ