NEW CM BUMPER: ರೈತರ ಮಕ್ಕಳಿಗೆ ವಿದ್ಯಾರ್ಥಿವೇತನ, ಮಾಸಾಶನ ಹೆಚ್ಚಳ ಮಾಡಿ ನೂತನ ಸಿಎಂ ಘೋಷಣೆ
ರೈತರ ಮಕ್ಕಳಿಗೆ ನೂತನ ವಿದ್ಯಾರ್ಥಿ ವೇತನ ಜಾರಿಗೊಳಿಸಿದ ಬಸವರಾಜ್ ಬೊಮ್ಮಾಯಿ
ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನವೇ ಬಸವರಾಜ್ ಬೊಮ್ಮಾಯಿ ಹಲವು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಕೆಲ ಯೋಜನೆಗಳಲ್ಲಿ ನೀಡುವ ಮಾಸಾಶನ ಹೆಚ್ಚಳ ಮಾಡಿ ಅವರು ಆದೇಶ ಹೊರಡಿಸಿದ್ದಾರೆ.
ಬಿ.ಎಸ್.ಯಡಿಯೂರಪ್ಪ(BS Yediyurappa)ನವರು ಜನಪರ ಮತ್ತು ಸ್ನೇಹಪರ ಕಾರ್ಯಕ್ರಮಗಳನ್ನು ಪ್ರಾರಂಭಿಸಿದರು. ಆರ್ಥಿಕ ಬಿಕ್ಕಟ್ಟಿನಲ್ಲಿಯೂ ಎಲ್ಲವನ್ನೂ ಚೆನ್ನಾಗಿ ನಿರ್ವಹಿಸಿದರು. ಅವರ ಹಾಕಿಕೊಟ್ಟ ಮಾರ್ಗವನ್ನೇ ನಾನು ಅನುಸರಿಸುತ್ತೇನೆ. ರಾಜ್ಯ ಪ್ರವಾಹಪೀಡಿತ ಸ್ಥಳಗಳಿಗೆ ನಾನು ಭೇಟಿ ನೀಡುತ್ತೇನೆ. ಜನಪರ ಆಡಳಿತ ನೀಡುವುದು ನಮ್ಮ ಸರ್ಕಾರದ ಗುರಿಯಾಗಿದೆ. ಸಮಾಜದ ಪ್ರತಿಯೊಬ್ಬರ ಪರವಾಗಿಯೂ ನಮ್ಮ ಸರ್ಕಾರ ಕೆಲಸ ಮಾಡಲಿದೆ. ನಾನು ರಬ್ಬರ್ ಸ್ಟಾಂಪ್ ಅಲ್ಲ, ನನ್ನ ಆಡಳಿತವೇ ಜನರ ಆಡಳಿತದ ಸ್ಟಾಂಪ್ ಆಗಿರುತ್ತದೆ ಎಂದು ಬೊಮ್ಮಾಯಿ ಹೇಳಿದ್ದಾರೆ.
ದಕ್ಷ, ಪ್ರಾಮಾಣಿಕ, ಜನಪರ ಆಡಳಿತ ಇರಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಯ ಪರವಾಗಿ ನಾವು ಕೆಲಸ ಮಾಡುತ್ತೇವೆ. ಎಲ್ಲ ವರ್ಗದವರ ಪರವಾಗಿ ನನ್ನ ಸರ್ಕಾರ ಕೆಲಸ ಮಾಡಲಿದೆ. ಅವರೆಲ್ಲರಿಗೂ ನಮಗಾಗಿ ಸರ್ಕಾರವಿದೆ ಎನ್ನುವ ಭಾವನೆ ಬರುವಂತೆ ನಾವು ಕೆಲಸ ಮಾಡಬೇಕಾಗಿದೆ. ಕಾರ್ಯಕ್ರಮಗಳ ಅನುಷ್ಠಾನ ಮತ್ತು ಪರಿಣಾಮಗಳಿಂದ ಎಲ್ಲ ಜನರಲ್ಲಿ ಸುಧಾರಣೆ ತರಬೇಕೆನ್ನುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ. ಸರ್ಕಾರದ ಎಲ್ಲ ಇಲಾಖೆಗಳ ನಡುವೆ ಸಮನ್ವಯ, ಸಹಕಾರವಿರಬೇಕು. ನಾವೆಲ್ಲರೂ ಒಂದು ತಂಡದಂತೆ ಕೆಲಸ ಮಾಡುವ ಜವಾಬ್ದಾರಿ ಅಧಿಕಾರಿಗಳದ್ದು. ಅಧಿಕಾರಶಾಹಿ ಚಲ್ತಾ ಹೈ ವರ್ತನೆ ಬಿಡಬೇಕು. ಎಲ್ಲ ಅಧಿಕಾರಿಗಳಿಗೆ ನನ್ನ ಕಚೇರಿ ಸದಾ ತೆರೆದಿರುತ್ತದೆ. ಯಾವುದೇ ಸಮಯದಲ್ಲಿ ನನ್ನೊಂದಿಗೆ ನೀವು ಚರ್ಚಿಸಬಹುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಿಎಸ್ವೈ ಬಗ್ಗೆ ಅನುಕಂಪವಿದೆ, ರಾಜೀನಾಮೆಯ ಕಾರಣ ಬಹಿರಂಗಪಡಿಸಲಿ: ಸಿದ್ದರಾಮಯ್ಯ
ವಿಶ್ವಾಸಾರ್ಹ, ಜವಾಬ್ದಾರಿಯುತ, ಪಾರದರ್ಶಕ ಹಾಗೂ ದಕ್ಷ ಆಡಳಿತ ನೀಡಲು ತಂಡಸ್ಫೂರ್ತಿಯಿಂದ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಇಲಾಖೆಗಳ ಕಾರ್ಯನಿರ್ವಹಣೆಗೆ ಶ್ರೇಯಾಂಕ ನೀಡುವ ಮೂಲಕ ದಕ್ಷತೆಯಿಂದ ಕಾರ್ಯನಿರ್ವಹಿಸುವ ಇಲಾಖೆಗಳಿಗೆ ಉತ್ತೇಜನ ನೀಡಲಾಗುವುದು. ಪ್ರಸ್ತತ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಎದುರಿಸುವುದು ಹಾಗೂ ಕೋವಿಡ್-19 ನಿಯಂತ್ರಣ, ನಿರ್ವಹಣೆ ಮಾಡುವುದು ನಮ್ಮ ಆದ್ಯತೆಯಾಗಿದೆ ಎಂದು ಬೊಮ್ಮಾಯಿಯವರು ಹೇಳಿದ್ದಾರೆ.
ರೈತರ ಮಕ್ಕಳಿಗೆ ವಿದ್ಯಾರ್ಥಿವೇತನ, ಮಾಸಾಶನ ಹೆಚ್ಚಳ
ನೂತನ ಸಿಎಂ ಬಸವರಾಜ್ ಬೊಮ್ಮಾಯಿ(Basavaraj Bommai)ಯವರು ಇಂದು ತಮ್ಮ ಪ್ರಥಮ ಸಚಿವ ಸಂಪುಟ ಸಭೆ ನಂತರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಹಲವು ಪ್ರಮುಖ ನಿರ್ಣಯಗಳನ್ನು ಪ್ರಕಟಿಸಿದರು. ಇದರಲ್ಲಿ ಪ್ರಮುಖವಾಗಿ ರೈತರ ಮಕ್ಕಳಿಗೆ ನೂತನ ವಿದ್ಯಾರ್ಥಿ ವೇತನ ಜಾರಿಗೊಳಿಸಿದ್ದಾರೆ. ಈ ಹೊಸ ಯೋಜನೆಗೆ 1 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದಾರೆ. ಸಾಮಾಜಿ ಭದ್ರತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಸಂಧ್ಯಾ ಸುರಕ್ಷಾ ಯೋಜನೆ(Sandhya Suraksha Scheme)ಯಲ್ಲಿ ನೀಡುತ್ತಿದ್ದ ಪಿಂಚಣಿ ಮೊತ್ತವನ್ನು 1,000 ರೂ. ನಿಂದ 1,200 ರೂ.ಗಳಿಗೆ ಹೆಚ್ಚಳ ಮಾಡಿದ್ದಾರೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ 863.52 ಕೋಟಿ ರೂ. ಹೆಚ್ಚುವರಿ ವೆಚ್ಚವಾಗಲಿದ್ದು, ಒಟ್ಟು 35.98 ಲಕ್ಷ ಫಲಾನುಭವಿಗಳಿಗೆ ಅನುಕೂಲವಾಗಲಿದೆ.
ಅಭಿಮಾನ ಅತಿರೇಕಕ್ಕೆ ಹೋಗಬಾರದೆಂದು ಮನವಿ ಮಾಡಿದ ಬಿ.ಎಸ್.ಯಡಿಯೂರಪ್ಪ.!
ವಿಧವಾ ವೇತನ(Widow Pension)ವನ್ನು 600 ರೂ. ನಿಂದ 800 ರೂ.ಗೆ ಹಚ್ಚಿಸಲಾಗಿದ್ದು, ಇದರಿಂದ 414 ಕೋಟಿ ರೂ. ಹೆಚ್ಚುವರಿ ವೆಚ್ಚವಾಗಲಿದೆ. ಒಟ್ಟು 17.25 ಲಕ್ಷ ಫಲಾನುಭವಿಗಳಿಗೆ ಅನುಕೂಲವಾಗಲಿದೆ. ಅದರಂತೆ ಅಂಗವಿಕಲರ ಮಾಸಿಕ ವೇತನವನ್ನು 600 ರೂ. ನಿಂದ 800 ರೂ.ಗೆ ಹೆಚ್ಚಳ ಮಾಡಲಾಗಿದ್ದು, 90 ಕೋಟಿ ರೂ. ಹೆಚ್ಚುವರಿ ವೆಚ್ಚವಾಗಲಿದೆ. ಈ ಯೋಜನೆಯಿಂದ 3.66 ಲಕ್ಷ ಪಲಾನುಭವಿಗಳಿಗೆ ಅನುಕೂಲವಾಗಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ