ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪನವರು ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ರಾಜಭವನಕ್ಕೆ ತೆರಳಿದ ಬಳಿಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿದ ಬಿಎಸ್ವೈ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.
ತಮ್ಮ ಸಂಪುಟ ಸಹದ್ಯೋಗಿಗಳ ಜೊತೆ ರಾಜಭವನಕ್ಕೆ ಆಗಮಿಸಿದ ಬಿಎಸ್ವೈ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ವಿಧಾನಸೌಧದಲ್ಲಿ ಸೋಮವಾರ 2 ವರ್ಷದ ಬಿಜೆಪಿ ಸರ್ಕಾರದ ಸಾಧನಾ ಪರ್ವ ಸಮಾವೇಶದಲ್ಲಿ ಅತ್ಯಂತ ಭಾವುಕರಾಗಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ(BS Yediyurappa) ತಾವು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದರು. ಬಳಿಕ ನೇರವಾಗಿ ರಾಜಭವನಕ್ಕೆ ಕಾರಿನಲ್ಲಿ ತೆರಳಿದ ಅವರು ರಾಜೀನಾಮೆ ಪತ್ರವನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಸಲ್ಲಿಸಿದರು.
ನಾನು ಇಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದೇನೆ. ರಾಜ್ಯದ ಜನರ ಬೆಂಬಲದಿಂದ, ಪ್ರಧಾನಿ ಶ್ರೀ @narendramodi, ರಾಷ್ಟ್ರೀಯ ಅಧ್ಯಕ್ಷ ಶ್ರೀ @JPNadda, ಗೃಹ ಸಚಿವ ಶ್ರೀ @AmitShah ರವರ ಸಹಕಾರದಿಂದ, ಎಲ್ಲಾ ಶಾಸಕರು, ಪಕ್ಷದ ನೆರವಿನಿಂದ 2 ವರ್ಷ ಅಭಿವೃದ್ಧಿ ಪರ ಆಡಳಿತ ನೀಡಲು ಶಕ್ತಿಮೀರಿ ಪ್ರಯತ್ನ ನಡೆಸಿದ ತೃಪ್ತಿ ನನಗಿದೆ.
— B.S. Yediyurappa (@BSYBJP) July 26, 2021
ಇದನ್ನೂ ಓದಿ: ಸಿಎಂ ಹುದ್ದೆಗೆ ರಾಜೀನಾಮೆ ಬಿಗ್ ಟ್ವಿಸ್ಟ್ ನೀಡಿದ ಸಿಎಂ ಯಡಿಯುರಪ್ಪ
ಈ ವೇಳೆ ಮುಂದಿನ ಮುಖ್ಯಮಂತ್ರಿಯ ನೇಮಕವಾಗುವವರೆಗೆ ಹಂಗಾಮಿ ಸಿಎಂ ಆಗಿ ಮುಂದುವರಿಯುವಂತೆ ಬಿಎಸ್ವೈಗೆ ರಾಜ್ಯಪಾಲರು ಸೂಚಿಸಿದರು ಎನ್ನಲಾಗಿದೆ. ರಾಜೀನಾಮೆ ಸಲ್ಲಿಕೆ ವೇಳೆ ರಾಜಭವನ ಸುತ್ತಮುತ್ತ ತೀವ್ರ ಭದ್ರತೆಯನ್ನು ಕಲ್ಪಿಸಲಾಗಿತ್ತು. 4 ಬಾರಿ ಕರ್ನಾಟಕದ ಮುಖ್ಯಮಂತ್ರಿಯಾದರೂ ಬಿ.ಎಸ್.ಯಡಿಯೂರಪ್ಪ(BS Yediyurappa) ಒಂದೂ ಬಾರಿಯೂ ಅಧಿಕಾರವಧಿ ಪೂರ್ಣಗೊಳಿಸಲಿಲ್ಲ. ಹೀಗಾಗಿ ಅವರ ಅಸಂಖ್ಯಾತ ಬೆಂಬಲಿಗರು ಮತ್ತು ಅಭಿಮಾನಿಗಳಿಗೆ ಇದು ನೋವು ತಂದಿದೆ.
ಮೈತ್ರಿ ಸರ್ಕಾರದ ಪತನದ ಬಳಿಕ 2 ವರ್ಷಗಳ ಹಿಂದೆ ಅಂದರೆ 2019ರ ಜುಲೈ 26ರಂದು ಕರ್ನಾಟಕದ ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಅಧಿಕಾರ ವಹಿಸಿಕೊಂಡಿದ್ದರು. ಬಿಎಸ್ವೈ ‘ಆಪರೇಷನ್ ಕಮಲ’(Operation Lotus)ದ ಮೂಲಕ ಜೆಡಿಎಸ್-ಕಾಂಗ್ರೆಸ್ ನೇತೃತ್ವದ ಸರ್ಕಾರವನ್ನು ಕೆಡವಿ ರಾಜ್ಯದಲ್ಲಿ ಬಿಜೆಪಿ ಸರ್ಕಾರಕ್ಕೆ ಬರುವಂತೆ ಮಾಡಿದ್ದರು.
ಇದನ್ನೂ ಓದಿ: ವಲಸಿಗ ಸಚಿವರು ವಾಪಸ್ ಬಂದರೂ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ: ಸಿದ್ದರಾಮಯ್ಯ
ಇತ್ತ ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಿದ ಕೂಡಲೇ ಅತ್ತ ದೆಹಲಿಯಲ್ಲಿ ಮುಂದಿನ ಸಿಎಂ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ(JP Nadda) ಮತ್ತು ಅಮಿತ್ ಶಾ ಕರ್ನಾಟಕದ ನೂತನ ಸಿಎಂ ಯಾರಾಗಬೇಕೆಂಬುದರ ಬಗ್ಗೆ ತೀವ್ರ ಚರ್ಚೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ. ಅಲ್ಲದೆ ನಾಳೆ ಪಕ್ಷದ ರಾಷ್ಟ್ರೀಯ ಸಭೆ ನಡೆಯಲಿದ್ದು, ನೂತನ ಸಿಎಂ ಹೆಸರು ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಕೂಡಲ ಹೇಳಲಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ