ಬೆಂಗಳೂರು: ನರಗುಂದ- ನವಲಗುಂದ ಕರ್ನಾಟಕದ ರೈತ ಚಳುವಳಿಯ ಅತಿ ಮಹತ್ವದ ಕೇಂದ್ರಗಳು, ಹಿಂದೂಮ್ಮೆ ನೀರಿನ ಕರ ತೆರಿಗೆಯ ವಿಚಾರದಲ್ಲಿ ಸುಮಾರು ಎಂಬತ್ತರ ದಶಕದಲ್ಲಿ  ನಡೆದ ರೈತರ ಬಂಡಾಯದಿಂದ ಆಗಿನ ಗುಂಡುರಾವ್ ಸರ್ಕಾರದ ಪತನಕ್ಕೆ ಕಾರಣವಾಗಿದ್ದ ಈ ಎರಡು ಸ್ಥಳಗಳು ಇಂದಿಗೂ ಕೂಡಾ ರೈತ ಚಳುವಳಿಗಳಿಗೆ ಉಪಮೇ ಎಂಬಂತೆ ಹೆಸರಾಗಿವೆ.
 
ಇಂದು ಮಹಾದಾಯಿ ಹೋರಾಟದ ಮೂಲಕ  ಈ ಎರಡು ಸ್ಥಳಗಳು ಮತ್ತೆ ಸುದ್ದಿಯಲ್ಲಿವೆ. ಉತ್ತರ ಕರ್ನಾಟಕದ ಅದರಲ್ಲೂ ಗದಗ,ಧಾರವಾಡ ,ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳು ಸರಿಯಾದ ಸಮಯಕ್ಕೆ ಮಳೆಯ ಕೊರತೆಯಿಂದ ಕುಡಿಯುವ ನೀರಿಗೂ ತತ್ವಾರ ಪಡುವ ಕಷ್ಟ ಈ ಭಾಗದ ಜನರದ್ದಾಗಿದೆ. ಮಳೆ ಇಲ್ಲದೆ ಕೃಷಿ ಕೆಲಸಗಳು ನಿಂತು ಗೋವಾ ಮತ್ತು ಮುಂಬೈಗೆ ಇಲ್ಲಿನ ಕೃಷಿ ಕೂಲಿಕಾರರು ಗೂಳೆ ಹೋಗುವ ಪರಸ್ಥಿತಿಯು ಸಾಮಾನ್ಯವಾಗಿದೆ. 


COMMERCIAL BREAK
SCROLL TO CONTINUE READING

ಆದ್ದರಿಂದ ಈ ಭಾಗದಲ್ಲಿ  ನೀರಿನ ಬವಣೆ ತೀರಿಸಬಲ್ಲ ಏಕೈಕ ಮಾರ್ಗವೆಂದರೆ ಅದು ಮಹದಾಯಿ ನದಿಯಿಂದ ಸಮುದ್ರಕ್ಕೆ ವ್ಯರ್ಥವಾಗಿ ಹರಿದು ಹೋಗುತ್ತಿರುವ ನೀರನ್ನು ಕಳಸಾ-ಬಂಡೂರಿ ನಾಲಾಗಳನ್ನು ಜೋಡಿಸುವುದರ  ಮೂಲಕ ಮಾತ್ರ ಈ ಸಮಸ್ಯೆಯನ್ನು ಬಗೆ ಹರಿಸಬಹುದು.


ಆದ್ದರಿಂದ ಈ ಭಾಗದ ರೈತರು ಕಳೆದ ಎರಡು ವರ್ಷಗಳಿಂದ ಅದರಲ್ಲೂ ನರಗುಂದ ಮತ್ತು ನವಲಗುಂದದಲ್ಲಿ ಅನಿರ್ದಿಷ್ಟ ಅವಧಿ ಧರಣಿ ಸತ್ಯಾಗ್ರಹವನ್ನು ಮಾಡುತ್ತಿದ್ದಾರೆ. ಆದರೆ ಇಂದಿಗೂ ಕೂಡಾ ರಾಜಕೀಯ ಪಕ್ಷಗಳು ಒಬ್ಬರ ಮೇಲೊಬ್ಬರ ಮೇಲೆ ಆರೋಪ ಪ್ರತ್ಯಾರೋಪ ಮಾಡುತ್ತಾ ಇದಕ್ಕೆ ಇತ್ಯರ್ಥ ಕಂಡುಕೊಳ್ಳುವ ಬದಲು ಮಹಾದಾಯಿ ವಿಷಯವನ್ನು ದಶಕಳಿಂದ ಕೇವಲ ರಾಜಕೀಯ ದಾಳವಾಗಿರಿಸಿಕೊಂಡಿದ್ದಾರೆ.


ಈಗ ಈ ಭಾಗದ  ರೈತರ ಆಕ್ರೋಶದ ಕಟ್ಟೆಯೊಡೆದು ನರಗುಂದ-ನವಲಗುಂದದಿಂದ ಹೋರಾಟ ಬೆಂಗಳೂರಿಗೆ ಸ್ಥಳಾಂತರವಾಗಿದೆ. ಇತ್ತೀಚಿಗೆ ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಬಿಜೆಪಿ ನಾಯಕ ಯಡಿಯೂರಪ್ಪನವರಿಗೆ ಪತ್ರ ಬರೆದು ಕುಡಿಯುವ ನೀರಿನ ಬಗ್ಗೆ ನಮ್ಮದು ಅಭ್ಯಂತರವಿಲ್ಲ ಎಂದು ಪತ್ರ ಬರೆದಿದ್ದರು. ಈ ಕುರಿತಾಗಿ ಯಡಿಯೂರಪ್ಪ ಇದನ್ನೇ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹತ್ತಿರದಲ್ಲಿರುವುದರಿಂದ ರಾಜಕೀಯ ದಾಳವಾಗಿ ಬಳಸಿಕೊಳ್ಳುವ ಪ್ರಯತ್ನ ಮಾಡಿದರು.


ಆದರೆ ಈ ಪತ್ರ ಬರೆದ ನಂತರ ಸಂಪೂರ್ಣವಾಗಿ ಭಿನ್ನ ನಿಲುವು ತಾಳಿದ ಪರಿಕ್ಕರ್ ಇದನ್ನು ನ್ಯಾಯಾಧಿಕರಣದ ಅಣತಿಯಂತೆ ಈ ವಿಷಯದ ಪರಿಹಾರಕ್ಕೆ ಯತ್ನಿಸಲಾಗುವುದೆಂದು ಅಭಿಪ್ರಾಯಪಟ್ಟರು. ಆ ಮೂಲಕ ತಮ್ಮ ಮೊದಲಿನ ಹೇಳಿಕೆಗೆ ಎಳ್ಳುನೀರು ಬಿಟ್ಟರು. ಇತ್ತ ಈ ಕಡೆ ರೈತರು ಯಡಿಯೂರಪ್ಪನವರು ಕೊಟ್ಟ ಆಶ್ವಾಸನೆಗೆ ಸ್ಪಷ್ಟನೆ ನೀಡಬೇಕೆಂದು ರೈತರು ಪಟ್ಟು ಹಿಡಿದು ಬಿಜೆಪಿ ಕಚೇರಿ ಎದುರು ಪ್ರತಿಭಟನೆಗೆ ನಿಂತರು.


ಸಂಧಾನಕ್ಕೆ ಬಂದಂತಹ ಯಡಿಯೂರಪ್ಪನವರು ನಾವು ಮಾಡುವ ಪ್ರಯತ್ನವೆಲ್ಲವನ್ನು ಮಾಡಿದ್ದೇವೆ ಇನ್ನು ನಮ್ಮಿಂದಾಗದು ಎಂದು ಎನ್ನುವ ಮೂಲಕ, ಈ ಹೇಳಿಕೆಯನ್ನು ಕೇವಲ ರಾಜಕೀಯ ಉದ್ದೇಶಕ್ಕಾಗಿ ಮಾತ್ರ ನೀಡಿದ್ದು ಎನ್ನುವುದನ್ನು ಪರೋಕ್ಷವಾಗಿ ಒಪ್ಪಿಕೊಂಡರು. ಈಗ ಉತ್ತರ ಕರ್ನಾಟಕದಲ್ಲಿ ಮಹಾದಾಯಿ ಕಿಚ್ಚು ಹೊತ್ತಿ ಉರಿಯುತ್ತಿದೆ.


ಈ ಮಹಾದಾಯಿ ಹೆಸರಿನಲ್ಲಿ  ರಾಜಕಾರಣ ಮಾಡಿಕೊಂಡು ಅಧಿಕಾರ ಅನುಭವಿಸಿದ ಈ ಭಾಗದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಸಂಸದರಾದ ಪ್ರಹ್ಲಾದ ಜೋಷಿ, ಪಿ.ಸಿ ಗದ್ದಿಗೌಡರ, ಸುರೇಶ ಅಂಗಡಿ ಯಾರು ಕೂಡಾ ಈ ವಿಷಯವಾಗಿ ಸಂಸತ್ತಿನಲ್ಲಾಗಲಿ ಅಥವಾ ಪ್ರಧಾನಿಗಳ ಬಳಿಯಾಗಲಿ  ಮಾತನ್ನಾಡುವ ಕನಿಷ್ಠ ಸೌಜನ್ಯವನ್ನು ಹೊಂದದೆ ಇರುವುದರ ಮೂಲಕ ಈ ವಿಷಯವನ್ನು ಕೇವಲ ರಾಜಕೀಯ ದಾಳವಾಗಿ ನೋಡುತ್ತಿರುವುದು ನಿಜಕ್ಕೂ ಈ ಭಾಗದ ಜನರ ದುರಂತವಾಗಿದೆ.


ಈ ಎಲ್ಲ ಹಿನ್ನಲೆಯಿಂದ ಈಗ ಮಹಾದಾಯಿಯ ಕಿಚ್ಚು ಈಗ ದ್ವಿಗುಣಗೊಂಡಿದೆ. ಜಲವಿವಾಧಗಳನ್ನ ಬಗೆಹರಿಸುವಲ್ಲಿ ಕೇಂದ್ರ ಸರ್ಕಾರದ ಪಾತ್ರ ಅತ್ಯಂತ ಗಮನಾರ್ಹವಾದದ್ದು.ಆ ನಿಟ್ಟಿನಲ್ಲಿ  ಇತ್ತ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತುಕತೆಯ ಮೂಲಕ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ  ಗೋವಾದ ಮುಖ್ಯಮಂತ್ರಿ ,ಮಹಾರಾಷ್ಟ್ರದ ಮುಖ್ಯಮಂತ್ರಿಗಳಿಗೆ ಮಹಾದಾಯಿ ವಿಚಾರವಾಗಿ ಪತ್ರ ಬರೆದಿದ್ದಾರೆ.


ಆದರೆ ಪತ್ರಗಳಿಗೆ ಇನ್ನು ಉತ್ತರ ನೀಡದೆ ಇರುವುದು, ಬಿಜೆಪಿಯ ರಾಜಕೀಯ ನಡೆಯನ್ನು ಎತ್ತಿತೋರಿಸುತ್ತದೆ. ಆದ್ದರಿಂದ ಇದಕ್ಕೆ ಪೂರಕವಾಗಿ ಪ್ರಧಾನಿ ನರೇಂದ್ರ ಮೋದಿಯವರು ಸಹಿತ ಮಹಾದಾಯಿ ವಿಷಯದಲ್ಲಿ ಜಾಣ ಮರೆವು ತೋರುವ ಮೂಲಕ ಈ ಅಂಶವನ್ನು ಸ್ಪಷ್ಟ ಪಡಿಸಿದ್ದಾರೆ.