ಮೈಸೂರು: ಮೈಸೂರಿನಲ್ಲಿ ಮಾಸ್ಕ್ ಹಾಕದೇ ಹೊರಬರುವವರಿಗೆ ದಂಡ ಹಾಗೂ ಶುಕ್ರವಾರದಿಂದ ಸಂಜೆ 6 ಗಂಟೆ ನಂತರ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ ವಿಧಿಸುತ್ತಿದ್ದೇವೆ ಎಂದು ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ (ST Somashekhar) ತಿಳಿಸಿದರು. 


COMMERCIAL BREAK
SCROLL TO CONTINUE READING

ಇಲ್ಲಿನ ನೂತನ ಜಿಲ್ಲಾ ಕಚೇರಿಗಳ ಸಂಕೀರ್ಣದಲ್ಲಿ ಜಿಲ್ಲಾಧಿಕಾರಿಗಳು, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕೊರೋನಾ  ಕೋವಿಡ್-19 (COVID-19)  ಪ್ರಕರಣ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ನಿಯಂತ್ರಣಕ್ಕೆ ತರಲು ಸಾರ್ವಜನಿಕರ ಸಹಕಾರ ಹಾಗೂ ಜವಾಬ್ದಾರಿ ಸಹ ದೊಡ್ಡದು. ಈ ಹಿನ್ನೆಲೆಯಲ್ಲಿ ಇನ್ನು ಮಾಸ್ಕ್ ಹಾಕದೇ ಹೊರ ಬರುವುದು ಕಂಡರೆ ಪೊಲೀಸರು ದಂಡಹಾಕಲಿದ್ದಾರೆ. ನಗರ ಪ್ರದೇಶಗಳಲ್ಲಿ ಮಾಸ್ಕ್ (Mask) ಹಾಕದವರಿಗೆ 200 ರೂಪಾಯಿ ಹಾಗೂ ಗ್ರಾಮಾಂತರದಲ್ಲಿ 100 ರೂಪಾಯಿ ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದರು. 


ಜೊತೆಗೆ ಸಾಮಾಜಿಕ ಅಂತರವನ್ನೂ ಕಾಯ್ದುಕೊಳ್ಳಬೇಕು. ಈಗ ಬಾಯಿ ಮಾತಿನಲ್ಲಿ ಹೇಳಲಾಗುತ್ತದೆ. ಆಗಲೂ ಜನತೆ ಎಚ್ಚೆತ್ತುಕೊಳ್ಳದೆ ಗುಂಪು ಗುಂಪಾಗಿ ಕಾಣಿಸಿಕೊಂಡರೆ ದಂಡ ವಿಧಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು. 


ಐಎಲ್ಐ ಮತ್ತು ಸ್ಯಾರಿ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಅಂಗಡಿ-ಮುಂಗಟ್ಟುಗಳನ್ನು ಸಂಜೆ 6 ಗಂಟೆ ನಂತರ ಸದ್ಯದ ಮಟ್ಟಿಗೆ ಬಂದ್ ಮಾಡುವ ತೀರ್ಮಾನಕ್ಕೆ ಬರಲಾಗಿದೆ. ಶುಕ್ರವಾರದಿಂದ ಮೈಸೂರು ಜಿಲ್ಲೆಯಲ್ಲಿ ಈ ಆದೇಶ ಅನುಷ್ಠಾನಕ್ಕೆ ಬರಲಿದೆ ಎಂದು ಸಚಿವರು ತಿಳಿಸಿದರು.


ಮೈಸೂರಿ (Mysuru)ನಲ್ಲಿ ಜಿಲ್ಲಾಡಾಳಿತ ಹಾಗೂ ವೈದ್ಯರ ತಂಡ ಉತ್ತಮವಾಗಿ ಕಾರ್ಯನಿರ್ವಹಣೆ ಮಾಡುತ್ತಿದೆ. ಅವರಿಗೆ ಸಾರ್ವಜನಿಕರ ಸಹಕಾರ ಮುಖ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ನಾನು ವೈಯುಕ್ತಿಕವಾಗಿ ಹಾಗೂ ರಾಜ್ಯ ಸರ್ಕಾರದ ವತಿಯಿಂದ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು. 


ಪ್ರತಿ ಜಿಲ್ಲೆಯಲ್ಲಿ ಸಹಾಯಧನ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಗ್ರಾಮೀಣ ಪ್ರದೇಶ ಸೇರಿದಂತೆ ಎಲ್ಲ ಕಡೆ ಅನುದಾನ ನೀಡಲಾಗುತ್ತಿದೆ. ಬಳಿಕ ಆಯಾ ಕ್ಷೇತ್ರದ ಶಾಸಕರು ವಿತರಣೆ ಮಾಡುತ್ತಾರೆ. ಗ್ರಾಮೀಣ ಭಾಗದಲ್ಲಿ ವಿತರಣೆ ಮಾಡುತ್ತಿಲ್ಲ ಎಂಬುದು ಸುಳ್ಳು. ಅದಕ್ಕೋಸ್ಕರ ಪ್ರತಿ ಜಿಲ್ಲೆಗೆ ನಾನೇ ಖುದ್ದು ಭೇಟಿ ನೀಡಿ ವಿತರಣೆ ಮಾಡುತ್ತಿದ್ದೇನೆ. ಇನ್ನು 15 ದಿನಗಳಲ್ಲಿ ಎಲ್ಲ  42685 ಆಶಾ ಕಾರ್ಯಕರ್ತೆಯರಿಗೂ ವಿತರಣೆಯಾಗಲಿದೆ ಎಂದು ಸಚಿವರು ಸ್ಪಷ್ಟಪಡಿಸಿದರು ಈ ಸಂದರ್ಭದಲ್ಲಿ ಸಂಸದರು ಮತ್ತು ಶಾಸಕರು ಉಪಸ್ಥಿತರಿದ್ದರು.