ಉಡುಪಿ : ರಾಮ ಜನ್ಮಭೂಮಿಯಾದ ಅಯೋಧ್ಯೆಯಲ್ಲೇ ರಾಮಮಂದಿರ ನಿರ್ಮಾಣ ಮಾಡುವುದು ಖಚಿತ ಎಂದು ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು.


COMMERCIAL BREAK
SCROLL TO CONTINUE READING

ಇಂದಿನಿಂದ(ನ.24) ಮೂರು ದಿನಗಳ ಕಾಲ ಉಡುಪಿಯಲ್ಲಿ ವಿಶ್ವ ಹಿಂದೂ ಪರಿಷತ್ ಆಯೋಜಿಸಿರುವ  ಧರ್ಮಸಂಸದ್‌ ಅಧಿವೇಶನದ ಮೊದಲ ದಿನವೇ ಆರ್‌ಎಸ್‌ಎಸ್‌ ಮುಖಂಡರು ಅಯೋಧ್ಯೆ ರಾಮಮಂದಿರ ವಿಷಯವನ್ನು ಪ್ರಸ್ತಾಪಿಸಿದ ಮೋಹನ್ ಭಾಗವತ್ ಅವರು, ಹಿಂದು ಧರ್ಮಕ್ಕೆ ಎಲ್ಲ ಪರಿಸ್ಥಿತಿಯನ್ನು ನಿಭಾಯಿಸುವ ಶಕ್ತಿ ಇದೆ. ಸಮಾಜದ ಸುರಕ್ಷತೆಯೇ ಧರ್ಮದ ಆಶಯ. ಹಿಂದು ಧರ್ಮ ಹಲವು ವಿಜಯಗಳನ್ನು ಸಾಧಿಸಿದ್ದರೂ ಪೂರ್ಣ ವಿಜಯ ನಮ್ಮ ಗುರಿ. ಅಂತಹ ಪೂರ್ಣ ವಿಜಯಕ್ಕೆ ಧರ್ಮ ಸಂಸದ್‌ ದಿಕ್ಸೂಚಿಯಾಗಿದೆ ಎಂದು ಅಭಿಪ್ರಾಯಪಟ್ಟರು.


ಭಾಗವತ್ ಅವರ ಮಾತಿಗೆ ಬೆಂಬಲ ಸೂಚಿಸಿದ ಪೇಜಾವರ ಶ್ರೀಗಳು ತಮ್ಮ ಆಶೀರ್ವಚನ ನೀಡಿ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವು ನಮ್ಮ ಜೀವನದ ಮಹತ್ವದ ಗುರಿಯಾಗಿದ್ದು, ಅದನ್ನು ಪೂರೈಸಿಯೇ ತೀರುತ್ತೇವೆ. ಇನ್ನೊಂದು ವರ್ಷದಲ್ಲಿ ರಾಮಮಂದಿರ ನಿರ್ಮಾಣವಾಗಲಿದೆ. ಮಂದಿರ ನಿರ್ಮಾಣಕ್ಕಾಗಿ ಶ್ರೀಕೃಷ್ಣನಿಗೆ ಪ್ರಾರ್ಥನೆಯನ್ನು ಸಲ್ಲಿಸುತ್ತೇವೆ ಎಂದು ಹೇಳಿದರು.


ಈ ಸಂದರ್ಭದಲ್ಲಿ ಮಾತನಾಡಿದ 'ಧರ್ಮ ಸಂಸದ್' ಸಂಘಟಕರು, ದೇಶಾದ್ಯಂತದ ಎರಡು ಸಾವಿರಕ್ಕೂ ಹೆಚ್ಚು ಸಂತರು, ಮಠಾಧಿಪತಿಗಳಿದ್ದು, ಅವರೆಲ್ಲರೂ ಸಮ್ಮೇಳನದಲ್ಲಿ ಭಾಗವಹಿಸಿದ್ದು, ಜಾತಿ ಮತ್ತು ಲಿಂಗ ಆಧಾರದ ಮೇಲೆ ನಡೆಯುತ್ತಿರುವ ತಾರತಮ್ಯ, ಅಸ್ಪೃಶ್ಯತೆಯ ನಿರ್ಮೂಲನೆ, ಸಾಮಾಜಿಕ ಸುಧಾರಣೆ, ಗೋ ರಕ್ಷಣೆ ಮೊದಲಾದ ವಿಚಾರಗಳ ಬಗ್ಗೆ ಈ ಸಭೆಯಲ್ಲಿ ಚರ್ಚಿಸಿ, ಹಿಂದೂ ಸಮಾಜದಲ್ಲಿ ಸಾಮರಸ್ಯವನ್ನು ತರಲು ಮಾರ್ಗಗಳನ್ನು ಕಂಡುಕೊಳ್ಳಲಾಗುವುದು ಎಂದು ಹೇಳಿದರು.