ಮೆಡಿಕಲ್ ಕಾಲೇಜು ಉಳಿಸಿಕೊಳ್ಳಲು ಯಾವ ರೀತಿಯ ಹೋರಾಟಕ್ಕೂ ಸಿದ್ಧ: ಡಿ.ಕೆ. ಸುರೇಶ್
ಡಾ. ಸುಧಾಕರ್ ಅವರನ್ನು ಬಹಳ ದೊಡ್ಡವರು, ಬುದ್ದಿವಂತರು, ಮೇಧಾವಿಗಳು ಎಂದು ಮಾತಿನ ಈಟಿಯಲ್ಲಿ ಇರಿದ ಡಿ.ಕೆ. ಸುರೇಶ್.
ನವದೆಹಲಿ: ಕನಕಪುರಕ್ಕೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜ್ ಅನ್ನು ಚಿಕ್ಕಬಳ್ಳಾಪುರಕ್ಕೆ ಕೊಂಡೊಯ್ಯಲು ಪ್ರಯತ್ನಿಸುತ್ತಿರುವ ಅಲ್ಲಿನ 'ಅನರ್ಹ ಶಾಸಕ' ಡಾ. ಸುಧಾಕರ್ ನಡೆಗೆ ದೆಹಲಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಸಂಸದ ಡಿ.ಕೆ. ಸುರೇಶ್, ಮೆಡಿಕಲ್ ಕಾಲೇಜು ಉಳಿಸಿಕೊಳ್ಳಲು ಯಾವ ರೀತಿಯ ಹೋರಾಟಕ್ಕೂ ಸಿದ್ಧ ಎಂದಿದ್ದಾರೆ.
ಡಾ. ಸುಧಾಕರ್ ಅವರನ್ನು ಬಹಳ ದೊಡ್ಡವರು, ಬುದ್ದಿವಂತರು, ಮೇಧಾವಿಗಳು ಎಂದು ಮಾತಿನ ಈಟಿಯಲ್ಲಿ ಇರಿದ ಡಿ.ಕೆ. ಸುರೇಶ್, ಕನಕಪುರ ಮೆಡಿಕಲ್ ಕಾಲೇಜ್ ಹೆಸರಿನಲ್ಲಿ ಟೆಂಡರ್ ಆಗಿದೆ. ವರ್ಕ್ ಆರ್ಡರ್ ಆಗಿದೆ. ಬಜೆಟ್ ನಲ್ಲಿ ಹಣ ಬಿಡುಗಡೆಗೆ ಅನುಮೋದನೆಯಾಗಿದೆ. ಬೇರೆ ಬೇರೆ ಸಮಸ್ಯೆಗಳಿಲ್ಲದಿದ್ದರೆ ನಾವು ಇಷ್ಟೊತ್ತಿಗೆ ಮೆಡಿಕಲ್ ಕಾಲೇಜಿನ ಕಾಮಗಾರಿಗೆ ಗುದ್ದಲಿ ಪೂಜೆಯನ್ನೂ ಮಾಡಿಬಿಡುತ್ತಿದ್ದೆವು. ಇಷ್ಟೆಲ್ಲಾ ಪ್ರಕ್ರಿಯೆಗಳು ಆದ ಮೇಲೆ ರಾಜ್ಯದಲ್ಲಿ ಸರ್ಕಾರ ಬದಲಾಗುತ್ತಿದ್ದಂತೆ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ಕೊಂಡೊಯ್ಯಲು ಸುಧಾಕರ್ ಪ್ರಯತ್ನಿಸುತ್ತಿದ್ದಾರೆ. ಉಪ ಚುನಾವಣೆಯಲ್ಲಿ ಈ ಪ್ರಯತ್ನ ಆಗುತ್ತಿರಬಹುದು. ನಮ್ಮದೇನೂ ಅಭ್ಯಂತರ ಇಲ್ಲ. ಸುಧಾಕರ್ ಅವರಿಗೂ ಮೆಡಿಕಲ್ ಕಾಲೇಜು ಕೊಡಲಿ. ಹಾಗೇ ಅನರ್ಹ ಶಾಸಕರು ಪ್ರತಿನಿಧಿಸುವ ಎಲ್ಲಾ 17 ಕ್ಷೇತ್ರಗಳಿಗೂ ಮೆಡಿಕಲ್ ಕಾಲೇಜು ಮಂಜೂರು ಮಾಡಲಿ, ಬೇಕಿದ್ದರೆ ಇನ್ನೂ 20 ಶಾಸಕರು ಬಿಜೆಪಿಗೆ ಸೇರುವವರಿದ್ದರೆ ಅವರಿಗೂ ಕೊಡಲಿ. ಅಭಿವೃದ್ಧಿ ವಿಷಯದಲ್ಲಿ ಸ್ಪರ್ಧೆ ಇರಬೇಕು. ಸುಧಾಕರ್ ರಾಜಕಾರಣಕ್ಕಾಗಿ ಮೆಡಿಕಲ್ ಕಾಲೇಜು ವಿಷಯ ಪ್ರಸ್ತಾಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ನಮ್ಮ ಹೋರಾಟ ಚಿಕ್ಕಬಳ್ಳಾಪುರದ ವಿರುದ್ಧ ಅಲ್ಲ. ನಮಗೆ ಸಿಕ್ಕಿರುವ ಮೆಡಿಕಲ್ ಕಾಲೇಜ್ ಉಳಿಸಿಕೊಳ್ಳುವುದಕ್ಕಾಗಿ. ಈಗಾಗಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದೇನೆ. ವೈದ್ಯಕೀಯ ಶಿಕ್ಷಣ ಸಚಿವರ ಜೊತೆ ಚರ್ಚಿಸಿ ಉತ್ತರ ಕೊಡುವುದಾಗಿ ಅವರು ಭರವಸೆ ನೀಡಿದ್ದಾರೆ. ಮುಖ್ಯಮಂತ್ರಿಗಳ ಪ್ರತಿಕ್ರಿಯೆ ನೋಡಿಕೊಂಡು ಹೋರಾಟ ರೂಪಿಸಲಾಗುವುದು. ಈ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸಂಸದ ಡಿ.ಕೆ. ಸುರೇಶ್ ಖಡಕ್ ಆಗಿ ಹೇಳಿದರು.