ಮಂಡ್ಯದಲ್ಲಿ ಅಂಬರೀಶ್ ಅಂತಿಮ ದರ್ಶನಕ್ಕಾಗಿ ಹರಿದು ಬಂದ ಜನಸಾಗರ
ಮಂಡ್ಯದಲ್ಲಿ ಅಂಬರೀಷ್ ಅಂತಿಮದರ್ಶನ ಮುಕ್ತಾಯವಾಗಿದ್ದು, ಕ್ರೀಡಾಂಗಣದಲ್ಲಿ ಸಾರ್ವಜನಿಕ ಪ್ರವೇಶದ ದ್ವಾರವನ್ನು ಮುಚ್ಚಲಾಗಿದೆ. ಕ್ರೀಡಾಂಗಣದ ಒಳಗಿರುವವರಿಗೆ ಮಾತ್ರ ಅವಕಾಶ.
ಮಂಡ್ಯ: ರೆಬೆಲ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ಕಲಿಯುಗ ಕರ್ಣ, ಸಿನಿ ರಂಗದ ಬಿಕ್ಕಟ್ಟುಗಳನ್ನು ಬಿಡಿಸುತ್ತಿದ್ದ ಟ್ರಬಲ್ ಶೂಟರ್, ನಾಡಿನ ನೆಲ, ಜಲದ ವಿಚಾರ ಬಂದಾಗ ಕನ್ನಡಿಗರ ಪರವಾಗಿ ದನಿ ಎತ್ತುತ್ತಿದ್ದ ಕೇಂದ್ರದ ಮಾಜಿ ಸಚಿವ ಅಂಬರೀಶ್ ಅಂತಿಮ ದರ್ಶನಕ್ಕಾಗಿ ಅವರ ತವರು ಜಿಲ್ಲೆಯಲ್ಲಿ ರಾತ್ರಿಯಿಡೀ ಜನಸಾಗರ ಹರಿದು ಬಂದಿದೆ.
ಶನಿವಾರ ನಿಧನರಾದ ಮೇರು ನಟನ, ರಾಜಕಾರಣಿ ಅಂಬರೀಶ್ ಅಂತ್ಯ ಸಂಸ್ಕಾರ ಇಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆಯಲಿದೆ.
ಮಂಡ್ಯದಲ್ಲಿ ಸರ್ ಎಂ.ವಿ. ಕ್ರೀಡಾಂಗಣದಲ್ಲಿ ರಾತ್ರಿಯಿಡೀ ಅಂತಿಮ ದರ್ಶನಕ್ಕೆ ಅನುವು ಮಾಡಿದ್ದರೂ ಸಹ ಹರಿದು ಬರುತ್ತಿರುವ ಜನಸಾಗರ ಇನ್ನೂ ಕಡಿಮೆಯಾಗಿಲ್ಲ. ಆದರೆ ಪಾರ್ಥೀವ ಶರೀರವನ್ನು ಬೆಂಗಳೂರಿಗೆ ತರಬೇಕಾಗಿರುವುದರಿಂದ ಕ್ರೀಡಾಂಗಣದಲ್ಲಿ ಸಾರ್ವಜನಿಕ ಪ್ರವೇಶದ ದ್ವಾರವನ್ನು ಮುಚ್ಚಲಾಗಿದೆ. ಕ್ರೀಡಾಂಗಣದ ಒಳಗಿರುವವರಿಗೆ ದರ್ಶನಕ್ಕೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ.
ಮಂಡ್ಯದಿಂದ ಸೇನಾ ಹೆಲಿಕಾಪ್ಟರ್ ಮೂಲಕ ಅಂಬರೀಶ್ ಪಾರ್ಥೀವ ಶರೀರವನ್ನು ಬೆಂಗಳೂರಿನ ಕಂಠೀರವ ಸ್ಟೇಡಿಯಂಗೆ ತರಲಾಗುವುದು. ಬಳಿಕ ಕಂಠೀರವ ಸ್ಟೇಡಿಯಂ ನಿಂದ ಪಾರ್ಥಿವ ಶರೀರ ಮೆರವಣಿಗೆಯಲ್ಲಿ ಕಂಠೀರವ ಸ್ಟುಡಿಯೋದತ್ತ ಸಾಗಲಿದೆ.
ಈ ಸಂಬಂಧ ಬೆಂಗಳೂರು ನಗರಾದ್ಯಂತ ವಿಶೇಷ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಪೋಲೀಸ್ ಬಿಗಿ ಭದ್ರತೆ ಅಂಗವಾಗಿ 11,000 ಪೋಲೀಸ್ ಅಧಿಕಾರಿಗಳು, 4,000 ಸಂಚಾರಿ ಸಿಬ್ಬಂದಿ, 30 ಕೀಸ್ ಆರ್ ಪಿ ತುಕಡಿ, 34 ಸಿಎಆರ್ ತುಕಡಿ, 3 ಆರ್ ಎ ಎಫ್ ತುಕಡಿ, 5 ಆರ್ ಐ ವಿ ಮತ್ತು 15 ಡಿಸಿಪಿ ಗಳನ್ನು ನಿಯೋಜಿಸಲಾಗಿದೆ. ಅಲ್ಲದೆ ನಾಲ್ಕು ಹೆಚ್ಚುವರಿ ಪೋಲೀಸ್ ಆಯುಕ್ತರನ್ನು ಸಹ ನೇಮಿಸಲಾಗಿದೆ.