ಎರಡು ರಾಷ್ಟ್ರೀಯ ಪಕ್ಷಗಳ ಮಧ್ಯೆ ಪ್ರಾದೇಶಿಕ ಪಕ್ಷ ಉಳಿಯಬೇಕು: ಎಚ್.ಡಿ ದೇವೇಗೌಡ
ಕೊಪ್ಪಳ: ಕಳೆದ 10 ವರ್ಷಗಳ ಕಾಂಗ್ರೆಸ್ ಮತ್ತು ಬಿಜೆಪಿಯ ಗೊಂದಲದ ಆಡಳಿತವನ್ನು ರಾಜ್ಯಗಳ ಜನರು ಈಗಾಗಲೇ ನೋಡಿದ್ದಾರೆ.ಆದ್ದರಿಂದ ಈ ಎರಡು ರಾಷ್ಟ್ರೀಯ ಪಕ್ಷಗಳ ಮಧ್ಯ ಪ್ರಾದೇಶಿಕ ಪಕ್ಷವು ಉಳಿಯಬೇಕಾಗಿದೆ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಇಲ್ಲಿನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಹೇಳಿದರು. ಮುಂದುವರೆದು ಸಾಹಿತಿ ಚಂಪಾರವರು ಕೂಡಾ ಈ ಹಿಂದೆ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು ಎಂದ ಅವರು, ಆ ದೃಷ್ಟಿಯಿಂದ ಮುಂಬೈ ಕರ್ನಾಟಕದಲ್ಲಿ ಪಕ್ಷದ ಸಂಘಟನೆಯ ಕಾರಣಕ್ಕಾಗಿ ಈ ಬಾರಿ ಆರು ಜಿಲ್ಲೆಗಳಿಗೆ ಭೇಟಿ ನೀಡಲಿದ್ದೇನೆ ಆ ಮೂಲಕ ಕಾರ್ಯಕರ್ತರಲ್ಲಿರುವ ಭಿನ್ನಾಭಿಪ್ರಾಯ ಹೋಗಲಾಡಿಸಿ ಐಕ್ಯತೆ ಮೂಡಿಸಲು ಈ ಪ್ರವಾಸವನ್ನು ಹಮ್ಮಿಕೊಂಡಿದ್ದೇನೆ ಎಂದರು.
ರಾಜ್ಯದಲ್ಲಿ ಈಗ ಕುಮಾರಪರ್ವ ಆರಂಭವಾಗಿದೆ,ಇನ್ನು ಎರಡು ರಾಷ್ಟ್ರೀಯ ಪಕ್ಷಗಳು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ ಆ ದೃಷ್ಟಿಯಿಂದ ಪಕ್ಷದ ಮುಖಂಡರ ಜೊತೆ ಚರ್ಚೆ ಮಾಡಿ ಪಟ್ಟಿ ಬಿಡುಗಡೆ ಮಾಡಿ ಎಂದು ಈಗಾಗಲೇ ಅವರಿಗೆ ಸೂಚಿಸಿದ್ದೇನೆ ಎಂದರು.
ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಕುರಿತು ಮಾತನಾಡಿದ ದೇವೇಗೌಡ "ಸಿದ್ದರಾಮಯ್ಯ, ಬಸವರಾಜ ರಾಯರೆಡ್ಡಿ ಎಲ್ಲಿಂದ ಬೆಳೆದರು ?ಅವರಿಗೆ ಮುಂದಿನ ದಿನಗಳಲ್ಲಿ ಖಂಡಿತ ಮನವರಿಕೆಯಾಗುತ್ತದೆ ಎಂದರಲ್ಲದೆ ಉಪಮುಖ್ಯಮಂತ್ರಿ ಆಗುವವರೆಗೂ ಬೆಳೆಸಿದ್ದು ಯಾರು ಎನ್ನುವುದನ್ನು ಅವರು ನೆನಪಿನಲ್ಲಿಟ್ಟುಕೊಳ್ಳಬೇಕೆಂದು ಸಿದ್ದರಾಮಯ್ಯರ ವಿರುದ್ಡ ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು ಮುಂದುವರೆದು ಸಿದ್ದರಾಮಯ್ಯರವರಿಗೆ ದುಡ್ಡಿದೆ, ಅಹಂಕಾರವಿದೆ ಮಾತನಾಡಲಿ ಆದರೆ ಈ ದೇವೇಗೌಡನಿಗೆ ಈ ಜನರೆ ಶಕ್ತಿ ಎಂದು ತಿಳಿಸಿದರು.
ಮಹದಾಯಿ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ ಯವರಿಗೆ ಕೈ ಮುಗಿದು ಕೇಳಿದರು ಏನು ಮಾತನಾಡಲಿಲ್ಲ ಒಂದು ವೇಳೆ ಅವರು ಈ ಸಮಸ್ಯೆ ನಿಗಿಸಿದರೆ ಅವರಿಗೆ ಅನಂತ ನಮಸ್ಕಾರ ಮಾಡುತ್ತೇನೆ ಎಂದು ಕೊಪ್ಪಳದಲ್ಲಿ ಪತ್ರಕರ್ತರೊಂದಿಗೆ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.