ಮಂಗಳೂರು: ಪ್ರವೀಣ್ ನೆಟ್ಟಾರು, ಮಸೂದ್ ಹಾಗೂ ಫಾಝಿಲ್ ಕೊಲೆ ಪ್ರಕರಣದಲ್ಲಿ ಸರಿಯಾದ ರೀತಿ ತನಿಖೆ ಆಗದಿದ್ದರೆ, ಮೂರು ಪ್ರಕರಣಗಳಲ್ಲಿ ನೈಜ ಆರೋಪಿಗಳನ್ನು ಆಗಸ್ಟ್ 5 ರೊಳಗೆ ಬಂಧಿಸದಿದ್ದರೆ ಮರುದಿನದಿಂದ ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಎದುರು ಶಾಂತಿಯುತ  ಸತ್ಯಾಗ್ರಹ ಕೂರುವುದಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರಕ್ಕೆ ಗಡುವು ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಇತ್ತೀಚೆಗೆ ಹತ್ಯೆಯಾದ ಈ ಮೂವರು ಯುವಕರ ಮನೆಗಳಿಗೆ ಇಂದು ಭೇಟಿ ನೀಡಿ ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ ನಂತರ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್ ಡಿಕೆ, ಮೂವರ ಮನೆಗಳಿಗೂ  ಹೋಗಿ ಸಾಕಷ್ಟು ಮಾಹಿತಿ ಪಡೆದಿದ್ದೇನೆ‌. ಅಲ್ಲೇ ಹೆಚ್ಚು ಹೊತ್ತು ಇದ್ದು ನಾನು ಸಾಂತ್ವಾನ ಹೇಳಿದ್ದೇನೆ. ನನ್ನದು ಫ್ಲೈಯಿಂಗ್ ವಿಸಿಟ್ ಅಲ್ಲ ಎಂದರು.


ಮೂವರನ್ನು ಹತ್ಯೆ ಮಾಡಿದ ಆರೋಪಿಗಳು ಬಂಧಿಸದಿದ್ದರೆ ನಮ್ಮ ಪಕ್ಷದ ಮುಖಂಡರ ಜತೆ ಚರ್ಚೆ ಮಾಡಿ ಮಂಗಳೂರಿಗೆ ಹೊಸ ಬದಕು ನೀಡುವ ಉದ್ದೇಶದಿಂದ  ಸತ್ಯಾಗ್ರಹ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.


ಇದನ್ನೂ ಓದಿ: ಬೆಲ್ಲದ ಮೇಲಿನ GST ಖಂಡಿಸಿ ರೈತರಿಂದ ಬೃಹತ್ ಪ್ರತಿಭಟನೆ


ಮಂಗಳೂರು ನಗರವನ್ನು ಸರ್ವ ಜನಾಂಗದ ಶಾಂತಿ ತೋಟ ಮಾಡಲು ನಾನು ಪ್ರಯತ್ನಸುತ್ತೇನೆ. ಈ ಭಾಗದಲ್ಲಿ ಶಾಂತಿ ನೆಲಸಬೇಕು. ಪ್ರತಿ ಬಡ ಮಕ್ಕಳಿಗೆ ಉದ್ಯೋಗ ಕೊಡುವ ಭರವಸೆ ಅವರು ನೀಡಿದರು.


ಸರ್ಕಾರದಿಂದ ನ್ಯಾಯ ಸಿಗುವ ಬಗ್ಗೆ  ಮೃತರ ಮನೆಯವರಿಗೆ ಅನುಮಾನ ಇದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳೂರಿಗೆ  ಬಂದು ಏನು ಸಾಧಿಸಿದರು. ಎರಡು ಸಮುದಾಯದ ಜನರಿಗೆ ಒಂದು ಒಳ್ಳೆ ಸಂದೇಶ ಕೊಡುತ್ತೀರಿ ಅಂತಾ ನಾನು ನಿರೀಕ್ಷೆ ಇಟ್ಟಿದ್ದೆ. ಮೃತ ಪ್ರವೀಣ್ ನೆಟ್ಟಾರು ಮನೆಗೆ ಸಿಎಂ ಭೇಟಿ ಮಾಡಿದರು. ಮಸೂದ್ ಮನೆಗೆ ಭೇಟಿ ನೀಡಲಿಲ್ಲ. ಅವತ್ತೇ ಸುರತ್ಕಲ್ ನಲ್ಲೂ ಕೊಲೆಯಾಗಿತ್ತು.ಆದರೆ ನೀವು ಉಳಿದ ಎರಡು ಕಡೆ ಭೇಟಿ ನೀಡಲಿಲ್ಲ. ನನ್ನ ಪ್ರಕಾರ ಪ್ರವೀಣ್ ಹಂತಕರ ಬಗ್ಗೆ ನಿಖರವಾದ ಮಾಹಿತಿ ಇನ್ನು ಸಿಕ್ಕಿಲ್ಲ ಎಂದು ಹೇಳಿದರು.ಮಸೂದ್ ಕುಟುಂಬಕ್ಕೆ ಭೇಟಿ ಕೊಟ್ಟಿದ್ದೆ.ಒಂದು ಕರುವನ್ನು ಯಾರೊ ಒಬ್ಬರು ಸಾಕುವುದಕ್ಕೆ ಕೊಟ್ಟಿದ್ದರು ಎಂದು ಮನೆಯವರು ಹೇಳಿದ್ದಾರೆ.


ಮಸೂದ್ ಆ ಕರುವನ್ನು ಮೇಯಿಸಲು ಕರೆದೊಯ್ಯುತ್ತಿದ್ದ.ಕೆಲಯುವಕರು ಈತನನ್ನು ಗುರಾಯಿಸುತ್ತಿದ್ದರು.ಘರ್ಷಣೆ ನಡೆದು ಸಂಧಾನಕ್ಕೆ ಕರೆದಿದ್ದರು. ಆದರೆ ಸಂಧಾನಕ್ಕೆ ಕರೆದವರು ಮಸೂದ್ ಹತ್ಯೆ ಮಾಡಿದ್ದಾರೆ. ಹತ್ಯೆ ನಡೆದ ದಿನವೇ ಕರುವೂ ಸತ್ತು ಹೋಗಿದೆ ಎಂದು ಹೇಳಿದ್ದಾರೆ ಎಂದರು.


ಇದನ್ನೂ ಓದಿ: Monkeypox: ಕರ್ನಾಟಕದ ಗಡಿ ರಾಜ್ಯದಲ್ಲಿ ಮಂಕಿಪಾಕ್ಸ್‌ಗೆ ಓರ್ವ ಬಲಿ?


ಇನ್ನು ಪ್ರವೀಣ್​ ಹಂತಕರಿಗೆ ಶಿಕ್ಷೆ ವಿಧಿಸಬೇಕು ಎಂಬುದು ಕುಟುಂಬ ಸದಸ್ಯರ ಆಗ್ರಹವಾಗಿದೆ. ಈ ಅಂಶವನ್ನು ಸರ್ಕಾರದ ಗಮನಕ್ಕೆ ತರುತ್ತೇನೆ. ಕಾಟಾಚಾರಕ್ಕೆ ತನಿಖೆ ಮಾಡುವುದು ಬೇಡ. ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು.  ಸರ್ಕಾರ ಕಾಟಾಚಾರಕ್ಕೆ ಎನ್​ಐಎ ತನಿಖೆಗೆ ವಹಿಸಿದೆ. ಇವರು ತಮ್ಮ ಜವಾಬ್ದಾರಿ ಕಳೆದುಕೊಳ್ಳಲು ರಾಷ್ಟ್ರೀಯ ತನಿಖಾ ದಳಕ್ಕೆ ತನಿಖೆಯ ಜವಾಬ್ದಾರಿ ವಹಿಸಿದ್ದಾರೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.


ಶಿಕ್ಷಣಕಾಶಿಯೇ ಆಗಿ ಉಳಿಯಲಿ:


ದಕ್ಷಿಣ ಕನ್ನಡವನ್ನು ಕರ್ನಾಟಕದ ಶಿಕ್ಷಣ ಕಾಶಿ ಎನ್ನುತ್ತಾರೆ. ಇದು ಹೀಗೆಯೇ ಉಳಿಯಬೇಕು. ಹಿಂಸೆಯ ನೆರಳು ಬದಿಗೆ ಸರಿಯಬೇಕು ಎಂದ ಕುಮಾರಸ್ವಾಮಿ ಅವರು,  ಇಲ್ಲಿನ ವಾತಾವರಣ ಕದಡಲು ಎರಡು ರಾಷ್ಟ್ರೀಯ ಪಕ್ಷಗಳ ನಡವಳಿಕೆಯೇ ಮುಖ್ಯ ಕಾರಣ. ದೇಶದ ವಿವಿಧ ಮೂಲೆಯಿಂದ ಇಲ್ಲಿ ದೇವರ ದರ್ಶನ ಪಡೆಯಲು ಆಗಮಿಸುತ್ತಾರೆ. ಆದರೆ ಇಲ್ಲಿ ಸರಣಿ ಹತ್ಯೆಗಳು ನೆಡೆಯುತ್ತಿದ್ದು ನಾವು ತಲೆತಗ್ಗಿಸುವಂತೆ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು.


ಎರಡು ರಾಷ್ಟ್ರೀಯ ಪಕ್ಷಗಳು ಅವರ ಸ್ವಾರ್ಥದ ರಾಜಕಾರಣಕ್ಕೆ ಜಿಲ್ಲೆಯ ಶಾಂತಿಯನ್ನು ಬಲಿ ಕೊಟ್ಟಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಷ್ಟೆಲ್ಲಾ ಪ್ರಕರಣ ನಡೆದಿವೆ. ಬಿಜೆಪಿ ಅಥವಾ ಕಾಂಗ್ರೆಸ್​ನ ಮಂತ್ರಿಗಳ ಮಕ್ಕಳು ಅಥವಾ ಶಾಸಕರ ಮಕ್ಕಳು ಬಲಿಯಾಗಿದ್ದಾರಾ? ಪ್ರಮುಖ ನಾಯಕರ ಮಕ್ಕಳು ಬಲಿಯಾಗಿದ್ದಾರಾ? ಎಂದು ಪ್ರಶ್ನಿಸಿದರು ಅವರು.


ಮೃತಪಟ್ಟವರು ಎಲ್ಲರೂ  ಬಡ ಕುಟುಂಬದ ಮಕ್ಕಳೇ ಆಗಿದ್ದಾರೆ. ಕಳೆದ 15 ವರ್ಷಗಳಿಂದ ರಾಜಕೀಯ ಮುಖಂಡರು ತಮ್ಮ ಶಕ್ತಿಯನ್ನ ಬೆಳೆಸಿಕೊಳ್ಳಲು ಇಂಥ ವಾತಾವರಣ ಸೃಷ್ಟಿ ಮಾಡಿದ್ದಾರೆ. ಇದು ಇಲ್ಲಿಗೆ ಕೊನೆಯಾಗಬೇಕು ಎಂದು ಎಲ್ಲರಿಗೂ ಮನವಿ ಮಾಡುತ್ತೇನೆ. ಚುನಾವಣೆಯಲ್ಲಿ ಗೆಲಲ್ಲು ನಾನು ಇಲ್ಲಿಗೆ ಬಂದಿಲ್ಲ. ಶಾಂತಿ ಸೌಹಾರ್ದತೆ  ಕಾಪಾಡಬೇಕು ಎಂದು ಮನವಿ ಮಾಡಿದರು.


ಬಿಜೆಪಿಗೆ ಕರ್ನಾಟಕದಲ್ಲಿ ಶಾಂತಿ ನೆಲೆಸುವ ಅವಶ್ಯಕತೆ ಇಲ್ಲ. ಇದೇ ರೀತಿಯ ವಾತಾವರಣ ಮುಂದುವರಿದರೆ ಸರ್ಕಾರಕ್ಕೂ, ಪಕ್ಷಕ್ಕೂ ಅನುಕೂಲ ಎಂದು ಮುಖ್ಯಮಂತ್ರಿಗಳು ಯೋಚಿಸುತ್ತಿರುವಂತಿದೆ ಎಂದ ಹೆಚ್ ಡಿಕೆ, ಎರಡು ರಾಷ್ಟ್ರೀಯ ಪಕ್ಷಗಳಿಗೆ ಕೋಮು ನಡೆಸಿದರೆ ಮಾತ್ರ ಲಾಭವಾಗುತ್ತದೆ ಎಂದು ಅನ್ನಿಸಿರಬೇಕು. ಯುವಕರು ಹೆಚ್ಚೆತ್ತುಕೊಳ್ಳಬೇಕು ಎಂದರು.


ಕಾಂಗ್ರೆಸ್ ಸರ್ಕಾರ ಇದ್ದಾಗ ಕೂಡ ಇದೇ ರೀತಿ ನಡೆಯಿತು.ಆಗ ನೀವು ಜನರಿಗೆ ಏನನ್ನು ಕೊಟ್ಟಿರಿ, ಆಗ ಇಲ್ಲಿ ರಾಮನಾಥ ರೈ ಮತ್ತು ಯು.ಟಿ.ಖಾದರ್ ಉಸ್ತುವಾರಿ ಸಚಿವರಾಗಿದ್ರು.ಆಗ ನೀವು ಏನು ಮಾಡಿದಿರಿ ಎಂದು ಕಾಂಗ್ರೆಸ್ ನಾಯಕರ ವಿರುದ್ಧವೂ ವಾಗ್ದಾಳಿ ನಡೆಸಿದರು.


ಜೆಡಿಎಸ್‍ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಮಾತನಾಡಿ, ಮುಖ್ಯಮಂತ್ರಿಗಳು ಜಿಲ್ಲೆಗೆ ಬಂದ್ರು ಸತ್ತವರ ಮನೆಗೆ ಹೋಗಿಲ್ಲ ಒಂದು ವರ್ಗದ ಜನರನ್ನು ಮಾತ್ರ ಒಲೈಕೆ ಮಾಡುತ್ತಾರೆ. ಮುಸ್ಲಿಂರು ಕೂಡ ಹತ್ಯೆಯಾಗಿದೆ. ಅವರ ಮನೆಯಲ್ಲೂ ಆ ಕುಟುಂಬ ನೋವಿನಲ್ಲಿ ಇದೆ.ಮುಖ್ಯಮಂತ್ರಿಗಳು ಅವರ ಮನೆಗೆ ಹೋಗಿಲ್ಲ. ಪ್ರವೀಣ್ ಮನೆಗೆ ಹೋಗಿ ಹಣ ಕೊಡ್ತಾರೆ ಮುಸ್ಲಿಂ ಕುಟುಂಬದವರಿಗೆ ಒಂದು ರೂಪಾಯಿ ಕೊಟ್ಟಿಲ್ಲ  ಎಂದು ಅಸಮಾಧಾನ ವ್ಯಕ್ತಪಡಿಸಿದರು.


ಹತ್ಯೆ ತನಿಖೆ ಮಾಡಲು ಎನ್ ಐ ಎ ಗೆ ಕೊಡ್ತಾರೆ. ಯಾಕೇ ನಮ್ಮ ರಾಜ್ಯದ ಪೋಲಿಸ್ ರ ಮೇಲೆ ನಂಬಿಕೆ ಇಲ್ಲವೇ?. ಬಿಜೆಪಿ ಸರ್ಕಾರ  ರಾಜ್ಯ ಪೋಲಿಸ್ ಶಕ್ತಿಯನ್ನು ಕುಗ್ಗಿಸುತ್ತಿದೆ. ಇಲ್ಲಿಯವರೆಗೂ ನಡೆದಿರುವ ಕೊಲೆಗಳ ಬಗ್ಗೆ ನ್ಯಾಯ ಸಿಕ್ಕಿಲ್ಲ. ಹಂತಕರನ್ನು ಕೂಡಲೇ ಬಂಧಿಸಬೇಕು ಎಂದು ಇಬ್ರಾಹಿಂ ಆಗ್ರಹಿಸಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.