ಬೆಂಗಳೂರು: ನಡೆದಾಡುವ ದೇವರು ಎಂದೇ ಖ್ಯಾತಿಯಾಗಿದ್ದ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳ ಅಂತಿಮ ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದ್ದು, ಭಕ್ತರಿಗೆ ಅನುಕೂಲವಾಗುವಂತೆ ಬೆಂಗಳೂರಿನಿಂದ ತುಮಕೂರಿಗೆ ಹೆಚ್ಚುವರಿ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.


COMMERCIAL BREAK
SCROLL TO CONTINUE READING

ಬೆಂಗಳೂರಿಂದ ತುಮಕೂರಿಗೆ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಬೆಳಗ್ಗೆ 5.30 ರಿಂದ 10 ನಿಮಿಷಕ್ಕೊಂದು ಬಸ್ ಸಂಚರಿಸುತ್ತಿದ್ದು, 867 ಟ್ರಿಪ್​​ಗಳಲ್ಲಿ ಕೆಎಸ್​ಆರ್​ಟಿಸಿ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. 10 ಗಂಟೆ ನಂತರ ಹೆಚ್ಚು ಪ್ರಯಾಣಿಕರ ನಿರೀಕ್ಷೆ ಇದ್ದು, ಅಧಿಕ ಬಸ್ ವ್ಯವಸ್ಥೆ ಮಾಡಲಾಗುವುದು ಎಂದು ಕೆಎಸ್​ಆರ್​ಟಿಸಿ ವಿಭಾಗೀಯ ನಿಯಂತ್ರಕರಿಂದ ಮಾಹಿತಿ ಲಭಿಸಿದೆ.


ಇನ್ನು ಶತಾಯುಷಿ ಡಾ.ಶಿವಕುಮಾರ ಸ್ವಾಮೀಜಿ(111)ಗಳ ಅಂತಿಮ ದರ್ಶನಕ್ಕೆ ತೆರಳುವವರಿಗಾಗಿ ಬೆಂಗಳೂರಿನಿಂದ ನಾಲ್ಕು ಡೆಮೋ ರೈಲುಗಳ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನ ಯಶವಂತಪುರದಿಂದ ಹೊರಡಲಿವ ಡೆಮೋ ಟ್ರೈನ್‌ಗಳು, ಸಾವಿರಾರು ಭಕ್ತರನ್ನು ಅಂತಿಮ ದರ್ಶನಕ್ಕೆ ಕೊಂಡೊಯ್ಯಲಿವೆ.


ಈಗಾಗಲೇ ಬೆಳಗ್ಗೆ 6ಕ್ಕೆ ಯಶವಂತಪುರದಿಂದ ಹೊರಟ ರೈಲು 7:45ಕ್ಕೆ ತುಮಕೂರು ತಲುಪಿದೆ. ಬೆಳಗ್ಗೆ 9:50ಕ್ಕೆ ಹೊರಡುವ ಡೆಮೋ ಟ್ರೈನ್ 11:30ಕ್ಕೆ ತುಮಕೂರು ತಲುಪಲಿದೆ. ಮಧ್ಯಾಹ್ನ 2 ಗಂಟೆಗೆ ಹೊರಡಲಿರುವ ಟ್ರೈನ್ 3:50 ಕ್ಕೆ ತುಮಕೂರು ತಲುಪಲಿದೆ. ಅದೇ ರೀತಿ ಸಂಜೆ 7 ಗಂಟೆಗೆ ಹೊರಡಲಿರುವ ಟ್ರೈನ್ 8:30 ಕ್ಕೆ ತುಮಕೂರು ತಲುಪಲಿದೆ. 


ಏತನ್ಮಧ್ಯೆ, ಇಂದೂ ಕೂಡ ಸಿದ್ಧಗಂಗೆಯಲ್ಲಿ ದಾಸೋಹದ ಕಾಯಕ ನಿಂತಿಲ್ಲ. ದೇವರ ದರ್ಶನಕ್ಕೆ ಬರುವ ಭಕ್ತರಿಗೆ ಅನ್ನ ದಾಸೋಹವನ್ನು ಏರ್ಪಡಿಸಲಾಗಿದೆ. ಮಠದಲ್ಲಿ ಬೆಳಗ್ಗೆ 5.30 ರಿಂದಲೇ ಭಕ್ತರಿಗೆ ಉಪಹಾರ ವಿತರಣೆ ಆರಂಭವಾಗಿದೆ. ಶ್ರೀ ಮಠದ ವಿದ್ಯಾರ್ಥಿಗಳೇ ಭಕ್ತರಿಗೆ ಉಪಹಾರವನ್ನು ವಿತರಿಸುತ್ತಿದ್ದಾರೆ.