ಬೆಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಸಲ್ಲಿಸಿರುವ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಸರ್ಕಾರ ಕೂಡಲೇ ಸ್ವೀಕಾರ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಒತ್ತಾಯಿಸಿದ್ದಾರೆ.


COMMERCIAL BREAK
SCROLL TO CONTINUE READING

ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ವರದಿ ಸ್ವೀಕಾರ ಮಾಡಲು ಸರ್ಕಾರ ಹಿಂದೇಟು ಹಾಕಿದರೆ ಒಕ್ಕೂಟ ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ. ಈ ಹೋರಾಟಕ್ಕೆ ನನ್ನ ಬೆಂಬಲವೂ ಇರಲಿದೆ ಎಂದು ಘೋಷಿಸಿದರು.


ನಾನು ಸಿಎಂ ವರದಿ ಸಿದ್ಧವಾಗಿರಲಿಲ್ಲ. ಹೀಗಾಗಿ ಸ್ವೀಕಾರ ಮಾಡುವ ಪ್ರಶ್ನೆಯೇ ಇರಲಿಲ್ಲ. ಈ ಕುರಿತು ಕೆಲವರು ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ. ಆರ್ಥಿಕ ಮತ್ತು ಸಾಮಾಜಿಕ ಜನ ಗಣತಿ ಕೊನೆಯ ಬಾರಿಗೆ ಆಗಿದ್ದು 1931ರಲ್ಲಿ. ಬಳಿಕ ವಿಶ್ವ ಯುದ್ಧ ಆಗಿದ್ದರಿಂದ ಜನ ಗಣತಿ ನಡೆಯಲಿಲ್ಲ. ಆರ್ಥಿಕ ಮತ್ತು ಸಾಮಾಜಿಕ ಆಧಾರದ ಮೇಲೆಯೂ ಗಣತಿ ನಡೆಯಲಿಲ್ಲ. ಮೀಸಲು ವಿಚಾರದಲ್ಲಿ ವಿಚಾರಣೆಗಳು ನಡೆದಾಗ ಹೈಕೋರ್ಟ್ (High Court) ಮತ್ತು ಸುಪ್ರೀಂಕೋರ್ಟ್(Supreme Court)ಗಳು ಜಾತಿ ಮತ್ತು ಜನಗಣತಿ ಬಗ್ಗೆ ವರದಿ ಹಾಗೂ ದಾಖಲೆಗಳನ್ನು ಕೇಳುತ್ತಿದ್ದವು. ಆದರೆ ಸಮಗ್ರವಾದ ವರದಿಗಳೇ ಸಿಗುತ್ತಿರಲಿಲ್ಲ. ಇದನ್ನು ಮನಗಂಡು ನಾನು ಮುಖ್ಯಮಂತ್ರಿಯಾಗಿದ್ದಾಗ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಆಧಾರದ ಮೇಲೆ ಸಮೀಕ್ಷೆ ನಡೆಸುವ ನಿರ್ಧಾರ ಮಾಡಿದ್ದೆ ಎಂದರು.


ಯೋಗಿ ಆದಿತ್ಯನಾಥ್ ಸರ್ಕಾರ ಪ್ರಜಾಪ್ರಭುತ್ವಕ್ಕೆ ಕಳಂಕ -ಸಿದ್ಧರಾಮಯ್ಯ


ಹಿಂದುಳಿದ ವರ್ಗಗಳ ಶಾಶ್ವತ ಆಯೋಗಕ್ಕೆ ನಮ್ಮ ಸರ್ಕಾರ ಗಣತಿ ನಡೆಸುವ ಜವಾಬ್ದಾರಿ ವಹಿಸಿತು. ಆಗ  ಹಿರಿಯ ನ್ಯಾಯವಾದಿ ಕಾಂತರಾಜ್ ಆಯೋಗದ ಅಧ್ಯಕ್ಷರಾಗಿದ್ದು. ಆಯೋಗ ಸುಮಾರು 1.88 ಲಕ್ಷ ಸಿಬ್ಬಂದಿಯನ್ನು ಗಣತಿಗೆ ಬಳಸಿಕೊಂಡಿತ್ತು. ಸಿಬ್ಬಂದಿ ನಗರ ಹಾಗೂ ಗ್ರಾಮೀಣ ಪ್ರದೇಶದ ಮನೆ ಮನೆಗೆ ಭೇಟಿ ನೀಡಿ, 55 ಅಂಶಗಳನ್ನು ಮುಂದಿಟ್ಟುಕೊಂಡು ಮಾಹಿತಿ ಸಂಗ್ರಹಿಸಿದ್ದರು. ಇದರ ಆಧಾರದ ಮೇಲೆ ಸಮಗ್ರವಾದ ವರದಿ ಸಿದ್ಧಪಡಿಸಲಾಯಿತು. ದೇಶದಲ್ಲಿ ಎಲ್ಲಿಯೂ ಈ ರೀತಿಯ ವರದಿಯನ್ನು ಸಿದ್ಧಪಡಿಸಿಲ್ಲ. ಇದಕ್ಕಾಗಿ 162.77  ಕೋಟಿ ರೂ. ಖರ್ಚು ಮಾಡಲಾಗಿತ್ತು ಎಂದು ವಿವರಿಸಿದರು.

ಕೇವಲ ಜಾತಿ ಗಣತಿ ಮಾಡುವುದು ನಮ್ಮ ಉದ್ದೇಶವಾಗಿರಲಿಲ್ಲ. ಅಂಕಿ-ಅಂಶ ಇದ್ದರೆ, ಮಾಹಿತಿ ಇದ್ದರೆ ಸಾಮಾಜಿಕ, ಆರ್ಥಿಕವಾಗಿ ಕಾರ್ಯಕ್ರಮಗಳನ್ನು ಜಾರಿಗೆ ತರಲು, ಮೀಸಲು ಸೌಲಭ್ಯ ಒದಗಿಸಲು ಅನುಕೂಲವಾಗುತ್ತದೆ. ಮೀಸಲು ಪ್ರಮಾಣ ಯಾವ ಸಮುದಾಯಕ್ಕೆ ಎಷ್ಟು ಪ್ರಮಾಣದಲ್ಲಿ ಇರಬೇಕು ಎಂಬುದನ್ನು ನಿರ್ಧರಿಸಲು ಸಾಧ್ಯವಾಗುತ್ತದೆ. 


ಉ.ಪ್ರದೇಶದಲ್ಲಿ ದಲಿತ ಯುವತಿಯ 'ಹತ್ಯಾಚಾರ'ವಾಗಿದೆ, ಬಿಜೆಪಿಯವರೇನಾದ್ರೂ ಸರ್ಕಾರದ ವಿರುದ್ಧ ಪ್ರತಿಭಟಿಸಿದ್ರಾ? -ಸಿದ್ದರಾಮಯ್ಯ


ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಈ ಹಿಂದೆ ಅವರ ಜನಸಂಖ್ಯೆಗೆ ಅನುಗುಣವಾಗಿ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿರಲಿಲ್ಲ. ಹೀಗಾಗಿ ನಮ್ಮ ಸರ್ಕಾರದ ಅವಧಿಯಲ್ಲಿ ಎಸ್‍ಸಿಇಪಿ/ಟಿಎಸ್‍ಪಿ ಯೋಜನೆಗೆ ಜಾರಿಗೆ ತರಲಾಯಿತು ಎಂದರು.


ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಜನಸಂಖ್ಯೆ ಶೇ. 17.15, ಪರಿಶಿಷ್ಟ ಪಂಗಡದ ಜನಸಂಖ್ಯೆ ಶೇ. 6.95 ಇದೆ. ಒಟ್ಟು ಶೇ. 24.1ರಷ್ಟು ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿದ್ದಾರೆ. ಎಲ್ಲ ಜಾತಿಗಳ ಬಗ್ಗೆ ಮಾಹಿತಿ ಇದ್ದರೆ ಈ ರೀತಿಯ ಕಾರ್ಯಕ್ರಮ ಜಾರಿಗೆ ತರಲು ಅನುಕೂಲವಾಗುತ್ತದೆ. ಬಡವರಿಗೆ,  ದಲಿತರಿಗೆ, ಶೋಷಿತರಿಗೆ, ಅವಕಾಶ ವಂಚಿತರಿಗೆ ಕೇವಲ ಮತದಾನದ ಹಕ್ಕು ನೀಡಿದರೆ ಸಾಲದು. ಅವರಿಗೆ ಸಾಮಾಜಿಕ ಮತ್ತು ಆರ್ಥಿಕವಾಗಿ ಶಕ್ತಿ ಬರಬೇಕು ಎಂದು ಡಾ. ಬಿ.ಆರ್. ಅಂಬೇಡ್ಕರ್ ಹೇಳಿದ್ದರು. 


ಅಧಿಕಾರದಲ್ಲಿ, ಸಂಪತ್ತಿನಲ್ಲಿ ಪಾಲು ಇರಬೇಕು. ಶಿಕ್ಷಣ (Education) ಎಲ್ಲರಂತೆ ಅವರಿಗೂ ಸಿಗಬೇಕು. ಇದು ಆದಾಗ ಮಾತ್ರ ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದಕ್ಕೆ ಸಾರ್ಥಕ ಆಗುತ್ತದೆ ಎಂಬುದು ಅಂಬೇಡ್ಕರ್ ನಿಲುವು ಆಗಿತ್ತು. ರಾಜಕೀಯ ಅಧಿಕಾರ ಸಿಕ್ಕಿದೆ. ಆದರೆ ಸಾಮಾಜಿಕ, ಆರ್ಥಿಕ ಶಕ್ತಿ ಸಿಕ್ಕಿಲ್ಲ ಎಂಬ ನೋವು ಇದೆ ಎಂದರು. ಅವಕಾಶ ವಂಚಿತರನ್ನು ಮೇಲೆ ಎತ್ತಲು ಸಾಧ್ಯವಾಗುತ್ತದೆ ಎಂಬ ಕಾರಣಕ್ಕೆ ಈ ಗಣತಿ ಆರಂಭಿಸಿದ್ದು. 


ಭೂಸುಧಾರಣೆ, ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಿರುವ ರಾಜ್ಯ ಸರ್ಕಾರಕ್ಕೆ ನೈತಿಕತೆ ಇಲ್ಲ: ಸಿದ್ದರಾಮಯ್ಯ


ನಾನು ಮುಖ್ಯಮಂತ್ರಿ ಆಗಿರುವವರೆಗೆ ಆಯೋಗ ವರದಿ ಕೋಡಲಿಲ್ಲ. ಸಿದ್ದರಾಮಯ್ಯ ಇದ್ದಾಗಲೇ ತೆಗೆದುಕೊಳ್ಳಬಹುದಿತ್ತು ಎಂದರು ಕೆಲವರು ಹೇಳುತ್ತಾರೆ.  ನಾನು ಆಯೋಗದಿಂದ ವರದಿಯನ್ನು ಕಿತ್ತುಕೊಳ್ಳಲು ಆಗುವುದೇ ? ನಾನಿದ್ದಾಗ ಆಯೋಗ ಕೊಡಲಿಲ್ಲ. ವರದಿ ಆಗ ಪೂರ್ಣವೂ ಆಗಿರಲಿಲ್ಲ. ಆ ವೇಳೆಗೆ ಚನಾವಣೆ ಬಂದು ಬಳಿಕ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂತು. ಆಗ ಆಯೋಗ ವರದಿ ಕೊಡಲು ಪ್ರಯತ್ನ ಮಾಡಿತಾದರೂ ಸ್ವೀಕಾರ ಮಾಡಲಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿಯಾದ ನಂತರ ವರದಿ ಸ್ವೀಕಾರ ಮಾಡುವುದರಿಲಿ, ಆಯೋಗದ ಅಧ್ಯಕ್ಷರು ಮತ್ತು ಸದಸ್ಯರನ್ನೇ ವಜಾ ಮಾಡಿದರು ಎಂದು ಆಕ್ಷೇಪಿಸಿದರು.


ಹೀಗಾಗಿಯೇ ಕಾಂತರಾಜ್ ಅವರು ಆಯೋಗದ ಕಾರ್ಯದರ್ಶಿಗೆ ವರದಿಯನ್ನು ಸಲ್ಲಿಸಿದರು. ಈ ವರೆಗೆ ಪ್ರಯತ್ನ ಮಾಡಿದರೂ ಸರ್ಕಾರ ವರದಿಯನ್ನು ಸ್ವೀಕಾರ ಮಾಡುತ್ತಿಲ್ಲ. ಯಾವುದೋ ಜಾತಿಯನ್ನು ಗುರಿಯಾಗಿಟ್ಟುಕೊಂಡು ವರದಿ ಸಿದ್ಧಪಡಿಸಿಲ್ಲ. ರಾಜ್ಯದ ಜನಸಂಖ್ಯೆ ಈಗ ಈಗ 6.70 ಕೋಟಿ ಆಗಿರಬಹುದು. ಆಯೋಗ ನೇಮಕ ಮಾಡಿದ ಸಿಬ್ಬಂದಿ ಎರಡು, ಮೂರು ಬಾರಿ ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಿದೆ. ಗ್ರಾಮೀಣ ಪ್ರದೇಶದಲ್ಲಿ ಶೇ. 100ಕ್ಕೆ 100ರಷ್ಟು ಸಮೀಕ್ಷೆಯಾಗಿದೆ. ಕೇಂದ್ರ ಸರ್ಕಾರವೇ ಜಾತಿ ಗಣತಿ ಮಾಡಬೇಕಿತ್ತು ಎಂದರು.


ವರದಿ ಕುರಿತು ನಾನು ಮೌನ ವಹಿಸಿಲ್ಲ. ಈ ಸರ್ಕಾರ ವರದಿ ಸ್ವೀಕಾರ ಮಾಡಬಹುದು ಎಂದು ಕಾಯುತ್ತಿದ್ದೆ. ಆದರೆ ಸರ್ಕಾರ ತಯಾರಿಲ್ಲ. ರಾಜ್ಯದಲ್ಲಿರುವ ಎಲ್ಲಾ ಜಾತಿಗಳ ಬಗ್ಗೆಯೂ ಸಮೀಕ್ಷೆ ನಡೆದಿದೆ. ಇಂಥ ವರದಿಯನ್ನು ಸ್ವೀಕಾರ ಮಾಡಿ, ಅದರ ಆಧಾರದ ಮೇಲೆ ಮೀಸಲು ಸೌಲಭ್ಯ ಒದಗಿಸುವ ಹಾಗೂ ಕಾರ್ಯಕ್ರಮಗಳನ್ನು ರೂಪಿಸಬಹುದು. ಎಷ್ಟೋ ಕುಟುಂಬಳಿಗೆ ಇನ್ನೂ ಸರ್ಕಾರದ ಸವಲತ್ತು ಸಿಕ್ಕಿಲ್ಲ. ಓದದವವರು, ಜಮೀನು, ಸರ್ಕಾರಿ ಉದ್ಯೋಗ ಇಲ್ಲದ ಕುಟುಂಬಳಿಗೆ ಆದ್ಯತೆ ನೀಡಿ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರಬೇಕಿದೆ. ಹೀಗಾಗಿ ವರದಿಯನ್ನು ಸ್ವೀಕಾರ ಮಾಡುವುದು ಸೂಕ್ತ ಎಂಬುದು ಎಲ್ಲರ ಅಭಿಪ್ರಾಯವಾಗಿದೆ ಎಂದು ವಿವರಿಸಿದರು.


ನಾಡಿನ ಜನರ ಪರ ಧ್ವನಿ ಎತ್ತಲಾಗದ ಹೇಡಿ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವದಲ್ಲಿದೆ-ಸಿದ್ದರಾಮಯ್ಯ


ಎಸ್ ಟಿ ಮೀಸಲು ಹೆಚ್ಚಳಕ್ಕೆ ವಿರೋಧವಿಲ್ಲ!
ಪರಿಶಿಷ್ಟ ಪಂಗಡದ ಬಗ್ಗೆ ನ್ಯಾಯಮೂರ್ತಿ ನಾಗಮೋಹನದಾಸ್ ಅವರು ವರದಿ ನೀಡಿದ್ದಾರೆ. ಎಸ್‍ಟಿ (ST) ಸಮುದಾಯವರು ಮೀಸಲು ಪ್ರಮಾಣವನ್ನು ಶೇ. 7.5ಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಇದಕ್ಕೆ ನಮ್ಮ ವಿರೋಧವಿಲ್ಲ. ನಾಗಮೋಹನ ದಾಸ್  ವರದಿಯನ್ನು ಸರ್ಕಾರ ಸ್ವೀಕಾರ ಮಾಡಿದೆ. ಜನಸಂಖ್ಯೆಗೆ ಅನುಗುಣವಾಗಿ ಮೀಸಲು ಸೌಲಭ್ಯ ಒದಗಿಸಬೇಕು ಎಂದು ಸಂವಿಧಾನವೇ ಹೇಳಿದೆ. ಮಂಡಲ್ ಆಯೋಗದ ವರದಿಯನ್ನು ವಿರೋಧ ಮಾಡಿದ ಬಿಜೆಪಿಯವರು ಈಗ ಅಧಿಕಾರದಲ್ಲಿ ಇದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.


ಮಾಜಿ ಸಚಿವರಾದ ಎಚ್.ಎಂ. ರೇವಣ್ಣ, ಒಕ್ಕೂಟದ ಗೌರವ ಅಧ್ಯಕ್ಷರಾದ ಡಾ. ಬಿ.ಕೆ. ರವಿ, ಅಧ್ಯಕ್ಷರಾದ ಕೆ.ಎಂ. ರಾಮಚಂದ್ರಪ್ಪ, ಕಾರ್ಯಾಧ್ಯಕ್ಷ ಸುರೇಶ್ ಲಾತೂರ್, ಪ್ರಧಾನ ಕಾರ್ಯದರ್ಶಿ ಎಣ್ಣೆಗೆರೆ ವೆಂಕಟರಾಮಯ್ಯ ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.