ಬೆಂಗಳೂರು: ಬಿಜೆಪಿ ಸರ್ಕಾರೇತರ ರಾಜ್ಯಗಳಲ್ಲಿ ಕೊಲೆ, ಅತ್ಯಾಚಾರಗಳಾದಾಗ ಬಿಜೆಪಿ ನಾಯಕರು ಮೊಸಳೆ ಕಣ್ಣೀರು ಸುರಿಸಿ ಅದನ್ನು ರಾಜಕೀಯ ಲಾಭಕ್ಕಾಗಿ ಬಳಕೆ ಮಾಡಿಕೊಳ್ತಿದ್ರು. ಉತ್ತರ ಪ್ರದೇಶದಲ್ಲಿ ದಲಿತ ಯುವತಿಯ ಅತ್ಯಾಚಾರ ಮತ್ತು ಕೊಲೆಯಾಗಿದೆ. ಬಿಜೆಪಿಯವರೇನಾದ್ರೂ ಅಲ್ಲಿನ ಸರ್ಕಾರದ ವಿರುದ್ಧ ಬೀದಿಗಿಳಿದು ಪ್ರತಿಭಟಿಸಿದ್ರಾ ಎಂದು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಪ್ರಶ್ನಿಸಿದ್ದಾರೆ.
ರಾಜರಾಜೇಶ್ವರಿ ನಗರ ಹಾಗೂ ಶಿರಾ ಉಪಚುನಾವಣೆಯನ್ನು ಎದುರಿಸಲು ಕಾಂಗ್ರೆಸ್ ಪಕ್ಷ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ. ಈ ಕ್ಷೇತ್ರಗಳಿಗೆ ಪಕ್ಷದ ಪರವಾಗಿ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದು, ಎರಡೂ ಕಡೆಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸವಿದೆ ಎಂದರು.
ದೇಶದಲ್ಲಿ ನಿತ್ಯ ದಾಖಲಾಗುತ್ತಿರುವ ಒಟ್ಟು ಕೊರೊನಾ ಸೋಂಕಿತರ ಪ್ರಮಾಣದಲ್ಲಿ 15% ಕರ್ನಾಟಕವೊಂದರಲ್ಲೇ ದಾಖಲಾಗುತ್ತಿದೆ. ರಾಜ್ಯ ಸರ್ಕಾರ ಕೊರೊನಾ ನಿಯಂತ್ರಿಸಲಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸುವ ಬದಲು ರಾಜೀನಾಮೆ ನೀಡಿ ಮನೆಗೆ ಹೋಗಲಿ. ಇಂಥವರು ಇದ್ದು ಮಾಡುವುದಾದರೂ ಏನು? ಎಂದು ಕಿಡಿ ಕಾರಿದರು.
ಹತ್ರಾಸ್ ಸಾಮೂಹಿಕ ಅತ್ಯಾಚಾರ: ಪ್ರಧಾನಿ ಮೋದಿ ಮೌನ ಪ್ರಶ್ನಿಸಿದ ಕಾಂಗ್ರೆಸ್
ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಈಗಿರುವ ಎಪಿಎಂಸಿ ಕಾಯಿದೆಗೆ ತಿದ್ದುಪಡಿ ಮಾಡಿ ತಾಲೂಕು ಕೇಂದ್ರಗಳಿಗೆ ಸೀಮಿತವಾಗಿರುವ ಎಪಿಎಂಸಿ ಮಾರುಕಟ್ಟೆಯನ್ನು ಪ್ರತೀ ಗ್ರಾಮ ಪಂಚಾಯತಿಗೂ ವಿಸ್ತರಿಸುವುದಾಗಿ ಹೇಳಿತ್ತು. ಬಿಜೆಪಿಯವರು ನಮ್ಮ ಪ್ರಣಾಳಿಕೆಯ ಆಯ್ದ ಭಾಗವನ್ನು ಮಾತ್ರ ಜನರಿಗೆ ತೋರಿಸಿ, ದಾರಿ ತಪ್ಪಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಪಿಎಂಸಿ ಕಾಯಿದೆ ಹಾಗೂ ಭೂ ಸುಧಾರಣಾ ಕಾಯಿದೆ ತಿದ್ದುಪಡಿಗಳು ಮೇಲ್ಮನೆಯಲ್ಲಿ ಚರ್ಚೆಗೆ ಬರಲೇ ಇಲ್ಲ, ಇನ್ನು ಕಾರ್ಮಿಕ ಕಾಯಿದೆ ಪರ ಬಹುಮತವೇ ಇಲ್ಲ. ಹೀಗಾಗಿ ಈ ಕಾಯ್ದೆಗಳ ಜಾರಿಗೆ ಮತ್ತೊಮ್ಮೆ ಸುಗ್ರೀವಾಜ್ಞೆ ಹೊರಡಿಸಬೇಕು. ಈಗಿನ್ನೂ ಹೋರಾಟದ ಕಿಚ್ಚು ಆರಂಭವಾಗಿದೆ, ಇದು ಇಲ್ಲಿಗೆ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಯಡಿಯೂರಪ್ಪನವರ ಕುಟುಂಬ ಭಾಗಿಯಾಗಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣದ ತನಿಖೆಯನ್ನು ಸುಪ್ರೀಂ ಕೋರ್ಟ್‌ನ ಹಾಲಿ ನ್ಯಾಯಾಧೀಶರನ್ನು ಒಳಗೊಂಡ ವಿಶೇಷ ತನಿಖಾ ತಂಡದ ಮೂಲಕ ನಡೆಸಲಿ. ಯಡಿಯೂರಪ್ಪ ಅವರ ಕುಟುಂಬ ಭ್ರಷ್ಟಾಚಾರ ನಡೆಸಿದ್ದು ಸುಳ್ಳು ಎಂದು ತನಿಖೆಯಿಂದ ಸಾಬೀತಾದರೆ ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧನಿದ್ದೇನೆ ಎಂದು ಸವಾಲು ಹಾಕಿದರು.
ಬೀದರ್, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ ಗೊಂಡ, ರಾಜಗೊಂಡ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ನಾನು ಮುಖ್ಯಮಂತ್ರಿಯಾಗಿದ್ದಾಗಲೇ ಶಿಫಾರಸ್ಸು ಮಾಡಿ ಕೇಂದ್ರ ಸರ್ಕಾರಕ್ಕೆ ಕಳಿಸಿಕೊಟ್ಟಿದ್ದೆ. ಈಶ್ವರಪ್ಪನವರು ಮೊದಲು ಈ ಬೇಡಿಕೆಯನ್ನು ಈಡೇರಿಸುವ ಕೆಲಸ ಮಾಡಲಿ, ಆಮೇಲೆ ಬೇರೆ ಮಾತು ಎಂದು ಸಲಹೆ ನೀಡಿದರು.