ಬೆಂಗಳೂರು : ಕೊರೋನಾ COVID-19 ಹಿನ್ನೆಲೆಯಲ್ಲಿ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೇರಳ, ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರಕ್ಕೆ ಹೋಲಿಕೆ ಮಾಡಿದರೆ ನಮ್ಮ ರಾಜ್ಯದಲ್ಲಿ ಸೋಂಕಿತರ ಪರೀಕ್ಷೆ ಕಾರ್ಯ ಮಂದಗತಿಯಲ್ಲಿ ಸಾಗಿದೆ. ಹೀಗಾಗಿ ಪರೀಕ್ಷೆ ಪ್ರಮಾಣವನ್ನು ಹೆಚ್ಚಿಸುವಂತೆ ಸರ್ಕಾರವನ್ನು ಒತ್ತಾಯಿಸುವುದಾಗಿ ಹೇಳಿದರು. 


COMMERCIAL BREAK
SCROLL TO CONTINUE READING

ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ಸಿದ್ದರಾಮಯ್ಯ (Siddaramaiah) ಅವರು ಅಧಿಕಾರಿಗಳಿಗೆ ಪತ್ರ ಬರೆದು ಕೋರಿದ್ದರು. ಜೊತೆಗೆ 51 ಪ್ರಶ್ನೆಗಳನ್ನು ಸಂಬಂಧಿಸಿದ ಇಲಾಖೆಗಳ ಹಿರಿಯ ಅಧಿಕಾರಿಗಳಿಗೆ ಕಳುಹಿಸಿದ್ದರು. 


ಈ ಹಿನ್ನೆಲೆಯಲ್ಲಿ ಆರೋಗ್ಯ, ಸಹಕಾರ, ಕಂದಾಯ, ಗೃಹ, ಆಹಾರ, ಹಣಕಾಸು, ಕಾರ್ಮಿಕ ಮತ್ತಿತರ ಇಲಾಖೆಗಳ ಹಿರಿಯ ಅಧಿಕಾರಿಗಳು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾಹಿತಿ ನೀಡಿದರು. ಜೊತೆಗೆ ಕೊರೋನಾಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಇಡೀ ದಿನ ಚರ್ಚೆ ನಡೆಸಿದರು.


ಈ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಿದ್ದರಾಮಯ್ಯ ಕೊರೋನಾ ವೈರಸ್ (Coronavirus) Covid-19 ಸೋಂಕು ನಿಯಂತ್ರಣಕ್ಕೆ ಸರ್ಕಾರ ಕೈಗೊಂಡಿರುವ ಕ್ರಮಗಳು, ಅದಕ್ಕಾಗಿ ಮಾಡಿಕೊಂಡಿರುವ ಸಿದ್ಧತೆ, ವೈದ್ಯಕೀಯ ಸಿಬ್ಬಂದಿಗೆ ಒದಗಿಸಿರುವ ಸೌಕರ್ಯ, ಲಾಕ್‍ಡೌನ್ ನಿಂದ ಸಂಕಷ್ಟಕ್ಕೆ ಒಳಗಾಗಿರುವ ರೈತರು, ಕೂಲಿ-ಕಾರ್ಮಿಕರು, ಅಸಂಘಟಿತ ವಲಯದ ಕಾರ್ಮಿಕರು, ಬಡವರ ನೆರವಿಗೆ ಕೈಗೊಂಡಿರುವ ರೂಪಿಸಿರುವ ಕಾರ್ಯಕ್ರಮಗಳೇನು ಎಂಬುದನ್ನು ತಿಳಿದುಕೊಳ್ಳಲು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾಗಿ ತಿಳಿಸಿದರು. 


ಸೋಂಕು ಕಂಡು ಬಂದ ಸಂದರ್ಭದಲ್ಲೇ ಸರ್ಕಾರ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿತ್ತು. ಈ ಕುರಿತು ನಾವು ಸಹ ಸರ್ಕಾರಕ್ಕೆ ಸಲಹೆ ನೀಡಿದ್ದೆವು. ವಿಧಾನ ಮಂಡಲ ಅಧಿವೇಶನ ಮುಂದೂಡಿ ಕೊರೋನಾ ಸೋಂಕಿನತ್ತ ಗಮನ ಹರಿಸಿ ಎಂದು ಹೇಳಿದ್ದೆವು. ಸರ್ಕಾರ ವಿಳಂಬ ಮಾಡಿದ್ದರಿಂದಲೇ ಪರಿಸ್ಥಿತಿ ಈ ಹಂತ ತಲುಪಿದೆ ಎಂದು ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದರು.


ಸೋಂಕಿತರ ಪರೀಕ್ಷೆಗೆ ಕೇರಳ ಮಾದರಿ ಅನುಸರಿಸುವುದು ಸೂಕ್ತ. ವಿದೇಶದಿಂದ ಬಂದವರ ಸಂಖ್ಯೆ ಅಲ್ಲಿ ಹೆಚ್ಚಾಗಿತ್ತು. ಆದರೂ ಅಲ್ಲಿ ಸೋಂಕು ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೀಗಾಗಿ ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತಿದೆ. ನಮ್ಮಲ್ಲಿ ಹೆಚ್ಚಾಗುತ್ತಿದೆ. ಈ ಬಗ್ಗೆ ಅಧ್ಯಯನ ನಡೆಸುವುದು ಸೂಕ್ತ ಎಂದು ಅವರು ಸರ್ಕಾರಕ್ಕೆ ಸಲಹೆ ನೀಡಿದರು. 


ಮೈಸೂರಿನ ಜ್ಯುಬಿಲಿಯೆಂಟ್ ಕಾರ್ಖಾನೆಯಲ್ಲಿ ಚೀನಾದ ಕಂಟೈನರ್ ನಿಂದ ಸೋಂಕು ಬಂದಿದೆ ಎಂದು ಹೇಳಲಾಗಿತ್ತು. ಆದರೆ ಪರೀಕ್ಷಾ ವರದಿಯಲ್ಲಿ ನೆಗಟಿವ್ ಬಂದಿದೆ. ಆರಂಭದಲ್ಲೇ ಅಲ್ಲಿ ಸರಿಯಾದ ರೀತಿಯಲ್ಲಿ ಕ್ವಾರಂಟೈನ್ ಮಾಡಿದ್ದರೆ ಸೋಂಕು ವೇಗವಾಗಿ ಹರಡುತ್ತಿರಲಿಲ್ಲ ಎಂಬುದು ನನ್ನ ಅಭಿಪ್ರಾಯ ಎಂದರು. 


ಹಣ್ಣು, ತರಕಾರಿ ಬೆಳೆಯುತ್ತಿರುವ ರೈತರಿಗೆ (Farmers) ದೊಡ್ಡ ಅನ್ಯಾಯವಾಗುತ್ತಿದೆ. ಬೆಳೆದಿದ್ದನ್ನು ಖರೀದಿ ಮಾಡುವವರಿಲ್ಲ. ಅವರನ್ನು ಕೇಳುವವರಿಲ್ಲ. ಸರ್ಕಾರವೇ ಖರೀದಿ ಮಾಡಲಿ ಎಂದು ಒತ್ತಾಯಿಸಿದರೂ ಪ್ರಯೋಜನವಾಗಿಲ್ಲ. 


ಇನ್ನೂ ಪರೀಕ್ಷೆ ನಡೆಸುವ ಕಿಟ್‍ಗಳೂ ಸರಬರಾಜು ಆಗುತ್ತಿಲ್ಲ. ಆ ಬಗ್ಗೆ ಸರ್ಕಾರ ತುರ್ತಾಗಿ ಗಮನ ಹರಿಸಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.