ಕೇಂದ್ರ ಸರ್ಕಾರ ರಾಜ್ಯಕ್ಕೆ ತಾರತಮ್ಯ ಮಾಡದೆ ಹೆಚ್ಚಿನ ನೆರವು ನೀಡಲಿ- ಹೆಚ್ಡಿಕೆ
ಉತ್ತರ ಕರ್ನಾಟಕದ ಈಗ ಭೀಕರ ಪ್ರವಾಹ ಪರಿಸ್ಥಿತಿ ಹಿನ್ನಲೆಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಬೆಳಗಾವಿಗೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೇಂದ್ರ ಸರ್ಕಾರ ರಾಜ್ಯಕ್ಕೆ ತಾರತಮ್ಯ ಮಾಡದೆ ಹೆಚ್ಚಿನ ನೆರವು ನೀಡಬೇಕೆಂದು ವಿನಂತಿಸಿಕೊಂಡರು.
ಬೆಳಗಾವಿ: ಉತ್ತರ ಕರ್ನಾಟಕದ ಈಗ ಭೀಕರ ಪ್ರವಾಹ ಪರಿಸ್ಥಿತಿ ಹಿನ್ನಲೆಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಬೆಳಗಾವಿಗೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೇಂದ್ರ ಸರ್ಕಾರ ರಾಜ್ಯಕ್ಕೆ ತಾರತಮ್ಯ ಮಾಡದೆ ಹೆಚ್ಚಿನ ನೆರವು ನೀಡಬೇಕೆಂದು ವಿನಂತಿಸಿಕೊಂಡರು.
ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 'ಕಳೆದ ಮೂರು ದಿನಗಳಿಂದ ಜ್ವರ ಬಂದು ಚಿಕಿತ್ಸೆ ಪಡೆಯುತ್ತಿದೆ. ರಾಜ್ಯದಲ್ಲಿ ಎಂದು ಕೇಳದ ಹಾನಿ ಈ ಬಾರಿ ಆಗುತ್ತಿದೆ. ಬೆಳೆ ಹಾನಿ ಸೇರಿದಂತೆ ಜೀವ ಹಾನಿ ದೊಡ್ಡ ಮಟ್ಟದಲ್ಲಿ ಆಗುತ್ತಿದೆ. ಮಾಧ್ಯಮಗಳಲ್ಲಿ ಇದನ್ನು ನೋಡಿ ರಾತ್ರಿ ತೀರ್ಮಾನ ಮಾಡಿ ಬಂದಿದ್ದೇನೆ. ಬೆಳಗಾವಿ ಚಿಕ್ಕೋಡಿ, ಗದಗ ಧಾರವಾಡ ಭಾಗಗಳಿಗೆ ಇಂದು ಹೋಗುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.
ಇದೇ ಸಂದರ್ಭದಲ್ಲಿ ಪ್ರವಾಹ ಸಂತ್ರಸ್ತರಿಗೆ ವೈಯಕ್ತಿಕವಾಗಿ ಸಹಾಯ ಮಾಡುವುದಾಗಿ ಹೇಳಿದ ಕುಮಾರಸ್ವಾಮಿ 'ಹತ್ತು ಸಾವಿರ ಬೆಡ್ ಶಿಟ್ ಮಧುರೈದಿಂದ ತರಿಸಿ ಸಹಾಯ ನೀಡುತ್ತೇನೆ. ಜೊತೆಗೆ ಆಹಾರ ಧಾನ್ಯ ಅವಶ್ಯಕತೆ ಇದ್ರೇ ನಾನು ಸಹಾಯ ಮಾಡುತ್ತೇನೆ. ಸರ್ಕಾರ ಕೆಲಸ ಮಾಡುತ್ತಿದೆ, ಆದರೆ ಇದರಲ್ಲಿ ಈಗ ನಾನು ರಾಜಕೀಯ ಬೆರಸಲ್ಲ' ಎಂದು ಹೇಳಿದರು.
ಇವತ್ತು ಇರುವ ರಾಜಕೀಯ ಪರಿಸ್ಥಿತಿಯಲ್ಲಿ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಸಿಎಂ ಯಡಿಯೂರಪ್ಪ ಅವರು ಅಧಿಕಾರಿಗಳ ಮುಖಾಂತರ ಕೆಲಸ ಮಾಡಿಸಿಕೊಳ್ಳಬೇಕು ಎಂದು ಹೇಳಿದರು. ಅಲ್ಲದೆ ಕೇಂದ್ರ ಸರ್ಕಾರ ಯಾವುದೇ ತಾರತಮ್ಯ ಧೋರಣೆ ತಾಳದೆ ರಾಜ್ಯಕ್ಕೆ ಹೆಚ್ಚಿನ ನೆರವನ್ನು ನೀಡಬೇಕು ಎಂದು ಹೇಳಿದರು.