ಬೆಂಗಳೂರು: ಕೆಂಪುಕೋಟೆ ಮೇಲೆ ಮುಂದೊಂದು ದಿನ ರಾಷ್ಟ್ರ ಧ್ವಜದ ಜಾಗದಲ್ಲಿ ಕೇಸರಿ ಧ್ವಜ ಹಾರಿಸುತ್ತೇವೆ ಎನ್ನುವವರು ಸಾರ್ವಜನಿಕ ಜೀವನದಲ್ಲಿ ಇರಲು ನಾಲಾಯಕ್ ಗಳು. ದೇಶದ ಬಗ್ಗೆ ಇವರಿಗೆ ಗೌರವ ಎಲ್ಲಿದೆ?  ಎಂದು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಕಿಡಿ ಕಾರಿದ್ದಾರೆ.


COMMERCIAL BREAK
SCROLL TO CONTINUE READING

ಪ್ರದೇಶ ಯುವ ಕಾಂಗ್ರೆಸ್ ನ ನೂತನ ಅಧ್ಯಕ್ಷರಾಗಿ ಮೊಹಮ್ಮದ್ ನಲಪಡ್ ಅವರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಅವರು ಮಾತನಾತ್ತಾ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದ ನಂತರ ದೇಶದ ಮಹಿಳೆಯರು, ದಲಿತರು, ರೈತರು, ಕಾರ್ಮಿಕರು, ಅಲ್ಪಸಂಖ್ಯಾತರು ಸಂಕಷ್ಟ ಎದುರಿಸುತ್ತಿದ್ದಾರೆ. ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಬೇಕಾದ ಹೊಣೆ ಕಾಂಗ್ರೆಸ್ ಪಕ್ಷದ ಮೇಲಿದೆ. ದೇಶದ ಭವಿಷ್ಯ ರೂಪಿಸಬೇಕಾದ ಯುವ ಜನತೆ ತಮ್ಮ ಮೇಲಿರುವ ಈ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕು ಎಂದು ಅವರು ಹೇಳಿದರು.


ಇದನ್ನೂ ಓದಿ: Karnataka Hijab Row:ಇಂದು ಮಧ್ಯಾಹ್ನ ಪೂರ್ಣ ಪೀಠದಲ್ಲಿ ಹಿಜಾಬ್ ವಿವಾದದ ವಿಚಾರಣೆ, ಶಾಲಾ ಕಾಲೇಜು ಸುತ್ತಮುತ್ತ ನಿಷೇಧಾಜ್ಞೆ ಜಾರಿ


ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಜನಪರವಾಗಿ ಕೆಲಸ ಮಾಡಿಲ್ಲ, ನುಡಿದಂತೆ ನಡೆದಿಲ್ಲ. ಇದರ ಬದಲು ಭಾವನಾತ್ಮಕ ವಿಚಾರಗಳನ್ನು ಜನರ ಮುಂದೆ ಇಟ್ಟು ಜಾತಿ, ಧರ್ಮದಾರಿತ ದ್ವೇಷವನ್ನು ಜನರ ನಡುವೆ ಬಿತ್ತಿ ಸಮಾಜದ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕೇಂದ್ರದಲ್ಲಿ ಮಾತ್ರವಲ್ಲ ರಾಜ್ಯದಲ್ಲೂ ಅಭಿವೃದ್ಧಿ ಕೆಲಸಗಳು ನಿಂತುಹೋಗಿವೆ, ಹೀಗಾಗಿ ಜನರ ಗಮನ ಬೇರೆಡೆಗೆ ಸೆಳೆಯಲು ಹಿಜಾಬ್ ಹಾಕುವುದನ್ನೇ ವಿವಾದವಾಗಿ ಮಾರ್ಪಾಡು ಮಾಡಿದ್ದಾರೆ. ಈ ಹಿಜಾಬ್ ಅನ್ನು ಮುಸ್ಲಿಂ ಹೆಣ್ಣು ಮಕ್ಕಳು ಬಹಳ ವರ್ಷಗಳಿಂದ ಹಾಕುತ್ತಾ ಬಂದಿದ್ದರು, ಆದರೂ ಅದರ ಬಗ್ಗೆ ತಕರಾರು ತೆಗೆದು ತಮ್ಮ ಮತ ಕ್ರೋಢೀಕರಣಕ್ಕಾಗಿ ದುಷ್ಟ ಪ್ರಯತ್ನ ಮಾಡುತ್ತಿದ್ದಾರೆ. ನಾವು ಶಾಲೆ, ಕಾಲೇಜಿಗೆ ಹೋಗುವಾಗ ಕೇಸರಿ ಶಾಲು ಧರಿಸಿ ಬಂದಿದ್ದನ್ನು ನಾನೆಲ್ಲೂ ನೋಡಿರಲಿಲ್ಲ, ಆದರೆ ಈಗ ಸಂಘ ಪರಿವಾರದವರು ತಾವೇ ಕೇಸರಿ ಶಾಲು ಖರೀದಿ ಮಾಡಿ ವಿದ್ಯಾರ್ಥಿಗಳಿಗೆ ಬಲವಂತವಾಗಿ ಧರಿಸಿಕೊಂಡು ಹೋಗುವಂತೆ ಒತ್ತಡ ಹಾಕುತ್ತಿದ್ದಾರೆ. ಇಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದರು.


ಇದನ್ನೂ ಓದಿ: 'ಹಿಜಾಬ್-ಕೇಸರಿ ಶಾಲು ವಿವಾದದ ಹಿಂದೆ ಯಾರಿದ್ದಾರೆಂದು ಬಿಜೆಪಿ ಸರ್ಕಾರ ತನಿಖೆ ನಡೆಸಿ ಪತ್ತೆಹಚ್ಚಿ ಜನರಿಗೆ ತಿಳಿಸಲಿ'


ಹಿಜಾಬ್ ಇವತ್ತು ನಿನ್ನೆ ಧರಿಸಲು ಆರಂಭ ಮಾಡಿದ್ದಲ್ಲ, ಖುರಾನ್ ನಲ್ಲೂ ಈ ಬಗ್ಗೆ ಉಲ್ಲೇಖವಿದೆ. ಈ ಹಿಜಾಬ್ ಅನ್ನು ಹೆಣ್ಣು ಮಕ್ಕಳು ಧರಿಸಿದರೆ ಬೇರೆಯವರಿಗೆ ಏನು ತೊಂದರೆ? ಒಬ್ಬ ಸರ್ಕಾರಿ ಕಾಲೇಜು ಪ್ರಿನ್ಸಿಪಾಲ್ ಹಿಜಾಬ್ ಧರಿಸಿದ ಹೆಣ್ಣು ಮಕ್ಕಳನ್ನು ಒಳಗೆ ಬಿಡದೆ ಕಾಲೇಜು ಗೇಟ್ ಹಾಕ್ತಾರೆ ಎಂದರೆ ಇದಕ್ಕಿಂತ ಅಮಾನವೀಯವಾದುದ್ದು ಏನಿದೆ? ಸಂವಿಧಾನದಲ್ಲಿ ನಂಬಿಕೆ ಇದ್ದರೆ ಸರ್ಕಾರ ಕೂಡಲೇ ಇವರನ್ನು ಅಮಾನತು ಮಾಡಬೇಕಿತ್ತು. ಸಮವಸ್ತ್ರದ ಹೆಸರಲ್ಲಿ ವಿದ್ಯಾರ್ಥಿಗಳ ಮನಸಲ್ಲಿ ದ್ವೇಷ ತುಂಬಿ ಅವರ ಭವಿಷ್ಯ ಹಾಳುಮಾಡಲು ಹೊರಟಿದ್ದಾರೆ.ರಾಷ್ಟ್ರ ಧ್ವಜ ಇಳಿಸಿ ಕೇಸರಿ ಧ್ವಜ ಹಾರಿಸುವ ಮೂಲಕ ದೇಶಕ್ಕೆ ಅವಮಾನ ಮಾಡಿದ್ದಾರೆ.ಕೆಂಪುಕೋಟೆ ಮೇಲೆ ಮುಂದೊಂದು ದಿನ ರಾಷ್ಟ್ರ ಧ್ವಜದ ಜಾಗದಲ್ಲಿ ಕೇಸರಿ ಧ್ವಜ ಹಾರಿಸುತ್ತೇವೆ ಎನ್ನುವವರು ಸಾರ್ವಜನಿಕ ಜೀವನದಲ್ಲಿ ಇರಲು ನಾಲಾಯಕ್ ಗಳು. ದೇಶದ ಬಗ್ಗೆ ಇವರಿಗೆ ಗೌರವ ಎಲ್ಲಿದೆ? ಎಂದು ಅವರು ಪ್ರಶ್ನಿಸಿದರು.


ಸ್ವತಂತ್ರ ಭಾರತದಲ್ಲಿ ನರೇಂದ್ರ ಮೋದಿ ಅವರಷ್ಟು ಸುಳ್ಳು ಹೇಳಿದ ಪ್ರಧಾನಿ ಯಾರೂ ಇಲ್ಲ. ಅವರು ಈ ಹಿಂದೆ ನೀಡಿದ್ದ ಭರವಸೆಗಳಾದ ರೈತರ ಆದಾಯ ದುಪ್ಪಟ್ಟು ಮಾಡುವ ಬಗ್ಗೆ, ಭ್ರಷ್ಟಾಚಾರ ತೊಲಗಿಸುವ ಬಗ್ಗೆ, ವಾರ್ಷಿಕ ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಬಗ್ಗೆ ಮಾತನಾಡಬೇಕಿತ್ತು, ಸಬ್ ಕ ಸಾಥ್ ಸಬ್ ಕ ವಿಕಾಸ್ ಎಲ್ಲಿದೆ? ಇದೇ ಕಾರಣಕ್ಕೆ ಬಜೆಟ್ ಬಗ್ಗೆ ಮಾತನಾಡುವಾಗ ನಾನು ನರೇಂದ್ರ ಮೋದಿ ಅವರದು ಸಬ್ ಕ ವಿನಾಶ್ ಸರ್ಕಾರ ಎಂದು ಹೇಳಿದ್ದೆ. ಎನ್.ಸಿ.ಆರ್.ಬಿ ವರದಿ ಪ್ರಕಾರ ದೇಶದಲ್ಲಿ 16,000 ಯುವ ಜನರು ನಿರುದ್ಯೋಗದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೇಶ ಯಾವತ್ತು ಇಷ್ಟು ದೊಡ್ಡ ಪ್ರಮಾಣದ ನಿರುದ್ಯೋಗ ಸಮಸ್ಯೆ ಕಂಡಿರಲಿಲ್ಲ. ಇದಕ್ಕೆ ಪ್ರಧಾನಿಗಳು ಉತ್ತರ ಕೊಡಬೇಕೋ? ಬೇಡ್ವೋ?
ಸ್ವಾತಂತ್ರ್ಯ ಬಂದ ನಂತರದಿಂದ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ಕೊನೆಯ ವರ್ಷದ ವರೆಗೆ ದೇಶದ ಮೇಲಿದ್ದ ಒಟ್ಟು ಸಾಲ ರೂ. 53 ಲಕ್ಷ ಕೋಟಿ. ಈಗಿನ ಒಟ್ಟು ಸಾಲ 135 ಲಕ್ಷ ಕೋಟಿ ರೂಪಾಯಿ. ಅಂದರೆ ಮೋದಿ ಅವರು ಪ್ರಧಾನಿಯಾಗಿ ಕೇವಲ ಏಳೇ ವರ್ಷಗಳಲ್ಲಿ ಮಾಡಿರುವ ಒಟ್ಟು ಸಾಲ ರೂ. 82 ಲಕ್ಷ ಕೋಟಿ. ಮುಂದಿನ ವರ್ಷ ಮತ್ತೆ 11 ಲಕ್ಷ ಕೋಟಿ ರೂಪಾಯಿ ಸಾಲ ಮಾಡುತ್ತೇವೆ ಎಂದು ಬಜೆಟ್ ನಲ್ಲಿ ಹೇಳಿದ್ದಾರೆ. ಒಟ್ಟಿನಲ್ಲಿ ದೇಶವನ್ನು ಹಾಳು ಮಾಡಿದ್ದಾರೆ, ದೇಶದ ಬಗ್ಗೆ ಮೋದಿ ಅವರಿಗೆ ಗೌರವ ಇದ್ದರೆ ತಾವಾಗಿಯೇ ಅಧಿಕಾರ ಬಿಟ್ಟು ಹೋಗಬೇಕು" ಎಂದು ಅವರು ಹೇಳಿದರು.


ಇದನ್ನೂ ಓದಿ: Hijab Row: ಬೆಂಗಳೂರಿನ ಶಿಕ್ಷಣ ಸಂಸ್ಥೆಗಳ ಹತ್ತಿರ ಎರಡು ವಾರಗಳ ಕಾಲ ಪ್ರತಿಭಟನೆಗೆ ನಿಷೇಧ


ಯುವ ಜನರು ಹೋರಾಟಕ್ಕೆ ಸಿದ್ಧರಾಗಬೇಕು. ಮುಂದಿನ ವರ್ಷ ಚುನಾವಣೆ ಬರಲಿದೆ, ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಬೇಕು ಎನ್ನುವುದಕ್ಕಿಂತ ಬಿಜೆಪಿಯವರ ದುರಾಡಳಿತದಿಂದ ರಾಜ್ಯವನ್ನು ರಕ್ಷಿಸಬೇಕಾಗಿದೆ. ಹೀಗಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬರಲೇಬೇಕು. ಇದರಲ್ಲಿ ಯುವ ಕಾಂಗ್ರೆಸ್ ನ ಪಾತ್ರ ಬಹಳ ದೊಡ್ಡದಿದೆ. ಜನ ಬಿಜೆಪಿ ಅನ್ನು ಅಧಿಕಾರದಿಂದ ಕಿತ್ತೆಸಬೇಕು ಎಂದು ತೀರ್ಮಾನ ಮಾಡಿರುವ ಈ ಸಮಯದಲ್ಲಿ ಮತ್ತೆ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟು ಚುನಾವಣೆ ಎದುರಿಸಲು ಅವರು ಹೊರಟಿದ್ದಾರೆ. ಇದಕ್ಕೆ ಅವಕಾಶ ಮಾಡಿಕೊಡಬಾರದು. ನಾವೆಲ್ಲ ಒಗ್ಗೂಡಿ ಜನರನ್ನು ಜಾಗೃತಗೊಳಿಸಬೇಕು" ಎಂದು ಅವರು ಹೇಳಿದರು.


ಕೊವಿಡ್ ಸೋಂಕಿನಿಂದ ನಾಲ್ಕು ಲಕ್ಷ ಜನ ಸತ್ತಿದ್ದಾರೆ. ಈ ಸರ್ಕಾರಕ್ಕೆ ಆಮ್ಲಜನಕ ಕೊಡಲು ಆಗಿಲ್ಲ, ಬೆಡ್, ಔಷಧಿ, ಆಂಬುಲೆನ್ಸ್ ವ್ಯವಸ್ಥೆ ಮಾಡಲು ಆಗಿಲ್ಲ. ಕೊವಿಡ್ ನಿಂದ ಸತ್ತವರಿಗೆ ಸರಿಯಾಗಿ ಪರಿಹಾರವನ್ನು ಕೊಟ್ಟಿಲ್ಲ. ಕೊರೊನಾ ಲಾಕ್ ಡೌನ್ ಸಮಯದಲ್ಲಿ ಸರ್ಕಾರ ಮಾಡಬೇಕಾದ ಕೆಲಸವನ್ನು ನಮ್ಮ ಪಕ್ಷದ ಕಾರ್ಯಕರ್ತರು, ನಾಯಕರು ಮಾಡಿದ್ದಾರೆ. ಹೀಗಾಗಿ ಜನ ಮತ್ತೆ ಕಾಂಗ್ರೆಸ್ ಸರ್ಕಾರ ತರಲು ಉತ್ಸುಕರಾಗಿದ್ದಾರೆ.ನಮ್ಮ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಎಸ್.ಸಿ.ಪಿ/ಟಿ.ಎಸ್.ಪಿ ಕಾನೂನು ಜಾರಿಗೆ ತಂದು ಅವರ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ನೀಡುವಂತೆ ಮಾಡಿತ್ತು. ನಮ್ಮ ಸರ್ಕಾರದ ಕೊನೆ ಬಜೆಟ್ ಗಾತ್ರ ರೂ. 2,20,000 ಕೋಟಿ ಹಾಗೂ ಈ ಯೋಜನೆಗೆ ಕೊಟ್ಟ ಅನುದಾನ ರೂ. 30,150 ಕೋಟಿ. ಈಗಿನ ಬಜೆಟ್ ಗಾತ್ರ ರೂ. 2,46,000 ಕೋಟಿ ಮತ್ತು ಎಸ್.ಸಿ.ಪಿ/ ಟಿ.ಎಸ್.ಪಿ ಯೋಜನೆಗೆ ನೀಡಿರುವ ಅನುದಾನ ರೂ. 26,197 ಕೋಟಿ. ಈಗಿನ ಬಜೆಟ್ ಗಾತ್ರಕ್ಕೆ ಹೋಲಿಸಿದರೆ ಈ ಅನುದಾನ ಕನಿಷ್ಠ ರೂ. 36,000 ಕೋಟಿಗೂ ಹೆಚ್ಚಾಗಬೇಕಿತ್ತು. ಇದು ಶೋಷಿತ ಸಮಾಜಕ್ಕೆ ಬಿಜೆಪಿ ಮಾಡಿದ ಅನ್ಯಾಯವಲ್ಲದೆ ಬೇರೇನು? ಎಂದು ಸಿದ್ಧರಾಮಯ್ಯ ನವರು ಪ್ರಶ್ನಿಸಿದರು.


ಬಿಜೆಪಿಯವರಿಗೆ ಯಾವ ಸಮಸ್ಯೆಗಳನ್ನು ಪರಿಹಾರ ಮಾಡುವುದು ಬೇಕಿಲ್ಲ. ಚುನಾವಣೆ ಬಂದಾಗ ಭಾವನಾತ್ಮಕ ವಿಷಯ ಮುಂದಿಟ್ಟು ಮತ ಕೇಳುತ್ತಾರೆ. ಚುನಾವಣೆಗೆ ವರ್ಷ ಇರುವಾಗಲೇ ಹಿಜಾಬ್ ವಿಚಾರ ಮುಂದಿಟ್ಟು ಮಕ್ಕಳ ಮನಸಲ್ಲಿ ದ್ವೇಷ ತುಂಬಿ, ಸಮಾಜ ಒಡೆಯಲು ಹೊರಟಿದ್ದಾರೆ. ಸಂಘ ಪರಿವಾರದವರು ಬರಿ ಉಡುಪಿ, ಮಂಗಳೂರು ಮಾತ್ರ ಅಲ್ಲ ಇಡೀ ರಾಜ್ಯವನ್ನು ಹಾಳು ಮಾಡುತ್ತಾರೆ. ರಾಜ್ಯಕ್ಕೆ ಬೆಂಕಿ ಹಚ್ಚಿದ್ದಾರೆ, ಸೌಹಾರ್ದತೆಯ ಮೂಲಕ ಈ ಬೆಂಕಿ ನಂದಿಸುವ ಕೆಲಸವನ್ನು ನಾವೆಲ್ಲ ಮಾಡೋಣ ಎಂದು ಅವರು ಹೇಳಿದರು.


ಇದನ್ನೂ ಓದಿ: ಕೊತ್ವಾಲ್ ಶಿಷ್ಯ ಈಗ ಹಿಟ್ & ರನ್ ರಾಜಕೀಯ ಪ್ರಾರಂಭಿಸಿದ್ದಾರೆ: ಡಿಕೆಶಿ ವಿರುದ್ಧ ಬಿಜೆಪಿ ಟೀಕೆ


ರಾಜ್ಯ ಸರ್ಕಾರದ ಬಳಿ ಸಾಧನೆಯನ್ನು ತೋರಿಸಿ ಮತ ಕೇಳಲು ಸಾಧನೆಗಳೇ ಇಲ್ಲ. ಭ್ರಷ್ಟಾಚಾರ ಮಿತಿಮೀರಿ ಹೋಗಿದೆ. ಗುತ್ತಿಗೆದಾರರ ಸಂಘದವರು ರಾಜ್ಯ ಸರ್ಕಾರಕ್ಕೆ 40% ಕಮಿಷನ್ ಕೊಡಬೇಕಾಗಿದೆ, ಹೀಗಾದರೆ ಕೆಲಸ ಮಾಡೋದು ಹೇಗೆ ಎಂದು ದೂರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ತಮ್ಮನ್ನು ತಾವು ಚೌಕಿದಾರ್ ಎಂದು ಕರೆದುಕೊಳ್ಳುವ ಮೋದಿ ಅವರು ಇವತ್ತಿನ ವರೆಗೆ ಆ ಬಗ್ಗೆ ಉತ್ತರ ಕೊಟ್ಟಿಲ್ಲ, ಯಾವ ಕ್ರಮ ಕೈಗೊಂಡಿಲ್ಲ. ಈ ಸುಳ್ಳನ್ನು ಜನರಿಗೆ ಅರ್ಥ ಮಾಡಿಸಿ ಬಿಜೆಪಿಯವರನ್ನು ಸಮಾಜದೆದುರು ಬೆತ್ತಲುಗೊಳಿಸಬೇಕು. ಹೀಗಾಗಿ ನಮ್ಮ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ನ ಸಿದ್ಧಾಂತಗಳಲ್ಲಿ ಬದ್ಧತೆ ಮತ್ತು ಸಂವಿಧಾನದ ಅರಿವು ಹೊಂದಬೇಕು ಎಂದು ಹೇಳಿದರು. 


ಸಂವಿಧಾನ ಮತ್ತು ದೇಶವನ್ನು ಕಾಪಾಡುವ ನಿಟ್ಟಿನಲ್ಲಿ ಯುವ ಕಾಂಗ್ರೆಸ್ ಸಮಾಜದ ಜೊತೆ ಒಗ್ಗೂಡಿ ಕೆಲಸ ಮಾಡಬೇಕು, ಯುವ ಜನರಿಗೆ ಸತ್ಯದ ಅರಿವು ಮೂಡಿಸಬೇಕು. ಈ ನಿಟ್ಟಿನಲ್ಲಿ ತಮ್ಮ ಹೋರಾಟ ಮುಂದುವರೆಯಲಿ ಎಂದು ಹಾರೈಸುತ್ತೇನೆ ಎಂದು ಈ ಸಂದರ್ಭದಲ್ಲಿ ಹೇಳಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.