ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು ಜೊತೆ ಕೈ ಜೋಡಿಸಲಿದೆಯೇ ಕಾಂಗ್ರೆಸ್?
ಕಾಂಗ್ರೆಸ್ ಮತ್ತು ಜೆಡಿಯು ಮೈತ್ರಿ ವಿಷಯ ಇಂದು ಬಹಿರಂಗ...
ಬೆಂಗಳೂರು: ಈ ಬಾರಿಯ ವಿಧಾನಸಭಾ ಚುನಾವಣೆ ಹಲವು ದೃಷ್ಟಿಕೋನಗಳಿಂದ ಬಹಳ ಕುತೂಹಲ ಕೆರಳಿಸಿದೆ. ಬಿಜೆಪಿ ಮಿಶನ್ 150 ಗುರಿ ಹೊಂದಿ ರಣತಂತ್ರ ರೂಪಿಸುತ್ತಿದ್ದರೆ, ನಮ್ಮ ಐದು ವರ್ಷದ ಸಾಧನೆಗೆ ಜನ ಮನ್ನಣೆ ನೀಡುತ್ತಾರೆ ಎಂದು ಕಾಂಗ್ರೆಸ್ ವಿಶ್ವಾಸ ವ್ಯಕ್ತಪಡಿಸಿದೆ. ಬಿಎಸ್ಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಏತನ್ಮಧ್ಯೆ ಕಾಂಗ್ರೆಸ್ ಮತ್ತು ಜೆಡಿಯು ಮೈತ್ರಿಮಾಡಿಕೊಳ್ಳಲಿವೆ ಎಂಬ ವಿಷಯಗಳು ಕೇಳಿ ಬರುತ್ತಿದೆ.
ಜೆಡಿಯು ಪಕ್ಷದ ಮಾಜಿ ರಾಷ್ಟ್ರೀಯ ಅಧ್ಯಕ್ಷ ಶರದ್ ಯಾದವ್ ಕಾಂಗ್ರೆಸ್-ಜೆಡಿಯು ಮೈತ್ರಿ ಕುರಿತು ಬೆಳಗ್ಗೆ 11ಗಂಟೆಗೆ ನಗರದ ಮೌರ್ಯ ಹೊಟೇಲಿನಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದು ಶರದ್ ಯಾದವ್ ಜೆಡಿಯು ಬಣದ ರಾಜ್ಯಾಧ್ಯಕ್ಷ ಎಂ.ಪಿ. ನಾಡಗೌಡ ತಿಳಿಸಿದ್ದಾರೆ.
ಶರದ್ ಯಾದವ್ ಜೆಡಿಯು ಬಣ ಕಾಂಗ್ರೆಸ್ ಜೊತೆ ಕೈ ಜೋಡಿಸಲು ಸಿದ್ಧತೆ ನಡೆಸಿದೆಯೇ? ಬಹುಮತದೊಂದಿಗೆ ಅಧಿಕಾರಕ್ಕೆ ಬರುವ ವಿಶ್ವಾಸ ಹೊಂದಿರುವ ಕಾಂಗ್ರೆಸ್ ಜೆಡಿಯು ಜೊತೆ ಮೈತ್ರಿ ಮಾಡಿಕೊಳ್ಳಲು ಒಪ್ಪುವುದೇ ಎಂಬುದನ್ನು ಕಾದುನೋಡಬೇಕಿದೆ.