World Environment Day 2023: ಇಂದು ವಿಶ್ವ ಪರಿಸರ ದಿನಾಚರಣೆ. ಪ್ರತಿ ವರ್ಷ ಜೂನ್ 05ರಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಪರಿಸರವನ್ನು ರಕ್ಷಿಸಲು ಮತ್ತು ಪೋಷಿಸಲು ನಮ್ಮೆಲ್ಲರ ಜವಾಬ್ದಾರಿಯನ್ನು ನೆನಪಿಸುವ ಉದ್ದೇಶದಿಂದ ವಿಶ್ವ ಪರಿಸರ ದಿನವನ್ನು ಆಚರಿಸಲಾಗುವುದು. ನಮ್ಮ ಅಭ್ಯಾಸಗಳಲ್ಲಿ ಬದಲಾವಣೆ ತರುವ ಮೂಲಕ ಪರಿಸರ ಸ್ನೇಹಿ ಅಭ್ಯಾಸಗಳನ್ನು ಉತ್ತೇಜಿಸುವ ಮೂಲಕ ಸಂಪನ್ಮೂಲಗಳನ್ನು ಸಂರಕ್ಷಿಸುವ ಅಗತ್ಯತೆಯನ್ನು ವಿಶ್ವ ಪರಿಸರ ದಿನಾಚರಣೆಯಲ್ಲಿ ಒತ್ತಿ ಹೇಳಲಾಗುತ್ತದೆ. 


COMMERCIAL BREAK
SCROLL TO CONTINUE READING

ವಿಶ್ವ ಪರಿಸರ ದಿನಾಚರಣೆಯ ಮಹತ್ವ: 
ವಿಶ್ವ ಪರಿಸರ ದಿನಾಚರಣೆಯು ಪರಿಸರ ಸುಸ್ಥಿರತೆಯನ್ನು ಉತ್ತೇಜಿಸುತ್ತದೆ. ಸುಸ್ಥಿರ ಭವಿಷ್ಯಕ್ಕಾಗಿ ಪರಿಸರ ಸವಾಲುಗಳನ್ನು ಪರಿಹರಿಸಲು ಹಾಗೂ ವ್ಯಕ್ತಿ, ಸಮುದಾಯದಲ್ಲಿ ಬದಲಾವಣೆಗಳನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ಅಭಿಯಾನಗಳು, ಬೀದಿ ನಾಟಕಗಳು, ಪೋಸ್ಟರ್ ಗಳ ಮೂಲಕ ಪರಿಸರ ಸ್ನೇಹಿ ಬದಲಾವಣೆಗಳನ್ನು ತರಲು ಈ ದಿನ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. 


ವಿಶ್ವಸಂಸ್ಥೆಯು 1972ರಲ್ಲಿ ಮೊದಲ ಬಾರಿಗೆ ವಿಶ್ವ ಪರಿಸರ ದಿನವನ್ನುಆಚರಿಸಿತು. ಅಲ್ಲಿ, ಪರಿಸರ ಮಾಲಿನ್ಯದ ಮೊದಲ ಸಮ್ಮೇಳನವನ್ನು ಸ್ಟಾಕ್ಹೋಮ್ (ಸ್ವೀಡನ್) ನಲ್ಲಿ ನಡೆಸಲಾಯಿತು. ಈ ಸಮ್ಮೇಳನದಲ್ಲಿ 119 ದೇಶಗಳು ಭಾಗವಹಿಸಿದ್ದವು. ಈ ಸಮ್ಮೇಳನದಲ್ಲಿ ಒಂದೇ ಭೂಮಿ ಎಂಬ ತತ್ವಕ್ಕೆ ಮನ್ನಣೆ ನೀಡಿ ಎಲ್ಲರೂ ಸಹಿ ಹಾಕಿದರು. ಇದಾದ ನಂತರ ಜೂನ್ 5 ರಂದು ಎಲ್ಲಾ ದೇಶಗಳಲ್ಲಿ 'ವಿಶ್ವ ಪರಿಸರ ದಿನ' ಆಚರಿಸಲಾಯಿತು. ಭಾರತದಲ್ಲಿ 19 ನವೆಂಬರ್ 1986 ರಿಂದ ಪರಿಸರ ಸಂರಕ್ಷಣಾ ಕಾಯಿದೆ ಜಾರಿಗೆ ಬಂದಿತು.


ವಾಸ್ತವವಾಗಿ, ಇಂದಿನ ಕೈಗಾರಿಕೀಕರಣದ ಯುಗದಲ್ಲಿ ವಿವೇಚನೆಯಿಲ್ಲದೆ ಮರಗಳನ್ನು ಕಡಿಯುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಇದಲ್ಲದೆ, ಹಸಿರು ಮನೆ ಪರಿಣಾಮ, ಜಾಗತಿಕ ತಾಪಮಾನ, ಕಪ್ಪು ಕುಳಿ ಎಫೆಕ್ಟ್ ಇತ್ಯಾದಿ ಜ್ವಲಂತ ಸಮಸ್ಯೆಗಳು ಮತ್ತು ಅವುಗಳಿಂದ ಉದ್ಭವಿಸುವ ವಿವಿಧ ಸಮಸ್ಯೆಗಳು ಪ್ರಪಂಚದ ಪರಿಸರ ವ್ಯವಸ್ಥೆಯಲ್ಲಿ ತ್ವರಿತ ಬದಲಾವಣೆಗಳನ್ನು ಸಹ ತರುತ್ತಿದೆ. ಇವೆಲ್ಲವುಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಹಾಗೂ ಪರಿಸರ ಸಂರಕ್ಷಣೆಯ ಪ್ರತಿಜ್ಞೆ ಮಾಡುವ ಉದ್ದೇಶದಿಂದ ಪ್ರತಿ ವರ್ಷ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ.


ಇದನ್ನೂ ಓದಿ- ಮನೆಗೆ ಬಾರದ ಗಂಗೆ- ಹಳ್ಳದ ನೀರು ಕುಡಿಯುತ್ತಿರುವ ಗ್ರಾಮಸ್ಥರು!!


2023ರ ವಿಶ್ವ ಪರಿಸರ ದಿನಾಚರಣೆ ಥೀಮ್: 
ವಿಶ್ವ ಪರಿಸರ ದಿನಾಚರಣೆಯ ಪ್ರಾಮುಖ್ಯತೆಯನ್ನು ಪರಿಣಾಮಕಾರಿಯಾಗಿ ಆಚರಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಒಂದು ಥೀಮ್ ಮೂಲಕ ಈ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ವಿಶ್ವ ಪರಿಸರ ದಿನ 2023ರ ಥೀಮ್ "ಪ್ಲಾಸ್ಟಿಕ್ ಮಾಲಿನ್ಯಕ್ಕೆ ಪರಿಹಾರಗಳು".  #BeatPlasticPollution ಎಂಬ ಪ್ರಬಲ ಅಭಿಯಾನದ ಮೂಲಕ ಪ್ಲಾಸ್ಟಿಕ್ ಮಾಲಿನ್ಯವನ್ನು ನಿಭಾಯಿಸುವ ತುರ್ತು ಉದ್ದೇಶದ ಮೇಲೆ ಈ ವರ್ಷ ವಿಶ್ವ ಪರಿಸರ ದಿನಾಚರಣೆ ವಿಷಯ ಕೇಂದ್ರೀಕರಿಸಿದೆ.  


ಪ್ಲಾಸ್ಟಿಕ್ ಮಾಲಿನ್ಯ:
1907 ರಲ್ಲಿ ಲಿಯೋ ಬೇಕ್‌ಲ್ಯಾಂಡ್ ಮೊದಲ ಬಾರಿಗೆ ಪ್ಲಾಸ್ಟಿಕ್ ಅನ್ನು ಅಭಿವೃದ್ಧಿಪಡಿಸಿದಾಗ ಮತ್ತು ಬಳಸಿದಾಗ, ಒಂದು ಶತಮಾನದಲ್ಲಿ ಮತ್ತು ಕೈಗಾರಿಕಾ ಕ್ರಾಂತಿಯು ನಮ್ಮ ಜೀವನದ ಅನೇಕ ಕ್ಷೇತ್ರಗಳಲ್ಲಿ ಪ್ಲಾಸ್ಟಿಕ್‌ನ ಅತಿಯಾದ ಬಳಕೆಗೆ ಮತ್ತು ಅದರ ಪರಿಣಾಮವಾಗಿ ಭಯಾನಕ ಪ್ಲಾಸ್ಟಿಕ್ ಮಾಲಿನ್ಯಕ್ಕೆ ಕಾರಣವಾಗುತ್ತದೆ  ಎಂದು ಯಾರೂ ಊಹಿಸಿರಲಿಲ್ಲ. 


ಪ್ರಸ್ತುತ, ಎಲ್ಲೆಡೆ ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿದ್ದು, ಇದು ಪರಿಸರಕ್ಕೆ ಒಂದು ಜ್ವಲಂತ ಸಮಸ್ಯೆಯಾಗಿದೆ. ಪ್ಲಾಸ್ಟಿಕ್‌ಗಳು ಮತ್ತು ಮೈಕ್ರೋ-ಪ್ಲಾಸ್ಟಿಕ್‌ಗಳು  ಪರಿಸರ ವ್ಯವಸ್ಥೆಗಳ ನೈಸರ್ಗಿಕ ಅಂಶವಾಗುತ್ತಿವೆ, ಆನುವಂಶಿಕ ವೈವಿಧ್ಯತೆಗೆ ಬೆದರಿಕೆಯನ್ನು ಒಡ್ಡುತ್ತಿವೆ. ಪರಿಸರ ಮತ್ತು ಮಾನವನ ಆರೋಗ್ಯದ ಮೇಲೆ ಪ್ಲಾಸ್ಟಿಕ್ ಮಾಲಿನ್ಯದ ಪರಿಣಾಮಗಳು ದುರಂತವಾಗಿದ್ದು, ಈ ಸಮಸ್ಯೆಯನ್ನು ಕೊನೆಗೊಳಿಸಲು ತಕ್ಷಣ ಕ್ರಮ ಕೈಗೊಳ್ಳುವುದು ಅತ್ಯಗತ್ಯವಾಗಿದೆ. ಪ್ಲಾಸ್ಟಿಕ್‌ನಿಂದ ಉಂಟಾಗುವ ಮಾಲಿನ್ಯವು ಸಮುದ್ರ, ಭೂಮಂಡಲ ಮತ್ತು ಸಿಹಿನೀರಿನ ಪರಿಸರ ವ್ಯವಸ್ಥೆಗಳಿಗೆ ಅಪಾಯವಾಗಿದೆ. ನದಿಗಳು ಮತ್ತು ಸಾಗರಗಳಲ್ಲಿ ಕೊನೆಗೊಳ್ಳುವ ಪ್ಲಾಸ್ಟಿಕ್ ತ್ಯಾಜ್ಯದಿಂದ ಸಮುದ್ರ ಜೀವಿಗಳಿಗೆ  ಅಪಾಯವಿದೆ. ಗಮನಾರ್ಹವಾಗಿ, ಒಂದೇ ಬಾರಿ ಬಳಸುವ ಪ್ಲಾಸ್ಟಿಕ್ ಚೀಲವು ಪರಿಸರದಲ್ಲಿ  1.58 ಕಿಲೋಗ್ರಾಂಗಳಷ್ಟು CO2 ಹೊರಸೂಸುವಿಕೆಯ ಬಿಡುಗಡೆಯ ಹೆಚ್ಚಳಕ್ಕೆ ಕಾರಣವಾಗಬಹುದು. 


ಒಂದು ಅಂದಾಜಿನ ಪ್ರಕಾರ, ಪ್ರಸ್ತುತ ಜೀವನದ ಪ್ರಮುಖ ಭಾಗವಾಗಿರುವ ಪ್ಲಾಸ್ಟಿಕ್ ಉತ್ಪಾದನೆಯು 2060ರ ವೇಳೆಗೆ ಪ್ರಸ್ತುತ ಮಟ್ಟಕ್ಕಿಂತ ಸುಮಾರು ಮೂರು ಪಟ್ಟು ಹೆಚ್ಚಳವಾಗಬಹುದು ಎಂದು ಊಹಿಸಲಾಗಿದೆ. ವಿಶ್ವದಾದ್ಯಂತ ಪ್ರತಿ ವರ್ಷ 460 ಮಿಲಿಯನ್ ಟನ್ ಪ್ಲಾಸ್ಟಿಕ್ ಉತ್ಪಾದನೆ ಆಗುತ್ತಿದ್ದು ಅದು ಈ ಹಿಂದಿನ ಎರಡು ದಶಕಗಳ ಅಂಕಿ ಅಂಶಗಳಿಗೆ ಹೊಲಿಸಿದರೆ ದುಪ್ಪಟ್ಟಾಗಿದೆ. ಪ್ರಸ್ತುತ ಲೆಕ್ಕಾಚಾರದ ಪ್ರಕಾರ, 2060ರ ವೇಳೆಗೆ ಪ್ಲಾಸ್ಟಿಕ್ ಉತ್ಪಾದನೆ ದರ ಮೂರು ಪಟ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಬಳಕೆಯ ಅವ್ಯವಸ್ಥೆಯಿಂದ ಹೊರಬರಲು ಇರುವ ಏಕೈಕ ಮಾರ್ಗವೆಂದರೆ ಪ್ಲಾಸ್ಟಿಕ್ ಉತ್ಪಾದನೆಯನ್ನು ಕಡಿಮೆ ಮಾಡುವುದು ಮತ್ತು ಸಾಧ್ಯವಾದಷ್ಟು ಮರುಬಳಕೆಗೆ ಒತ್ತು ನೀಡುವುದು. 


ಇದನ್ನೂ ಓದಿ- ಪರಿಸರ ಸಂರಕ್ಷಣೆ ಕುರಿತು ಈ ರೀತಿಯೂ ಜಾಗೃತಿ ಮೂಡಿಸಬಹುದು!


ಪ್ಲಾಸ್ಟಿಕ್ ಮಾಲಿನ್ಯದ ವಿರುದ್ಧ ಹೋರಾಡುವಲ್ಲಿ ಮುಂದಾಳತ್ವ ವಹಿಸಿರುಯ ಐವರಿ ಕೋಸ್ಟ್: 
ವಿಶ್ವ ಪರಿಸರ ದಿನ 2023ರಲ್ಲಿ ಐವರಿ ಕೋಸ್ಟ್, ನೆದರ್‌ಲ್ಯಾಂಡ್‌ನ ಸಹಯೋಗದೊಂದಿಗೆ, ಪ್ಲಾಸ್ಟಿಕ್ ಮಾಲಿನ್ಯದ ವಿರುದ್ಧ ಹೋರಾಡುವಲ್ಲಿ ತಮ್ಮ ನಾಯಕತ್ವವನ್ನು ಪ್ರದರ್ಶಿಸುತ್ತಿದೆ. ಐವರಿ ಕೋಸ್ಟ್ 2014 ರಲ್ಲಿ ಪ್ಲಾಸ್ಟಿಕ್ ಚೀಲಗಳನ್ನು ನಿಷೇಧಿಸಿತು, ಮಾತ್ರವಲ್ಲದೆ ಇದು ಮರುಬಳಕೆ ಮಾಡಬಹುದಾದ ಪ್ಯಾಕೇಜಿಂಗ್ ಅನ್ನು ಉತ್ತೇಜಿಸುತ್ತದೆ ಮತ್ತದರ ನಗರವಾದ ಅಬಿಡ್ಜಾನ್ ಪರಿಸರ ಪ್ರಜ್ಞೆಯ ಸ್ಟಾರ್ಟ್‌ಅಪ್‌ಗಳಿಗೆ ಕೇಂದ್ರವಾಗಿ ಮಾರ್ಪಟ್ಟಿದ್ದು ಸುಸ್ಥಿರತೆಗೆ ಅವರ ಬದ್ಧತೆಯನ್ನು ಪ್ರದರ್ಶಿಸುತ್ತದೆ.


ಈ ಬಗ್ಗೆ ಹೇಳಿಕೆ ನೀಡಿರುವ ಐವರಿ ಕೋಸ್ಟ್ ಪರಿಸರ ಮತ್ತು ಸುಸ್ಥಿರ ಅಭಿವೃದ್ಧಿಯ ಸಚಿವ ಜೀನ್-ಲುಕ್ ಅಸ್ಸಿ, ಪ್ರತಿಯೊಬ್ಬರಿಗೂ ತಿಳಿಸಿದಿರುವಂತೆ ಪ್ಲಾಸ್ಟಿಕ್ ಮಾಲಿನ್ಯದ ಉಪದ್ರವವು ಪ್ರತಿ ಸಮುದಾಯದ ಮೇಲೆ ಪರಿಣಾಮ ಬೀರುವ ಗೋಚರ ಬೆದರಿಕೆಯಾಗಿದೆ. ಪ್ಲಾಸ್ಟಿಕ್ ಸಾಂಕ್ರಾಮಿಕ ರೋಗಕ್ಕೆ ವೈವಿಧ್ಯಮಯ ಚಿಕಿತ್ಸೆಗಳಲ್ಲಿ ಚಾಂಪಿಯನ್ ಆಗಲು ನಾವು ಹೆಮ್ಮೆಪಡುತ್ತೇವೆ ಎಂದು ತಿಳಿಸಿದ್ದಾರೆ .
 
ನಮ್ಮ ಭಾರತವೂ ಕೂಡ ವಿಷಪೂರಿತ ಪ್ಲಾಸ್ಟಿಕ್ ತ್ಯಾಜ್ಯದಲ್ಲಿ ಮುಳುಗುತ್ತಿದೆ. ಪ್ಲಾಸ್ಟಿಕ್‌ಗಳ ಅತಿಯಾದ ಬಳಕೆಯೂ ಆಹಾರ, ಪಾನೀಯಗಳ ಮೂಲಕ ನಮ್ಮ ದೇಹದ ಒಳಹೊಕ್ಕು ಅಂತಃಸ್ರಾವಕ ಅಡ್ಡಿ, ಬೆಳವಣಿಗೆಯ ಅಸಹಜತೆಗಳು, ಸಂತಾನೋತ್ಪತ್ತಿ ಕಾಯಿಲೆಗಳು ಮತ್ತು ವಿವಿಧ ಕ್ಯಾನ್ಸರ್‌ಗಳಿಗೆ ಕಾರಣವಾಗಬಹುದು. ಇದನ್ನು ತಪ್ಪಿಸಲು ಈ ಬಗ್ಗೆ ಪ್ರತಿಯೊಬ್ಬ ನಾಗರೀಕರೂ ಕೂಡ ತಮ್ಮ ಜವಾಬ್ದಾರಿಯನ್ನು ಅರಿತು ಪ್ಲಾಸ್ಟಿಕ್ ಮುಕ್ತ ಭಾರತಕ್ಕೆ ಸೂಕ್ತವಾಗಿ ಗಮನ ಹರಿಸುವ ಅವಶ್ಯಕತೆ ಇದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ