ಅದೆಷ್ಟೋ ತಂದೆ ತಾಯಿ ತಮ್ಮ ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಕಿಂಚಿತ್ತು ಆರೋಗ್ಯ ಸಮಸ್ಯೆ ಬಂದರೂ ವೈದ್ಯರ ಬಳಿ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುತ್ತಾರೆ. ಆದರೆ ಇದೀಗ ಅದೇ ಪ್ರೀತಿ ಎನ್‌ಆರ್‌ಐ ದಂಪತಿಗೆ ಮುಳುವಾಗಿದೆ. ಪೋಷಕರಿದ್ದರೂ ಮಗುವೊಂದು ಬರೋಬ್ಬರಿ 10 ತಿಂಗಳಿನಿಂದ ಅನಾಥಾಶ್ರಮದಲ್ಲಿದೆ. ಇದಕ್ಕೆ ಕಾರಣ ಕೇಳಿದ್ರೆ ಎಂಥವರನ್ನೂ ಮನಕರಗುವಂತೆ ಮಾಡಬಹುದು. 


COMMERCIAL BREAK
SCROLL TO CONTINUE READING

ತಾಯಿ ಮಡಿಲಲ್ಲಿ ಆಡಬೇಕಿದ್ದ ಒಂದೂವರೆ ವರ್ಷದ ಕಂದಮ್ಮ ಸರ್ಕಾರಿ ಅನಾಥಾಶ್ರಮದಲ್ಲಿ ಬದುಕುತ್ತಿದೆ. ಆ ಮಗುವನ್ನು ಮತ್ತೆ ಪಡೆದುಕೊಳ್ಳಲು ಜನ್ಮ ನೀಡಿದ ತಂದೆ ತಾಯಿ ಹರಸಾಹಸ ಪಡುತ್ತಿದ್ದಾರೆ. ಒಂದಲ್ಲ, ಎರಡಲ್ಲ ಬರೋಬ್ಬರಿ 10 ತಿಂಗಳಿನಿಂದ ಮಗುವಿನಿಂದ ದೂರವಾಗಿ ಪೋಷಕರು ನರಕಯಾತನೆ ಅನುಭವಿಸಿದ್ದಾರೆ. ಮಗುವನ್ನು ಮರಳಿ ಪಡೆಯುವುದು ಹೇಗೆ ಎಂದು ತಿಳಿಯದೆ ಜರ್ಮನಿಯಲ್ಲಿ ವಾಸಿಸುತ್ತಿರುವ ದಂಪತಿ ನೋವನ್ನು ನುಂಗುತ್ತಿದ್ದಾರೆ. ಅಲ್ಲಿನ ಅಧಿಕಾರಿಗಳಿಗೆ ಮನವಿ ಮಾಡಿದರೂ, ಜರ್ಮನಿಯಲ್ಲಿರುವ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿದರೂ ಇದುವರೆಗೂ ಪರಿಹಾರ ಸಿಕ್ಕಿಲ್ಲ. 


ಇದನ್ನೂ ಓದಿ: ದುಡಿದ ಸಂಬಳ ಕೇಳಿದ್ದಕ್ಕೆ ತಾಯಿ ಸಮಾನಳಾದ ವೃದ್ಧೆಗೆ ಒದ್ದ ಪಾಪಿ!


ಗುಜರಾತ್ ಮೂಲದ ಭಾವೇಶ್ ಅವರು ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್. ಇವರ ಹೆಂಡತಿ ಧಾರಾ ಗೃಹಿಣಿ. 2018ರಿಂದ ಭಾವೇಶ್ ತನ್ನ ಹೆಂಡತಿಯೊಂದಿಗೆ ಜರ್ಮನಿಯಲ್ಲಿ ವಾಸಿಸುತ್ತಿದ್ದಾರೆ. 2021 ರಲ್ಲಿ, ಅವರಿಗೆ ಒಂದು ಮಗು ಜನಿಸಿತು. ಕುಟುಂಬವು ಸಂತೋಷದಿಂದ ನಡೆಯುತ್ತಿತ್ತು. ಈ ನಡುವೆ ಕೆಲ ತಿಂಗಳ ಹಿಂದೆ ಭಾವೇಶ್ ಅವರ ಪೋಷಕರು ಮೊಮ್ಮಗಳನ್ನು ನೋಡಿಕೊಳ್ಳಲು ಜರ್ಮನಿಗೆ ತೆರಳಿದ್ದರು. 


ಇದೇ ಸಂದರ್ಭದಲ್ಲಿ ಒಂದು ದಿನ ಮಗುವಿನ ಮೆದುಳಿಗೆ ಗಾಯವಾಗಿ, ರಕ್ತಸ್ರಾವವಾಯಿತು. ತಕ್ಷಣ ಮಗುವನ್ನು ಆಸ್ಪತ್ರೆಗೆ ಕರೆದೊಯ್ದು  ಚಿಕಿತ್ಸೆ ನೀಡಲಾಗಿತ್ತು. ಇನ್ನು ವೈದ್ಯರು ಮಕ್ಕಳಿಗೆ ಕಾಲಕಾಲಕ್ಕೆ ಹೀಗಾಗುವುದು ಸಹಜ ಎಂದು ಔಷಧಿಯನ್ನು ನೀಡಿದರು. ಆದರೆ ಮರುದಿನವೂ ಇದೇ ರೀತಿ ರಕ್ತಸ್ರಾವವಾಗಿದೆ. ಈ ಬಾರಿ ಆಸ್ಪತ್ರೆಯ ಅಧಿಕಾರಿಗಳು ಮಕ್ಕಳ ರಕ್ಷಣಾ ಸೇವೆಗಳ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮಗುವನ್ನು ನೋಡಿದ ಕೂಡಲೇ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರಬಹುದು ಎಂದು ಭಾವಿಸಿ ಸರ್ಕಾರಿ ನರ್ಸರಿಗೆ ಸ್ಥಳಾಂತರಿಸಲಾಗಿದೆ. ಆದರೆ ತನಿಖೆ ನಡೆಸಿದ ಅಧಿಕಾರಿಗಳು ಲೈಂಗಿಕ ದೌರ್ಜನ್ಯ ನಡೆದಿಲ್ಲ ಎಂದು ಸಾಬೀತುಪಡಿಸಿದರು. 


ಈ ಸುದ್ದಿ ತಿಳಿದ ಪೋಷಕರು ಒಂದುಬಾರಿ ನಿಟ್ಟುಸಿರು ಬಿಟ್ಟಿದ್ದಾರೆ. ಈ ಬಳಿಕ ಮಗು ತಾಯಿ ಮಡಿಲು ಸೇರುತ್ತದೆ ಎಂದು ಸಂತೋಷದಲ್ಲಿರುತ್ತಾರೆ. ಆದರೆ ಅದಾಗಲೇ ಸರ್ಕಾರಿ ಅಧಿಕಾರಿಗಳು ಈ ಸಂತಸಕ್ಕೆ ಹುಳಿಹಿಂಡಿದ್ದರು. ಪೋಷಕರಾಗಿ ಮಗುವನ್ನು ಚೆನ್ನಾಗಿ ನೋಡಿಕೊಳ್ಳುವ ಸ್ಥಿತಿಯಲ್ಲಿದ್ದೇವೆ ಎಂಬುದನ್ನು ಸಾಬೀತುಪಡಿಸುವ 'ಫಿಟ್‌ ಟು ಬಿ ಪೇರೆಂಟ್‌' ಎಂಬ ಪ್ರಮಾಣಪತ್ರವನ್ನು ನೀಡುವಂತೆ ಭಾವೇಶ್ ದಂಪತಿಗೆ ತಿಳಿಸಲಾಯಿತು. ಭಾವೇಶ್ ಮತ್ತು ಧಾರಾ ಅವರು ಕಾನೂನು ಸರ್ವೆ ಪ್ರಾಧಿಕಾರದ ಮೊರೆ ಹೋಗಿ ಪ್ರಮಾಣ ಪತ್ರ ನೀಡುವಂತೆ ಮನವಿ ಮಾಡಿದ್ದರು. 


ಆದರೆ ಎರಡು ಬಾರಿ ಇಲಾಖೆಯ ಅಧಿಕಾರಿಗಳು ಸಭೆ ನಡೆಸಿದರೂ ಇದುವರೆಗೂ ಪ್ರಮಾಣ ಪತ್ರ ನೀಡಿಲ್ಲ. ತಿಂಗಳುಗಟ್ಟಲೆ ಮಗುವಿನಿಂದ ದೂರವಾಗಿದ್ದ ಧಾರಾ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಮಗುವಿಗೆ ಹಾಲುಣಿಸಲು ಸಹ ಸಾಧ್ಯವಾಗುತ್ತಿಲ್ಲ ಎಂದು ಕಣ್ಣೀರಿಡುತ್ತಿದ್ದಾರೆ. ಪೋಷಕರ ಪ್ರೀತಿಯನ್ನು ಮಗುವಿನಿಂದ ಅಧಿಕಾರಿಗಳು ಕಸಿದುಕೊಳ್ಳುತ್ತಿರುವ ಬಗ್ಗೆ ಭಾವೇಶ್ ದಂಪತಿ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. 


ಇದನ್ನೂ ಓದಿ: ರಾಜ್ಯ ರಾಜಧಾನಿ ಬೀದಿಯಲ್ಲಿ ʼಬೌಬೌʼ ಕಾಟ: ಒಂದು ತಿಂಗಳಲ್ಲಿ 2 ಸಾವಿರಕ್ಕೂ ಹೆಚ್ಚು ಜನರ ಮೇಲೆ ದಾಳಿ


ಒಂದೇ ದೇಶದಲ್ಲಿ ವಾಸಿಸುತ್ತಿದ್ದರೂ ಮಗುವನ್ನು ತಾಯಿಯಿಂದ ಬೇರ್ಪಡಿಸುವುದನ್ನು ಅವರು ಪ್ರಶ್ನಿಸುತ್ತಿದ್ದಾರೆ. ಈ ಸಮಸ್ಯೆಯ ಪರಿಹಾರಕ್ಕಾಗಿ ಭಾವೇಶ್ ದಂಪತಿ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿದ್ದಾರೆ. ರಾಯಭಾರಿ ಕಚೇರಿಯಿಂದ ನೆರವು ನೀಡುವುದಾಗಿ ಭರವಸೆ ನೀಡಿದರೂ ಸಹ ಸಮಸ್ಯೆ ಬಗೆಹರಿದಿಲ್ಲ ಎಂದು ಪೋಷಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಮಗುವನ್ನು ವಾಪಸ್ ಪಡೆಯುವಂತೆ ನ್ಯಾಯಾಲಯದಲ್ಲಿ ಅರ್ಜಿಯನ್ನೂ ಸಲ್ಲಿಸಿದ್ದರು. ಸದ್ಯ ತನಿಖೆ ನಡೆಯುತ್ತಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.