BBK 11: ಎಂಟು ಜನರ ತಲೆ ಮೇಲೆ ಎಲಿಮಿನೇಶನ್ ʼತೂಗುಕತ್ತಿʼ; ಈ ವಾರ ಡಬಲ್ ಎಲಿಮಿನೇಷನ್?
ಈ ವಾರ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗೆ ರೆಸಾರ್ಟ್ ಟಾಸ್ಕ್ ನೀಡಲಾಗಿತ್ತು. ಎದುರಾಳಿಗಳನ್ನು ಕುಗ್ಗಿಸಲು, ಸಂಕಷ್ಟಕ್ಕೆ ದೂಡಲು ಎರಡೂ ತಂಡಗಳು ಶಕ್ತಿಮೀರಿ ದುಷ್ಟತನವನ್ನ ಪ್ರದರ್ಶಿಸಿವೆ. ಶುಕ್ರವಾರದ ಎಪಿಸೋಡ್‌ನಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆದಿದ್ದು, ಈ ವಾರ ಇರುವ ಹತ್ತು ಜನರಲ್ಲಿ ಎಂಟು ಮಂದಿ ನಾಮಿನೇಟ್ ಆಗಿದ್ದಾರೆ.
ಯಾವ ಸ್ಪರ್ಧಿ ಯಾರನ್ನು ನಾಮಿನೇಟ್ ಮಾಡುತ್ತಾರೋ ಅವರ ತಲೆ ಮೇಲೆ ಬಾಟಲಿ ಒಡೆಯುವಂತೆ ಬಿಗ್ ಬಾಸ್ ಸೂಚಿಸಿದ್ದರು. ಇದು ನಕಲಿ ಬಾಟಲಿ ಆಗಿತ್ತು. ಅದರಂತೆ ಪ್ರತಿಯೊಬ್ಬ ಸ್ಪರ್ಧಿಯು ತಾನು ನಾಮಿನೇಟ್ ಮಾಡಲು ಇಚ್ಛಿಸಿದ ಸ್ಪರ್ಧಿಯನ್ನು ಕರೆದು ಮುಂದೆ ಕೂರಿಸಿಕೊಂಡು ನಾಮಿನೇಟ್ ಮಾಡಲು ಕಾರಣ ನೀಡಿ ತಲೆ ಮೇಲೆ ಬಾಟಲಿ ಒಡೆದಿದ್ದರು.
ಬಿಗ್ ಬಾಸ್ ಮನೆಯಲ್ಲಿರುವ ಹತ್ತು ಜನರ ಪೈಕಿ ಈ ವಾರ ಬರೋಬ್ಬರಿ ಎಂಟು ಮಂದಿ ನಾಮಿನೇಟ್ ಆಗಿದ್ದಾರೆ. ಇಬ್ಬರು ಮಾತ್ರವೇ ನಾಮಿನೇಷನ್ನಿಂದ ಸೇವ್ ಆಗಿದ್ದಾರೆ. ಇಬ್ಬರ ಪೈಕಿ ಒಬ್ಬರನ್ನು ನಾಮಿನೇಟ್ ಮಾಡುವಂತಿರಲಿಲ್ಲವಾಗಿದ್ದರಿಂದ ಅವರು ಸೇವ್ ಆಗಿದ್ದರೆ, ಯಾರಿಂದಲೂ ನಾಮಿನೇಟ್ ಆಗದೆ ಉಳಿದುಕೊಂಡವರು ಕೇವಲ ಒಬ್ಬರು ಮಾತ್ರ.
ತ್ರಿವಿಕ್ರಮ್, ಉಗ್ರಂ ಮಂಜು, ಗೌತಮಿ ಜಾಧವ್, ಧನರಾಜ್ ಆಚಾರ್, ಹನುಮಂತು ನಾಮಿನೇಟ್ ಆಗಿದ್ದಾರೆ. ಇವರ ಜೊತೆಗೆ ಪ್ರತಿವಾರವೂ ನಾಮಿನೇಟ್ ಆಗುತ್ತಿದ್ದ ಮೋಕ್ಷಿತಾ ಪೈ ಮತ್ತು ಚೈತ್ರಾ ಕುಂದಾಪುರ ಸಹ ನಾಮಿನೇಟ್ ಆಗಿದ್ದಾರೆ. ಇನ್ನು ಐಶ್ವರ್ಯಾ ನಾಮಿನೇಷನ್ನಿಂದ ಸೇವ್ ಆಗಿದ್ದರು, ಆದ್ರೆ ಕ್ಯಾಪ್ಟನ್ ಭವ್ಯಾ ಗೌಡ, ಐಶ್ವರ್ಯಾರನ್ನು ನೇರವಾಗಿ ನಾಮಿನೇಟ್ ಮಾಡಿದ್ದಾರೆ. ಭವ್ಯಾ ಗೌಡ ಕ್ಯಾಪ್ಟನ್ ಆಗಿರೋ ಕಾರಣ ಅವರನ್ನ ನಾಮಿನೇಟ್ ಮಾಡುವಂತಿರಲಿಲ್ಲ. ರಜತ್ ಅವರನ್ನ ಮನೆಯ ಯಾವ ಸದಸ್ಯರೂ ನಾಮಿನೇಟ್ ಮಾಡಿರಲಿಲ್ಲ.
ಅಂದಹಾಗೆ ಈ ಸೀಸನ್ನಲ್ಲಿ ಇದುವರೆಗೆ ಡಬಲ್ ಎಲಿಮಿನೇಷನ್ ಆಗಿಲ್ಲ. ಆದರೆ ಈ ವಾರ ಎಂಟು ಮಂದಿ ನಾಮಿನೇಟ್ ಆಗಿದ್ದು, ಈ ವಾರ ಡಬಲ್ ಎಲಿಮಿನೇಷನ್ ಆಗಬಹುದಾ? ಅನ್ನೋ ಪ್ರಶ್ನೆ ಮೂಡಿದೆ. ಈ ವಾರವೂ ಮನೆಯ ಸದಸ್ಯರು ಹಲವಾರು ತಪ್ಪುಗಳನ್ನು ಮಾಡಿದ್ದಾರೆ. ಹೀಗಾಗಿ ʼವಾರದ ಕತೆ ಕಿಚ್ಚನ ಜೊತೆʼ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್ ಅವರು ಆ ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಇನ್ನೂ ಶುಕ್ರವಾರದ ಎಪಿಸೋಡ್‌ನಲ್ಲಿ ಭವ್ಯಾ ಗೌಡ ಅವರು ಮೋಸದ ಆಟವಾಡಿ ಕ್ಯಾಪ್ಟನ್ ಆಗಿದ್ದಾರೆಂದು ಹೇಳಲಾಗಿದೆ. ಭವ್ಯಾ ಗೌಡ ತಂಡಕ್ಕೆ ನೀಡಿದ್ದ ಟಾಸ್ಕ್‌ನಲ್ಲಿ ಅವರೇ ಮೋಸ ಮಾಡಿ ಸಿಕ್ಕಿಬಿದ್ದಿದ್ದಾರೆ. ಹೀಗಾಗಿ ಇಂದಿನ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್ ಅವರು ಭವ್ಯಾ ಗೌಡರ ಮೋಸದಾಟಕ್ಕೆ ಕ್ಲಾಸ್ ತೆಗೆದುಕೊಳ್ಳಲಿದ್ದಾರೆಂದು ಹೇಳಲಾಗಿದೆ.