ದೆಹಲಿ-ಅಯೋಧ್ಯೆ ಬುಲೆಟ್ ರೈಲು: ಕೇಂದ್ರದ ಮಹತ್ವಾಕಾಂಕ್ಷೆ ಯೋಜನೆ ಬಗ್ಗೆ ತಿಳಿದುಕೊಳ್ಳಿ…
ಪ್ರಸ್ತುತ ನವದೆಹಲಿ ಮತ್ತು ಅಯೋಧ್ಯೆಯ ನಡುವಿನ 670 ಕಿ.ಮೀ ದೂರವು 14-15 ಗಂಟೆಗಳ ಸುದೀರ್ಘ ಪ್ರಯಾಣವನ್ನು ಒಳಗೊಂಡಿದೆ. ಪ್ರಯಾಣಿಕರು 10-18 ಗಂಟೆಗಳ ಕಾಲ ರೈಲಿನಲ್ಲಿ ಪ್ರಯಾಣಿಸಿ ಪುಣ್ಯ ಭೂಮಿಯನ್ನು ತಲುಪುತ್ತಾರೆ. ಆದರೆ ಅದೇ ಬುಲೆಟ್ ರೈಲಿನಲ್ಲಿ ಪ್ರಯಾಣಿಕರು ಕೇವಲ 2 ಗಂಟೆಗಳಲ್ಲಿ ದೆಹಲಿಯಿಂದ ಅಯೋಧ್ಯೆಯನ್ನು ತಲುಪಬಹುದು. ರೈಲು ಗಂಟೆಗೆ 350 ಕಿ.ಮೀ ವೇಗದಲ್ಲಿ ಓಡುವ ನಿರೀಕ್ಷೆಯಿದೆ.
ಕೇಂದ್ರದ ಉನ್ನತ ಅಧಿಕಾರಿಗಳು ಶುಕ್ರವಾರ (ಆಗಸ್ಟ್ 20)ರಂದು ಅಯೋಧ್ಯೆಯಲ್ಲಿ ಬುಲೆಟ್ ರೈಲು ನಿಲ್ದಾಣಕ್ಕಾಗಿ ಸ್ಥಳವನ್ನು ಅಂತಿಮಗೊಳಿಸಿದ್ದಾರೆ. ಬುಲೆಟ್ ರೈಲಿನ ನಿರ್ಮಾಣವನ್ನು ಆರಂಭಿಸಲು ಅಧಿಕಾರಿಗಳು ವಸತಿ, ರೈಲು ಮಾರ್ಗ ಜೋಡಣೆ ಮತ್ತು ಹೆಚ್ಚಿನವುಗಳ ಬಗ್ಗೆ ಮಾಹಿತಿಯನ್ನು ಕಲೆಹಾಕಿದ್ದಾರೆ ಎಂದು ವರದಿಯಾಗಿದೆ.
ರಾಷ್ಟ್ರೀಯ ಹೈಸ್ಪೀಡ್ ರೈಲು ನಿಗಮ (NHSRC) ದೆಹಲಿ-ಅಯೋಧ್ಯೆ ಬುಲೆಟ್ ರೈಲು ಯೋಜನೆಯನ್ನು ನೋಡಿಕೊಳ್ಳಲಿದೆ ಎಂದು ವರದಿಗಳು ಹೇಳಿವೆ. ಬುಲೆಟ್ ರೈಲು ನಿಲ್ದಾಣದ ಭೂಮಿಯು ಉದ್ದೇಶಿತ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇದೆ.
ದೆಹಲಿಯಿಂದ ಅಯೋಧ್ಯೆಗೆ ಬುಲೆಟ್ ರೈಲು ಯೋಜನೆಯ ಹೊರತಾಗಿ ಅಯೋಧ್ಯೆಯನ್ನು ವಿಶ್ವದ ಪ್ರವಾಸೋದ್ಯಮ ಭೂಪಟಕ್ಕೆ ತರಲು ಮರ್ಯಾದಾ ಪುರುಷೋತ್ತಮ ಶ್ರೀರಾಮ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆಯ ನಿರ್ಮಾಣವನ್ನು ಕೇಂದ್ರ ಸರ್ಕಾರವು ತ್ವರಿತಗತಿಯಲ್ಲಿ ನಡೆಸಿದೆ. ಬುಲೆಟ್ ರೈಲು ನಿಲ್ದಾಣವು ಲಕ್ನೋ-ಗೋರಖ್‌ಪುರ ಬೈಪಾಸ್ ಬಳಿ ಇರಲಿದೆ.
ದೆಹಲಿ-ಅಯೋಧ್ಯೆ ಬುಲೆಟ್ ರೈಲು ಯೋಜನೆಯ ವಿವರವಾದ ವರದಿ ಶೀಘ್ರದಲ್ಲೇ ಹೊರಬೀಳಲಿದೆ. ಪ್ರಸ್ತುತ ಬುಲೆಟ್ ರೈಲು ಯೋಜನೆಯ ಆರಂಭಿಕ ಹಂತದಲ್ಲಿದೆ. ಬುಲೆಟ್ ರೈಲು ಯೋಜನೆಯ ವಿಶೇಷತೆಗಳ ಬಗ್ಗೆ ಶೀಘ್ರವೇ ಸಂಪೂರ್ಣ ಮಾಹಿತಿ ನೀಡಲಾಗುವುದು. ವಾರಣಾಸಿ ಮತ್ತು ಆಗ್ರಾ ಸುತ್ತುವ ಈ ರೈಲು ಅಂತಿಮವಾಗಿ ದೆಹಲಿಯನ್ನು ಲಕ್ನೋಗೆ ಸಂಪರ್ಕಿಸುತ್ತದೆ ಎಂದು ವರದಿಗಳು ಹೇಳಿವೆ.