ತಾಮ್ರದ ಪಾತ್ರೆಯಲ್ಲಿಟ್ಟ ನೀರು ಕುಡಿಯುವುದರಿಂದ ಆರೋಗ್ಯಕ್ಕಿದೆ ಹಲವು ಲಾಭ
ಹಿಂದೆಲ್ಲಾ ಮನೆಯಲ್ಲಿ ಆಹಾರ ಸೇವನೆಗೆ, ನೀರು ಮಜ್ಜಿಗೆಗಳನ್ನು ಕುಡಿಯಲು ತಾಮ್ರ ಇಲ್ಲವೇ ಹಿತ್ತಾಳೆ ಪಾತ್ರೆಗಳನ್ನು ಬಳಸಲಾಗುತ್ತಿತ್ತು. ಮಾತ್ರವಲ್ಲ, ಆಹಾರ ತಯಾರಿಸಲು ಕೂಡ ತಾಮ್ರದ, ಇಲ್ಲವೇ, ಹಿತ್ತಾಳೆ ಪಾತ್ರೆಗಳನ್ನು ಬಳಸಲಾಗುತ್ತಿತ್ತು. ಇದಕ್ಕೆ ಮುಖ್ಯ ಕಾರಣ ಅದರಲ್ಲಿ ಆರೋಗ್ಯವೂ ಅಡಗಿದೆ ಎಂಬ ಅಂಶ. ಆಯುರ್ವೇದದ ಪ್ರಕಾರ, ತಾಮ್ರವು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿರುವ ಏಕೈಕ ಲೋಹವಾಗಿದೆ. ಹಾಗಾಗಿಯೇ, ತಾಮ್ರವನ್ನು ವಿವಿಧ ರೋಗಗಳ ಚಿಕಿತ್ಸೆಗೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.
ಆಯುರ್ವೇದದ ಪ್ರಕಾರ, ತಾಮ್ರದ ಪಾತ್ರೆಯಲ್ಲಿ ನೀರು ಸಂಗ್ರಹಿಸಿ ಕುಡಿಯುವುದರಿಂದ ಆರೋಗ್ಯಕ್ಕೆ ಹತ್ತು ಹಲವು ಪ್ರಯೋಜನಗಳಿವೆ. ನೀವು ತಾಮ್ರದ ಪಾತ್ರೆಯಲ್ಲಿ ರಾತ್ರಿ ಅಥವಾ 8-9 ಗಂಟೆಗಳಿಗಿಂತ ಹೆಚ್ಚು ಕಾಲ ನೀರನ್ನು ಸಂಗ್ರಹಿಸಿದಾಗ, ಪಾತ್ರೆಯು ಅದರ ಅಯಾನುಗಳನ್ನು ನೀರಿನಲ್ಲಿ ಬಿಡುಗಡೆ ಮಾಡುತ್ತದೆ. ಈ ನೀರನ್ನು ಕುಡಿಯುವುದರಿಂದ ನಿಮ್ಮ ಒಟ್ಟಾರೆ ಆರೋಗ್ಯವನ್ನು ಸುಧಾರಿಸಬಹುದು ಎಂದು ಹೇಳಲಾಗುತ್ತದೆ. ಹಾಗಿದ್ದರೆ, ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯುವುದರಿಂದ ಏನೆಲ್ಲಾ ಪ್ರಯೋಜನ ಎಂದು ತಿಳಿಯೋಣ...
ಆರೋಗ್ಯ ತಜ್ಞರ ಪ್ರಕಾರ, ತಾಮ್ರವು ಆಂಟಿಮೈಕ್ರೊಬಿಯಲ್ ಗುಣಗಳನ್ನು ಹೊಂದಿದೆ. ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಯಲು ಕೆಲವು ನೀರಿನ ಫಿಲ್ಟರ್ ಯಂತ್ರಗಳಲ್ಲಿ ತಾಮ್ರವನ್ನು ಬಳಸುವುದಕ್ಕೆ ಇದು ಕಾರಣವಾಗಿದೆ. ತಾಮ್ರದ ಪಾತ್ರೆಗಳಲ್ಲಿ ಸಂಗ್ರಹಿಸಿದ ನೀರು ಕುಡಿಯುವುದರಿಂದ ಇ-ಕೊಲಿ ಮತ್ತು ಸಾಲ್ಮೊನೆಲ್ಲಾಗಳಂತಹ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ ಎಂದು ಹೇಳಲಾಗುತ್ತದೆ.
ತಾಮ್ರವು ಉತ್ಕರ್ಷಣ ನಿರೋಧಕವಾಗಿದೆ, ಅಂದರೆ ಇದು ಎಲ್ಲಾ ಸ್ವತಂತ್ರ ರಾಡಿಕಲ್ಗಳೊಂದಿಗೆ ಹೋರಾಡುತ್ತದೆ ಮತ್ತು ಅವುಗಳ ನಕಾರಾತ್ಮಕ ಪರಿಣಾಮಗಳನ್ನು ತಡೆಯುತ್ತದೆ. ಇದರಿಂದ ಥೈರಾಯ್ಡ್‌ನಂತಹ ಕಾಯಿಲೆಗಳಿಂದಲೂ ಕೂಡ ತಾಮ್ರ ನಿಮ್ಮನ್ನು ರಕ್ಷಿಸುತ್ತದೆ.
ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿದ ನೀರನ್ನು ಕುಡಿಯುವುದು ಗ್ಯಾಸ್, ಅಸಿಡಿಟಿ ಮತ್ತು ಅಜೀರ್ಣದಂತಹ ಕೆಲವು ಸಾಮಾನ್ಯ ಜೀರ್ಣಕಾರಿ ಸಮಸ್ಯೆಗಳನ್ನು ಸಮಸ್ಯೆಗಳನ್ನು ಗುಣಪಡಿಸುವಲ್ಲಿ ತುಂಬಾ ಪ್ರಯೋಜನಕಾರಿ ಆಗಿದೆ.
ರಾತ್ರಿಯಿಡೀ ತಾಮ್ರದ ಪಾತ್ರೆಯಲ್ಲಿ ನೀರು ಸಂಗ್ರಹಿಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯುವುದರಿಂದ ಬಿಪಿಯನ್ನು ನಿಯಂತ್ರಿಸಬಹುದು ಎಂದು ಹೇಳಲಾಗುತ್ತದೆ.
ತಾಮ್ರವು ಮಾನವನ ದೇಹದಲ್ಲಿ ಹೆಚ್ಚುವರಿ ಕೊಬ್ಬು ಸಂಗ್ರಹವಾಗುವುದನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಲಾಗುತ್ತದೆ. ಸಂಶೋಧನೆಯ ಪ್ರಕಾರ, ಪ್ರತಿ ದಿನ ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯುವುದರಿಂದ ಆರೋಗ್ಯಕರವಾಗಿ ತೂಕ ಕಳೆದುಕೊಳ್ಳಬಹುದು ಎಂದು ಹೇಳಲಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.