Photo Gallery: ಭಾರತದ ನಾರೀಶಕ್ತಿಯನ್ನು ನೆನೆದ ಪ್ರಧಾನಿ ನರೇಂದ್ರ ಮೋದಿ
76ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರು ದೆಹಲಿಯ ಐತಿಹಾಸಿಕ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದರು. ಬಳಿಕ ದೇಶದ ಜನರನ್ನುದ್ದೇಶಿಸಿ ಮಾತನಾಡಿದ ಅವರು ಅನೇಕ ವಿಚಾರಗಳನ್ನು ಹಂಚಿಕೊಂಡರು.
ಭಾರತ ಪ್ರಜಾಪ್ರಭುತ್ವದ ತಾಯಿ. ಭಾರತವು ತನ್ನ 75 ವರ್ಷಗಳ ಈ ಪ್ರಯಾಣದಲ್ಲಿ ಅನೇಕ ಸವಾಲುಗಳನ್ನು ಎದುರಿಸಿದೆ ಮತ್ತು ಅಮೂಲ್ಯ ಸಾಮರ್ಥ್ಯವನ್ನು ಸಾಬೀತುಪಡಿಸಿದೆ ಎಂದು ಅಂತಾ ಪ್ರಧಾನಿ ಮೋದಿ ಇದೇ ವೇಳೆ ಹೇಳಿದರು.
ಇದೇ ವೇಳೆ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ಪ್ರಧಾನಿ ಮೋದಿ ನೆನೆದರು. ‘ಕರ್ತವ್ಯದ ಹಾದಿಯಲ್ಲಿ ಜೀವ ನೀಡಿದ ಬಾಪು, ನೇತಾಜಿ ಸುಭಾಷ್ ಚಂದ್ರ ಬೋಸ್, ಬಾಬಾಸಾಹೇಬ್ ಅಂಬೇಡ್ಕರ್, ವೀರ ಸಾವರ್ಕರ್ ಅವರಿಗೆ ನಾಗರಿಕರು ಕೃತಜ್ಞತೆ ಸಲ್ಲಿಸಿದ್ದಾರೆ. ಮಂಗಲ್ ಪಾಂಡೆ, ತಾತ್ಯಾ ಟೋಪೆ, ಭಗತ್ ಸಿಂಗ್, ಸುಖದೇವ್, ರಾಜಗುರು, ಚಂದ್ರಶೇಖರ್ ಆಜಾದ್, ಅಶ್ಫಾಕುಲ್ಲಾ ಖಾನ್, ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಬ್ರಿಟಿಷರ ಆಳ್ವಿಕೆಯ ಬುನಾದಿ ಬುಡಮೇಲು ಮಾಡಿದ ನಮ್ಮ ಅಸಂಖ್ಯಾತ ಕ್ರಾಂತಿಕಾರಿಗಳಿಗೆ ಈ ದೇಶ ಕೃತಜ್ಞತೆ ಸಲ್ಲಿಸುತ್ತದೆ’ ಎಂದು ಹೇಳಿದರು.
ತಮ್ಮ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಪ್ರಧಾನಿ ಮೋದಿಯವರು ಭಾರತದ ನಾರೀಶಕ್ತಿಯನ್ನು ನೆನೆದರು. ಸ್ವಾತಂತ್ರ್ಯದ ಅಮೃತ ಮಹೋತ್ಸವದಂದು ಬ್ರಿಟಿಷರನ್ನು ನಡುಗಿಸಿದ ಹೆಮ್ಮೆಯ ಕನ್ನಡತಿ ಕಿತ್ತೂರು ರಾಣಿ ಚೆನ್ನಮ್ಮನ ಹೆಸರನ್ನು ಪ್ರಸ್ತಾಪಿಸಿದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕನ್ನಡಿಗರು ಅದರಲ್ಲೂ ಮಹಿಳೆಯರ ಪಾತ್ರವನ್ನು ನೆನೆದು ವಂದಿಸಿದರು. ರಾಣಿ ಲಕ್ಷ್ಮೀಬಾಯಿ, ಝಲ್ಕರಿ ಬಾಯಿ, ಬೇಗಂ ಹಜರತ್ ಮಹಲ್ ಸೇರಿದಂತೆ ಅನೇಕರನ್ನು ಸ್ಮರಿಸಿದರು. ಭಾರತದ ಮಹಿಳೆಯರ ಶಕ್ತಿಯನ್ನು ನೆನಪಿಸಿಕೊಂಡಾಗ ಪ್ರತಿ ಭಾರತವೂ ಹೆಮ್ಮೆಯಿಂದ ಪಡುತ್ತದೆ ಎಂದು ಮೋದಿ ಹೇಳಿದರು.
ರಾಷ್ಟ್ರಧ್ವಜಾರೋಹಣಕ್ಕೂ ಮೊದಲು ಪ್ರಧಾನಿ ಮೋದಿ ರಾಜ್ಘಾಟ್ಗೆ ತೆರಳಿ ಮಹಾತ್ಮ ಗಾಂಧಿ ಸಮಾಧಿಗೆ ಗೌರವ ನಮನ ಸಲ್ಲಿಸಿದರು. ಬಳಿಕ ಕೆಂಪುಕೋಟೆಗೆ ತಲುಪಿದ ಅವರಿಗೆ ವಾಯುಪಡೆ, ನೌಕಾಪಡೆ ಮತ್ತು ಭೂಸೇನೆಯ ತುಕಡಿಗಳು ಶಿಷ್ಟಾಚಾರದಂತೆ ಗೌರವ ವಂದನೆ ಸಲ್ಲಿಸಿದವು.